Friday, October 29, 2010

ಸರ್ವಜ್ಞನ ವಚನಗಳು

 ಸರ್ವಜ್ಞನ ವಚನಗಳು - ನೂರೊಂದರಿಂದ ಇನ್ನೂರು

೧೦೧.
ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ
ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ

೧೦೨.
ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು
ಹೊಲೆ ಬಲಿದ ತನುವಿನೊಳಗಿರ್ದು - ಮತ್ತದರ
ಕುಲವನೆಣಿಸುವರೆ ಸರ್ವಜ್ಞ

೧೦೩.
ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ
ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ
ಘಟವ ನೆಚ್ಚದಿರು ಸರ್ವಜ್ಞ

೧೦೪.
ಸುರತರು ಮರನಲ್ಲ | ಸುರಭಿಯೊಂದಾವಲ್ಲ
ಪರುಷ ಪಾಷಾಣದೊಳಗಲ್ಲ - ಗುರುವು ತಾ
ನರರೊಳಗಲ್ಲ ಸರ್ವಜ್ಞ

೧೦೫.
ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರಿವಂತೆ - ಶಿವನ ಗುರು
ನಾಥನಿಂದರಿಗು ಸರ್ವಜ್ಞ

೧೦೬.
ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ
ಕಂಡಲ್ಲದಿಲ್ಲ ಸರ್ವಜ್ಞ

೧೦೭. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ
ಒಮ್ಮೆ ಸದ್ಗುರುವಿನುಪದೇಶ - ವಾಲಿಸಲು
ಗಮ್ಮನೆ ಮುಕ್ತಿ ಸರ್ವಜ್ಞ

೧೦೮.
ಊರಿಂಗೆ ದಾರಿಯ | ನಾರು ತೋರಿದರೇನು
ಸಾರಾಯಮಪ್ಪ ಮತವನರುಹಿಸುವ ಗುರು
ಆರಾದೊಡೇನು ಸರ್ವಜ್ಞ

೧೦೯.
ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ
ನಿಃಪತ್ತಿಯಾದ ಗುರುವಿನುಪದೇಶದಿಂ
ತಪ್ಪದೇ ಮುಕ್ತಿ ಸರ್ವಜ್ಞ

೧೧೦.
ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ
ಪರುಷವೆಂತಂತೆ ಶಿಷ್ಯಂಗೆ - ಗುರುವಿನ
ಸ್ಪರುಶನವೆ ಮೋಕ್ಷ ಸರ್ವಜ್ಞ

೧೧೧.
ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ
ವಶವಾಗದಿಹುದೆ ಸರ್ವಜ್ಞ

೧೧೨.
ಗುರುಪಾದ ಸೇವೆ ತಾ ದೊರಕೊಂಡಿತಾದೊಡೆ
ಹಿರಿದಪ್ಪ ಪಾಪ ಹರೆವುದು - ಕರ್ಪುರದ
ಗಿರಿಯ ಸುಟ್ಟಂತೆ ಸರ್ವಜ್ಞ

೧೧೩.
ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ
ಮತ್ತೆ ಪಾದದ ಕೆರವಾಗಿ - ಗುರುವಿನ
ಹತ್ತಿಲಿರು ಎಂದ ಸರ್ವಜ್ಞ

೧೧೪.
ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ
ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ
ಕಾಣಿಸುತಿಹುದು ಸರ್ವಜ್ಞ

೧೧೫.
ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ
ನೆಟ್ಟನೆ ಗುರುವಿನರಿದನ - ಕರ್ಮವು
ಮುಟ್ಟಲಂಜುವವು ಸರ್ವಜ್ಞ

೧೧೬.
ವಿಷಯಕ್ಕೆ ಕುದಿಯದಿರು | ಅಶನಕ್ಕೆ ಹದೆಯದಿರು
ಅಸಮಾಕ್ಷನಡಿಯನಗಲದಿರು - ಗುರುಕರುಣ
ವಶವರ್ತಿಯಹುದು ಸರ್ವಜ್ಞ

೧೧೭.
ತಂದೆಗೆ ಗುರುವಿಗೆ | ಒಂದು ಅಂತರವುಂಟು
ತಂದೆ ತೋರುವನು ಶ್ರೀಗುರುವ - ಗುರುರಾಯ
ಬಂಧನವ ಕಳೆವ ಸರ್ವಜ್ಞ

೧೧೮.
ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು
ವಿಷಯಂಗಳುಳ್ಳ ಮನುಜರಿಗೆ - ಗುರುಕರುಣ
ವಶವರ್ತಿಯಹುದೆ ಸರ್ವಜ್ಞ

೧೧೯.
ಒಂದೂರ ಗುರುವಿರ್ದು | ವಂದನೆಯ ಮಾಡದೆ
ಸಂಧಿಸಿ ಕೂಳ ತಿನುತಿರ್ಪವನ - ಇರವು
ಹಂದಿಯ ಇರವು ಸರ್ವಜ್ಞ

೧೨೦.
ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೆ ಜಗವು ಅಡಗಿಹುದು - ಲಿಂಗವನು
ಹಿಂಗಿ ಪರ ಉಂಟೆ ಸರ್ವಜ್ಞ

೧೨೧.
ಓರ್ವನಲ್ಲದೆ ಮತ್ತೆ | ಈರ್ವರುಂಟೇ ಮರುಳೆ
ಸರ್ವಜ್ಞನೋರ್ವ ಜಗಕೆಲ್ಲ - ಕರ್ತಾರ
ನೋರ್ವನೇ ದೇವ ಸರ್ವಜ್ಞ

೧೨೨.
ಎಂಜಲು ಶೌಚವು | ಸಂಜೆಯೆಂದೆನ ಬೇಡ
ಕುಂಜರ ವನವ ನೆನೆವಂತೆ - ಬಿಡದೆ ನಿ
ರಂಜನನ ನೆನೆಯ ಸರ್ವಜ್ಞ

೧೨೩.
ಭೂತೇಶ ಶರಣೆಂಬ | ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಭೂತೇಶ - ಶರಣೆನ್ನ
ದಾತ ಮಾದಿಗನು ಸರ್ವಜ್ಞ

೧೨೪.
ಯಾತರ ಹೂವಾದರು | ನಾತರೆ ಸಾಲದೆ
ಜಾತಿ-ವಿಜಾತಿ ಯೆನಬೇಡ - ಶಿವನೊಲಿ
ದಾತನೇ ಜಾತಿ ಸರ್ವಜ್ಞ

೧೨೫.
ಮಾಯಾಮೋಹವ ನೆಚ್ಚಿ | ಕಾಯವನು ಕರಗಿಸುತೆ
ಆಯಾಸಗೊಳುತ ಇರಬೇಡ - ಓಂ ನಮಶ್ಯಿ
ವಾಯವೆಂದೆನ್ನಿ ಸರ್ವಜ್ಞ

೧೨೬.
ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು
ಮನಸಿಜಾರಿಯನು ಮರೆಯದಿರು - ಶಿವನ ಕೃಪೆ
ಘನಕೆ ಘನವಕ್ಕು ಸರ್ವಜ್ಞ

೧೨೭.
ನರರ ಬೇಡುವ ದೈವ | ವರವೀಯ ಬಲ್ಲುದೇ
ತಿರಿವವರನಡರಿ ತಿರಿವಂತೆ - ಅದನರಿ
ಹರನನೆ ಬೇಡು ಸರ್ವಜ್ಞ

೧೨೮.
ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ
ಲಿಂಗದ ಕ್ಷೋಭೆ ಘನವಕ್ಕು - ಮಹಲಿಂಗ
ಹಿಂಗುವುದು ಅವನ ಸರ್ವಜ್ಞ

೧೨೯.
ಉಣ ಬಂದ ಲಿಂಗಕ್ಕೆ | ಉಣಲಿಕ್ಕದಂತಿರಿಸಿ
ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈ ಮುಗಿವ
ಬಣಗುಗಳ ನೋಡ ಸರ್ವಜ್ಞ

೧೩೦.
ಒಮ್ಮನದಲ್ಲಿ ಶಿವಪೂಜೆಯ | ಗಮ್ಮನೆ ಮಾಡುವುದು
ಇಮ್ಮನವಿಡಿದು ಕೆಡಬೇಡ - ವಿಧಿವಶವು
ಸುಮ್ಮನೆ ಕೆಡಗು ಸರ್ವಜ್ಞ

೧೩೧.
ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು ?
ಲಿಂಗದೆ ನೆನಹು ಘನವಾಗೆ - ಆ ಅಂಗ
ಲಿಂಗವಾಗಿಕ್ಕು ಸರ್ವಜ್ಞ

೧೩೨. ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ
ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ
ಲಿಂಗವೇಯಹೆಯೊ ಸರ್ವಜ್ಞ

೧೩೩.
ಓದುವಾದಗಳೇಕೆ | ಗಾದೆಯ ಮಾತೇಕೆ
ವೇದ-ಪುರಾಣ ನಿನಗೇಕೆ - ಲಿಂಗದ
ಹಾದಿಯನರಿದವಗೆ ಸರ್ವಜ್ಞ

೧೩೪.
ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ
ನಾಟಿ ತನು ಗುರುವಿನಲಿ ಕೂಡೆ - ಭಕ್ತನ ಸ
ಘಾಟವದು ನೋಡ ಸರ್ವಜ್ಞ

೧೩೫.
ನಾನು-ನೀನುಗಳಳಿದು | ತಾನೆ ಲಿಂಗದಿ ನಿಂದು
ನಾನಾ ಭ್ರಮೆಗಳ ನೆರೆ ಹಿಂಗಿ - ನಿಂದವನು
ತಾನೈಕ್ಯ ನೋಡ ಸರ್ವಜ್ಞ

೧೩೬.
ತನ್ನ ನೋಡಲಿಯೆಂದು | ಕನ್ನಡಿ ಕರೆವುದೇ
ತನ್ನಲ್ಲಿ ಜ್ಞಾನ ಉದಿಸಿದ - ಮಹತುಮನು
ಕನ್ನಡಿಯಂತೆ ಸರ್ವಜ್ಞ

೧೩೭.
ಹೆಣ್ಣನು ಹೊನ್ನನು | ಹಣ್ಣಾದ ಮರವನು
ಕಣ್ಣಲಿ ಕಂಡು - ಮನದಲಿ ಬಯಸದ
ಅಣ್ಣಗಳಾರು ಸರ್ವಜ್ಞ

೧೩೮.
ತಿರಿದು ತಂದಾದೊಡಂ | ಕರೆದು ಜಂಗಮಕಿಕ್ಕು
ಪರಿಣಾಮವಕ್ಕು ಪದವಕ್ಕು - ಕೈಲಾಸ
ನೆರೆಮನೆಯಕ್ಕು ಸರ್ವಜ್ಞ

೧೩೯.
ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು - ಅಧಮ
ತಾನಾಡಿಯೂ ಕೊಡದವನು ಸರ್ವಜ್ಞ

೧೪೦.
ಮಾನವನ ದುರ್ಗುಣವ | ನೇನೆಂದು ಬಣ್ಣಿಸುವೆ
ದಾನಗೈಯಲು ಕನಲುವ - ದಂಡವನು
ಮೋನದಿಂ ತೆರುವ ಸರ್ವಜ್ಞ

೧೪೧.
ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ
ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ
ದಂತಿಹುದೆ ಲೇಸು ಸರ್ವಜ್ಞ

೧೪೨.
ಸಿರಿಯು ಸಂಸಾರವು | ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು - ಜಾವಕ್ಕೆ
ಹರೆದು ಹೋಹಂತೆ ಸರ್ವಜ್ಞ

೧೪೩.
ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು
ಸಂತತ ಖಳರ ಒಡನಿರ್ದು - ಬಾಳುವು
ದಂತೆ ಕಂಡಯ್ಯ ಸರ್ವಜ್ಞ

೧೪೪.
ಹಸಿಯದಿರೆ ಕಡುಗಾದ | ಬಿಸಿನೀರ ಕೊಂಬುದು
ಹಸಿವಕ್ಕು ಸಿಕ್ಕ ಮಲ ಬಿಡುಗು - ದೇಹ ತಾ
ಸಸಿನವಾಗುವುದು ಸರ್ವಜ್ಞ

೧೪೫.
ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ
ಬಿಸಿ ಬೇಡ ತಂಗುಳವು ಬೇಡ - ವೈದ್ಯನ
ಗಸಣಿಸಿಯೇ ಬೇಡ ಸರ್ವಜ್ಞ
೧೪೬.
ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ
ಜಾತಿ-ವಿಜಾತಿಯೆನಬೇಡ - ದೇವನೊಲಿ
ದಾತನೇ ಜಾತ ಸರ್ವಜ್ಞ

೧೪೭.
ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು
ಗುಣಹೀನರುಗಳ ಒಡನಾಟ - ಬಹುದುಃಖ
ದಣಲೊಳಿರ್ದಂತೆ ಸರ್ವಜ್ಞ

೧೪೮.
ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ

೧೪೯.
ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
ಬಸುರಲ್ಲಿ ಬಂದ ಶಿಶು ಮುದ್ದು - ಲೋಕಕ್ಕೆ
ಬಸವಣ್ಣನೇ ಮುದ್ದು ಸರ್ವಜ್ಞ

೧೫೦.
ಕತ್ತೆ ಬೂದಿಯ ಹೊರಳಿ | ಭಕ್ತನಂತಾಗುವುದೆ
ತತ್ವವರಿಯದಲೆ ಭಸಿತವಿಟ್ಟರೆ ಶುದ್ಧ
ಕತ್ತೆಯಂತಕ್ಕು ಸರ್ವಜ್ಞ

೧೫೧.
ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
ಅಲ್ಲದಜ್ಞಾನಿಯೊಡನಾಡೆ - ಮೊಳಕೈಗೆ
ಕಲ್ಲು ಹೊಡೆದಂತೆ ಸರ್ವಜ್ಞ

೧೫೨.
ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
ಬಂದುದನೆ ಮೆಟ್ಟಿ ನಿಂತರೆ - ವಿಧಿ ಬಂದು
ಮುಂದೇನ ಮಾಳ್ಕು ಸರ್ವಜ್ಞ

೧೫೩.
ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು - ಕೈಲಾಸ
ನೆರೆಮನೆಯಕ್ಕು ಸರ್ವಜ್ಞ

೧೫೪.
ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು
ದೀನನ ಬೇಡಿ ಬಳಲಿದಡೆ - ಆ ದೀನ
ನೇನ ಕೊಟ್ಟಾನು ಸರ್ವಜ್ಞ

೧೫೫.
ಕೋಡಿಯನು ಕಟ್ಟಿದರೆ | ಕೇಡಿಲ್ಲವಾ ಕೆರೆಗೆ
ಮಾಡು ಧರ್ಮಗಳ ಮನಮುಟ್ಟಿ - ಕಾಲನಿಗೆ
ಈಡಾಗದ ಮುನ್ನ ಸರ್ವಜ್ಞ

೧೫೬.
ಅನ್ನದಾನಗಳಿಗಿಂತ | ಇನ್ನು ದಾನಗಳಿಲ್ಲ
ಅನ್ನಕ್ಕೆ ಮೇಲು ಹಿರಿದಿಲ್ಲ - ಲೋಕಕ್ಕೆ
ಅನ್ನವೇ ಪ್ರಾಣ ಸರ್ವಜ್ಞ

೧೫೭.
ಉಣ್ಣದೊಡವೆಯ ಗಳಿಸಿ | ಮಣ್ಣಾಗೆ ಬಚ್ಚಿಟ್ಟು
ಚೆನ್ನಾಗಿ ಬಳಿದು ಮೆತ್ತಿದನ - ಬಾಯೊಳಗೆ
ಮಣ್ಣು ಕಂಡಯ್ಯ ಸರ್ವಜ್ಞ

೧೫೮.
ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ
ಹುಟ್ಟಿಕ್ಕಿ ಜೇನು ಅನುಮಾಡಿ - ಪರರಿಗೆ
ಕೊಟ್ಟು ಹೋದಂತೆ ಸರ್ವಜ್ಞ

೧೫೯.
ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು
ಹೆಣ್ಣಿಂದ ಸಕಲ ಫಲವುಂಟು - ಮರೆದರೆ
ಹೆಣ್ಣಿಂದ ಮರಣ ಸರ್ವಜ್ಞ

೧೬೦.
ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು
ಕಜ್ಜಾಯ ತುಪ್ಪ ಉಣ ಲೇಸು - ಮನೆಗೊಬ್ಬ
ಅಜ್ಜಿಯೇ ಲೇಸು ಸರ್ವಜ್ಞ

೧೬೧.
ಸಿರಿ ಬಲ ಉಳ್ಳಾಗ | ಮರೆಯದವನೇ ಜಾಣ
ಕೊರತೆಯಾದಾಗ ಕೊಡುವೆನಿದ್ದರೆ ಎಂದು
ಅರಚುವವನೆ ಹೆಡ್ಡ ಸರ್ವಜ್ಞ

೧೬೨.
ನಿತ್ಯ ನೀರೊಳು ಮುಳುಗಿ | ಹತ್ಯಾನೆ ಸ್ವರ್ಗಕ್ಕೆ
ಹತ್ತೆಂಟು ಕಾಲ ಜಲದೊಳಗಿಹ ಕಪ್ಪೆ
ಹತ್ತವ್ಯಾಕಯ್ಯ ಸರ್ವಜ್ಞ

೧೬೩.
ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ
ಅನ್ನವಿರುವನಕ ಪ್ರಾಣವು - ಜಗದೊಳ
ಗನ್ನವೇ ದೈವ ಸರ್ವಜ್ಞ

೧೬೪.
ನಂಬು ಪರಶಿವನೆಂದು | ನಂಬು ಗುರುಚರಣವನು
ನಂಬಲಗಸ್ತ್ಯ ಕುಡಿದನು - ಶರಧಿಯನು
ನಂಬು ಗುರುಪದವ ಸರ್ವಜ್ಞ

೧೬೫.
ಬಂಧುಗಳಾದವರು ಮಿಂದುಂಡು ಹೋಹರು
ಬಂಧನವ ಕಳೆಯಲರಿಯರು - ಗುರುವಿಂದ
ಬಂಧನವಳಿಗು ಸರ್ವಜ್ಞ

೧೬೬.
ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ
ತೊಟ್ಟಿಪ್ಪುದುಳ್ಳ ಸಮತೆಯನು - ಶಿವಪದವ
ಮುಟ್ಟಿಪ್ಪುದಯ್ಯ ಸರ್ವಜ್ಞ

೧೬೭.
ಚಿತ್ತೆಯ ಮಳೆ ಹೊಯ್ದು | ಮುತ್ತಾಗಬಲ್ಲುದೆ
ಚಿತ್ತದ ನೆಲೆಯನರಿಯದೆ - ಬೋಳಾದ
ರೆತ್ತಣ ಯೋಗ ಸರ್ವಜ್ಞ

೧೬೮.
ಇಂದ್ರಿಯವ ತೊರೆದಾತ | ವಂದ್ಯನು ಜಗಕೆಲ್ಲ
ಬಿಂದುವಿನ ಬೇಧವರಿದ ಮಹಾತ್ಮನು
ಬೆಂದ ನುಲಿಯಂತೆ ಸರ್ವಜ್ಞ

೧೬೯.
ಜ್ಞಾನಿ ಸಂಸಾರದೊಳು | ತಾನಿರಬಲ್ಲನು
ಭಾನು ಮಂಡಲದಿ ಹೊಳೆವಂತೆ - ನಿರ್ಲೇಪ
ಏನಾದಡೇನು ಸರ್ವಜ್ಞ

೧೭೦.
ಸತ್ಯವ ನುಡಿವಾತ | ಸತ್ತವನೆನಬೇಡ
ಹೆತ್ತ ತಾಯ್ ಮಗನ ಕರೆವಂತೆ - ಸ್ವರ್ಗದವ
ರಿತ್ತ ಬಾಯೆಂಬ ಸರ್ವಜ್ಞ

೧೭೧.
ಜ್ಞಾನಿಯನಜ್ಞಾನಿಯೆಂದು | ಹೀನ ತಾ ನುಡಿದರೆ
ಆನೆಯನೇರಿ ಸುಖದಿಂದಲಿ - ಹೋಹಂಗೆ
ಶ್ವಾನ ಬೊಗಳ್ದೇನು ಸರ್ವಜ್ಞ

೧೭೨.
ತುಂಬಿದಾ ಕೆರೆಭಾವಿ | ತುಂಬಿಹುದೆನಬೇಡ
ನಂಬಿರಬೇಡ ಲಕ್ಶ್ಮಿಯನು - ಬಡತನವು
ಬೆಂಬಳಿಯೊಳಿಹುದು ಸರ್ವಜ್ಞ

೧೭೩.
ಕೇಡನೊಬ್ಬನಿಗೆ ಬಯಸೆ | ಕೇಡು ತಪ್ಪದು ತನಗೆ
ಕೂಡಿ ಕೆಂಡವನು ತೆಗೆದೊಡೆ - ತನ್ನ ಕೈ
ಕೂಡೆ ಬೇವಂತೆ ಸರ್ವಜ್ಞ

೧೭೪.
ಅರಸು ಮುನಿದೂರೊಳಗೆ | ಇರುವುದೇ ಕರ ಕಷ್ಟ
ಅರಸು ಮನ್ನಣೆಯು ಕರಗಿದ - ಠಾವಿಂದ
ಸರಿವುದೇ ಲೇಸು ಸರ್ವಜ್ಞ

೧೭೫.
ಆಶೆಯುಳ್ಳನ್ನಕ್ಕರ - ದಾಸನಾಗಿರುತಿಪ್ಪ
ಆಶೆಯ ತಲೆಯನಳಿದರೆ - ಕೈಲಾಸ
ದಾಚೆಯಲಿಪ್ಪ ಸರ್ವಜ್ಞ

೧೭೬.
ಧಾರುಣಿ ನಡುಗುವುದು | ಮೇರುವಲ್ಲಾಡುವುದು
ವಾರಿಧಿ ಬತ್ತಿ ಬರೆವುದು - ಶಿವಭಕ್ತಿ
ಯೋರೆಯಾದಂದು ಸರ್ವಜ್ಞ

೧೭೭.
ಮಂದಿಯಿಲ್ಲದರಸು | ತಂದೆ ಇಲ್ಲದ ಕಂದ
ಬಂಧುಗಳಿಲ್ಲದಿಹ ಬಡತನ - ಇವು ತಾನು
ಎಂದಿಗೂ ಬೇಡ ಸರ್ವಜ್ಞ

೧೭೮.
ಅನ್ನವಿಕ್ಕದನಿಂದ | ಕುನ್ನಿ ತಾ ಕರ ಲೇಸು
ಉನ್ನತವಪ್ಪತಿಥಿಗಿಕ್ಕದ ಬದುಕು - ನಾಯ
ಕುನ್ನಿಯಿಂ ಕಷ್ಟ ಸರ್ವಜ್ಞ

೧೭೯.
ಉರಿಯುದಕ ಶೀತವು | ಉರಗಪತಿ ಭೀಕರವು
ಗುರುವಾಜ್ಞೆಗಂಜಿ ಕೆಡುವವು - ಇದ ನರ
ರರಿಯದೆ ಕೆಡುಗು ಸರ್ವಜ್ಞ

೧೮೦.
ಶೇಷನಿಂ ಹಿರಿದಿಲ್ಲ | ಆಸೆಯಿಂ ಕೀಳಿಲ್ಲ
ರೋಷದಿಂದಧಮಗತಿಯಿಲ್ಲ - ಪರದೈವ
ಈಶನಿಂದಿಲ್ಲ ಸರ್ವಜ್ಞ

೧೮೧.
ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲಿ ಶಿವನ ಬೈದರೆ - ಶಿವ ತಾನು
ರೊಟ್ಟಿ ಕೊಡುವನೆ ಸರ್ವಜ್ಞ

೧೮೨.
ಹಸಿವರಿತು ಉಂಬುದು | ಬಿಸಿನೀರ ಕುಡಿವುದು
ಹಸಿವಕ್ಕು ವಿಷಯ ಘನವಕ್ಕು - ವೈದ್ಯಗೆ
ಬೆಸಸ ಬೇಡೆಂದ ಸರ್ವಜ್ಞ

೧೮೩.
ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
ಲಿಂಗ ಉಂಬುವುದೆ ? ಪೊಡಮಡು - ತೆಲೊ ಪಾಪಿ
ಜಂಗಮಕೆ ನೀಡು ಸರ್ವಜ್ಞ

೧೮೪.
ಹೆಂಡಿರು ಮಕ್ಕಳಿಗೆಂದು | ದಂಡಿಸದಿರು ದೇಹವನು
ಭಂಡ ವಸ್ತುವನು ಕೊಡದುಣದೆ - ಬೈಚಿಡಲು
ಕಂಡವರಿಗಹುದು ಸರ್ವಜ್ಞ

೧೮೫.
ಮಾತು ಬಂದಲ್ಲಿ ತಾ | ಸೋತು ಬರುವುದು ಲೇಸು
ಮಾತಿಂಗೆ ಮಾತು ಮಥಿಸೆ - ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ

೧೮೬.
ಕಣ್ಣು ನಾಲಗೆ ಮನವು | ತನ್ನವೆಂದೆನ ಬೇಡ
ಅನ್ಯರು ಕೊಂದರೆನ ಬೇಡ - ಇವು ಮೂರು
ತನ್ನನೇ ಕೊಲುಗು ಸರ್ವಜ್ಞ

೧೮೭.
ನುಡಿಸುವುದಸತ್ಯವನು | ಕೆಡಿಸುವುದು ಧರ್ಮವನು
ಒಡಲನೆ ಕಟ್ಟಿ ಹಿಡಿಸುವುದು - ಲೋಭದ
ಗಡಣ ಕಾಣಯ್ಯ ಸರ್ವಜ್ಞ

೧೮೮.
ಸೊಡರಿಂಗೆ ಎಣ್ಣೆಯ | ಕೊಡನೆತ್ತಿ ಹೊಯಿವರೆ
ಬಡವನೆಂದು ಕೊಡದೆ ಇರಬೇಡ - ಇರವರಿದು
ಕೊಡುವುದೇ ಲೇಸು ಸರ್ವಜ್ಞ

೧೮೯.
ಒಡಲೆಂಬ ಹುತ್ತಕ್ಕೆ | ನುಡಿವ ನಾಲಗೆ ಸರ್ಪ
ಕಡುರೋಷವೆಂಬ ವಿಷವೇರೆ - ಸಮತೆ ಗಾ
ರುಡಿಗನಂತಕ್ಕು ಸರ್ವಜ್ಞ

೧೯೦.
ಅಪಮಾನದೂಟದಿಂ | ದುಪವಾಸ ಕರ ಲೇಸು
ನೃಪನೆದ್ದು ಬಡಿವ ಅರಸನೋಲಗದಿಂದ
ತಪವಿಹುದೆ ಲೇಸು ಸರ್ವಜ್ಞ

೧೯೧.
ಹಿರಿದು ಪಾಪವ ಮಾಡಿ - ಹರಿವರು ಗಂಗೆಗೆ
ಹರಿವ ನೀರಲ್ಲಿ ಕರಗುವೊಡೆ - ಯಾ ಪಾಪ
ಎರೆಯ ಮಣ್ಣಲ್ಲ ಸರ್ವಜ್ಞ

೧೯೨.
ಅಂತಿರ್ದರಿಂತಿರ್ದ | ರೆಂತಿರ್ದರೆನಬೇಡ
ಕುಂತಿಯಣುಗರು ತಿರಿದರು - ಮಿಕ್ಕವರು
ಎಂತಿರ್ದರೇನು ಸರ್ವಜ್ಞ

೧೯೩.
ಉಳ್ಳಲ್ಲಿ ಉಣಲೊಲ್ಲ | ಉಳ್ಳಲ್ಲಿ ಉಡಲೊಲ್ಲ
ಉಳ್ಳಲ್ಲಿ ದಾನಗೊಡಲೊಲ್ಲ - ನವನೊಡವೆ
ಕಳ್ಳಗೆ ನೃಪಗೆ ಸರ್ವಜ್ಞ

೧೯೪.
ಕೊಡುವಾತನೇ ಮೃಢನು | ಪಡೆವಾತನೇ ನರನು
ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವನರಿದು ಸರ್ವಜ್ಞ

೧೯೫.
ಅನ್ನವನಿಕ್ಕುವುದು | ನನ್ನಿಯನು ನುಡಿವುದು
ತನ್ನಂತೆ ಪರರ ಬಗೆದೊಡೆ - ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ

೧೯೬.
ಆನೆ ಮುಕುರದೊಳಡಗಿ | ಭಾನು ಸರಸಿಯೊಳಡಗಿ
ನಾನೆನ್ನ ಗುರುವಿನೊಳಡಗಿ - ಸಂಸಾರ
ತಾನದೆತ್ತಣದು ಸರ್ವಜ್ಞ

೧೯೭.
ಎಂಜಲು ಹೊಲೆಯಿಲ್ಲ | ಸಂಜೆಗತ್ತಲೆಯಿಲ್ಲ
ಅಂಜಿಕೆಯಿಲ್ಲ ಭಯವಿಲ್ಲ - ಜ್ಞಾನವೆಂ
ಬಂಜನವಿರಲು ಸರ್ವಜ್ಞ

೧೯೮.
ಬಲ್ಲೆನೆಂಬಾ ಮಾತು | ಎಲ್ಲವೂ ಹುಸಿ ನೋಡಾ
ಬಲ್ಲರೆ ಬಲ್ಲೆನೆನಬೇಡ - ಸುಮ್ಮನಿರ
ಬಲ್ಲರೆ ಬಲ್ಲ ಸರ್ವಜ್ಞ

೧೯೯.
ಏನಾದಡೇನಯ್ಯ | ತಾನಾಗದನ್ನಕ್ಕ
ತಾನಾಗಿ ತನ್ನನರಿದಡೆ - ಲೋಕ ತಾ
ನೇನಾದಡೇನು ಸರ್ವಜ್ಞ

೨೦೦.
ಆನೆ ನೀರಾಟದಲಿ | ಮೀನ ಕಂಡಂಜುವುದೇ
ಹೀನಮಾನವರ ಬಿರುನುಡಿಗೆ - ತತ್ವದ
ಜ್ಞಾನಿ ಅಂಜುವನೆ ಸರ್ವಜ್ಞ

 

No comments:

Post a Comment