Thursday, October 14, 2010

ಭ್ರಾಂತಿ ಭವ ದುರಿತವನು ಪರಿಹರಿಸಿ...............................(ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:)

  ಎಲ್ಲರಂಥವನಲ್ಲ ನನ ಗಂಡ.
 ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ ||ಪಲ್ಲ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||ಅ.ಪ.||

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ ||೧||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||೨||

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||೩||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||೪||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||೫||
………………………………………………………………………
ಭಕ್ತಿಮಾರ್ಗದಲ್ಲಿ ಭಕ್ತ ಮತ್ತು ಭಗವಂತನ ನಡುವೆ ಐದು ಬಗೆಯ ಸಂಬಂಧಗಳನ್ನು ಗುರುತಿಸಲಾಗಿದೆ:
೧) ದಾಸ ಭಾವ
೨) ಸಖ್ಯ ಭಾವ
೩) ಮಧುರ ಭಾವ
೪) ವಾತ್ಸಲ್ಯ ಭಾವ
೫) ವಿರೋಧ ಭಾವ

ಭಕ್ತಿಮಾರ್ಗದ ಸಾಧಕರು ಈ ಎಲ್ಲ ಪಥಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ.
ಶರೀಫರ ಹಾಡುಗಳಲ್ಲಿ ಸಹ ಈ ವಿಭಿನ್ನ ಪ್ರಕಾರಗಳ ವರ್ಣನೆಯನ್ನು ಕಾಣಬಹುದು.

“ಎಲ್ಲರಂಥವನಲ್ಲ ನನ ಗಂಡ” ಎನ್ನುವ ಹಾಡಿನಲ್ಲಿ ಶರೀಫರು ಪರಮಾತ್ಮನನ್ನು ಪತಿಗೆ ಹಾಗೂ ಜೀವಾತ್ಮರಾದ ತಮ್ಮನ್ನು ಸತಿಗೆ ಹೋಲಿಸಿಕೊಂಡು ಹಾಡಿದ್ದಾರೆ.
ಮಧುರ ಭಕ್ತಿಯ ಈ ಸಾಧನಾಮಾರ್ಗದಲ್ಲಿ ತಮಿಳುನಾಡಿನ ಆಂಡಾಳ್, ಕರ್ನಾಟಕದ ಅಕ್ಕ ಮಹಾದೇವಿ ಹಾಗೂ ರಾಜಸ್ಥಾನದ ಮೀರಾಬಾಯಿ ಪ್ರಸಿದ್ಧರಾಗಿದ್ದಾರೆ.
ವೀರಶೈವ ದರ್ಶನದಲ್ಲಿಯೂ ಸಹ “ ಶರಣ ಸತಿ, ಲಿಂಗ ಪತಿ” ಎನ್ನುವದು ಸುಪ್ರಸಿದ್ಧವಾದ ಹೇಳಿಕೆಯೇ ಆಗಿದೆ.
ಆಧುನಿಕ ಕಾಲದಲ್ಲಿ ಮಧುರಚೆನ್ನರೂ ಸಹ ಸಾಧನೆಯ ಪಥದಲ್ಲಿ ಪರಮಾತ್ಮನನ್ನು ತಮ್ಮ “ನಲ್ಲ” ಎಂದು ಗ್ರಹಿಸಿ ಬರೆದ “ನನ್ನ ನಲ್ಲ” ಕಾವ್ಯವು ಕನ್ನಡದ ಅದ್ಭುತ ಕಾವ್ಯಗಳಲ್ಲೊಂದಾಗಿದೆ.

ಶರೀಫರ ಕವನ ಪ್ರಾರಂಭವಾಗುವದು ತಮ್ಮ ಗಂಡನ ಬಗೆಗೆ ಅವರಿಗಿರುವ ಬೆರಗು ಹಾಗು ಮೆಚ್ಚುಗೆಯ ಸಾಲುಗಳಿಂದ:
“ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ”

ಈತ ಬಲ್ಲಿದನಾದ ಗಂಡ ಎಂದು ಇವನ ಹೆಂಡತಿಗೆ ಅಭಿಮಾನವಿದೆ.
ಯಾತರಲ್ಲಿ ಬಲ್ಲಿದ?
ತನ್ನ ಹೆಂಡತಿಯನ್ನು ತನಗೆ ಬೇಕಾದಂತೆ ತಿದ್ದುವದರಲ್ಲಿ ಈತ ಬಲ್ಲಿದ, ಅಂದರೆ ಜಾಣ!
ಅಷ್ಟೇ ಅಲ್ಲ. ಅವಳನ್ನು ಪರಿವರ್ತಿಸುವ ಈ ಕಾರ್ಯವನ್ನು ಆತ ‘ಪುಂಡ’ತನದಿಂದ, agressively ಮಾಡುತ್ತಾನೆ.
ಹೆಂಡತಿಗೆ ಈ ವಿಷಯದಲ್ಲಿ ಸ್ವಲ್ಪವೂ ಸ್ವಾತಂತ್ರ್ಯ ಎನ್ನುವದಿಲ್ಲ.
ಆದರೆ ಅವಳಿಗೆ ಅಸಮಾಧಾನವೂ ಇಲ್ಲ.
ಇದರಲ್ಲಿ ತನ್ನ ಹಿತವೇ ಇದೆ ಎಂದು ಅರಿತ ಅವಳು ಗಂಡನ ಇಂತಹ ವರ್ತನೆಯನ್ನು ಮೆಚ್ಚಿಕೊಂಡಿದ್ದಾಳೆ.

ತನ್ನ ಗಂಡನಾದ ಪರಮಾತ್ಮ ಯಾವ ರೀತಿಯಲ್ಲಿ ತನ್ನನ್ನು ತಿದ್ದಿದ ಎಂದು ಶರೀಫರು ಹೀಗೆ ಹೇಳುತ್ತಾರೆ.
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||

ಹೊಸದಾಗಿ ಮದುವೆಯಾದ ಹೆಂಡತಿ (--ಹಳೆಯ ಸಾಂಪ್ರದಾಯಕ ಸಮಾಜದಲ್ಲಿ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಿರಿ—) ತನ್ನ ಪತಿಯೊಡನೆ ತನ್ನ ಚಿಕ್ಕ ಪುಟ್ಟ ಬಯಕೆಗಳನ್ನು ಹೇಳಿಕೊಳ್ಳಲು ಬಯಸುತ್ತಾಳೆ. ಅವಳಿಗೆ ಬಾಯಿ ತೆರೆಯಲೇ ಅವಕಾಶ ಕೊಡದಂತೆ, ಈ ಪುಣ್ಯಾತ್ಮ ಮಾತು ಮಾತಿಗೆ (=ಸೊಲ್ಲು ಸೊಲ್ಲಿಗೆ) ಇವಳನ್ನು ಬಯ್ಯುತ್ತಾನೆ. ಇವಳು ಮನೆಯ ಬಿಟ್ಟು ಹೊರಗೆ ಕಾಲಿಡಬಾರದೆನ್ನುವ ಉದ್ದೇಶದಿಂದ ಅವಳ ಕಾಲನ್ನೇ ಮುರಿದು ಬಿಟ್ಟಿದ್ದಾನೆ.

ಶರೀಫರು ಹೊಸದಾಗಿ ಪರಮಾತ್ಮನ ಜೊತೆ ಮದುವೆಯಾಗಿದ್ದಾರೆ.
ತನ್ನಂತಹ ನೆರೆಹೊರೆಯವರೊಡನೆ ಮಾತನಾಡುವ ಹಾಗು ತನ್ನ ಸಂಸಾರದ ದೊಡ್ಡಸ್ತನವನ್ನು ಹೆಮ್ಮೆಯಿಂದ ಹೇಳಿಕೊಂಡು, ಬೀಗುವ ಮನಸ್ಸು ಈ ಹೆಂಡತಿಗೆ ಇದೆ.
ಆದರೆ ಮನೆಯ ಯಜಮಾನನಿಗೆ ಇದು ಬಿಲ್ಕುಲ್ ಬೇಕಾಗಿಲ್ಲ.
ಸರಿ, ಆತ ಇವಳ ಕಾಲನ್ನೇ ಮುರಿದು ಬಿಟ್ಟ.
ಆಧ್ಯಾತ್ಮಿಕ ಅರ್ಥದಲ್ಲಿ ಹೇಳುವದಾದರೆ, ತನ್ನ ಸರಿಕರಾದ ಇತರ ಕೆಲವು ಸಂತರಿಗೆ (ಉದಾ: ಅಜಾತ ನಾಗಲಿಂಗ ಸ್ವಾಮಿಗಳಿಗೆ) ಬಂದಂತಹ ದೊಡ್ಡಸ್ತಿಕೆ ಹಾಗು ಪ್ರಸಿದ್ಧಿ ಶರೀಫರಿಗೆ ಬರದಂತೆ, ಆ ಪರಮಾತ್ಮ ನೋಡಿಕೊಂಡ.
ಇದು ಹೆಂಡತಿಗೂ ಒಪ್ಪಿಗೆಯಾದ ಸಂಗತಿಯೇ!

ಇಷ್ಟಾದ ಮೇಲೆ ಇಂತಹ ಸುಗುಣ ಸಂಪನ್ನ ಗಂಡನೊಡನೆ ತನ್ನ ಒಗೆತನ ಹೇಗೆ ಪ್ರಾರಂಭವಾಯಿತೆಂದು ಶರೀಫರು ಹೇಳುತ್ತಾರೆ:

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಶರೀಫರಿಗೆ ಇನ್ನೂ ಆಧ್ಯಾತ್ಮದ ಗಂಧ ಬಡೆದಿರಲಿಲ್ಲ.
ಅವರು ತಮ್ಮ ತಂದೆ ತಾಯಿಯ ಮನೆಯಲ್ಲಿ, ಅಂದರೆ ವಿಷಯ ಭಾವನೆ ತುಂಬಿದ ಸಂಸಾರದಲ್ಲಿಯೇ ಇದ್ದರು.
ಅವರಿಗೆ ಮೂವರು ಪ್ರೀತಿಯ ಗೆಳೆಯರು.
ಈ ಮೂವರೆಂದರೆ, ಪ್ರತಿಯೊಂದು ಜೀವಿಗೆ ಸಂಚಲನೆ ನೀಡುವ ಮೂರು ಗುಣಗಳು:
(೧) ತಮಸ್ (೨) ರಜಸ್ ಹಾಗು (೩) ಸತ್ವ
ಪ್ರತಿ ಜೀವಿಯ ಜನ್ಮಾಂತರಗಳಲ್ಲಿ ತಮೋಗುಣ ಕಡಿಮೆಯಾಗುತ್ತ, ಸತ್ವಗುಣ ಅಧಿಕವಾಗುತ್ತ ಹೋಗಬೇಕು.

ಅದಲ್ಲದೆ ಅವರ ಮೂರು ಪ್ರಕಾರದ ಕರ್ಮಗಳು ಅವರನ್ನು ಬೆಂಬತ್ತಿವೆ:
(೧) ಸಂಚಿತ (೨) ಪ್ರಾರಬ್ಧ ಹಾಗೂ (೩) ಆಗಾಮಿ

ಈ ರೀತಿಯಾಗಿ ಶರೀಫರು ತಮ್ಮ ಮೂರು ಗುಣಗಳೊಡನೆ ಪ್ರೀತಿಯಿಂದ ಇರುತ್ತಿರಲು, ಈ ಗುಣಗಳಲ್ಲಿ ಸತ್ವಗುಣವೇ ಅಧಿಕವಾಗಿದ್ದರಿಂದ, ಅವರು ಮೈನೆರೆಯುವ ಸಮಯ ಬಂದಿತು.
ಅರ್ಥಾತ್, ಈ ವಿಷಯ ಸಂಸಾರವನ್ನು ಬಿಟ್ಟು, ಆಧ್ಯಾತ್ಮಿಕ ಸಂಸಾರ ಹೂಡುವ ಅವಸ್ಥೆ ಅವರಿಗೆ ಪ್ರಾಪ್ತವಾಯಿತು.
ಅದೂ ಹೇಗೆ? ಮಾಯದಿಂದ ಅಂದರೆ ಅವರಿಗೇ ಅರಿವಾಗದಂತೆ!
ಆದರೆ ಚಿಕ್ಕ ಹುಡುಗಿಯೊಬ್ಬಳು ಮದುವೆಯಾಗುವಾಗ ಸಂಭ್ರಮದ ಜೊತೆಗೇ ಹೆದರಿಕೆಯನ್ನೂ ಅನುಭವಿಸುತ್ತಾಳೆ.
ಅದಕ್ಕಾಗಿಯೇ ಶರೀಫರು,
“ಘಾತವಾಯಿತು ಯವ್ವನವು ಬರಲು”
ಎಂದು ಹೇಳುತ್ತಾರೆ.

ಶರೀಫರಿಗೇನೊ ಸ್ವಲ್ಪ apprehension ಇರಬಹುದು.
ಆದರೆ ತನಗೆ ತಕ್ಕ ಕನ್ಯೆಯನ್ನು ಶೋಧಿಸುತ್ತಿರುವ ವರಮಹಾಶಯ ಸುಮ್ಮನೇ ಕೂತಾನೆ?
ಇದೀಗ ಶರೀಫರ ಹೊಸ ಸಂಸಾರ (ಪರಮಾತ್ಮನೊಡನೆ) ಪ್ರಾರಂಭವಾಯಿತು.
ಸರಿ, ಶರೀಫರ ತವರು ಮನೆಯ ಸುದ್ದಿಯೇನು?
ಹೊಸ ಗಂಡ ಈ ವಿಷಯದಲ್ಲಿ ತುಂಬಾ possessive.
ಶರೀಫರಿಗೆ ಅರಿಷಡ್ವರ್ಗವೆನ್ನುವ ಆರು ಮಂದಿ ಅಕ್ಕ ತಂಗಿಯರಿದ್ದರು.
(ಕಾಮ, ಕ್ರೋಧ, ಮೋಹ, ಲೋಭ, ಮದ ಹಾಗು ಮಾತ್ಸರ್ಯ.)
ಅಲ್ಲದೆ ಅವರಿಗೆ ಐದು ಜನ ಪ್ರಿತಿಯ ಸೋದರರು.
(ಐದು ಕರ್ಮೇಂದ್ರಿಯಗಳು ಹಾಗು ಅವಕ್ಕೆ ಪೂರಕವಾದ ಐದು ಜ್ಞಾನೇಂದ್ರಿಯಗಳು:
ಕಣ್ಣು-ನೋಟ, ಕಿವಿ-ಶ್ರವಣ, ಮೂಗು-ವಾಸನೆ, ನಾಲಗೆ-ರುಚಿ, ಚರ್ಮ-ಸ್ಪರ್ಶ).
ಅವರೆಲ್ಲರನ್ನೂ ಈತ ಅಗಲಿಸಿಯೇ ಬಿಟ್ಟ.
ಅಂದರೆ, ಈ ಸಾಧನಗಳು ಅವರನ್ನು ವಿಷಯ ಸಂಸಾರಕ್ಕೆ ಎಳೆಯಲು ಸಾಧ್ಯವಾಗಲಿಲ್ಲ.

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ

ತನ್ನ ಹೆಂಡತಿ ತನ್ನ ನೆದರನ್ನು(=ನಜರನ್ನು, ನೋಟವನ್ನು) ಎಲ್ಲೂ ಹೊರಳಿಸಕೂಡದು;
ಅವಳು ತನ್ನನ್ನೇ ಸದಾಕಾಲ ನೋಡುತ್ತಿರಬೇಕು ಎನ್ನುವದು ಈ ಗಂಡನ ಅಭಿಲಾಶೆ.
ಹಾಗೆಂದು ಇದರಲ್ಲಿ ಆತನ ಬಲವಂತಿಕೆಯೇನಿಲ್ಲ.
ಅವನ ಆಟಕ್ಕೆ ಇವಳೇ ಮರುಳಾಗಿದ್ದಾಳೆ.

ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ||

ಪರಮಾತ್ಮನ ಜೊತೆಗಿನ ಸಂಸಾರದ ಸುಖವನ್ನು ಶರೀಫರು ಹೀಗೆ ಬಣ್ಣಿಸುತ್ತಾರೆ:

ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||

ಈ ಸಾಲುಗಳು ಆಧ್ಯಾತ್ಮಿಕ ಅನುಭವವನ್ನು ಸೂಚಿಸುತ್ತಿದ್ದು, ಅವುಗಳ ಅರ್ಥ ಆಧ್ಯಾತ್ಮಸಿದ್ಧಿ ಪಡೆದವನಿಗೆ ಮಾತ್ರ ಗೊತ್ತಾದೀತು.
(ಬಲ್ಲವನೇ ಬಲ್ಲ ಬೆಲ್ಲದ ಸವಿಯ!)
ಪರಮಾತ್ಮನು ತನ್ನ ಸಾಮರಸ್ಯದ ಸುಖವನ್ನು ಕೊಡುವದಲ್ಲದೇ, ತಾನು ಜಗಿದ ತಾಂಬೂಲದ ರಸದ ಗುಟುಕನ್ನು ಶರೀಫರ ಬಾಯಿಯಲ್ಲಿ ಅಕ್ಕರತೆಯಿಂದ ಇಡುತ್ತಿದ್ದಾನೆ.
ಅಂದರೆ ಪರಮಾತ್ಮನು ಪ್ರೇಮವನ್ನಲ್ಲದೆ, ಪೋಷಣೆಯನ್ನೂ(=ಜ್ಞಾನವನ್ನೂ) ಸಹ ನೀಡುವನು.
ಅಕ್ಕರತಿಯಿಂದ ಎನ್ನುವ ವಿಶೇಷಣವನ್ನು ಗಮನಿಸಿರಿ.
ಇದು ಗಂಡ ಹೆಂಡತಿಯ ಪ್ರೇಮಕ್ಕಿಂತ ಹೆಚ್ಚಾಗಿ ಪೋಷಕ-ಪೋಷಿತ ಭಾವವನ್ನು ತೋರಿಸುವದು.
ಆದುದರಿಂದ ಶರೀಫರು ಪರಮಾತ್ಮನಿಗೆ ‘ಬಹು ಸುಗುಣನೀತಾ’ ಎಂದು ಕರೆದಿದ್ದಾರೆ.

ಹೆಂಡತಿಗೆ ಅಚ್ಛಚ್ಛೆ ಮಾಡಿದರೆ ಸಾಕೆ?
ಈ ಚಿಕ್ಕ ಹುಡುಗಿಗೆ ಒಳ್ಳೆಯ ರೀತಿಯಲ್ಲಿ ಬದುಕು ಮಾಡುವದನ್ನು ಕಲಿಸಬೇಡವೆ?
ಪರಮಾತ್ಮನು ಶರೀಫರು ಎನ್ನುವ ತನ್ನ ಹೊಸ ವಧುವಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಿದನೆನ್ನುವದನ್ನು ನೋಡಿರಿ:

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||

ಪರಮಾತ್ಮನೇನೊ ಈ ಚಿಕ್ಕ ಹೆಂಡತಿಗೆ ಮನೆಯ ಮಾಡಿ ಕೊಟ್ಟ.
ಗಂಡನಿಲ್ಲದ ವೇಳೆ ಈಕೆ ಮನೆಯ ಹೊರಗೆ ಹೋಗಬಹುದಲ್ಲವೆ?
ಸರಿ, ಹೊರಗೆ ಹೋಗದಂತೆ ಅವಳ ಸೊಂಟವನ್ನೆ ಮುರಿದು ಬಿಟ್ಟ.
ಅವಳು ಹೋಗದಿದ್ದರೇನು?
ಅವಳನ್ನು ಭೆಟ್ಟಿಯಾಗಲು, ಸಮಯಸಾಧಕರು ಮನೆಯ ಒಳಗೆ ಬರಬಹುದಲ್ಲವೆ?
ಅದುದರಿಂದ ಈ ಚಿಕ್ಕ ಹುಡುಗಿಯ ಎದುರಿಗೆ ಪಂಟು ಮಾತನ್ನಾಡಿ(=bogus talk) ಇವಳನ್ನು ಹಾದಿ ತಪ್ಪಿಸುವವರು ಬರದಂತೆ ಆತ ವ್ಯವಸ್ಥೆ ಮಾಡಿದ.
(ಅಂದರೆ ಕ್ಷುದ್ರಸಾಧನೆಗಳು ಸಿಗದಂತೆ ಮಾಡಿದ.)
ಅದರಂತೆ ಗಂಟುಗಳ್ಳರು ಮನೆಗೆ ಬರದಂತೆ ಮಾಡಿದ.
ಈ ಚಿಕ್ಕ ಹುಡುಗಿ ತನ್ನ ಸಾಧನೆಯ ಮೂಲಕ ಒಂದಿಷ್ಟು ದುಡ್ಡನ್ನು (=ಸಾಧನಾಫಲವನ್ನು) ಜತನ ಮಾಡಿ ಇಟ್ಟುಕೊಂಡಿದ್ದಾಳೆ.
ಇವಳಿಗೆ ಏನೇನೊ ಕೊಡಿಸುವ ಆಸೆ ಹುಟ್ಟಿಸಿ, ಇವಳು ಕೂಡಿಸಿಟ್ಟುಕೊಂಡ ದುಡ್ಡನ್ನು ಹೊಡೆಯುವ ಗಂಟುಗಳ್ಳರು ದೂರವಿರುವಂತೆ ಆತ ವ್ಯವಸ್ಥೆ ಮಾಡಿದ.
ಈ ಪಂಟು ಮಾತಿನವರು ಹಾಗೂ ಗಂಟುಗಳ್ಳರು ಸಣ್ಣಪುಟ್ಟ ಕಳ್ಳರು.
ಆದರೆ ೧೮ ಜನ ಕುಂಟಲಗಿತ್ತಿಯರು (ಅಂದರೆ ಗಿರಾಕಿಗಳನ್ನು ಹೊಂದಿಸಿಕೊಡುವ pimp ಹೆಂಗಸರು) ಗಂಟು ಬಿದ್ದರೆ ಏನು ಮಾಡುವದು?


ಆದುದರಿಂದ ಈ ಸಿದ್ಧಿಗಳು ಶರೀಫರಿಗೆ ಲಭಿಸದಂತೆ ಮಾಡಿ, ಪರಮಾತ್ಮನು ತನ್ನ ಚಿಕ್ಕ ಪತ್ನಿಯಾದ ಶರೀಫರನ್ನು ರಕ್ಷಿಸಿದ.
ಅದಕ್ಕಾಗಿಯೇ ಶರೀಫರು “ಎನ್ನ ಕರವ ಪಿಡಿದಾ” ಎಂದು ಪ್ರೀತಿಯಿಂದ ಪರಮಾತ್ಮನನ್ನು ನೆನಸುತ್ತಾರೆ.
ಆತ ಇವಳ ಕರ ಪಿಡಿದದ್ದು ಇವಳಿಗೆ ಅವಲಂಬನ ಕೊಟ್ಟು ಇವಳನ್ನು ಮುನ್ನಡೆಸಲಿಕ್ಕಾಗಿ.

ಈ ಎಲ್ಲ ಸಿದ್ಧಿಗಳು ಸ್ವತಃ ಕುಂಟ ಹಾಗೂ ಕುರುಡರಿದ್ದಂತೆ.
ಅವು ಸಾಧಕನನ್ನು ಸಾಧನೆಯ ಮಾರ್ಗದಲ್ಲಿ ನಡೆಸಲಾರವು.
ಆದುದರಿಂದ ಈ ಸಿದ್ಧಿಗಳಿಗೆ ಆತ ಗಂಟಲಗಾಣನಾದ.
ಅಂದ ಮೇಲೆ, ಶರೀಫರಿಗೆ ತನ್ನ ಗಂಡನ ಮೇಲೆ ಅಭಿಮಾನಪೂರ್ವಕ ಪ್ರೇಮ ಉಕ್ಕದಿದ್ದೀತೆ?
ಆ ಸಂತೋಷ ಭಾವದಲ್ಲಿಯೇ ಶರೀಫರು ಹಾಡುತ್ತಾರೆ:
“ತಕ್ಕವನೆ ಸಿಕ್ಕಾ” !

ತವರು ಮನೆಯನ್ನು ಬಿಡಿಸಿ, ಅತ್ತೆಯ ಮನೆಗೆ ಕರೆತಂದ ಈ ಗಂಡ ಈಗ ಅತ್ತೆಮಾವರ ಮನೆಯನ್ನೂ ಸಹ ಬಿಡಿಸುತ್ತಿದ್ದಾನೆ.

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ

ತವರುಮನೆಯೆಂದರೆ ವಿಷಯ ಸುಖಗಳ ಮನೆಯಾಯಿತು. ಈ ಅತ್ತೆಮಾವರ ಮನೆ ಯಾವುದು?
ಸತ್ ಹಾಗೂ ಅಸತ್ ಇವು ದೇವರ ಎರಡು ಸೃಷ್ಟಿಗಳು. ಅಸತ್ ಅಂದರೆ unreal. ಸತ್ ಅಂದರೆ real.
ಅಸತ್ ಅಥವಾ unreal ಸೃಷ್ಟಿಯು ಕಾಲಮಿತಿಗೆ ಒಳಪಟ್ಟದ್ದು.

“ನಾನು ಕೆಲ ವರ್ಷಗಳ ಹಿಂದೆ ಚಿಕ್ಕ ಹುಡುಗನಾಗಿದ್ದೆ. ಆದರೆ ಈಗ ನಾನು ಚಿಕ್ಕ ಹುಡುಗನಲ್ಲ.”
ಆದುದರಿಂದ ನಾನು ಹುಡುಗ ಎನ್ನುವದು ಕಾಲಮಿತಿಗೆ ಒಳಪಟ್ಟ reality.ನಾನು ಸತ್ತೂ ಹೋಗುವೆ.
ಆದುದರಿಂದ ಈ ದೇಹವು ಕಾಲಮಿತಿಗೆ ಒಳಪಟ್ಟ reality. ಇದು ಅಸತ್ ಸೃಷ್ಟಿ.

ಆದರೆ ಆತ್ಮ ಎನ್ನುವದು ಯಾವಾಗಲೂ ಇರುವಂತಹದು.
ಆದುದರಿಂದ ಅದು ಸತ್ ಸೃಷ್ಟಿ.
ಆತ್ಮನಿಗೆ ಪುರುಷ ಎನ್ನುತ್ತಾರೆ.
(ಪುರುಷ ಅಂದರೆ ಗಂಡಸು ಅನ್ನುವ ಅರ್ಥ ಇಲ್ಲಿಲ್ಲ. ಪುರುಷ ಅಂದರೆ ಉಪಭೋಕ್ತಾ ಆತ್ಮ.)
ಪ್ರಕೃತಿ ಅಂದರೆ ಬದಲಾಗುತ್ತಿರುವ ಅಸತ್ ಸೃಷ್ಟಿ.
ಅಸತ್ ಸೃಷ್ಟಿಯು ಈ ಜೀವಿ ಇಳಿದು ಬಂದಿರುವ ತವರುಮನೆ.
ಅಲ್ಲಿಂದ ಈ ಜೀವಿ ದೈವಿ ಭಾವವೇ ನಿತ್ಯವಾಗಿರುವ ಸತ್ ಸೃಷ್ಟಿಗೆ ಪ್ರವೇಶಿಸುತ್ತದೆ.
ಈ ಸೃಷ್ಟಿಯು ಸತ್ ಸೃಷ್ಟಿಯೇ ಆಗಿರಲಿ, ನಿತ್ಯ ಸೃಷ್ಟಿಯೇ ಆಗಿರಲಿ, ಆದರೆ ಇದೂ ಸಹ ಆತ್ಮನ ಕೊನೆಯ ನಿಲ್ದಾಣ ಅಲ್ಲ.
ಪರಮಾತ್ಮನೊಳಗೆ ಒಂದಾಗುವದೇ ಜೀವಾತ್ಮನ ಕೊನೆಯ ಗತಿ.
ಆದುದರಿಂದ ಆತ ಜೀವಾತ್ಮನ ಮೂರು ವಾಸನಾಶರೀರಗಳಾದ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳನ್ನು ನಾಶ ಪಡಿಸುತ್ತಾನೆ. ಆ ಶರೀರಗಳ ಸಂಯೋಜಕರಾದ ಐದು ಕೋಶಗಳನ್ನು (ಅನ್ನಮಯ ಕೋಶ, ಪ್ರಾಣಮಯ ಕೋಶ, ಜ್ಞಾನಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶಗಳನ್ನು) ದೂರಪಡಿಸುತ್ತಾನೆ. ಬಳಿಕ ತನ್ನ ಭಕ್ತನನ್ನು ವಿದೇಹಿಯನ್ನಾಗಿ ಮಾಡಿ ತನ್ನ ಸಾನ್ನಿಧ್ಯಕ್ಕೆ ಕರೆದೊಯ್ಯುತ್ತಾನೆ.
ಅಲ್ಲಿ ದೇಹನಾಶವಾಗಿ ಕೇವಲ ಭಾವ ಮಾತ್ರ ಉಳಿದುಕೊಳ್ಳುತ್ತದೆ.
ಅದನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||

ಶಿವನು ಪ್ರಭೆಯ ಮೂಲ; ಶಕ್ತಿಯೇ ಪ್ರಭೆ.
ಪರಮಾತ್ಮನು ಶರೀಫರನ್ನು ಈಗ ಸತ್ ಲೋಕದಿಂದ ಮೇಲಕ್ಕೆ ಎತ್ತಿ ಪ್ರಭಾಲೋಕದಲ್ಲಿ ಇರಿಸುತ್ತಾನೆ.
ಈ ಲೋಕದಲ್ಲಿ ಪರಮಾತ್ಮನು ಶರೀಫರಿಗೆ ‘ಎನಗೊತ್ತಿನವನು’.
‘ಎನಗೊತ್ತಿನವನು’ ಎನ್ನುವ ಪದ ಅತ್ಯಂತ ಅನ್ಯೋನ್ಯತೆಯನ್ನು ಹಾಗು ವಿಶ್ವಾಸವನ್ನು ಸೂಚಿಸುವ ಪದ.
ಈ ಪದವು ಎನಗೆ ಗೊತ್ತಿನವನು ಹಾಗೂ ಎನಗೆ ಒತ್ತಿನವನು ಎನ್ನುವ ಎರಡೂ ಅರ್ಥಗಳನ್ನು ಸೂಚಿಸುತ್ತದೆ. ಎನಗೆ ಗೊತ್ತಿನವನು ಅಂದರೆ ನಾನು ಅವನನ್ನು ಸಂಪೂರ್ಣವಾಗಿ ಬಲ್ಲೆ ಎಂದು ಹೇಳಿದಂತೆ. ಎನಗೆ ಒತ್ತಿನವನು ಎಂದರೆ ನನಗೆ ಅತ್ಯಂತ ಹತ್ತಿರವಾದವನು ಎಂದು ಹೇಳಿದಂತೆ.

ಈ ಪ್ರಭಾಲೋಕದಲ್ಲಿ ಶರೀಫರ ಮನಸ್ಸು ಬೇರೆಲ್ಲೂ ಹೋಗದು; ಪರಮಾತ್ಮನನ್ನು ಒಂದು ಗಳಿಗೆ ಸಹ ಅಗಲಿ ಇರದು. ಪರಮಾತ್ಮನು ಶರೀಫರನ್ನು ತನ್ನ ಸಾನ್ನಿಧ್ಯದಲ್ಲಿಯೆ (=ಗೊತ್ತಿನಲ್ಲಿಯೆ) ಇಟ್ಟುಕೊಂಡು, ಅವರಿಗೆ ಮುತ್ತಿನ ಮೂಗುತಿಯ ಕೊಟ್ಟನು. ಅಂದರೆ ಶರೀಫರು ಈಗ ಪರಮ ಪತಿವ್ರತೆ ಎಂದು ಹೇಳಿದಂತಾಯಿತು.ತನ್ನನ್ನು ಇಷ್ಟೆಲ್ಲ ತಿದ್ದಿ ಇಂತಹ ಪತಿವ್ರತೆ ಹೆಂಡತಿಯನ್ನಾಗಿ ಮಾಡಿಕೊಂಡ ಪರಮಾತ್ಮನನ್ನು ಶರೀಫರು ‘ಅವನೇನು ದಿಟ್ಟನೇ’ ಎಂದು ಬಣ್ಣಿಸುತ್ತಾರೆ

ಶರೀಫರು ಈ ಪದವಿಯನ್ನು ಪಡೆಯುವ ಯೋಗ್ಯತೆಯುಳ್ಳ ಇತರ ಭಕ್ತರನ್ನು, ತನ್ನ ಸಖಿಯರೆಂದು ಗ್ರಹಿಸಿ ಹೀಗೆ
ಹೇಳುತ್ತಾರೆ:

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||

ತಮ್ಮ ಈ ಸಿದ್ಧಿಗೆ ತಮ್ಮ ಪೂರ್ವಪುಣ್ಯವು ಎಷ್ಟು ಕಾರಣವೋ, ಪರಮಾತ್ಮನ ಕರುಣೆಯೂ ಅಷ್ಟೇ ಕಾರಣವೆಂದು
ಶರೀಫರು ಹೇಳುತ್ತಾರೆ.
ಪರಮಾತ್ಮ ಬೇರೆ ಅಲ್ಲ, ಸದ್ಗುರು ಬೇರೆ ಅಲ್ಲ.
ಆತ ಕಾಲ ಕೂಡಿದಾಗ, ಭಕ್ತನನ್ನು ತಾನಾಗಿಯೇ ಏಕಾಂತ ಮಂದಿರದಲ್ಲಿ ಕರೆದೊಯ್ದು (---ಗುರುವು ಉಪದೇಶವನ್ನು ಏಕಾಂತದಲ್ಲಿ ಕೊಡುತ್ತಾನೆ---) ಸದ್ಗತಿಗೆ ಹಚ್ಚುತ್ತಾನೆ.
ಅದರಿಂದಾಗಿ ಭಕ್ತನ ಭ್ರಾಂತಿ ಹಾಗೂ ಈ ಜಗದ ದುರಿತ ಪರಿಹಾರವಾಗುತ್ತವೆ.
ಸದ್ಗತಿಯನ್ನು ಹೇಗೆ ಪಡೆದೇನು ಎನ್ನುವ ಭಕ್ತನ ಚಿಂತೆ ಮಾಯವಾಗುತ್ತದೆ.
…………………………………………………………………………………
ಕನ್ನಡ ನಾಡಿನಲ್ಲಿ ಓಡಾಡಿ, ಹಳ್ಳಿಯ ಕನ್ನಡದಲ್ಲಿಯೆ ಮಹತ್ತತ್ವ ಸಾರಿದ ಶರೀಫರ ಬೋಧನೆ ನಮ್ಮನ್ನೂ ಸದ್ಗತಿಗೆ ಹಚ್ಚಲಿ.
-Neelanjan

No comments:

Post a Comment