Monday, November 1, 2010

ಇದು ಬರಿ-ಬೆಳಗಲ್ಲೋ ಅಣ್ಣಾ.---------- ಮತ್ತ್ತೆ ಮತ್ತೆ ನೆನಪಾದ ಬೆ೦ದ್ರೆ--ನೀಲಾ೦ಜನ


ಇದು ಬರಿ-ಬೆಳಗಲ್ಲೋ ಅಣ್ಣಾ.
ಮೂಡಲ ಮನೆಯಾ ಮುತ್ತಿನ ನೀರಿನ
ಎರಕವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲು ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ.

(೨)
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.

(೩)
ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-ಅಮೃತsದ ಬಿಂದು
ಯಾರಿರಿಸಿರುವರು ಮುಗಿಲs ಮೇಲಿಂ-
ದಿಲ್ಲಿಗೇ ತಂದು
ಈಗ-ಇಲ್ಲಿಗೇ ತಂದು.

(೪)
ತಂಗಾಳೀಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ.

(೫)
ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು-ಹಕ್ಕೀಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.

(೬)
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.

(೭)
ಅರಿಯದು ಆಳವು ತಿಳಿಯದು ಮನವು
ಕಾಣsದೋ ಬಣ್ಣಾ
ಕಣ್ಣಿಗೆ-ಕಾಣsದೋ ಬಣ್ಣಾ
ಶಾಂತೀರಸವೇ ಪ್ರೀತಿಯಿಂದಾ
ಮೈದೋರಿತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.

ಗಾಯಕಿ: ಎಸ್. ಜಾನಕಿ;
ಸಂಗೀತ: ವಿಜಯಭಾಸ್ಕರ್



ಬಾರೊ ಸಾಧನಕೇರಿಗೆ
ಮರಳಿ ನಿನ್ನೀ ಊರಿಗೆ

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ

ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ?

ಮಲೆಯ ಮೊಗವೆ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಹೂಗೂ ಬೆರಳಿದೆ
ನೆಲಕೆ ಹರಯವು ಮರಳಿದೆ

ಭೂಮಿ ತಾಯೊಡಮುರಿದು ಎದ್ದಳೋ
ಶ್ರಾವಣದ ಸಿರಿ ಬರಲಿದೆ

ಮರವು ಮುಗಿಲಿಗೆ ನೀಡಿದೆ
ಗಿಡದ ಹೊದರೊಳು ಹಾಡಿದೆ
ಗಾಳಿಯಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ

ಹೇಳು ಗೆಳೆಯ ಬೇರೆ
ಎಲ್ಲೀತರದ ನೋಟವ ನೋಡಿದೆ
ಈತರದ ನೋಟವ ನೋಡಿದೆ?


ಗಮಗಮಾ ಗಮಾಡಸ್ತಾsವs ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗಿ?
ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀ ಹೊರಟಿದ್ದೀಗ ಎಲ್ಲಿಗಿ ?

ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡೀ ಹರಳ
ಮನಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗಿ ?

ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ ಕಂಡರ ಕವದಾವ ಜೊಂಪ ||
ನೀ ಹೊರಟಿದ್ದೀಗ ಎಲ್ಲಿಗಿ ?

ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡsಕ
ಹೀಂಗ ಬಿಟ್ಟು ಇಲ್ಲಿ ನನ್ನ ನಡsಕ ||
ನೀ ಹೊರಟಿದ್ದೀಗ ಎಲ್ಲಿಗಿ ?

ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ ||
ನೀ ಹೊರಟಿದ್ದೀಗ ಎಲ್ಲಿಗಿ ?

ನಾವು ಬಂದೆವಲ್ಲಿದಿಲ್ಲಿಗಿ
ಬಾಯಿ ಬಿಟ್ಟಾವಲ್ಲ ಮಲ್ಲಿಗಿ
ನೀರೊಡೆದಿತಲ್ಲ ಕಲ್ಲಿಗಿ ||
ನೀ ಹೊರಟಿದ್ದೀಗ ಎಲ್ಲಿಗಿ ?

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯಾ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗಿ ?

     

೧ಹೃದಯ ಸಮುದ್ರ

ಅವತರಿಸು ಬಾ ನಾರಾಯಣಾ
ಎತ್ತೆನ್ನ ಮೇಲಕೆ ಚಿದ್ಘನಾ
ಈ ಜೀವವಾಗಲಿ ಪಾವನಾ



ಈ ಪ್ರಾಣ ತನು ಮನ ದೇವನಾ
ಹಗಲಿರುಳು ಮಾಡಲಿ ಸೇವನಾ
ಅಗಹುದು ಭಗವಜ್ಜೀವನಾ

೩.

ಅತ್ಯಂತ ನಿರ್ಮಲ ಪ್ರೇಮವು
ಅದು ಸಹಜ ಜೀವನ ಧಾಮವು
ಅಲ್ಲಿರುವ ಅನ್ನವೆ ಸೋಮವು

‘-ಹಿಂದೆ ಎಂದೋ ಒಮ್ಮೆ ಇಂದಿನೀ ರಾತ್ರಿ
ಕೃಷ್ಣ ಹುಟ್ಟಿದನಂತೆ - ಕೃಷ್ಣ ಹುಟ್ಟಿದನು.
ಮುಂದೆ ಎಂದೋ ಒಮ್ಮೆ ತಾ ಬರುವ ಖಾತ್ರಿ
ಕೃಷ್ಣ ಹೇಳಿದನಂತೆ ; ಪಾರ್ಥ ಕೇಳಿದನು :



“ಬಾಡಿರಲು ಬತ್ತಿರಲು ಧರ್ಮವು ; ಅಧರ್ಮ
ಮೊಳೆತಿರಲು ಚಿಗಿತಿರಲು ನಾ ಬರುವೆನೆಂ”ದು.
ಆಡಿದನು ಮಾಡಿಲ್ಲ. ಯಾರದೀ ಕರ್ಮ?
ಇನ್ನಾದರೂ ಅವನು ಬರುವುದೆಂದು?



ಭಾರತಕ್ಕಿಂತ ರಾಮಾಯಣಕ್ಕಿಂತ
ನನ್ನ ಕಾಲವೆ ಕಾಲು ಪಾಲು ಮೇಲು.
ಕೆಟ್ಟಿಲ್ಲ ಧರ್ಮ, ಹುಟ್ಟಿಲ್ಲಧರ್ಮಂತs
ಬಂದಿಲ್ಲ ದೇವರೂ ; ಇರಲಿ ಬುಡಮೇಲು !



ಹುಟ್ಟಿ ಬರುವುದು ಬೇಡ, ಕೆಡುವುದೂ ಬೇಡ.
ದೇವನೂ ಧರ್ಮವೂ ಇವು ಎರಡು ಜೋಡಿ.
‘ಕೆಟ್ಟ ಬುದ್ಧಿಯೆ ! ಬಾಯಿ ಮುಚ್ಚು ಕೆಡಬೇಡ.
ಮಂಗಮನವೇ ! ವಾದ ಸಾಕು ಖೋಡೀ.’






ತಿಲ್ಲಾಣ - ಅಂಬಿಕಾತನಯದತ್ತ

ಇದಾವ ಹಾಡು ?
ಇದಾವ ತಾಲ ?
ಇದಾವ ರಾಗ ?
ನನ್ನ ಪುಟ್ಟ ಪುರಂದರ ವಿಠಲಾ !


ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ;
ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ ;
ಇದಾವ ರಸ ?
ಇದಾವ ಭಾವ ?
ಇದಾವ ಹಾವ ?
ನನ್ನ ಪುಟ್ಟ ಪುರಂದರ ವಿಠಲಾ !


ಮಾತಿನ ಸೂತಕವಿಲ್ಲದ ನಾದದ ನಾದುವ ಸೊಲ್ಲು,
ಅರ್ಥದ ಪಾತಕವಿಲ್ಲದ ಜೀವದ ಭಾವದ ಸೊಲ್ಲು,
ಇದಾವ ರೀತಿ ?
ಇದಾವ ಗಮಕ ?
ಇದಾವ ಯಮಕ ?
ನನ್ನ ಪುಟ್ಟ ಪುರಂದರ ವಿಠಲಾ !


ತಿಲ್ಲಾಣದಲ್ಲಿ ಪಲ್ಲವಿಸಿ, ಮುಂದೆ ಪಾಡಿಗೆ ಬರುವ ನಿನ್ನೀ ಪಾಡು
ವಾಚಾಮಗೋಚರವೇ – ಈ ನಿನ್ನ ಧ್ವನಿ ಕಾವ್ಯ. . . . . . . . . .
ಹಿಂದಿನ ನೆನಸೋ ?
ಇಂದಿನ ಮನಸೋ ?
ಮುಂದಿನ ಕನಸೋ ?
ನನ್ನ ಪುಟ್ಟ ಪುರಂದರ ವಿಠಲಾ !

ಕವನ ಸಂಕಲನ - ಸಖೀಗೀತ

೧ಆ ಮುಖಾ . . . ಈ ಮುಖಾ
ಯಾವ ಗಂಡೊ
ಯಾವ ಹೆಣ್ಣೊ
ಪ್ರೀತಿಯೆಂಬ ಚುಂಬಕಾ
ಕೂಡಿಸಿತ್ತು
ಆಡಿಸಿತ್ತು
ಕೂಡಲದೊಲು ನೋಟವಾ
ಮೂರು ದಿನದ ಆಟವಾ



ಆ ಮುಖಾ – ಈ ಮುಖಾ
ಹೆತ್ತುದೊಂದು
ಹೊತ್ತುದೊಂದು
ಎಂಥ ಹಾಸ್ಯದೀ ಸುಖಾ
ಬೆರಕೆಯಿಂದೊ
ಎರಕದಿಂದೊ
ಬಂತು ಬೇರೆ ಜೀವನಾ
ಕೃಪೆಯೊ ಕಾಮದೇವನಾ



ಆ ಮುಖಾ – ಈ ಮುಖಾ
ಒಂದು ಸತ್ತು
ಒಂದು ಅತ್ತು
ಒಂದಕೊಂದು ಸಮ್ಮುಖಾ
ಬೇರೆ ಬತ್ತಿ
ದೀಪ ಹತ್ತಿ
ಬೆಳಗುತಿಹದು ಸ್ನೇಹವಾ
ತುಂಬಿ ಬೇರೆ ದೇಹವಾ



ಆ ಮುಖಾ – ಈ ಮುಖಾ
ಇದ್ದು ಅಂತ
ಆಯ್ತನಂತ
ಒಗೆತನದೀ ಒಮ್ಮುಖಾ
ಅಂಟಿಗಂಟು
ಚಿಗಿತು ನಂಟು+
ಇದುವೆ ನಿತ್ಯ ನೂತನಾ
ಸಂತತಿಯೆ ಚಿರಂತನಾ!

ಬೆ೦ದ್ರೆ ಕ೦ಡ ಬದುಕು ಭವ್ಯವಾದುದು.ನೀಲಾ೦ಜನ

No comments:

Post a Comment