Friday, October 8, 2010

ಬೇಂದ್ರೆಯವರ ದಾಂಪತ್ಯಗೀತೆಗಳು “Grow old along with me, the best is yet to be”).



 ಬೇಂದ್ರೆಯವರ ದಾಂಪತ್ಯಗೀತೆಗಳು
ವರಕವಿ ಬೇಂದ್ರೆಯವರು ಪ್ರೇಮಗೀತೆಗಳನ್ನು ಬರೆದಿದ್ದಾರೆಯೆ? ಇದಕ್ಕೆ ಉತ್ತರ ಹೇಳುವದು ಕಷ್ಟ. ಬೇಂದ್ರೆಯವರು ಅನೇಕ ದಾಂಪತ್ಯಗೀತೆಗಳನ್ನು ರಚಿಸಿದ್ದಾರೆ. ಆದರೆ ಈ ಗೀತೆಗಳಿಗೆ ಪ್ರೇಮಗೀತೆ ಅಥವಾ ಪ್ರಣಯಗೀತೆ ಎಂದು ಕರೆಯುವದು ಸಾಹಸದ ಮಾತಾಗುತ್ತದೆ. ಯಾಕೆಂದರೆ ’ಬಡತನ’ ಅಥವಾ ಸಂಕಷ್ಟಸೂಚಿಯಾದ ಪದವಿಲ್ಲದ ಅವರ ದಾಂಪತ್ಯಗೀತೆ ಇಲ್ಲವೇ ಇಲ್ಲ ಎನ್ನಬಹುದು. ಅವರ ಜನಪ್ರಿಯ ಪ್ರೇಮಗೀತೆಯನ್ನೇ ಉದಾಹರಣೆಗಾಗಿ ಗಮನಿಸಿರಿ:

“ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು
ಅದಕು ಇದಕು ಎದುಕೂ”.

ಕವನ ಪ್ರಾರಂಭವಾಗುವದೇ ಬಡತನದಿಂದ. ಈ ಕವನವನ್ನು ಕೆ. ಎಸ್. ನರಸಿಂಹಸ್ವಾಮಿಯವರ ಕವನದೊಂದಿಗೆ ಹೋಲಿಸಿ ನೋಡಿರಿ:

“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ”.

ನರಸಿಂಹಸ್ವಾಮಿಯವರ ಪ್ರೇಮಗೀತೆಗಳಲ್ಲಿ ಬಡತನಕ್ಕೆ ಸ್ಥಾನವೇ ಇಲ್ಲ. ದಂಪತಿಗಳ ಪರಸ್ಪರ ಪ್ರೇಮವೇ ಅವರ ಶ್ರೀಮಂತಿಕೆ.

ಬೇಂದ್ರೆಯವರ ಎಲ್ಲ ಕವನಗಳಲ್ಲೂ ಓದುಗನನ್ನು ಚಕಿತಗೊಳಿಸುವ ಪದಚಾತುರ್ಯವಿದೆ, ಕಲ್ಪನಾವೈಭವವಿದೆ. ಅದರಂತೆ ಅವರ ಪ್ರೇಮಗೀತೆಗಳಲ್ಲೂ ಸಹ ಈ ಜಾಣ್ಮೆ ಕಂಡು ಬರುತ್ತದೆ. ಅದಕ್ಕೆ ಮುಂದಿನ ಸಾಲುಗಳೇ ಸಾಕ್ಷಿ:

“ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ”.

ದಂಪತಿಗಳಲ್ಲಿ ಸಾಮರಸ್ಯ ಹಾಗು ಸಾಂಗತ್ಯದ ಸಂತೋಷವನ್ನು ತೋರಿಸುವ ಇಂತಹ ಸಾಲುಗಳು ಬೇರೆಲ್ಲೂ ಸಿಗಲಾರವು. ಆದರೆ ಈ ಕವನದಲ್ಲೂ ಬಡತನ ತನ್ನ ಮುಖವನ್ನು ತೋರಿಸದೇ ಬಿಟ್ಟಿಲ್ಲ. ಈ ಕವನವನ್ನು ನರಸಿಂಹಸ್ವಾಮಿಯವರ ಈ ಕವನದೊಂದಿಗೆ ಹೋಲಿಸಿರಿ:

“ತೆಂಗು ಗರಿಗಳ ಮೇಲೆ ತುಂಬ ಚಂದಿರ ಬಂದು
ಬೆಳ್ಳಿ ಹಸುಗಳ ಹಾಲ ಕರೆಯುವಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು.
ತಾರೆಗಳ ಮೀಟುವೆವು; ಚಂದಿರನ ದಾಟುವೆವು
ಒಲುಮೆಯೊಳಗೊಂದು ನಾವು;
ನಮಗಿಲ್ಲ ನೋವು, ಸಾವು”.

“ಹಾಡುವೆವು ಸಿರಿಯ ಕಂಡು” ಎನ್ನುವ ಸಾಲನ್ನು ಗಮನಿಸಿರಿ. ಪ್ರಕೃತಿಯ ಸಿರಿಯೆ ಈ ಪ್ರೇಮಿಗಳ ಸಿರಿ. ಈ ಕವನದಲ್ಲಿಯ ಪ್ರೇಮಭಾವನೆಯ ಉತ್ಕಟತೆ ಬೇಂದ್ರೆಯವರ ಪ್ರೇಮಕವನಗಳಲ್ಲಿ ಕಾಣಲಾರದು. ನರಸಿಂಹಸ್ವಾಮಿಯವರ ಕವನದ ದಂಪತಿಗಳು ಪ್ರೇಮಜೀವಿಗಳು; ಬೇಂದ್ರೆಯವರ ಕವನದ ದಂಪತಿಗಳು ಸಂಕಟಜೀವಿಗಳು. ಬೇಂದ್ರೆಯವರ ಶ್ರೇಷ್ಠ ದಾಂಪತ್ಯಗೀತೆಗಳು ಸಂಕಟದ ಗೀತೆಗಳೇ ಆಗಿವೆ:

“ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತs
ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತs

ಅಥವಾ ಈ ಕವನ ನೋಡಿರಿ:
“ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
ಹುದುಲಾಗ ಸಿಕ್ಕೇನs”

ಅಥವಾ ಈ ಕವನ ನೋಡಿರಿ:
“ತಿಣಿ ತಿಣಿಕಿ
ಇಣಿಕಿಣಕಿ
ಒಳಹೊರಗ ಹಣಿಹಣಿಕಿ
ಸಾಕಾತು ಸುಳ್ಳೆಣಕಿ
ಕುಣಿಯೋಣ ಬಾರs
ಕುಣಿಯೋಣು ಬಾ”

’ಸಖೀಗೀತ’ವಂತೂ ಕನ್ನಡದ ಶ್ರೇಷ್ಠ ದಾಂಪತ್ಯಗೀತೆ. ಆದರೆ ಇಲ್ಲಿಯೂ ಸಹ ಬೇಂದ್ರೆಯವರು ತಮ್ಮ ಕಳೆದ ಜೀವನದ ದುಃಖಗಳನ್ನು ತಮ್ಮ ಹೆಂಡತಿಯೊಡನೆ ಹಂಚಿಕೊಳ್ಳುತ್ತಿದ್ದಾರೆಯೇ ಹೊರತು ಸುಖವನ್ನಲ್ಲ.

“ಸಖಿ ನಮ್ಮ ಸಖ್ಯದ ಆಖ್ಯಾನ ಕಟು-ಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
ಕರುಳಿನ ತೊಡಕನ್ನು ಕುಸುರಾಗಿ ಬಿಡಸಿಟ್ಟು
ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ?

ಇರುಳು ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ;
ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗುತ
ಹೊಸದಾಗಿ ರಸವಾಗಿ ಹರಿಯುತಿವೆ.”

ಇಷ್ಟು ಹೇಳಿ ಬೇಂದ್ರೆ ಸುಮ್ಮನಾಗುವದಿಲ್ಲ; ಸ್ವಲ್ಪ ಕಟುವಾಗಿಯೇ ಹೆಂಡತಿಗೊಂದು ಸತ್ಯದರ್ಶನ ಮಾಡಿಸುತ್ತಾರೆ:

“ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲುಗೆಜ್ಜೆ ನಾವಾಗಿರೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!”

(ಹೆಂಡತಿಯನ್ನು ಕಾಮಾಕ್ಷಿ ಎಂದು ಸಂಬೋಧಿಸುವಾಗ, ಕೇವಲ ಅಲಂಕಾರದ ಬಳಕೆಯಾಗಿಲ್ಲ. ಕಾಮ+ಅಕ್ಷ=portal of desire ಎನ್ನುವ ಅರ್ಥವೂ ಇಲ್ಲಿದೆ.
ಕೊನೆ ಅಂದರೆ ಕೇವಲ ’ಅಂತ’ ಅನ್ನುವ ಅರ್ಥವಿರದೇ, ’ಕೊನೆ=ಗೊನೆ=fruit’ ಎನ್ನುವ ಅರ್ಥವೂ ಇದೆ.)

ಹಾಗಿದ್ದರೆ ಬೇಂದ್ರೆಯವರ ದಾಂಪತ್ಯಗೀತೆಗಳೆಲ್ಲವೂ ’ಶೋಕಗೀತೆ(!)ಗಳೇ ಎನ್ನುವ ಸಂಶಯ ಬರಬಹುದು!
’ಬೆಂದರೇ ಅದು ಬೇಂದ್ರೆ’ ಎಂದ ಬೇಂದ್ರೆಯವರ ಬಾಳಿನಲ್ಲಿ ಸಂಕಷ್ಟಗಳ ಕಾರ್ಮೋಡಗಳು ಸುರಿಯುತ್ತಲೇ ಇದ್ದವು. ಈ ಸಂಕಷ್ಟಗಳು ದಂಪತಿಗಳನ್ನು ಮತ್ತಷ್ಟು ಬೆಸೆಯುವ ಕಾರ್ಯವನ್ನು ನಿರ್ವಹಿಸುತ್ತವೆ, ಅಲ್ಲವೆ? ಇವೆಲ್ಲವನ್ನು ದಂಪತಿಗಳಿಬ್ಬರೂ ಕೂಡಿಯೇ ನೆನಸಿಕೊಂಡು ನಗಬೇಕಲ್ಲವೆ? ತಮ್ಮ ಜೀವನ ದರ್ಶನವನ್ನು ಜೊತೆಯಾಗಿಯೆ ಮಾಡಬೇಕಲ್ಲವೆ? ಅಂತೆಯೆ ಬೇಂದ್ರೆ ತಮ್ಮ ಹೆಂಡತಿಗೆ ಹೇಳುತ್ತಾರೆ:

(ಬರುವದೇನೆ ನೆಪ್ಪಿಗೆ)

“ಬರುವದೇನೆ ನೆಪ್ಪಿಗೆ,
ನಮ್ಮ ನಿಮ್ಮ ಒಪ್ಪಿಗೆ
ಎಲ್ಲೊ ಏನೊ ನೋಡಿದೆ
ಹಾಗೆ ಬಂದು ಕೂಡಿದೆ.

ಬೆಳಕು ಬೆಂಕಿ ಬೆರೆತುಕೊಂಡು
ಭಾವವು ಹೊರದೂಡಿರೆ
ಬಾಳು ಮೊಳೆತು ಸುಗ್ಗಿ ನನೆತು
ಹೂವಿನಂತೆ ಮಾಡಿರೆ
ಆಹಾ ಚೆಲುವೆ! ಎಂದು ಕುಣಿದೆ
ಮಿಕ್ಕ ಸಂಜೆ ಮಬ್ಬಿಗೆ
ಓಹೊ ಒಲವೆ! ಎಂದು ಕರೆದೆ
ಪಲ್ಲವಿಸಿದ ಹುಬ್ಬಿಗೆ.

ಅಂದ ಏನ ಬೇಡಿದೆ
ಏನ ನೆನಸಿ ಹಾಡಿದೆ
ಬರುವದೇನೆ ನೆಪ್ಪಿಗೆ
ಎದೆಗೆ ಎದೆಯ ಅಪ್ಪಿಗೆ.

ಬರುವದೇನೆ ನೆಪ್ಪಿಗೆ
ಕೂಡಿದೊಂದ ತಪ್ಪಿಗೆ
ಏನೊ ಏನೊ ನೂತೆವು
ಬದುಕಿನೆಳೆಗೆ ಜೋತೆವು.

ಮೋಡದೊಂದು ನಾಡಿನಲ್ಲಿ
ಮಳೆಯ ಮಿಂಚು ಕಂಡೆವು
ಯಾವ ಫಲಕೆ ಇಳಿಯುತಿತ್ತೊ
ಮಣ್ಣ ಬೀಜ ಉಂಡೆವು
ದುಃಖದೊಂದು ಶೂಲೆಯಲ್ಲಿ
ನೋವುಗೊಂಡು ತಿಣುಕಿದೆ
ಸುಖದ ತೊಟ್ಟು ತೊಟ್ಟಿಗಾಗಿ
ಹತ್ತು ಕಡೆಗೆ ಹಣಿಕಿದೆ

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
ಬರುವದೇನೆ ನೆಪ್ಪಿಗೆ
ಹೊರತಾದೆವು ಉಪ್ಪಿಗೆ.

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
ತಲೆಯ ತೆರೆದು ಬಂದಿತು
ಎಚ್ಚರೆಚ್ಚರೆಂದಿತು.

ಯಾವ ಲೋಕದಿಂದಲಿಳಿದೊ
ಹೊಸ ಸುಗಂಧ ಬೀರಿದೆ
ರಣೋತ್ಸಾಹ ಕಹಳೆಯಂತೆ
ನವಚೇತನ ಊರಿದೆ
ಇಬ್ಬರನ್ನೂ ನೂಗಿಕೊಂಡು
ಒಬ್ಬನಾಗಿ ಎದ್ದಿದೆ.
ಚಿತ್ತವೆಲ್ಲಿ ಎನುವಾಗಲೆ
ಕೊಡುವ ಮೊದಲೆ ಕದ್ದಿದೆ.

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
ಬರುವದೇನೆ ನೆಪ್ಪಿಗೆ
ಜೀವಜೀವದಪ್ಪಿಗೆ.”

ಬೇಂದ್ರೆಯವರ ಕವನದ ಸಾಫಲ್ಯ ಹಾಗು ದಾಂಪತ್ಯದ ಸಾಫಲ್ಯ ಕೊನೆಗೂ ಪರಮಾರ್ಥದಲ್ಲಿಯೆ ಪರಿಣಮಿಸುತ್ತವೆ. ತಮ್ಮ ಬಾಳಗೆಳತಿಯನ್ನು ಬೇಂದ್ರೆ ಆಹ್ವಾನಿಸುವದು ಹೀಗೆ:

“ಫಜಾರಗಟ್ಟಿ ಮುಟ್ಟೋಣು ಬಾ
ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ”

ಈ ಕವನವನ್ನು ಓದಿದಾಗ Robert Browning ಬರೆದ ಕವನದ ಸಾಲುಗಳು ನೆನಪಾಗುತ್ತವೆ:
“Grow old along with me, the best is yet to be”.

ಆದರೆ ಬೇಂದ್ರೆಯವರು ಇದಕ್ಕೂ ಮುಂದಿನ ಹಂತದ ಬಗೆಗೆ ತಮ್ಮ ಜೊತೆಗಾತಿಗೆ ಆಹ್ವಾನ ನೀಡುತ್ತಿದ್ದಾರೆ.

ಇಷ್ಟೆಲ್ಲ ಸಾವು ನೋವಿನ ದಾಂಪತ್ಯಗೀತೆಗಳನ್ನು ಬರೆದ ಬೇಂದ್ರೆಯವರೆ, ಕನ್ನಡದ ಅತ್ಯಂತ ಶ್ರೇಷ್ಠ
fantasy ಗೀತೆಯನ್ನು (ಕನಸು-ಗೀತೆ ಅನ್ನಬಹುದೆ?) ಬರೆದಿದ್ದಾರೆ. ಈ ಕವನದಲ್ಲಿ ಮಾತ್ರ ನೋವಿನ ಎಳೆಯೂ ಸಹ ಕಾಣಲಾರದು. ಯಾಕೆಂದರೆ ಇದು fantasy!

(ಯಾರಿಗೂ ಹೇಳೋಣು ಬ್ಯಾಡಾ)

ಯಾರಿಗೂ ಹೇಳೋಣು ಬ್ಯಾಡಾ
-------------------ಯಾರಿಗೂ /ಪಲ್ಲ/

ಹಾರಗುದರೀ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗs
ದೂರ ದೂರಾ ಹೋಗೋಣಂತs /ಯಾರಿಗೂ

ಹಣ್ಣು ಹೂವು ತುಂಬಿದಂಥ
ನಿನ್ನ ತೋಟ ಸೇರಿ ಒಂದs
ತಿನ್ನೋಣಂತs ಅದರ ಹೆಸರು /ಯಾರಿಗೂ

ಕುಣಿಯೋಣಂತs ಕೂಡಿ ಕೂಡಿ
ಮಣಿಯೋಣಂತs ಜಿಗಿದು ಹಾರಿ
ದಣಿಯದನs ಆಡೋಣಂತ /ಯಾರಿಗೂ

ಮಲ್ಲಿಗೀ ಮಂಟsಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತs /ಯಾರಿಗೂ

ಹಾವಿನಾ ಮರಿಯಾಗಿ ಅಲ್ಲಿ
ನಾವುನೂ ಹೆಡೆಯಾಡಿಸೋಣು
ಹೂವೆ ಹೂವೆ ಹಸಿರೆ ಹಸಿರು /ಯಾರಿಗೂ

ನಿದ್ದೆ ಮಾಡಿ, ಮೈಯ ಬಿಟ್ಟು,
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೋಣಂತs /ಯಾರಿಗೂ

ಭಾವಗೀತೆ:ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಬೇಂದ್ರೆಯವರು ತಮ್ಮ ಕೆಲವು ಕವನಗಳಲ್ಲಿ ಕಾವ್ಯವು ಸೃಷ್ಟಿಗೊಳ್ಳುವ ವಿಧಾನವನ್ನೇ ಕಡೆದಿದ್ದಾರೆ. ಉದಾಹರಣೆಗೆ ಅವರ ’ಗರಿ’ ಕವನಸಂಕಲನದಲ್ಲಿಯ ಕೊನೆಯ ಕವನ ’ಗರಿ’ಯನ್ನೇ ನೋಡಿರಿ:

“ಎಲ್ಲೆಕಟ್ಟು ಇಲ್ಲದಾ
ಬಾನಬಟ್ಟೆಯಲ್ಲಿದೊ
ಎಂsದೆಂದು ಹಾರುವೀ
ಹಕ್ಕಿ-ಗಾಳಿ ಸಾಗಿದೆ”

’ಕವಿಯ ಕಾವ್ಯಪಕ್ಷಿಯು ಮನೋಆಕಾಶದಲ್ಲಿ ಹಾರುತ್ತಿರುವಾಗ ಉದುರಿದ ಗರಿಗಳೇ ತಮ್ಮ ಕವನಗಳು’ ಎಂದು ಬೇಂದ್ರೆ ಹೇಳುತ್ತಾರೆ...........................Neelanjan

No comments:

Post a Comment