Thursday, October 14, 2010

ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ ತಂಬೂರಿ,,,,,(,ಶರೀಫರು )



 ತರವಲ್ಲ ತಗಿ ನಿನ್ನ ತಂಬೂರಿ.

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||

ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ ||೧||

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ ||೨||

ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ ||೩||

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ ||೪||

ಕನ್ನಡ ಕವಿಗಳು ಸುಸಂಯೋಜಿತ, ಸಮರಸಪೂರ್ಣ ಬದುಕನ್ನು ವರ್ಣಿಸಲು ತಂಬೂರಿಯ ಪ್ರತಿಮೆಯನ್ನು ಬಳಸುತ್ತಲೇ ಬಂದಿದ್ದಾರೆ.
ಶರೀಫರು ತಂಬೂರಿಯ ಪ್ರತಿಮೆಯನ್ನು ಸಾಧಕನ ಮನಸ್ಸಿಗೆ ಹೋಲಿಸಿ ಹಾಡಿದ್ದಾರೆ.

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||
ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||

ದೇವರನ್ನು ಮನಸ್ಸಿನಲ್ಲಿ ತುಂಬಿಕೊಂಡು, ತನ್ನ ಬಾಳನ್ನು ದೇವರಿಗೆ ಅರ್ಪಿಸಿ ಬದುಕುವದೇ ನಿಜವಾದ ಸಾಧನೆ.
ಈ ರೀತಿಯಾಗಿ ಮಾಡಲು ಅರಿಯದವನು, ದೇವರು ಕೊಟ್ಟ ತಂಬೂರಿಯನ್ನು ಸರಿಯಾಗಿ, ಸುಸ್ವರದಲ್ಲಿ ಬಾರಿಸುತ್ತಿಲ್ಲ; ಆತನಿಗೆ ಸರಸ ಸಂಗೀತದ ಕುರುಹೇ ಗೊತ್ತಿಲ್ಲ! ಅವನು ತನ್ನ ಮನಸ್ಸೆಂಬ ತಂಬೂರಿಯನ್ನು ಅಪಸ್ವರದಲ್ಲಿ ಬಾರಿಸುತ್ತಾನೆ. ಅಂಥವನು ಸಾಧನೆಯಿಂದ ತನ್ನ ಮನಸ್ಸು ಪಕ್ವವಾಗುವ ತನಕ ಕಾಯಬೇಕು.

ಚಾಮರಸ ಕವಿ ಬರೆದ “ಪ್ರಭುಲಿಂಗ ಲೀಲೆ”ಯಿಂದ ತುಂಬಾ ಪ್ರಭಾವಿತರಾದ ಶರೀಫರು ತಮ್ಮ ಕವನಗಳಲ್ಲಿ ಮದ್ದಲೆಯ ಪ್ರತಿಮೆಯನ್ನು ಬಳಸಿದಾಗೆಲ್ಲ, ಆ ಮದ್ದಲೆಯನ್ನು ಬಾರಿಸುವವನು ಸ್ವತಃ ಪ್ರಭುವೇ ಎನ್ನುವ ಭಾವವನ್ನು ತಾಳಿರುತ್ತಾರೆ. ಆ ಕಾರಣದಿಂದಲೇ ಅವರು,
“ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ”
ಎಂದು ಹೇಳುವಾಗ, ಸ್ವತಃ ಭಗವಂತನೇ, ಈ ಬಾಳಿನ ಯೋಜನೆಯನ್ನು ರೂಪಿಸಿದವನು;ಆತ ಬಾರಿಸುತ್ತಿರುವ ಮದ್ದಲೆಗೆ ತಕ್ಕಂತೆ ನಾವು ತಂಬೂರಿಯನ್ನು ನುಡಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.
“ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ”
ಈ ರೀತಿಯಾಗಿ ಸಾಧಕನು ತನ್ನ ಮನಸ್ಸಿನ ತಂಬೂರಿಯನ್ನು ದೇವನ ಮದ್ದಲೆಗೆ ಹೊಂದಿಸಿಕೊಂಡರೆ, ಆತ ಸಿದ್ಧ ಸಾಧಕನಾಗುತ್ತಾನೆ, ಬುದ್ಧಿವಂತನಾಗುತ್ತಾನೆ.

ಶರೀಫರು ಶಾಕ್ತ ಪಂಥದ ಸಾಧಕರು. ಈ ಪಂಥದಲ್ಲಿ “ವಿದ್ಯೆ” ಎಂದರೆ ಶಾಕ್ತವಿದ್ಯೆ.
ಈ ವಿದ್ಯೆಯನ್ನು ಸಾಧಿಸಿದವನಿಗೆ ಅನೇಕ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುವವು.
ಇಂತಹ ಸಿದ್ಧಿಗಳು ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗ ಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಪ್ರಾಪ್ತವಾಗಿದ್ದವು.
ಶರೀಫರಿಗೆ ಬಹುಶಃ ಇಂತಹ ಸಿದ್ಧಿಗಳು ದೊರೆತಿರಲಿಕ್ಕಿಲ್ಲ. ಅವರ ಕವನ ಒಂದರಲ್ಲಿ ಇದರ ಸೂಚನೆ ದೊರೆಯುತ್ತದೆ:

“ಎಲ್ಲರಂಥವನಲ್ಲ ನನಗಂಡಾ
ಬಲ್ಲಿದನು ಪುಂಡಾ
.........
…………………..
ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ”

ಆದುದರಿಂದ ಬುದ್ಧಿವಂತನಾದವನು, ಈ ಸಿದ್ಧಿಗಳನ್ನು ಮೋಜಿಗಾಗಿ ಅಥವಾ ಸ್ವಾರ್ಥಕ್ಕಾಗಿ ಬಳಸದೆ, ಆತ್ಮೋನ್ನತಿಗಾಗಿ ಬಳಸಬೇಕು.

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ

ಈ ತಂಬೂರಿಯು ಬಾಳಾಕ್ಷದೇವನು ನಿರ್ಮಿಸಿದ ತಂಬೂರಿ. ಶರೀಫರು ಇಲ್ಲಿ pun ಉಪಯೋಗಿಸಿದ್ದಾರೆ. ಬಾಳಾಕ್ಷ ಅಂದರೆ ಭಾಲಾಕ್ಷ, ಅಂದರೆ ಶಿವ. ಇದು ನೇರವಾದ ಅರ್ಥ. ಒಳಗೆ ಹುದುಗಿದ ಅರ್ಥವೆಂದರೆ, ಬಾಳಿಗೆ ಅಕ್ಷನಾದ ಅಂದರೆ ಕಣ್ಣಾದ ದೇವನು. ಇದರ ಹಂಚಿಕೆಯನ್ನು ಅಂದರೆ ರಚನೆಯ ವಿಧಾನವನ್ನು, ಚಾತುರ್ಯವನ್ನು ತಿಳಿಯದೇ ಬಾರಿಸಲು ಹೊರಟವನು ತಾಳಗೇಡಿಯಾಗುತ್ತಾನೆ.

ಈ ಬಾಳು ದೇವನ ದೇಣಿಗೆ ಎನ್ನುವದನ್ನು ಅರಿತುಕೊಂಡು, ದೇವರು ನೀಡಿದ ಬುದ್ಧಿಶಕ್ತಿ, ಶ್ರದ್ಧೆ, ಭಕ್ತಿ ಇವುಗಳನ್ನು ಸಮರಸಗೊಳಿಸಿ, ಯಾವುದಕ್ಕೂ ಆಸೆಪಡದೆ ಬಾಳಿದರೆ, ಅದು ಸಮಂಜಸವಾದ ಬಾಳು.
ಇಂತಹ ಬಾಳಿನಲ್ಲಿ ಮಾತ್ರ ಬಾಳಾಕ್ಷ ಕೊಟ್ಟ ತಂಬೂರಿಯ ಸುನಾದ ಹೊರಡಲು ಸಾಧ್ಯ.

ಇಂತಹ ತಂಬೂರಿಯನ್ನು ಸತ್ಯವಂತರಿಗಲ್ಲದೆ ಬೇರೊಬ್ಬರಿಗೆ ನುಡಿಸಲು ಸಾಧ್ಯವಾದೀತೆ?
ಆದುದರಿಂದ ಉತ್ತಮರಿಗೆ ಮಾತ್ರ ಸರಿಯಾಗಿ ನುಡಿಸಲು ಸಾಧ್ಯವಾಗುವ ತಂಬೂರಿ ಇದು.

“ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ”

ಬತ್ತೀಸ ರಾಗಗಳು ಅಂದರೆ ಶಾಸ್ತ್ರೀಯ ಸಂಗೀತದ ಮೂವತ್ತೆರಡು ಮೂಲರಾಗಗಳು.
ಈ ಎಲ್ಲ ರಾಗಗಳಲ್ಲಿ ಬಾರಿಸಲು ಪ್ರಯತ್ನಿಸಿದರೂ, ರಾಗದ ಬಗೆಯನ್ನು (=ಮನಸ್ಸು, ಲಕ್ಷಣ) ತಿಳಿಯದೆ, ಬಾರಿಸುವವನು ಕತ್ತೆ ಇದ್ದಂತೆ.

ಈ ತಂಬೂರಿಯು ಅಸಮ(=unequalled, matchless) ಸುಮೇಳದಲ್ಲಿ (=orchestra, harmony) ನುಡಿಸಬೇಕಾದ ತಂಬೂರಿ.
ಇದನ್ನು ಕುಶಲರೇ ನುಡಿಸಬಲ್ಲರು.
ಆ ಕೌಶಲ್ಯವನ್ನು ಪಡೆಯುವ ಬಗೆ ಹೇಗೆ?
ಶಿಶುನಾಳಧೀಶನಾದ ದೇವನಲ್ಲಿ ಮನಸ್ಸಿಟ್ಟು, ಅವನನ್ನೇ ಓದಿ, ಅವನನ್ನೇ ಅರಿತು, ಬಾಳನ್ನು ಹಸನಾದ(=clean) ರೀತಿಯಲ್ಲಿ ಬಾಳಿದರೆ, ಈ ತಂಬೂರಿ ಆ ಸಾಧಕನಿಗೆ ಕರಗತವಾಗುವದು.

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ

(ಶರೀಫರು ಅಸಮ ಸುಮೇಳ ಎನ್ನುವಾಗ, ಒಂದು apparent ವಿರೋಧಾರ್ಥ ಬಳಸಿದ್ದಾರೆ:
ಅಸಮ ಸುಮೇಳ=Disharmonius orchestra)

ಹುಟ್ಟುತ್ತಲೆ, ಪ್ರತಿ ಜೀವಿಯೂ ಅಪಾರ ಸಾಧನೆ ಮಾಡಬಲ್ಲ ಮನಸ್ಸನ್ನು ದೇವರಿಂದ ಪಡೆಯುತ್ತಾನೆ.
ಅದು ದೇವರು ಆತನಿಗೆ ಕೊಟ್ಟ ತಂಬೂರಿ.
ಅದರಂತೆ ಈ ಬಾಳೂ ಸಹ ತಂಬೂರಿಯೆ.
ಬಾಳಿನ ಪ್ರತಿ ಕರ್ಮವೂ ಈ ತಂಬೂರಿಯನ್ನು ನುಡಿಸಿದಂತೆ.
ಬಾಳಿನಲ್ಲಿ ದೊರೆಯಬಹುದಾದ ಸಾಮರ್ಥ್ಯಗಳು ಹಾಗೂ ಸಿದ್ಧಿಗಳು ಈ ತಂಬೂರಿಯ ಭಾಗಗಳೇ.
ಇವೆಲ್ಲವನ್ನು ಸರಿಯಾಗಿ ಬಳಸಿ, ಪ್ರಭುವಿನ ಮದ್ದಲೆಗೆ ಸರಿಯಾಗಿ ತಂಬೂರಿ ನುಡಿಸಿದರೆ, ಸುಸ್ವರ ಹೊರಡುವದು.
ಈ ಸುಸ್ವರದಿಂದ ಮಹದಾನಂದ ದೊರೆಯುವದು.

ಅದರ ಬದಲಾಗಿ ತನ್ನ ಸಾಮರ್ಥ್ಯವನ್ನು ದುರುಪಯೋಗಿಸಿಕೊಂಡರೆ, ತಂಬೂರಿಯಲ್ಲಿ ಅಪಶ್ರುತಿ ಹೊರಡುವದು.
ಇದೇ ಶರೀಫರ ಸಂದೇಶ.  Neelanjan

No comments:

Post a Comment