Friday, October 29, 2010

ಬಸವಣ್ಣನ ವಚನಗಳು - 401 ರಿಂದ 500 ರವರೆಗೆ

೪೦೧.
ಒಡೆಯರೊಡವೆಯ ಕೊಂಡರೆ
ಕಳ್ಳಂಗಳಲಾಯಿತ್ತೆಂಬ ಗಾದೆಯೆನಗಿಲ್ಲಯ್ಯ.
ಇಂದೆನ್ನ ವಧುವ, ನಾಳೆನ್ನ ಧನವ,
ನಾಡಿದೆನ್ನ ತನುವ ಬೇಡರೇಕಯ್ಯ ?
ಕೂಡಲಸಂಗಮದೇವ, ಆನು ಮಾಡಿದುದಲ್ಲದೆ
ಬಯಸಿದ ಬಯಕೆ ಸಲುವುದೇ ಅಯ್ಯ ?

೪೦೨.
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು,
ಶಿವಚಿತ್ತವೆಂಬ ಕೂರಲಗ ಕೊಂಡು
ಶರಣಾರ್ಥಿಯೆಂಬ ಶ್ರವಗಲಿತಡೆ
ಆಳುತನಕ್ಕೆ ದೆಸೆಯಪ್ಪೆ ನೋಡಾ!
ಮಾರಂಕ-ಜಂಗಮ ಮನೆಗೆ ಬಂದಲ್ಲಿ
ಇದಿರೆತ್ತಿ ನಡೆವುದು;
ಕೂಡಲಸಂಗಮದೇವನನೊಲಿಸುವಡಿದು ಚಿಹ್ನ.

೪೦೩.
ಅಟ್ಟಟ್ಟಿಕೆಯ ಮಾತನಾಡಲದೇಕೋ ?
ಮುಟ್ಟಿ ಬಂದುದಕ್ಕಂಜಲದೇಕೋ ?
ಕಾದಿದಲ್ಲದೆ ಮಾಣೆನು,
ಓಡಿದರೆ ಭಂಗ ಹಿಂಗದಾಗಿ;
ಕೂಡಲಸಂಗಮದೇವ ಎನ್ನ ಭಂಗ ನಿಮ್ಮದಾಗಿ!

೪೦೪.
ನೀನಿರಿಸಿದ ಮನದಲ್ಲಿ ನಾನಂಜೆನಯ್ಯ.
ಮನವು ಮಹಾಘನಕ್ಕೆ ಶರಣಾಗತಿವೊಕ್ಕುದಾಗಿ!
ನೀನಿರಿಸಿದ ಧನದಲ್ಲಿ ನಾನಂಜೆನಯ್ಯ,
ಧನವು ಸತಿಸುತಮಾತಾಪಿತರಿಗೆ ಹೋಗದಾಗಿ!
ನೀನಿರಿಸಿದ ತನುವಿನಲ್ಲಿ ನಾನಂಜೆನಯ್ಯ,
ಸರ್ವಾರ್ಪಿತದಲ್ಲಿ ತನು ನಿಯತಪ್ರಸಾದಭೋಗಿಯಾಗಿ!
ಇದು ಕಾರಣ ವೀರಧೀರ ಸಮಗ್ರನಾಗಿ
ಕೂಡಲಸಂಗಮದೇವಯ್ಯ ನಿಮಗಾನಂಜೆನು!

೪೦೫.
ಬತ್ತೀಸಾಯುಧದಲ್ಲಿ ಅಭ್ಯಾಸವ ಮಾಡಿದರೇನು ?
ಹಗೆಯ ಕೊಲುವಡೆ ಒಂದಲಗು ಸಾಲದೆ ?
ಲಿಂಗವ ಗೆಲುವಡೆ "ಶರಣಸತಿ ಲಿಂಗಪತಿ"
ಎಂಬಲಗು ಸಾಲದೆ ?
ಎನಗೆ ನಿನಗೆ ಜಂಗಮಪ್ರಸಾದವೆಂಬಲಗು ಸಾಲದೆ
ಕೂಡಲಸಂಗಮದೇವ ?

೪೦೬.
ಕೊಲ್ಲೆನಯ್ಯ ಪ್ರಾಣಿಗಳ,
ಮೆಲ್ಲೆನಯ್ಯ ಬಾಯಿಚ್ಚೆಗೆ,
ಒಲ್ಲೆನಯ್ಯ ಪರಸತಿಯರ ಸಂಗವ,
ಬಲ್ಲೆನಯ್ಯ ಮುಂದೆ ತೊಡಕುಂಟೆಂಬುದ!
ಬಳ್ಳದ ಬಾಯಂತೆ ಒಂದೇ ಮನವ ಮಾಡಿ
ನಿಲ್ಲೆಂದು ನಿಲಿಸಯ್ಯ ಕೂಡಲಸಂಗಮದೇವ.

೪೦೭.
ಆನೆ ಅಂಕುಶಕ್ಕಂಜುವುದೆ ಅಯ್ಯ,
ಮಾಣದೆ ಸಿಂಹದ ನಖವೆಂದಂಜುವುದಲ್ಲದೆ ?
ಆನೀ ಬಿಜ್ಜಳಂಗಂಜುವೆನೇ ಅಯ್ಯ,
ಕೂಡಲಸಂಗಮದೇವ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿಮಗಂಜುವೆನಲ್ಲದೆ !?

೪೦೮.
ಬಂದಹೆನೆಂದು ಬಾರದಿದ್ದರೆ
ಬಟ್ಟೆಗಳ ನೋಡುತ್ತಿದ್ದೆನಯ್ಯ!
ಇನ್ನಾರನಟ್ಟುವೆ ? ಇನ್ನಾರನಟ್ಟುವೆ ?
ಇನ್ನಾರ ಪಾದವ ಹಿಡಿವೆನಯ್ಯ ?
ಕೂಡಲಸಂಗನ ಶರಣರು ಬಾರದಿದ್ದರೆ
ಅಟ್ಟುವೆನೆನ್ನ ಪ್ರಾಣವನು!

೪೦೯.
ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ!
ಪಾತಾಳದಿಂದವತ್ತತ್ತ ನಿಮ್ಮ ಶ್ರೀಚರಣ!
ಬ್ರಹ್ಮಾಂಡದಿಂದವತ್ತತ್ತ ನಿಮ್ಮ ಶ್ರೀಮಕುಟ!
ಅಗಮ್ಯ ಅಪ್ರಮಾಣ
ಅಗೋಚರ ಅಪ್ರತಿಮಲಿಂಗವೇ,
ಕೂಡಲಸಂಗಮದೇವಯ್ಯ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.

೪೧೦.
ನಿಷ್ಠೆಯಿಂದ ಲಿಂಗವ ಪೂಜಿಸಿ,
ಮತ್ತೊಂದು ಪಥವನರಿಯದ ಶರಣರು,
ಸರ್ಪನ ಹೆಡಯ ಮಾಣಿಕದ ಮಕುಟದಂತಿಪ್ಪರು ಭೂಷಣರಾಗಿ!
ದರ್ಪಣದೊಳಗಣ ಪ್ರತಿಬಿಂಬದಂತಿಪ್ಪರು
ಕೂಡಲಸಂಗಮದೇವ, ನಿಮ್ಮ ಶರಣರು!

೪೧೧.
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ!
ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ!
ಜಗಕ್ಕೆ ಇಕ್ಕಿದೆ ಮುಂಡಿಗೆಯ!
ಎತ್ತಿಕೊಳ್ಳಿ, ಕೂಡಲಸಂಗಯ್ಯನೊಬ್ಬನೇ ದೈವವೆಂದು!

೪೧೨.
ವೇದ ನಡನಡುಗಿತ್ತು.
ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದುದಯ್ಯ,
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯ,
ಆಗಮ ಹೊರತೊಲಗಿ ಆಗಲಿದ್ದಿತಯ್ಯ,
ನಮ್ಮ ಕೂಡಲಸಂಗಯ್ಯನು
ಚೆನ್ನಯ್ಯನ ಮನೆಯಲುಂಡ ಕಾರಣ!

೪೧೩.
ಆರು ಮುನಿದು ನಮ್ಮನೇನ ಮಾಡುವರು ?
ಊರು ಮುನಿದು ನಮ್ಮನೆಂತು ಮಾಡುವರು ?
ನಮ್ಮ ಕುನ್ನಿಗೆ ಕೂಸ ಕೊಡಬೇಡ!
ನಮ್ಮ ಸೊಣಗಂಗೆ ತಣಿಗೆಯಲ್ಲಿಕ್ಕಬೇಡ!
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ ?
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ ?

೪೧೪.
ನ್ಯಾಯನಿಷ್ಠುರ!
ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ!
ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೆನಾಗಿ!

೪೧೫.
ಊರ ಮುಂದೆ
ಹಾಲ ಹಳ್ಳ ಹರಿಯುತ್ತಿರಲು ?
ಓರೆಯಾವಿನ ಬೆನ್ನ ಹರಿಯಲದೇಕಯ್ಯ ?
ಲಜ್ಜೆಗೆಡಲೇಕೆ ? ನಾಣುಗೆಡಲೇಕೆ ?
ಕೂಡಲಸಂಗಮದೇವಯ್ಯನುಳ್ಳನ್ನಕ
ಬಿಜ್ಜಳನ ಭಂಡಾರವೆನಗೇಕಯ್ಯ ?

೪೧೬.
ಕಂಡುದಕ್ಕೆಳೆಸೆನೆನ್ನ ಮನದಲ್ಲಿ;
ನೋಡಿ ಸೋಲೆನೆನ್ನ ಕಂಗಳಲ್ಲಿ;
ಆಡಿ ಹುಸಿಯನೆನ್ನ ಜಿಹ್ವೆಯಲ್ಲಿ;
ಕೂಡಲಸಂಗಮದೇವ,
ನಿಮ್ಮ ಶರಣನ ಪರಿ ಇಂತುಟಯ್ಯ.

೪೧೭.
ಆಪ್ಯಾಯನಕ್ಕೆ ನೀಡುವೆ:
ಲಾಂಛನಕ್ಕೆ ಶರಣೆಂಬೆ.
ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದರೆ
ನೀ ಸಾಕ್ಷಿಯಾಗಿ ಛೀಯೆಂಬೆನು.

೪೧೮.
ದಾಸನಂತೆ ತವನಿಧಿಯ ಬೇಡುವನಲ್ಲ,
ಚೋಳನಂತೆ ಹೊನ್ನ ಮಳೆಯ ಕರಸೆಂಬುವನಲ್ಲ.
ಅಂಜದಿರು, ಅಂಜದಿರು!
ಅವರಂದದವ ನಾನಲ್ಲ!
ಎನ್ನ ತಂದೆ ಕೂಡಲಸಂಗಮದೇವ,
ಸದ್ಭಕ್ತಿಯನೆ ಕರಣಿಸೆನಗೆ.

೪೧೯.
ಲಿಂಗದಲ್ಲಿ ಸಮ್ಯಕ್ಕರು,
ಲಿಂಗದಲ್ಲಿ ಸದರ್ಥರು,
ಲಿಂಗದ ಸೊಮ್ಮು-ಸಂಬಂಧವರಿತ
ಸ್ವಾಮಿಭೃತ್ಯರೆಲ್ಲರು ನಿಮ್ಮ ಬೇಡೆನಂಜದಿರಿ.
ಎನಗೆ ಮರ್ತ್ಯಲೋಕದ ಮಹಾಗಣಂಗಳುಂಟು.
ಇದು ಕಾರಣ, ಕೂಡಲಸಂಗಮದೇವರ ಲೋಕವ
ಹಂಚಿಕೊಳ್ಳಿ ನಿಮನಿಮಗೆ.

೪೨೦.
ಕಲಿಯ ಕಯ್ಯ ಕೈದುವನಂತಿರಬೇಕಯ್ಯ
ಎಲುದೋರ ಸರಸವಾಡಿದರೆ ಸೈರಿಸಬೇಕಯ್ಯ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು ಬೊಬ್ಬಿಡಲು
ಅದಕ್ಕೆ ಒಲಿವ ಕೂಡಲಸಂಗಮದೇವ.

೪೨೧.
ಸೂಳೆಗೆ ಮೆಚ್ಚಿ
ಸೂಳೆಯ ಬಂಟರೆಂಜಲ ತಿಂಬುದೀ ಲೋಕವೆಲ್ಲ!
ಅಡಗ ವೆಚ್ಚಿ
ಸೊಣಗನೆಂಜಲ ತಿಂಬುದೀ ಲೋಕವೆಲ್ಲ!
ಲಿಂಗವ ಮೆಚ್ಚಿ
ಜಂಗಮಪ್ರಸಾದವ ಕೊಂಬರ ನೋಡಿ ನಗುವವರ
ಕುಂಭೀಪಾಕ ನಾಯಕನರಕದಲಿಕ್ಕುವ
ಕೂಡಲಸಂಗಮದೇವ.

೪೨೨.
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ?
ಕುಲವುಂಟೇ ಜಂಗಮವಿದ್ದೆಡೆಯಲ್ಲಿ ?
ಎಂಜಲುಂಟೇ ಪ್ರಸಾದವಿದ್ದೆಡೆಯಲ್ಲಿ ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ, ನಿಜೈಕ್ಯ, ತ್ರಿವಿಧನಿರ್ಣಯ
ಕೂಡಲಸಂಗಮದೇವ, ನಿಮ್ಮ ಶರಣರಿಗಲ್ಲದಿಲ್ಲ.

೪೨೩.
ಹುತ್ತದ ಮೇಲಣ ರಜ್ಜು ಮುಟ್ಟಿದರೆ
ಸಾವರು ಶಂಕಿತರಾದವರು!
ಸರ್ಪದಷ್ಟವಾದರೆಯೂ
ಸಾಯರು ನಿಶ್ಶಂಕಿತರಾದವರು!
ಕೂಡಲಸಂಗಮದೇವಯ್ಯ,
ಶಂಕಿತಂಗೆ ಪ್ರಸಾದ ಕಾಳಕೂಟವಿಷವು!

೪೨೪.
ನಂಬಿದರೆ ಪ್ರಸಾದ
ನಂಬದಿದ್ದರೆ ವಿಷವು!
ತುಡುಕಬಾರದು ನೋಡಾ ಲಿಂಗನ ಪ್ರಸಾದ!
ಸಂಗನ ಪ್ರಸಾದ!
ಕೂಡಲಸಂಗನ ಪ್ರಸಾದ ಸಿಂಗಿ-ಕಾಳಕೂಟ ವಿಷವು.

೪೨೫.
ಪಂಡಿತನಾಗಲಿ ಮೂರ್ಖನಾಗಲಿ
ಸಂಚಿತಕರ್ಮ ಉಂಡಲ್ಲದೆ ಬಿಡದು.
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದು-
ಎಂದು ಶ್ರುತಿ ಸಾರುತ್ತೈದಾವೆ-
ನೋಡಾ, ತಾನಾವ ಲೋಕದೊಳಗಿದ್ದರೆಯು ಬಿಡದು.
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೇ ಧನ್ಯನು!

೪೨೬.
ಒಲ್ಲೆನೆಂಬುದು ವೈರಾಗ್ಯ,
ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದರೇನು
ತಾನಿದ್ದೆಡೆಗೆ ಬಂದುದು ಲಿಂಗಾರ್ಪಿತವ ಮಾಡಿ
ಭೋಗಿಸುವುದೇ ಆಚಾರ!
ಕೂಡಲಸಂಗಮದೇವನ
ಒಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು.

೪೨೭.
ಒಪ್ಪವ ನುಡಿವಿರಯ್ಯ ತುಪ್ಪವ ತೊಡೆದಂತೆ!
ಶರಣ ತನ್ನ ಮೆರೆವನೇ ಬಿನ್ನಾಣಿಯಂತೆ ?
ಕೂಡಲಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೇ ?

೪೨೮.
ದಾಸೋಹವೆಂಬ ಸೋಹೆಗೊಂಡು ಹೋಗಿ
ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪ್ರಸಾದವ ಕಂಡೆ
ಇಂತೀ ಚತುರ್ವಿಧ ಸಂಪನ್ನನಾದೆ ಕಾಣಾ
ಕೂಡಲಸಂಗಮದೇವ.

೪೨೯.
ಕಿವಿಯ ಸೂತಕ ಹೋಯಿತ್ತು
ಸದ್ಗುರುವಿನ ವಚನದಿಂದ!
ಕಂಗಳ ಸೂತಕ ಹೋಯಿತ್ತು
ಸದ್ಭಕ್ತರ ಕಂಡೆನಾಗಿ!
ಕಾಯದ ಸೂತಕ ಹೋಯಿತ್ತು
ನಿಮ್ಮ ಚರಣವ ಮುಟ್ಟಿದೆನಾಗಿ!
ಬಾಯ ಸೂತಕ ಹೋಯಿತ್ತು
ನಿಮ್ಮ ಒಕ್ಕುದ ಕೊಂಡೆನಾಗಿ!
ನಾನಾ ಸೂತಕ ಹೋಯಿತ್ತು
ನಿಮ್ಮ ಶರಣರನುಭಾವಿಯಾಗಿ!
ಕೂಡಲಸಂಗಮದೇವ ಕೇಳಯ್ಯ
ಎನ್ನ ಮನದ ಸೂತಕ ಹೋಯಿತ್ತು
ನೀವಲ್ಲದಿಲ್ಲೆಂದರಿದೆನಾಗಿ!

೪೩೦.
ಮೋನದಲುಂಬುದು ಆಚಾರವಲ್ಲ,
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡರೆ.

೪೩೧.
ಶಿವಾಚಾರವೆಂಬುದೊಂದು ಬಾಳ ಬಾಯಿಧಾರೆ
ಲಿಂಗ ಮೆಚ್ಚಬೇಕು; ಜಂಗಮ ಮೆಚ್ಚಬೇಕು
ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು.
ಬಿಚ್ಚಿ ಬೇರಾದರೆ ಮೆಚ್ಚ ನಮ್ಮ ಕೂಡಲಸಂಗಮದೇವ.

೪೩೨.
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು
ಎಂತಿದ್ದರೇನಯ್ಯ ?
ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು
ಎಂತಿದ್ದರೇನಯ್ಯ ?
ಸುಚರಿತ್ರರೆಂತಿದ್ದರೇನಯ್ಯ ?
ಅವಲೋಹವ ಕಳೆವ
ಪರುಷವೆಂತಿದ್ದರೇನಯ್ಯ ?
ಕೂಡಲಸಂಗನ ಶರಣರು ರಸದ ವಾರಿಧಿಗಳು
ಎಂತಿದ್ದರೇನಯ್ಯ ?

೪೩೩.
ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದರಲ್ಲಿ ಚೆನ್ನ!
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ!
ಪ್ರಸಾದಿಗಳೊಳಗೆ ಚೆನ್ನ!
ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು
ಕೂಡಲಸಂಗಮದೇವರಿಗೆ ಬೇಕಾಯಿತ್ತೆಂದು
ಕೈದೆಗೆದ ನಮ್ಮ ಚೆನ್ನ!

೪೩೪.
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ.
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ.
ಪ್ರಸಾದವಿಕಾರಿಗೆ ಮನವಿಕಾರವೆಂಬುದಿಲ್ಲ.
ಇಂತೀ ತ್ರಿವಿಧಗುಣವನರಿದಾತನು
ಅಚ್ಚಲಿಂಗೈಕ್ಯನು ಕೂಡಲಸಂಗಮದೇವ.

೪೩೫.
ಪ್ರಾಣಲಿಂಗಪ್ರತಿಗ್ರಾಹಕನಾದ ಬಳಿಕ
ಲಿಂಗವಿರಹಿತವಾಗಿ ನಡೆವ ಪರಿಯೆಂತೊ ?
ಲಿಂಗವಿರಹಿತವಾಗಿ ನುಡಿವ ಪರಿಯೆಂತೊ ?
ಪಂಚೇಂದ್ರಿಯಸುಖವನು
ಲಿಂಗವಿರಹಿತವಾಗಿ ಭುಂಜಿಸಲಾಗದು!
"ಲಿಂಗವಿರಹಿತವಾಗಿ ಉಗುಳ ನುಂಗಲಾಗದು!"
ಇಂತೆಂದುದು ಕೂಡಲಸಂಗನ ವಚನ.

೪೩೬.
ಹತ್ತು ಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು
ಮುಟ್ಟುವ ತೆರನನರಿಯದನ್ನಕ ?
ಕಟ್ಟಿದರೇನು ಬಿಟ್ಟರೇನು
ಮನವು ಲಿಂಗದಲ್ಲಿ ಮುಟ್ಟದನ್ನಕ ?
ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆನೆಂಬ
ಪಾತಕರ ಮೆಚ್ಚ ನಮ್ಮ ಕೂಡಲಸಂಗಮದೇವ

೪೩೭.
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇಕಾದವು ?!
ಕೂಡಲಸಂಗಮದೇವ,
ನಿಮ್ಮನರಿಯದ ಜ್ಞಾನವೆಲ್ಲ ಅಜ್ಞಾನ!

೪೩೮.
ಕಬ್ಬುನ ಪರುಷವೇದಿಯಾದರೇನು ?!
ಕಬ್ಬುನ ಹೊನ್ನಾಗದೊಡೆ ಪರುಷವದೇಕೋ ?
ಮನೆಯೊಳಗೆ ಕತ್ತಲೆ ಹರಿಯದೊಡೆ
ಆ ಜ್ಯೋತಿಯದೇಕೋ ?
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
ಕರ್ಮ ಹರಿಯದೊಡೆ ಆ ಪೂಜೆಯದೇಕೋ ?

೪೩೯.
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಪ್ಪುದೋ ?
ಅಹಂಕಾರಕ್ಕೆ ಎಡೆಗುಡದೆ
ಲಿಂಗತನುವಾಗಿರಬೇಕು!
ಅಹಂಕಾರರಹಿತನಾದಲ್ಲಿ
ಸನ್ನಿಹಿತ ಕಾಣಾ ಕೂಡಲಸಂಗಮದೇವ.

೪೪೦.
ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?

೪೪೧.
ಅರಿದರಿದು ಸಮಗಾಣಿಸಬಾರದು ?
ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದರೆ
ಈಶ್ವರನು ಒಡೆಯಿಕ್ಕದೆ ಮಾಣುವನೆ ?
ಪಾತ್ರಾಪಾತ್ರವೆಂದು ಕಂಡರೆ
ಶಿವನೆಂತು ಮೆಚ್ಚುವನೊ ?
ಜೀವಜೀವಾತ್ಮವ ಸರಿಯೆಂದು ಕಂಡರೆ
ಸಮವೇದಿಸದಿಪ್ಪನೇ ಶಿವನು ?
ತನ್ನ ಮನದಲ್ಲಿ
"ಯತ್ರ ಜೀವಸ್ತತ್ರ ಶಿವ"ನೆಂದು
ಸರ್ವಜೀವದಯಾಪಾರಿಯಾದರೆ
ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ ?

೪೪೨.
ಮುತ್ತು ಉದಕದಲಾಗದು,
ಉದಕ ಮುತ್ತಿನೊಲಾಗದು,
ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ!
ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕಲ್ಲದೆ,
ಕರ್ತೃ ಕೂಡಲಸಂಗಮದೇವರ
ಒಲವಿನ ದಯದ ಚಿತ್ತವಿಡಿದಂಗಲ್ಲದೆ
ಶಿವತತ್ತ್ವ ಸಾಹಿತ್ಯವಾಗದು.

೪೪೩.
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ
ಶೈತ್ಯವ ತೋರುವ ಪರಿಯೆಂತೋ ?
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ
ಉಷ್ಣವ ತೋರುವ ಪರಿಯೆಂತೋ ?
ಶರಣಂಗೆ ಭಕ್ತಿಕಾಯವಿಲ್ಲದನ್ನಕ
ಕೂಡಲಸಂಗನನರಿವ ಪರಿಯೆಂತೋ ?

೪೪೪.
ಮುನ್ನೂರರುವತ್ತು ನಕ್ಷತ್ರಕ್ಕೆ
ಬಾಯ ಬಿಟ್ಟುಕೊಂಡಿಪ್ಪುದೇ ಸಿಂಪು ?
ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳಾ ಕೇಳು ತಂದೆ!
ಎಲ್ಲವಕ್ಕೆ ಬಾಯ ಬಿಟ್ಟರೆ
ತಾನೆಲ್ಲಿಯ ಮುತ್ತಪ್ಪುದು ?
ಪರಮಂಗಲ್ಲದೆ ಹರುಷವಿಲ್ಲೆಂದು
ಕರಣಾದಿ ಗುಣಂಗಳ ಮರೆದರು;
ಇದು ಕಾರಣ ಕೂಡಲಸಂಗನ ಶರಣರು
ಸಪ್ತವ್ಯಸನಿಗಳಲ್ಲಾಗಿ.

೪೪೫.
ಮೈಗೆ ಕಾಹ ಹೇಳುವರಲ್ಲದೆ,
ಮನಕ್ಕೆ ಕಾಹ ಹೇಳುವರೆ ?
ಅಣಕದ ಗಂಡನ ಹೊಸ ಪರಿಯ ನೋಡಾ!
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು.

೪೪೬.
ಬೆಳಗಿನೊಳಗಣ ಮಹಾಬೆಳಗು! ಶಿವಶಿವಾ!!
ಪರಮಾಶ್ರಯವೆ ತಾನಾಗಿ,
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತಸ್ಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ.

೪೪೭.
ತಮತಮಗೆಲ್ಲ ನೊಸಲ ಕಣ್ಣವರು!
ತಮತಮಗೆಲ್ಲ ನಂದಿವಾಹನರು!
ತಮತಮಗೆಲ್ಲ ಖಟ್ವಾಂಗಕಪಾಲ ತ್ರಿಶೂಲಧರರು!
ದೇವರಾರು ಭಕ್ತರಾರು ಹೇಳಿರಯ್ಯ ?
ಕೂಡಲಸಂಗಮದೇವ,
ನಿಮ್ಮ ಶರಣರು ಸ್ವತಂತ್ರರು!
ಎನ್ನ ಬಚ್ಚಬರಿಯ ಬಸವನೆನಿಸಯ್ಯ!

೪೪೮.
ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

೪೪೯.
ಗುರು ಮುನಿದರೆ ಒಂದು ದಿನ ತಾಳುವೆ,
ಲಿಂಗ ಮುನಿದರೆ ದಿನವರೆ ತಾಳುವೆ.
ಜಂಗಮ ಮುನಿದರೆ
ಕ್ಷಣಮಾತ್ರವ ತಾಳಿದೆನಾದರೆ
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವ.

೪೫೦.
ರಚ್ಚೆಯ ನೆರವಿಗೆ ನಾಡನುಡಿ ಇಲ್ಲದಿಹುದೆ ?
ಅದರಂತೆನಬಹುದೇ ಸಜ್ಜನ ಸ್ತ್ರೀಯ ?
ಅದರಂತೆನಬಹುದೇ ಭಕ್ತಿರತಿಯ ?
ಕರುಳ ಕಲೆ-ಪ್ರಕಟಿತ ಉಂಟೆ ಕೂಡಲಸಂಗಮದೇವ ?

೪೫೧.
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ, ಆತ್ಮನ ಗುಣವುಂಟೆ ?
ಗುರುಕಾರುಣ್ಯವಾಗಿ,
ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೇ ಗತಿಯಾಗಿದ್ದೆ
ಕೂಡಲಸಂಗಮದೇವ.

೪೫೨.
ಮಾಡುವಾತ ನಾನಲ್ಲಯ್ಯ,
ನೀಡುವಾತ ನಾನಲ್ಲಯ್ಯ,
ಬೇಡುವಾತ ನಾನಲ್ಲಯ್ಯ,
ನಿಮ್ಮ ಕಾರುಣ್ಯವಲ್ಲದೆ, ಎಲೆ ದೇವಾ!
ಮನೆಯ ತೊತ್ತಲಸಿದರೆ ಒಡತಿ ಮಾಡಿಕೊಂಬಂತೆ
ನಿನಗೆ ನೀ ಮಾಡಿಕೋ ಕೂಡಲಸಂಗಮದೇವಾ!

೪೫೩.
ಪರಿಯಾಣವೇ ಭಾಜನವೆಂಬರು
ಪರಿಯಾಣ ಭಾಜನವಲ್ಲ ಲಿಂಗಕ್ಕೆ!
ತನ್ನ ಮನವೇ ಭಾಜನ!
ಪ್ರಾಣವನು ಬೀಸರವೋಗದೆ
ಮೀಸಲಾಗರ್ಪಿಸಬಲ್ಲಡೆ,
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.

೪೫೪.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.

೪೫೫.
ಆಲಿಕಲ್ಲ ಹರಳಿನಂತೆ,
ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬ!
ಕಡೆಗೋಡಿವರಿದವೆನಗಯ್ಯ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವನಾರಿಗೇನೆಂಬೆ!

೪೫೬.
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ!
ಸಾಲದೇ ಅಯ್ಯ!
ಮಾಲೆಗಾರನ ಕೇಳಿ ನನೆಯರಳುವುದೇ ?
ಆಗಮವನಿದಿರಿಂಗೆ ತೋರುವುದು ಆಚಾರವೇ ಅಯ್ಯ ?
ಕೂಡಲಸಂಗನ ಕೂಡಿದ
ಕೂಟದ ಕರುಳ ಕಲೆಯನು
ಇದಿರಿಂಗೆ ತೋರುವುದು ಆಚಾರವೇ ಅಯ್ಯ ?

೪೫೭.
ಎಲ್ಲ ಗಂಡರ ಪರಿಯಂತಲ್ಲ ನೋಡವ್ವ ನನ್ನ ನಲ್ಲ!
ಸುಳಿಯಲಿಲ್ಲ, ಸುಳಿದು ಸಿಂಗರವ ಮಾಡಲಿಲ್ಲ;
ಕೂಡಲ ಸಂಗಮ ದೇವನು ತನ್ನೊಳಗೆ ಬೈಚಿಟ್ಟನಾಗಿ!

೪೫೮.
ಆಹ್ವಾನಿಸಿ ಕರೆವಲ್ಲಿ ಎಲ್ಲಿದ್ದನೋ
ಈರೇಳು ಭುವನಂಗಳ ಒಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ, ವಿಸರ್ಜಿಸಿ ಬಿಡುವಾಗ ಎಲ್ಲಿದ್ದನೋ
ಮುಳ್ಳೂರ ತೆರಹಿಲ್ಲದಿಪ್ಪ ಅಖಂಡವಸ್ತು ?
ಬರಿಯ ಮಾತಿನ ಬಳಕೆಯ ತೂತಿನ ಜ್ಞಾನವ ಬಿಟ್ಟು
ನೆಟ್ಟನೆ ತನ್ನ ಕರಸ್ಥಳದೊಳಗಿರುತಿಪ್ಪ
ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ-ಸಂಧಾನವಾಗಿ ದಿವ್ಯನಿಶ್ಚಯ ಒದಗೆ
ಆ ದಿವ್ಯ ನಿಶ್ಚಯದಿಂದ ಕುಳವಡಗಿ ಅದ್ವೈತವಪ್ಪುದು!
ಇದು ಕಾರಣ, ನಮ್ಮ ಕೂಡಲಸಂಗನ ಶರಣರು
ಆಹ್ವಾನ-ವಿಸರ್ಜನವೆಂಬುಭಯ ಜಡತೆಯ ಬಿಟ್ಟು
ತಮ್ಮ ತಮ್ಮ ಕರಸ್ಥಳದಲ್ಲಿ ನಿಶ್ಚೈಸಿ ಅವರೇ
ಸ್ವಯಲಿಂಗವಾದರು ಕಾಣಿರೋ!

೪೫೯.
ಎನ್ನ ಗಂಡ ಬರಬೇಕೆಂದು
ಎನ್ನ ಅಂತರಂಗವೆಂಬ ಮನೆಯ ತೆರಹುಮಾಡಿ
ಅಷ್ಟದಳಕಮಲವೆಂಬ ಓವರಿಯೊಳಗೆ
ನಿಜನಿವಾಸವೆಂಬ ಹಾಸುಗೆಯ ಹಾಸಿ
ಧ್ಯಾನಮೌನವೆಂಬ ಮೇಲುಕಟ್ಟ ಕಟ್ಟಿ
ಜ್ಞಾನವೆಂಬ ದೀಪವ ಬೆಳಗಿ
ನಿಷ್ಕ್ರೀಗಳೆಂಬುಪಕರಣಂಗಳ ಹರಹಿಕೊಂಡು
ಪಶ್ಚಿಮದ್ವಾರವೆಂಬ ಬಾಗಿಲ ತೆರೆದು
ಕಂಗಳೇ ಪ್ರಾಣವಾಗಿ ಹಾರುತಿರ್ದೆನಯ್ಯ!
"ನಾನು ಬಾರೆನೆಂದು ಉಮ್ಮಳಿಸಿಹ"ನೆಂದು
ತಾನೇ ಬಂದು ಎನ್ನ ಹೃದಯಸಿಂಹಾಸನದ ಮೇಲೆ
ಮೂರ್ತಿಗೊಂಡರೆ
ಎನ್ನ ಮನದ ಬಯಕೆ ಸಯವಾಯಿತ್ತು.
ಹಿಂದೆ ಹನ್ನೆರಡು ವರ್ಷದಿಂದಿದ್ದ ಚಿಂತೆ ನಿಶ್ಚಿಂತೆಯಾಯಿತ್ತು!
ಕೂಡಲಸಂಗಮದೇವ ಕೃಪಾಮೂರ್ತಿಯಾದ ಕಾರಣ,
ಆನು ಬದುಕಿದೆನು.

೪೬೦.
ಕಾಯವೆಂಬ ಘಟಕ್ಕೆ
ಚೈತನ್ಯವೇ ಸಯಿದಾನ,
ಸಮತೆ ಎಂಬ ಜಲ,
ಕರಣಾದಿಗಳೇ ಸ್ರವಣ,
ಜ್ಞಾನವೆಂಬ ಅಗ್ನಿಯನಿಕ್ಕಿ
ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ,
ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ
ಪರಿಣಾಮದೋಗರವ ನೀಡಿದರೆ
ಕೂಡಲಸಂಗಮದೇವಂಗೆ ಆರೋಗಣೆಯಾಯಿತ್ತು.

೪೬೧.
ಅಡಿಗಡಿಗೆ ಸ್ಥಾನನಿಧಿ!
ಅಡಿಗಡಿಗೆ ದಿವ್ಯಕ್ಷೇತ್ರ!
ಅಡಿಗಡಿಗೆ ನಿಧಿಯು ನಿಧಾನ! ನೋಡಾ!
ಆತನಿರವೇ ಅವಿಮುಕ್ತ ಕ್ಷೇತ್ರ,
ಕೂಡಲಸಂಗನ ಶರಣ ಸ್ವತಂತ್ರನಾಗಿ.

೪೬೨.
ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ
ಇದಾವಂಗಳವಡುವುದಯ್ಯ ?
ನಿಧಾನ ತಪ್ಪಿ ಬಂದರೆ ಒಲ್ಲೆನೆಂಬವರಿಲ್ಲ!
ಪ್ರಮಾದವಶ ಬಂದರೆ ಹುಸಿಯೆನೆಂಬವರಿಲ್ಲ!
ನಿರಾಶೆ, ನಿರ್ಭಯ, ಕೂಡಲಸಂಗಮದೇವ,
ನೀನೊಲಿದ ಶರಣಂಗಲ್ಲದಿಲ್ಲ!

೪೬೩.
ಹಲಬರ ನುಂಗಿದ ಹಾವಿಂಗೆ ತಲೆ-ಬಾಲವಿಲ್ಲ ನೋಡಾ!
ಕೊಲುವುದು ತ್ರೈಜಗವೆಲ್ಲವ!
ತನಗೆ ಬೇರೆ ಪ್ರಳಯವಿಲ್ಲ!!
ನಾಕಡಿಯನೆಯ್ದದು,
ಲೋಕದ ಕಡೆಯನೇ ಕಾಬುದು!
ಸೂಕ್ಷ್ಮಪಥದಲ್ಲಿ ನಡೆವುದು,
ತನಗೆ ಬೇರೊಡಲಿಲ್ಲ!
ಅಹಂಕಾರವೆಂಬ ಗಾರುಡಿಗನ ನುಂಗಿತ್ತು
ಕೂಡಲಸಂಗನ ಶರಣರಲ್ಲದುಳಿದವರ.

೪೬೪.
ಉಂಬ ಬಟ್ಟಲು ಬೇರೆ ಕಂಚಲ್ಲ!
ನೋಡುವ ದರ್ಪಣ ಬೇರೆ ಕಂಚಲ್ಲ!
ಭಾಂಡ, ಭಾಜನ ಒಂದೆ!
ಬೆಳಗೆ ಕನ್ನಡಿಯೆನಿಸಿತ್ತಯ್ಯ!
ಅರಿದರೆ ಶರಣನು, ಮರೆದರೆ ಮಾನವನು!
ಮರೆಯದೆ ಪೂಜಿಸು ಕೂಡಲಸಂಗನ.

೪೬೫.
ಕೆರೆ ಹಳ್ಳ ಭಾವಿಗಳು ಮೈದೆಗೆದರೆ
ಗುಳ್ಳೆ, ಗೊರಚೆ, ಚಿಪ್ಪು ಕಾಣಬಹವು!
ವಾರಿಧಿ ಮೈದೆಗೆದರೆ
ರತ್ನ ಮುತ್ತುಗಳು ಕಾಣಬಹವು!
ಕೂಡಲಸಂಗನ ಶರಣರು
ಮನದೆರೆದು ಮಾತನಾಡಿದರೆ
ಲಿಂಗವೇ ಕಾಣಬಹುದು!

೪೬೬.
ನಾರುಳಿಯ ಹಣಿದವನಾರಾದರೆಯು ಆಡರೆ
ನಾರುಳಿದರೆ ಮುಂದೆ ಅಂಕುರಿತ ಫಲ ತಪ್ಪದು!
ಮಾಡುವನ್ನಕ ಫಲದಾಯಕ.
ಮಾಟವರತು ನಿಮ್ಮಲ್ಲಿ ಸಯವಾದರೆ
ಆತನೇ ಅಚ್ಚ ಶರಣನಯ್ಯ, ಕೂಡಲಸಂಗಮದೇವ.

೪೬೭.
ಐದು ಮಾನವ ಕುಟ್ಟಿ
ಒಂದು ಮಾನವ ಮಾಡು ಕಂಡೆಯಾ ಮದುವಳಿಗೆ!
ಇದು ನಮ್ಮ ಬಾಳುವೆ ಮದುವಳಿಗೆ!
ಇದು ನಮ್ಮ ವಿಸ್ತಾರ ಮದುವಳಿಗೆ!
ಮದವಳಿದು ನಿಜವುಳಿದ ಬಳಿಕ
ಅದು ಸತ್ಯ ಕಾಣಾ ಕೂಡಲಸಂಗಮದೇವಾ.

೪೬೮.
ಕುಲಮದವಳಿಯದನ್ನಕ ಶರಣನಾಗಲೇಕೆ ?
ವಿಧಿವಶ ಬಿಡದನ್ನಕ ಭಕ್ತನಾಗಲೇಕೆ ?
ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು
ಕಿಂಕರರ ಕಿಂಕರನಾಗಿರಬೇಕು.
ಹೆಪ್ಪನೆರೆದ ಹಾಲು ಕೆಟ್ಟು
ತುಪ್ಪವಪ್ಪಂತೆಯಿಪ್ಪರು,
ಕೂಡಲಸಂಗಮದೇವ, ನಿಮ್ಮ ಶರಣರು.

೪೬೯.
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು,
ಬೆಣ್ಣೆ ಕರಗಿ ತುಪ್ಪವಾಗಿ
ಮರಳಿ ಬೆಣ್ಣೆಯಾಗದು ಕ್ರೀಯಳಿದು,
ಹೊನ್ನು ಕಬ್ಬುನವಾಗದು ಕ್ರೀಯಳಿದು,
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು.
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗ ಕ್ರೀಯಳಿದು.

೪೭೦.
ಪೂರ್ವಜನ್ಮ ನಿವೃತ್ತಿಯಾಗಿ
ಗುರುಕರುಣವಿಡಿದಂಗೆ ಬಂಧನವೆಲ್ಲಿಯದೋ,
ಭವಬಂಧನವೆಲ್ಲಿಯದೋ
ಸಂಕಲ್ಪ-ವಿಕಲ್ಪವೆಂಬ ಸಂದೇಹವ ಕಳೆದುಳಿದವಂಗೆ
ಕೂಡಲಸಂಗಮದೇವರ
ತ್ರಿಸಂಧ್ಯಾಕಾಲದಲ್ಲಿ ಮಾಣದೇ ನೆನೆವಂಗೆ ?

೪೭೧.
ಲಗ್ನವೆಲ್ಲಿಯದೋ
ವಿಘ್ನವೆಲ್ಲಿಯದೋ ಸಂಗಯ್ಯ ?
ದೋಷವೆಲ್ಲಿಯದೋ
ದುರಿತವೆಲ್ಲಿಯದೋ ಸಂಗಯ್ಯ ?
ನಿಮ್ಮ ಮಾಣದೆ ನೆನೆವಂಗೆ
ಭವಕರ್ಮವೆಲ್ಲಿಯದೋ ಕೂಡಲಸಂಗಯ್ಯ!

೪೭೨.
ಶರಣ ನಿದ್ರೆಗೈದರೆ ಜಪ ಕಾಣಿರೋ!
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ!
ಶರಣ ನಡೆದುದೇ ಪಾವನ ಕಾಣಿರೋ!
ಶರಣ ನುಡಿದುದೇ ಶಿವತತ್ವಕಾಣಿರೋ
ಕೂಡಲಸಂಗನ ಶರಣನ ಕಾಯವೇ
ಕೈಲಾಸ ಕಾಣಿರೋ!

೪೭೩.
ಸಮುದ್ರ ಘನವೆಂಬೆನೆ ?
ಧರೆಯ ಮೇಲಡಗಿತ್ತು!
ಧರೆ ಘನವೆಂಬೆನೆ ?
ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು!
ನಾಗೇಂದ್ರ ಘನವೆಂಬೆನೆ ?
ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು!
ಅಂಥ ಪಾರ್ವತಿ ಘನವೆಂಬೆನೆ ?
ಪರಮೇಶ್ವರನ ಅರ್ಧಾಂಗಿಯಾದಳು!
ಅಂಥ ಪರಮೇಶ್ವರ ಘನವೆಂಬೆನೆ ?
ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು!

೪೭೪.
ನೆಲನೊಂದೇ ಹೊಲೆಗೇರಿ, ಶಿವಾಲಯಕ್ಕೆ!
ಜಲವೊಂದೇ ಶೌಚಾಚಮನಕ್ಕೆ!
ಕುಲವೊಂದೇ ತನ್ನ ತಾನರಿದವಂಗೆ!
ಫಲವೊಂದೇ ಷಡುದರ್ಶನ ಮುಕ್ತಿಗೆ!
ನಿಲವೊಂದೇ, ಕೂಡಲಸಂಗಮದೇವ,
ನಿಮ್ಮನರಿದವಂಗೆ.

೪೭೫.
ಅಯ್ಯಾ, ಸಜ್ಜನ ಸದ್ಭಕ್ತರ ಸಂಗದಿಂದ
ಮಹಾನುಭಾವರ ಕಾಣಬಹುದು!
ಮಹಾನುಭಾವರ ಸಂಗದಿಂದ
ಶ್ರಿಗುರುವನರಿಯಬಹುದು!
ಲಿಂಗವನರಿಯಬಹುದು ಜಂಗಮವನರಿಯಬಹುದು!
ಪ್ರಸಾದವನರಿಯಬಹುದು! ತನ್ನ ತಾನರಿಯಬಹುದು!!
ಇದು ಕಾರಣ ಸದ್ಭಕ್ತರ ಸಂಗವ ಕರುಣಿಸು
ಕೂಡಲಸಂಗಮದೇವಾ ನಿಮ್ಮ ಧರ್ಮ!

೪೭೬.
ಕುಂಡಲಿಗನೊಂದು ಕೀಡೆಯ ತಂದು
ತನ್ನಂತೆ ಮಾಡಿತಲ್ಲ!
ಎಲೆ ಮಾನವಾ, ಕೇಳಿ ನಂಬಯ್ಯ!
ನೋಡಿ ನಂಬಯ್ಯ, ಎಲೆ ಮಾನವ!
"ತ್ವಚ್ಚಿಂತಯಾ ಮಹಾದೇವ!
ತ್ವಮೇವಾಸ್ಮಿ ನ ಸಂಶಯಃ!
ಭ್ರಮದ್ ಭ್ರಮರಚಿಂತಾಯಾಂ
ಕೀಟೋಪಿ ಭ್ರಮರಾಯತೇ"!!
ಕೂಡಲಸಂಗನ ಶರಣರ ಅನುಭಾವ
ಇದರಿಂದ ಕಿರುಕುಳವೆ ಎಲೆ ಮಾನವಾ ?!

೪೭೭.
ಮರಮರನ ಮಥನದಿಂದಗ್ನಿ ಹುಟ್ಟಿ,
ಆ ಮರನೆಲ್ಲವ ಸುಡದಿಪ್ಪುದೆ ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಗುಣವೆಲ್ಲವ ಸುಡದಿಪ್ಪುದೆ ?
ಇದು ಕಾರಣ,
ಮಹಾನುಭಾವರ ತೋರಿಸು
ಕೂಡಲಸಂಗಮದೇವ.

೪೭೮.
ಅರಿದುದ ಅರಿಯಲೊಲ್ಲದು! ಅದೆಂತಯ್ಯ ?
ಮರೆದುದ ಮರೆಯಲೊಲ್ಲದು! ಅದೆಂತಯ್ಯ
ಅರಿದು ಮರೆದ ಮನವ
ಕೂಡಲಸಂಗಯ್ಯ ತಾನೇ ಬಲ್ಲ.

೪೭೯.
ಮೀಸಲು ಬೀಸರವೋದ ಪರಿಯ ನೋಡಾ!
ಕಾಲು ತಾಗಿದ ಅಗ್ಛವಣಿ,
ಕೈ ಮುಟ್ಟಿದರ್ಪಿತ
ಮನ ಮುಟ್ಟಿದಾರೋಗಣೆಯನೆಂತು ಘನವೆಂಬೆನಯ್ಯ !?
ಬಂದ ಪರಿಯಲಿ ಪರಿಣಾಮಿಸಿ
ನಿಂದ ಪರಿಯಲ್ಲಿ ನಿಜಮಾಡಿ
ಆನೆಂದ ಪರಿಯಲ್ಲಿ ಕೈಕೋ
ಕೂಡಲಸಂಗಮದೇವ!

೪೮೦.
ಹಾಲೆಂಜಲು ವತ್ಸನ!
ಉದಕವೆಂಜಲು ಮತ್ಸ್ಯದ!
ಪುಷ್ಪವೆಂಜಲು ತುಂಬಿಯ!
ಎಂತು ಪೂಜಿಸುವೆನಯ್ಯ!
ಶಿವಶಿವಾ! ಎಂತು ಪೂಜಿಸುವೆ ?
ಈ ಎಂಜಲವನತಿಗಳೆವರೆ ಎನ್ನಳವಲ್ಲ.
ಬಂದುದ ಕೈಕೋ ಕೂಡಲಸಂಗಮದೇವ.

೪೮೧.
ದಿಟ ಮಾಡಿ ಪೂಜಿಸಿದರೆ ಸಟೆ ಮಾಡಿ ಕಳೆವೆ.
ಸಟೆ ಮಾಡಿ ಪೂಜಿಸಿದರೆ ದಿಟ ಮಾಡಿ ಕಳೆವೆ.
ಏನೆಂಬೆನೆಂತೆಂಬೆ!
ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ
ಆನು ಮಾಡಿದ ಭಕ್ತಿ
ಎನಗಿಂತಾಯಿತ್ತು ಕೂಡಲಸಂಗಮದೇವ.

೪೮೨.
ಎಂಬತ್ತೆಂಟು ಪವಾಡವ ಮೆರೆದು
ಹಗರಣದ ಚೋಹದಂತಾಯಿತ್ತೆನ್ನ ಭಕ್ತಿ;
ತನುವಿನೊಳಗೆ ಮನ ಸಿಲುಕದೆ,
ಮನದೊಳಗೆ ತನು ಸಿಲುಕದೆ
ತನು ಅಲ್ಲಮನಲ್ಲಿ ಸಿಲುಕಿತ್ತು!
ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು
ನಾನೇತರಲ್ಲಿ ನೆನೆವೆನಯ್ಯ
ಕೂಡಲಸಂಗಮದೇವ ? !

೪೮೩.
ಬಸವ ಬಾರಯ್ಯ,
ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯ ?
ಮತ್ತಾರು ಇಲ್ಲಯ್ಯ, ಮತ್ತಾರು ಇಲ್ಲಯ್ಯ !
ನಾನೊಬ್ಬನೇ ಭಕ್ತನು,
ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ
ಜಂಗಮಲಿಂಗ ನೀನೇ ಅಯ್ಯ ಕೂಡಲಸಂಗಮದೇವ!!

೪೮೪.
ಭಕ್ತ, ಮಾಹೇಶ್ವರ, ಪ್ರಸಾದಿ,
ಪ್ರಾಣಲಿಂಗ, ಶರಣನೈಕ್ಯನು
ಮೆಲ್ಲಮೆಲ್ಲನೆ ಆದೆನೆಂಬನ್ನಬರ,
ನಾನು ವಜ್ರದೇಹಿಯೆ ?
ನಾನೇನು ಅಮೃತವ ಸೇವಿಸಿದೆನೆ ?
ನಾನು ಮರುಜೇವಣಿಯ ಕೊಂಡೆನೆ ?
ನುಡಿದ ನುಡಿಯೊಳಗೆ ಷಡುಸ್ಥಲ ಬಂದು
ನನ್ನ ಮನವನಿಂಬುಗೊಳದಿದ್ದರೆ
ಸುಡುವೆನೀ ತನುವ ಕೂಡಲಸಂಗಮದೇವ.

೪೮೫.
ತಾಪತ್ರಯವೆಂದರೆ ರೂಪ ಕಾಣುತ್ತ ಕನಲಿದ!
ಕೋಪದಲ್ಲಿ ಶಿವಕಳೆಯದ ಕರಡಿಗೆಯನೆ ಮುರಿದ!
ಧೂಪಗುಂಡಿಗೆಯನೊಡೆದ!
ದೀಪದಾರತಿಯ ನಂದಿಸಿದ!
ಬಹು ಪರಿಣಾಮದೋಗರವ ತುಡುಕಿದ!
ಪಾಪಕರ್ಮ, ಕೂಡಲಸಂಗಮದೇವಾ,
ನಿಮ್ಮ ಶರಣ.

೪೮೬.
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯ!
ನೀನು ಜಗಕ್ಕೆ ಬಲ್ಲಿದನು,
ನಾನು ನಿನಗೆ ಬಲ್ಲಿದನು ಕಂಡಯ್ಯ!
ಕರಿಯು ಕನ್ನಡಿಯೊಳಡಗಿದಂತಯ್ಯ -
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವ.

೪೮೭.
ಎಲ್ಲರ ಗಂಡರು ಬೇಂಟೆಯ ಹೋದರು.
ನೀನೇಕೆ ಹೋಗೆ ಎಲೆ ಗಂಡನೆ ?
ಸತ್ತುದ ತಾರದಿರು; ಕೈ ಮುಟ್ಟಿ ಕೊಲ್ಲದಿರು!
ಅಡಗಿಲ್ಲದೆ ಮನೆಗೆ ಬಾರದಿರು!
ದೇವರ ಧರ್ಮದಲೊಂದು
ಬೇಂಟೆ ದೊರೆಕೊಂಡರೆ
ಕೂಡಲಸಂಗಮದೇವಂಗರ್ಪಿತ ಮಾಡುವೆ ಎಲೆ ಗಂಡನೆ,

೪೮೮.
ಗ್ರಹ ಬಂದು ಆವರಿಸಲೊಡನೆ ತನ್ನ ಮರೆಸುವುದು;
ಮತ್ತೊಂದಕಿಂಬುಗೊಡಲೀಯದಯ್ಯ!
ಕೂಡಲಸಂಗಮದೇವನ ಅರಿವು
ಅನುಪಮವಾಗಲೊಡನೆ,
ಬೆವಹಾರದೊಳಗಿರಲೀಯದಯ್ಯ!

೪೮೯.
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ!
ಅಂಗವಿದ್ಯವನೊಲ್ಲ,
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ!
ಕಯ್ಯ ತೊಳೆದಲ್ಲದೆ ಮುಟ್ಟಲೀಯ,
ಕಾಲ ತೊಳೆದಲ್ಲದೆ ಹೊದ್ದಲೀಯ.
ಇಂತೀ ಸರ್ವಾಂಗ ತಲೆದೊಳೆದ ಕಾರಣ
ಕೂಡಲಸಂಗಮದೇವನೆನ್ನ
ಕೂಡಿಕೊಂಡನವ್ವ.

೪೯೦.
ಅಯ್ಯ, ನೀ ಮಾಡಲಾದ ಜಗತ್ತು;
ಅಯ್ಯ, ನೀ ಮಾಡಲಾದ ಸಂಸಾರ;
ಅಯ್ಯ, ನೀ ಮಾಡಲಾದ ಮರವೆ;
ಅಯ್ಯ, ನೀ ಮಾಡಲಾದ ದುಃಖ!
ಅಯ್ಯ, ನೀ ಬಿಡಿಸಿದರೆ ಬಿಟ್ಟಿತ್ತು ತಾಮಸವಯ್ಯ!
ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿದೇಕೆ,
ಕೂಡಲಸಂಗಮದೇವ ?

೪೯೧.
ಅರತುದಯ್ಯ ಅಂಗಗುಣ, ಒರೆತುದಯ್ಯ ಭಕ್ತಿರಸ!
ಆವರಿಸಿತಯ್ಯ ಅಂಗ ಲಿಂಗವನು!
ಏನೆಂದರಿಯೆನಯ್ಯ ಲೋಕ-ಲೌಕಿಕದ ಮದವ,
ಕೂಡಲಸಂಗಮದೇವ, ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ!

೪೯೨.
ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ!
ಮಾಟವುಳ್ಳನ್ನಬರ ಜಂಗಮವ ಹಾಡಿದೆ!
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ!
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ
ಕೂಡಲಸಂಗಮದೇವ.

೪೯೩.
ಮರಳು ತಲೆ, ಹುರುಳು ತಲೆ ನೀನೇ ದೇವ
ಹೆಂಗೂಸು ಗಂಡುಗೂಸೂ ನೀನೇ ದೇವ
ಎಮ್ಮಕ್ಕನ ಗಂಡ ನೀನೇ ದೇವ,
ಕೂಡಲಸಂಗಮದೇವ,
ಭ್ರಾಂತಳಿದು ಭಾವ ನಿಂದುದಾಗಿ.

೪೯೪.
ಉಮಾದಿನಾಥರು ಕೋಟಿ,
ಪಂಚವಕ್ತ್ರರು ಕೋಟಿ,
ನಂದಿವಾಹನರೊಂದು ಕೋಟಿ ನೋಡಯ್ಯ!
ಸದಾಶಿವರೊಂದು ಕೋಟಿ
ಗಂಗೆವಾಳುಕಸಮಾರುದ್ರರು ಇವರೆಲ್ಲರು
ಕೂಡಲಸಂಗನ ಸಾನ್ನಿಧ್ಯರಲ್ಲದೆ
ಸಮರಸವೇದ್ಯರೊಬ್ಬರೂ ಇಲ್ಲ!

೪೯೫.
ಬಯಲ ರೂಪಮಾಡಬಲ್ಲಾತನೇ ಶರಣನು,
ಆ ರೂಪ ಬಯಲಮಾಡಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪಮಾಡಲರಿಯದಿದ್ದರೆ
ಎಂತು ಶರಣನೆಂಬೆ ?
ಆ ರೂಪ ಬಯಲ ಮಾಡಲರಿಯದಿದ್ದರೆ
ಎಂತು ಲಿಂಗಾನುಭಾವಿಯೆಂಬೆ ?
ಈ ಉಭಯವೊಂದಾದರೆ
ನಿಮ್ಮಲ್ಲಿ ತೆರಹುಂಟೇ ಕೂಡಲಸಂಗಮದೇವ ?

೪೯೬.
ದೇವಲೋಕ, ಮರ್ತ್ಯಲೋಕವೆಂಬ
ಸೀಮೆಯುಳ್ಳನ್ನಕ ಕೇವಲ ಶರಣನಾಗಲರಿಯ,
ಸತ್ತು ಬೆರೆಸಿಹೆನೆಂದರೆ
ಕಬ್ಬಿನ ತುದಿಯ ಮೆಲಿದಂತೆ ಕೂಡಲಸಂಗಮದೇವ.

೪೯೭.
ಏನನಾದರೆಯು ಸಾಧಿಸಬಹುದು!
ಮತ್ತೇನನಾದರೆಯು ಸಾಧಿಸಬಹುದಯ್ಯ!
ತಾನಾರೆಂಬುದ ಸಾಧಿಸಬಾರದು,
ಕೂಡಲಸಂಗಮದೇವನ
ಕರುಣವುಳ್ಳವಂಗಲ್ಲದೆ!

೪೯೮.
ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ!
ಹಿಂದ ಬಿಟ್ಟು ಮುಂದ ಹಿಡಿಯಲೇ ಬೇಕು.
ಕೂಡಲಸಂಗಮದೇವಯ್ಯ
ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.

೪೯೯.
ಲಿಂಗವ ಪೂಜಿಸಿ ಫಲವೇನಯ್ಯ
ಸಮರತಿ, ಸಮಕಳೆ, ಸಮಸುಖವರಿಯದನ್ನಕ ?
ಲಿಂಗವ ಪೂಜಿಸಿ ಫಲವೇನಯ್ಯ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ ?

೫೦೦.
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಳವನು!
ಸಂಬೋಳಿಯೆನುತ್ತ, ಇಂಬಿನಲ್ಲಿದೇನೆ.
ಕೂಡಲಸಂಗಮದೇವ.
ನಿಮ್ಮ ನಾಮವಿಡಿದ ಅನಾಮಿಕ ನಾನು.

  

No comments:

Post a Comment