Friday, October 29, 2010

ಸರ್ವಜ್ಞನ ವಚನಗಳು - ಒಂದರಿಂದ ನೂರು


೧.
ನಂದಿಯನು ಏರಿದನ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ

೨.
ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ

೩.
ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
ಮುದವ ಸಾರೆ, ಸರ್ವಜ್ಞನೆಂದೆನಿಸಿ
ನಿಂದವನು ನಾನೆ ಸರ್ವಜ್ಞ

೪.
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ

೫.
ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ

೬.
ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ

೭.
ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ

೮.
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ

೯.
ಊರಿಂಗೆ ದಾರಿಯನು ಆರು ತೋರಿದರೇನು?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು? ಸರ್ವಜ್ಞ

೧೦.
ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ

೧೧.
ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರನು ಓರ್ವನೇ
ನರ ದೈವವೆಂಬೆ ಸರ್ವಜ್ಞ

೧೨.
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರಾ ಗುರುವಿಗಿಂತ
ಬಂಧುಗಳುಂಟೆ ಸರ್ವಜ್ಞ

೧೩.
ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
ಮಾಯನಾಶವನು ಹರಿಸುತ್ತ ಶಿಷ್ಯಂಗೆ
ತಾಯಿಯಂತಾದ ಸರ್ವಜ್ಞ

೧೪.
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ. ಗುರುರಾಯ
ಬಂಧನವ ಕಳೆವ ಸರ್ವಜ್ಞ

೧೫.
ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವತಾ
ಗುರುವ ತೋರುವನೇ? ಸರ್ವಜ್ಞ

೧೬.
ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರಮನೆಯಕ್ಕು ಸರ್ವಜ್ಞ

೧೭.
ಒಂದರೊಳಗೆಲ್ಲವು ಸಂದಿಸುವದನು ಗುರು
ಚಂದದಿಂ ತೋರಿಕೊಡದಿರಲು ಶೊಷ್ಯನವ
ಕೊಂದನೆಂದರಿಗು ಸರ್ವಜ್ಞ

೧೮.
ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೆ? ಸರ್ವಜ್ಞ

೧೯.
ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
ಕೇಶವನು ಭಕ್ತರೊಳಗೆಲ್ಲ ಮೂರು ಕ
ಣ್ಣೇಶನೆ ದೈವ ಸರ್ವಜ್ಞ

೨೦.
ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ
ನಂಬುವನೇ ಹೆಡ್ಡ ಸರ್ವಜ್ಞ

೨೧.
ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು
ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು
ನಂಜಿನಂತಕ್ಕು ಸರ್ವಜ್ಞ

೨೨.
ಎಂಜಲೂ ಅಶೌಚ
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ
ರಂಜನನ ನೆನೆಯೊ ಸರ್ವಜ್ಞ

೨೩.
ಭೂತೇಶಗೆರಗುವನು ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
ದಾತ ಮಾದಿಗನು ಸರ್ವಜ್ಞ

೨೪.
ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವುಂಟೆ? ಸರ್ವಜ್ಞ

೨೫.
ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ?
ಜಾತಂಗೆ ಜಾತನೆನಲೇಕೆ? ಅರುವಿಡಿ
ದಾತನೇ ಜಾತ ಸರ್ವಜ್ಞ

೨೬.
ಯಾತರ ಹೂವೇನು ? ನಾತವಿದ್ದರೆ ಸಾಕು
ಜಾತಿಯಲಿ ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ

೨೭.
ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ
ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ
ರಕ್ಕರವೇ ಸಾಕು ಸರ್ವಜ್ಞ

೨೮.
ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು
ಇಲ್ಲೆನ್ನಲರಿಯನು ಸರ್ವಜ್ಞ

೨೯.
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚಂದ್ರಶೇಖರನು ಮುದಿ ಎತ್ತನೇರಿ ಬೇ
ಕೆಂದುದನು ಕೊಡುವ ಸರ್ವಜ್ಞ

೩೦.
ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು
ಮಾರಸಂಹರನ ನೆನೆದರೆ ಮೃತ್ಯುವು
ದೂರಕ್ಕೆ ದೂರ ಸರ್ವಜ್ಞ

೩೧.
ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ
ಭವ ಪುಶ್ಪದಿಂ ಶಿವಪೂಜೆ ಮಾಡುವರ
ದೇವರೆಂದೆಂಬೆ ಸರ್ವಜ್ಞ

೩೨.
ಓದು ವಾದಗಳೇಕೆ, ಗಾದಿಯ ಮಾತೇಕೆ
ವೇದ ಪುರಾಣ ನಿನಗೇಕೆ? ಲಿಂಗದಾ
ಹಾದಿಯರಿದವಗೆ ಸರ್ವಜ್ಞ

೩೩.
ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
ಅರ್ಪಿತನ ಗೊಡವೆ ತನಗೇಕೆ? ಲಿಂಗದ
ನೆಪ್ಪನರಿದವಗೆ ಸರ್ವಜ್ಞ

೩೪.
ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ
ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ
ಲಿಂಗದರುವಿಲ್ಲ ಸರ್ವಜ್ಞ

೩೫.
ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ
ಭ್ರಷ್ಟನ ಕಂಡ್ಯಾ ? ಸರ್ವಜ್ಞ

೩೬.
ಗುರುವಿಂದ ಬಂಧುಗಳು, ಗುರುವಿಂದ ದೈವಗಳು
ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ
ಗುರುವಿಂದ ಮುಕ್ತಿ ಸರ್ವಜ್ಞ

೩೭.
ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ
ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ
ವವಗೆ ಕಾಣಯ್ಯ ಸರ್ವಜ್ಞ

೩೮.
ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ
ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ
ಬಿಟ್ಟು ಬಯಲಪ್ಪ ಸರ್ವಜ್ಞ

೩೯.
ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು
ಇಟ್ಟಾವಿಭೂತಿಯರಿಯದಿರೆ ಸೀಳಿದಾ
ಬಟ್ಟೆಯಂತಕ್ಕು ಸರ್ವಜ್ಞ

೪೦.
ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ
ಲಿಂಗದಲಿ ನೋಟ, ನುಡಿಕೂಟವಾದವನು
ಲಿಂಗವೇ ಅಕ್ಕು ಸರ್ವಜ್ಞ

೪೧.
ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ
ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ
ಕಾಣಯ್ಯ ಸರ್ವಜ್ಞ

೪೨.
ವಂಶವನು ಪುಗನೆಂದಿ, ಗಾಶಿಸನು ಪರಧನವ
ಸಂಶಯವನಳಿದ ನಿಜಸುಖಿ ಮಹಾತ್ಮನು
ಹಿಂಸೆಗೊಡಬಡನು ಸರ್ವಜ್ಞ

೪೩.
ಅರ್ಪಿತದ ಭೇದವನು
ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ
ಳೊಪ್ಪುತ್ತಲಿಹನು ಸರ್ವಜ್ಞ

೪೪.
ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು
ರಾಗದಿಂ ಸತ್ಯವೆರಸಿಹ ಪ್ರಸಾದಿಯ
ಶ್ರಿ ಗುರುವು ಎಂಬೆ ಸರ್ವಜ್ಞ

೪೫.
ಲಿಂಗವಿರಹಿತನಾಗಿ ನುಂಗದಿರು ಏನುವನು
ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು
ನುಂಗಿದೆಂತಕ್ಕು ಸರ್ವಜ್ಞ

೪೬.
ಅಂಜದಲೆ ಕೊಂಡಿಹರೆ, ನಂಜು ಅಮೃತವದಕ್ಕು
ಅಂಜಿ, ಅಳುಕುತಲಿ ಕೊಂಡಿಹರೆ ಅಮೃತವು
ನಂಜಿನಂತಕ್ಕು ಸರ್ವಜ್ಞ

೪೭.
ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು
ಮರಣವಿಲ್ಲದಾ ಮಗಲೇಸು ಲಿಂಗಕ್ಕೆ
ಶರಣುವೆ ಲೇಸು ಸರ್ವಜ್ಞ

೪೮.
ಸೋಕಿಡಾ ಸುಖಂಗಳ
ನೇಕವನು ಶಿವಗಿತ್ತು
ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ

೪೯.
ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
ಸುಲಲಿತವು ಆದ ಶರಣರಾಹೃದಯದಲಿ
ನೆಲಸಿಹನು ಶಿವನು ಸರ್ವಜ್ಞ

೫೦.
ಕಿಚ್ಚಿನೊಳು ಸುಘೃತವು, ಒಚ್ಚತದಿ ಕರ್ಪುರವು
ಅಚ್ಚಳಿದು ನಿಜದಿ ನಿಂದಂತೆ, ಭೇದವನು
ಮುಚ್ಚುವನೆ ಶರಣ ಸರ್ವಜ್ಞ

೫೧.
ಗಂಗೆಯಾ ತಡೆ ಲೇಸು, ಮಂಗಳನ ಬಲ ಲೇಸು
ಜಂಗಮ ಭಕ್ತನಾ ನಡೆ ಲೇಸು, ಶರಣರಾ
ಸಂಗವೇ ಲೇಸು ಸರ್ವಜ್ಞ

೫೨.
ಆಕಾಶಪಥ ಮೀರಿ, ದೇಕವಸ್ತುವ ತಿಳಿದು
ಸಾಕಾರವಳಿದು ನಿಜವಾದ ಐಕ್ಯಂಗೆ
ಏಕತ್ರ ನೋಡು ಸರ್ವಜ್ಞ

೫೩.
ನಾನು-ನೀನುಗಳದು, ತಾನು ಲಿಂಗದಿ ಉಳಿದು
ನಾನಾ ಭ್ರಮೆಗಳ ಅತಿಗಳೆದು ನಿಂದಾತ
ತಾನೈಕ್ಯ ನೋಡು ಸರ್ವಜ್ಞ

೫೪.
ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ
ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ
ತಾನೆಂಬುದಿಲ್ಲ ಸರ್ವಜ್ಞ

೫೫.
ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ
ದೇಗುಲವೆ ಇಲ್ಲ ಸರ್ವಜ್ಞ

೫೬.
ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ
ಬಲುಕವಲು ಒಡೆದು ಬೇರಿಂದ ತುದಿತನಕ
ಹಲಸು ಕಾತಂತೆ ಸರ್ವಜ್ಞ

೫೭.
ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ
ಕಂಡು ಲಿಂಗವನು ಪೂಜಿಸಿದವಗೆ ಯಮ
ದಂಡ ಕಾಣಯ್ಯ ಸರ್ವಜ್ಞ

೫೮.
ಆತುಮದ ಲಿಂಗವನು
ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ
ದಶವಿಧದ ಪಾತಕಗಳಿಲ್ಲ ಸರ್ವಜ್ಞ

೫೯.
ಲಿಂಗವನು ಅಂದವನ ಅಂಗ ಹಿಂಗಿರಬೇಕು
ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ
ಹಿಂಗಿದಪ್ಪಂದ ಸರ್ವಜ್ಞ

೬೦.
ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
ಲಿಂಗದಾ ನೆನಹು ಘನವಾಗೆ ಶಿವಲಿಂಗ
ಹಿಂಗಿರದು ಅವನ ಸರ್ವಜ್ಞ

೬೧.
ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು
ಇಮ್ಮನವ ಪಿಡಿದು ಕೆಡಬೇಡ ವಿಧಿವಶವು
ಸರಿಮ್ಮನೇ ಕೆಡಗು ಸರ್ವಜ್ಞ

೬೨.
ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು?
ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ
ನಷ್ಟ ಕಾಣಯ್ಯ ಸರ್ವಜ್ಞ

೬೩.
ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ
ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ
ಬಟ್ಟೆಗೆ ಹೋಹ ಸರ್ವಜ್ಞ

೬೪.
ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು?
ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ
ಕೊಟ್ಟಗುರಿದಂತೆ ಸರ್ವಜ್ಞ

೬೫.
ಒಸೆದೆಂಟು ದಿಕ್ಕಿನಲ್ಲಿ ಮಿಸುನಿ ಗಿಣ್ಣಲು ಗಿಂಡಿ
ಹಸಿದು ಮಾಡುವನ ಪೂಜೆಯದು ಬೋಗಾರ
ಪಸರ ವಿಟ್ಟಂತೆ ಸರ್ವಜ್ಞ

೬೬.
ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು?
ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ
ಹತ್ತಿಗೇಡೆಂದ ಸರ್ವಜ್ಞ

೬೭.
ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಳು
ಕ್ಷಣಕ್ಕೊಮ್ಮೆ ಒಂದನೆಣಿಸುವಾ ಜಪಕೊಂದು
ಕುಣಿಕೆಯುಂಟೆಂದ ಸರ್ವಜ್ಞ

೬೮.
ಎಣಿಸುತಿರ್ಪುದು ಬೆರಳು
ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ
ಶುನಕನಂತಕ್ಕು ಸರ್ವಜ್ಞ

೬೯.
ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳು ಮಂತ್ರ
ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ
ಹೊಲೆಯ ಕಾಣಯ್ಯ ಸರ್ವಜ್ಞ

೭೦.
ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ
ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ
ಹಿಂಗದಿರುತಿಹುದು ಸರ್ವಜ್ಞ

೭೧.
ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು
ಲಿಂಗವುಂಬುವದೆ ? ಇದನರಿದು ಕಪಿಯೆ ನೀ
ಜಂಗಮಕೆ ನೀಡು ಸರ್ವಜ್ಞ

೭೨.
ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು
ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ
ಮಂಗಗಳ ನೋಡು ಸರ್ವಜ್ಞ

೭೩.
ಹಲವನೋದಿದಡೇನು? ಚೆಲುವನಾದದಡೇನು ?
ಕುಲವೀರನೆನೆಸಿ ಫಲವೇನು? ಲಿಂಗದಾ
ಒಲುಮೆ ಇಲ್ಲದಲೆ ಸರ್ವಜ್ಞ

೭೪.
ಓದುವಾದಗಳೇಕೆ ? ಗಾದೆಯ ಮಾತೇಕೆ?
ವೇದ ಪುರಾಣವು ನಿನಗೇಕೆ ಲಿಂಗದಾ
ಹಾದಿಯರಿಯದಲೆ ಸರ್ವಜ್ಞ

೭೫.
ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ
ಕೊಂಡಾಡಲರಿಯದಧಮಂಗೆ ಲಿಂಗವದು
ಕೆಂಡದಂತಿಹುದು ಸರ್ವಜ್ಞ

೭೬.
ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ
ಕಟ್ಟಲೂ ಬೇಡ ಬಿಡಲೂ ಬೇಡ
ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ

೭೭.
ಆ ದೇವ ಈ ದೇವ ಮಹಾದೇವನೆನಬೇಡ
ಆ ದೇವರ ದೇವ ಭುವನದಾ ಪ್ರಾಣಿಗಳಿ
ಗಾದವನೇ ದೇವ ಸರ್ವಜ್ಞ

೭೮.
ಚಿತ್ರವನು ನವಿಲೊಳು ವಿ ಚಿತ್ರವನು ಗಗನದೊಳು
ಪತ್ರ ಪುಷ್ಪಗಳ ವಿವಿಧವರ್ಣಗಳಿಂದ
ಚಿತ್ರಿಸಿದರಾರು ಸರ್ವಜ್ಞ

೭೯.
ಇಂಗಿನನೊಳು ನಾತವನು ತೆಂಗಿನೊಳಗೆಳೆ ನೀರು
ಭ್ರಂಗ ಕೋಗಿಲೆಯ ಕಂಠದೊಳು ಗಾಯನವ
ತುಂಬಿದವರಾರು ಸರ್ವಜ್ಞ

೮೦.
ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ
ಸುಳ್ಳೆನ್ನಬಹುದೆ? ಸರ್ವಜ್ಞ

೮೧.
ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ
ಬಲ್ಲ ದಾಶಿವನ ಭಜಿಸಿ ಬೇಡಿದಾತ
ಇಲ್ಲೆನಲಿಕರಿಯ ಸರ್ವಜ್ಞ

೮೨.
ಆದಿ ದೈವವನು ತಾ ಭೇದಿಸಲಿ ಕರಿಯದಲೆ
ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ
ಮಾದಿಗರ ನೋಡು ಸರ್ವಜ್ಞ

೮೩.
ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ
ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ
ಅನ್ಯಾಯ ನೋಡು ಸರ್ವಜ್ಞ

೮೪.
ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ
ಬಣಗುಗಳ ನೋಡ ಸರ್ವಜ್ಞ

೮೫.
ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ
ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ
ಸೊಲ್ಲೇದೈವ ಸರ್ವಜ್ಞ

೮೬.
ಗುಡಿಯ ಬೋದಿಗೆ ಕಲ್ಲು
ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು
ಕೊಡುವಾತ ಬೇರೆ ಸರ್ವಜ್ಞ

೮೭.
ಪ್ರಾಣನೂ ಪರಮಮನು ಕಾಣದಲೆ ಒಳಗಿರಲು
ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ
ಪ್ರಾಣಾತ್ಮನೆಂಬ ಸರ್ವಜ್ಞ

೮೮.
ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ
ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ
ದಿಲ್ಲ ಕಾಣಯ್ಯ ಸರ್ವಜ್ಞ

೮೯.
ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ
ಹತವ ಗೈವುದಕ್ಕೆ ರುದ್ರಗಣ, ಇವರುಗಳ
ಸ್ಥಿತಿಯನರಿಯೆಂದ ಸರ್ವಜ್ಞ

೯೦.
ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು
ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ
ನಿರ್ಮಿಸನದೇಕೆ ಸರ್ವಜ್ಞ

೯೧.
ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ
ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು
ಹುಟ್ಟಿಸನದೇಕೆ ಸರ್ವಜ್ಞ

೯೨.
ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು
ಮತ್ತೆ ಪಾಂಡವರಿಗಾಳಾದ ಹರಿಯು ತಾ
ನೆತ್ತಣಾ ದೈವ ಸರ್ವಜ್ಞ

೯೩.
ನರಸಿಂಹನವತಾರ
ಹಿರಿದಾದ ಅದ್ಭುತವು
ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ

೯೪.
ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ
ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ
ಪಾಲಿಸದೆ ಹೋದ ಸರ್ವಜ್ಞ

೯೫.
ಹರನವನ ಕೊಲುವಂದು, ಎರಳೆಯನು ಎಸೆವಂದು
ಮರಳಿ ವರಗಳನು ಕೊಡುವಂದು ಪುರಹರಗೆ
ಸರಿಯಾದ ಕಾಣೆ ಸರ್ವಜ್ಞ

೯೬.
ಹರಿ ಬೊಮ್ಮನೆಂಬವರು, ಹರನಿಂದಲಾದವರು
ಅರಸಿಗೆ ಆಳು ಸರಿಯಹನೆ ಶಿವನಿಂದ
ಮೆರೆವರಿನ್ನಾರು ಸರ್ವಜ್ಞ

೯೭.
ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ
ನೆರೆಹತ್ತು ಜನನವಾಹರಿಗೆ ಇವರುಗಳು
ಸರಿಯಹರೆ ಸರ್ವಜ್ಞ

೯೮.
ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ
ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ
ಸರಿಯಾರು ಹೇಳಿ ಸರ್ವಜ್ಞ

೯೯.
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚ್ಂದ್ರಶೇಖರನು ಮುದಿಯೆತ್ತನೇರಿ
ಬೇಕೆಂದುದನು ಕೊಡುವ ಸರ್ವಜ್ಞ

೧೦೦.
ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ
ಶಂಭುವಿದ್ದಂತೆ ಮತ್ತೊಂದು ದೈವವನು
ನಂಬುವನೆ ಹೆಡ್ಡ ಸರ್ವಜ್ಞ

    *

No comments:

Post a Comment