Friday, October 29, 2010

ಬಸವಣ್ಣನ ವಚನಗಳು - 301 ರಿಂದ 400 ರವರೆಗೆ

  

೩೦೧.
ಕಾಮ ಸಂಗವಳಿದು,
ಅನುಭಾವ ಸಂಗದಲುಳಿದವರನಗಲಲಾರೆ,
ಶಿವಂಗೆ ಮಿಗೆ ಒಲಿದವರನು
ನಾನು ಅಗಲಲಾರೆ ಕಾಣಾ ಕೂಡಲಸಂಗಮದೇವ.

೩೦೨.
ಭಕ್ತಿರತಿಯ ವಿಕಲತೆಯ
ಯುಕುತಿಯನೇನ ಬೆಸಗೊಂಬಿರಯ್ಯ ?
ಕಾಮಿಗುಂಟೇ ಲಜ್ಜೆ ನಾಚಿಕೆ ?
ಕಾಮಿಗುಂಟೇ ಮಾನಾಪಮಾನವು ?
ಕೂಡಲಸಂಗನ ಶರಣರಿಗೊಲಿದ
ಮರುಳನನೇನ ಬೆಸಗೊಂಬಿರಯ್ಯ ?

೩೦೩.
ಸಕ್ಕರೆಯ ಕೊಡನ ತುಂಬಿ
ಹೊರಗ ಸವಿದರೆ ರುಚಿಯುಂಟೆ ?
ತಕ್ಕೈಸಿ ಭುಜತುಂಬಿ,
ಲಿಂಗಸ್ಪರ್ಶನವ ಮಾಡದೆ,
ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!
ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!
ಕೂಡಲಸಂಗಮದೇವ.

೩೦೪.
ಪರಚಿಂತೆ ಎಮಗೇಕಯ್ಯ ?
ನಮ್ಮ ಚಿಂತೆ ಎಮಗೆ ಸಾಲದೆ ?
ಕೂಡಲಸಂಗಯ್ಯ ಒಲಿದಾನೋ ಒಲಿಯನೋ
ಎಂಬ ಚಿಂತೆ
ಹಾಸಲುಂಟು ಹೊದಿಯಲುಂಟು!

೩೦೫.
ಲಜ್ಜೆಗೆಟ್ಟೆನು, ನಾಣುಗೆಟ್ಟೆನು,
ಕುಲಗೆಟ್ಟೆನು, ಛಲಗೆಟ್ಟೆನು,
ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯ!
ಕೂಡಲಸಂಗಮದೇವಯ್ಯ,
ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯ!

೩೦೬.
ಮಾಡುವ ಭಕ್ತನ ಕಾಯ
ಬಾಳೆಯ ಕಂಬದಂತಿರಬೇಕು!
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ
ಒಳಗೆ ಕೆಚ್ಚಿಲ್ಲದಿರಬೇಕು!
ಮೇಲಾದ ಫಲವ ನಮ್ಮವರು
ಬೀಜ ಸಹಿತ ನುಂಗಿದರು.
ಎನಗಿನ್ನಾವ ಭವವಿಲ್ಲ ಕಾಣಾ
ಕೂಡಲಸಂಗಮದೇವ.

೩೦೭.
ಏನು ಮಾಡುವೆನೆನ್ನ ಪುಣ್ಯದ ಫಲವು!
ಶಾಂತಿಯ ಮಾಡಹೋದರೆ ಬೇತಾಳ ಮೂಡಿತ್ತು!
ಕೂಡಲಸಂಗಮದೇವನ ಪೂಜಿಸಿಹೆನೆಂದರೆ
ಭಕ್ತಿ ಎಂಬ ಮೃಗವೆನ್ನನಟ್ಟಿ ಬಂದು
ನುಂಗಿತಯ್ಯ!

೩೦೮.
ಭಕ್ತಿಯೆಂಬ ಫೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು!
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು!
ಆಚಾರವೆಂಬ ಕಾಯಾಯಿತ್ತು!!
ನಿಷ್ಪತ್ತಿಯೆಂಬ ಹಣ್ಣಾಯಿತ್ತು!!!
ನಿಷ್ಪತ್ತಿಯೆಂಬ ಹಣ್ಣು
ತೊಟ್ಟುಬಿಟ್ಟು ಕಳಚಿಬೀಳುವಲ್ಲಿ
ಕೂಡಲಸಂಗಮದೇವನು
ತನಗೆ ಬೇಕೆಂದೆತ್ತಿಕೊಂಡನು.

೩೦೯.
ಸ್ವಾಮಿ ನೀನು, ಶಾಶ್ವತ ನೀನು.
ಎತ್ತಿದೆ ಬಿರುದ ಜಗವೆಲ್ಲರಿಯಲು.
ಮಹಾದೇವ, ಮಹಾದೇವ!
ಇಲ್ಲಿಂದ ಮೇಲೆ ಶಬ್ದವಿಲ್ಲ!
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;
ಕೂಡಲಸಂಗಮದೇವ.

೩೧೦.
ಶ್ರುತಿತತಿಶಿರದ ಮೇಲೆ
ಅತ್ಯತಿಷ್ಠದ್ದಶಾಂಗುಲನ ನಾನೇನೆಂಬೆನಯ್ಯ
ಘನಕ್ಕೆ ಘನಮಹಿಮನ
ಮನಕ್ಕಗೋಚರನ !?
ಅಣೋರಣೀಯಾನ್
ಮಹತೋ ಮಹೀಯಾನ್
ಮಹಾದಾನಿ ಕೂಡಲಸಂಗಮದೇವ.

೩೧೧.
ಸಕಲ-ನಿಷ್ಕಲವ ಕೂಡಿಕೊಂಡಿಪ್ಪೆಯಾಗಿ
ಸಕಲ ನೀನೆ, ನಿಷ್ಕಲ ನೀನೇ ಕಂಡಯ್ಯ!
ವಿಶ್ವತಶ್ಚಕ್ಷು ನೀನೇ ದೇವ!
ವಿಶ್ವತೋಬಾಹು ನೀನೇ ದೇವ
ವಿಶ್ವತೋಮುಖ ನೀನೇ ದೇವ!
ಕೂಡಲಸಂಗಮದೇವ.

೩೧೨.
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ!
ಸಕಲ ವಿಸ್ತಾರದ ರೂಹು ನೀನೇ ದೇವ.
ವಿಶ್ವತಶ್ಚಕ್ಷು ನೀನೇ ದೇವ,
ವಿಶ್ವತೋಮುಖ ನೀನೇ ದೇವ.
ವಿಶ್ವತೋಬಾಹು ನೀನೇ ದೇವ.
ವಿಶ್ವತೋಪಾದ ನೀನೇ ದೇವ.
ಕೂಡಲಸಂಗಮದೇವ.

೩೧೩.
ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳುತಂಡಗಳು
ಓದಿನೋಡಿ
"ಇವನಜ, ಇವ ಹರಿ, ಇವ ಸುರಪತಿ
ಇವ ಧರಣೀಂದ್ರ, ಇವನಂತಕ"ನೆಂದು
ಹರುಷದಿಂದ ಸರಸವಾಡುವುದ ಹರ ನೋಡಿ
ಮುಗುಳುನಗೆಯ ನಗುತ್ತಿದ್ದನು!
ಕೂಡಲಸಂಗಮದೇವ.

೩೧೪.
ಅದುರಿತು ಪಾದಘಾತದಿಂದ ಧರೆ!
ಬಿದಿರಿದವು ಮಕುಟ ತಾಗಿ ತಾರಕಿಗಳು
ಉದುರಿದವು ಕೈತಾಗಿ ಲೋಕಂಗಳೆಲ್ಲ!
"ಮಹೀ ಪಾದಾಘಾತಾದ್ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ಭುಜಪರಿಘರುಗ್ಣಗ್ರಹಗಣಂ!
ಮುಹರ್ದ್ಯೌರ್ಧ್ವಸ್ತಾತ್ಯಂತ್ಯನಿಭೃತಜಟಾತಾಟಿತತಟಾ
ಜಗದ್ರಕ್ಷಾಯೈ ತ್ವಂ ನನು ವಹಸಿ ಭೌಮಾಂ ಚ ವಿಭುತಾಂ"
ನಮ್ಮ ಕೂಡಲಸಂಗಮದೇವ
ನಿಂದು ನಾಂಟ್ಯವನಾಡೆ!

೩೧೫.
ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ.
ದೇವನೊಬ್ಬನೇ ಕಾಣಿರೋ.
ಇಬ್ಬರೆಂಬುದು ಹುಸಿ ನೋಡಾ.
ಕೂಡಲಸಂಗಮನಲ್ಲದಿಲ್ಲೆಂದಿತ್ತು ವೇದ.

೩೧೬.
ಬಿದಿರೆಲೆಯ ಮೆಲಿದಂತಲ್ಲದೆ,
ರಸ ಪಡೆಯಲು ಬಾರದು.
ನೀರ ಕಡೆದರೆ, ಕಡೆದಂತಲ್ಲದೆ,
ಬೆಣ್ಣೆಯ ಪಡೆಯಲು ಬಾರದು.
ಮಳಲ ಹೊಸೆದರೆ, ಹೊಸೆದಂತಲ್ಲದೆ,
ಸರವಿಯ ಪಡೆಯಲು ಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯ ದೈವಕ್ಕೆರಗಿದರೆ,
ಪೊಳ್ಳ ಕುಟ್ಟಿ ಕೈ ಪೋಟು ಹೋದಂತಾಯಿತ್ತಯ್ಯ!

೩೧೭.
ಆಗಳೂ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು,
ಹೋಗೆಂದರೆ ಹೋಗವು,
ನಾಯಿಂದ ಕರಕಷ್ಟ ಕೆಲವು ದೈವಂಗಳು!
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವ.

೩೧೮.
ಹಾಳುಮೊರಡಿಗಳಲ್ಲಿ, ಊರ ದಾರಿಗಳಲ್ಲಿ;
ಕೆರೆ-ಭಾವಿ-ಹೂಗಿಡಂ-ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ,
ಚೌಪಥ-ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ
ಮನೆಯ ಮಾಡಿ,
ಕರೆವೆಮ್ಮೆ, ಹಸುಗೂಸು, ಬಸುರಿ, ಬಾಣತಿ, ಕುಮಾರಿ
ಕೊಡುಗೂಸೆಂಬರ ಹಿಡಿದುಂಬ, ತಿರಿದುಂಬ
ಮಾರಯ್ಯ, ಬೀರಯ್ಯ,
ಖೇಚರ ಗಾವಿಲ, ಅಂತರಬೆಂತರ,
ಕಾಳಯ್ಯ, ಮಾರಯ್ಯ, ಮಾಳಯ್ಯ, ಕೇತಯ್ಯಗಳೆಂಬ
ನೂರು ಮಡಕೆಗೆ ನಮ್ಮ ಕೂಡಲಸಂಗಮದೇವ
ಶರಣೆಂಬುದೊಂದು ದಡಿ ಸಾಲದೆ ?

೩೧೯.
ಅರಗು ತಿಂದರೆ ಕರಗುವ ದೈವವ,
ಉರಿಯ ಕಂಡರೆ ಮುರುಟುವ ದೈವವ,
ಎಂತು ಸರಿಯೆಂಬೆನಯ್ಯ!
ಅವಸರ ಬಂದರೆ ಮಾರುವ
ದೈವವನೆಂತು ಸರಿಯೆಂಬೆನಯ್ಯ!
ಅಂಜಿಕೆಯಾದರೆ ಹೂಳುವ
ದೈವವನೆಂತು ಸರಿಯೆಂಬೆನಯ್ಯ!
ಸಹಜಭಾವ ನಿಜೈಕ್ಯ
ಕೂಡಲಸಂಗಮದೇವನೊಬ್ಬನೇ ದೇವ.

೩೨೦.
ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು.
ಸಾಲಬಟ್ಟರೆ ಮಾರಿಕೊಂಬರಯ್ಯ!
ಸಾಲಬಟ್ಟರೆ ಅವನೊತ್ತೆಯನಿಟ್ಟು ಕೊಂಡುಂಬರಯ್ಯ!
ಮಾರುವೋಗನೊತ್ತೆವೋಗ
ನಮ್ಮ ಕೂಡಲಸಂಗಮದೇವ.

೩೨೧.
ಮೊರನ ಗೋಟಿಗೆ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿ ಸತ್ತು ಕಾವುದೆ ಹರ ಮುಳಿದವರ ?
ಕುರಿ ಬೇಡ, ಮರಿ ಬೇಡ
ಬರಿಯ ಪತ್ರೆಯ ತಂದು
ಮರೆಯದೇ ಪೂಜಿಸು ನಮ್ಮ ಕೂಡಲಸಂಗಮದೇವನ.

೩೨೨.
ಮಡಕೆ ದೈವ, ಮೊರ ದೈವ,
ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲ ನಾರಿ ದೈವ--ಕಾಣಿರೊ!
ಕೊಳಗ ದೈವ, ಗಿಣ್ಣಿಲು ದೈವ--ಕಾಣಿರೊ!
ದೈವ ದೈವವೆಂದು ಕಾಲಿಡಲಿಂಬಿಲ್ಲ!
ದೇವನೊಬ್ಬನೆ ಕೂಡಲಸಂಗಮದೇವ.

೩೨೩.
ಋಣ ತಪ್ಪಿದ ಹೆಂಡಿರಲ್ಲಿ,
ಗುಣ ತಪ್ಪಿದ ನಂಟರಲ್ಲಿ,
ಜೀವವಿಲ್ಲದ ದೇಹದಲ್ಲಿ ಫಲವೇನೋ ?
ಆಳ್ದನೊಲ್ಲದಾಳಿನಲ್ಲಿ,
ಸಿರಿತೊಲಗಿದರಸಿನಲ್ಲಿ
ವರವಿಲ್ಲದ ದೈವದಲ್ಲಿ ಫಲವೇನೋ ?
ಕಳಿದ ಹೂವಿನಲ್ಲಿ ಕಂಪನು,
ಉಳಿದ ಸೊಳೆಯಲ್ಲಿ ಪೆಂಪನು,
ಕೊಳೆಚೆನೀರಿನಲ್ಲಿ ಗುಣ್ಪನರಸುವಿರಿ!
ಮರುಳೆ, ವರಗುರು ವಿಶ್ವಕ್ಕೆಲ್ಲ
ಗಿರಿಜಾಮನೋವಲ್ಲಭ ಪರಮ ಕಾರುಣಿಕ
ನಮ್ಮ ಕೂಡಲಸಂಗಮದೇವ.

೩೨೪.
ಗುಡಿಯೊಳಗಿದ್ದು ಗುಡಿಯ ನೇಣ ಕೊಯ್ದರೆ
ಗುಡಿಯ ದಡಿ ಬಿದ್ದು ಹಲ್ಲು ಹೋಹುದು ನೋಡಾ!
ಪೊಡವಿಗೀಶ್ವರನ ಗರ್ಭವಾಸದೊಳಗಿದ್ದು
ನುಡಿವರು ಮತ್ತೊಂದು ದೈವ ಉಂಟೆಂದು!
ತುಡುಗುಣಿ ನಾಯ ಹಿಡಿತಂದು ಸಾಕಿದರೆ
ತನ್ನೊಡಯಂಗೆ ಬೊಗಳುವಂತೆ ಕಾಣಾ
ಕೂಡಲಸಂಗಮದೇವ.

೩೨೫.
ಮಾತಿನ ಮಾತಿಂಗೆ ನಿನ್ನ ಕೊಂದೆಹರೆಂದು
ಅಳು ಕಂಡಾ! ಎಲೆ ಹೋತೇ,
ವೇದವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ಶಾಸ್ತ್ರವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ನೀನತ್ತುದಕೆ ತಕ್ಕುದ ಮಾಡುವ ಕೂಡಲಸಂಗಮದೇವ.

೩೨೬.
ಹೊಲೆಯೊಳಗೆ ಹುಟ್ಟಿ ಕುಲವನರಸುವೆಯೆಲವೋ
ಮಾತಂಗಿಯ ಮಗ ನೀನು!
ಸತ್ತುದನೆಳೆವವನೆತ್ತಣ ಹೊಲೆಯ ?
ಹೊತ್ತು ತಂದು ನೀವು ಕೊಲುವಿರಿ!
ಶಾಸ್ತ್ರವೆಂಬುದು ಹೋತಿಂಗೆ ಮಾರಿ.
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು, ಶರಣಾಸನ್ನಹಿತರು,
ಅನುಪಮ ಚರಿತ್ರರು,
ಅವರಿಗೆ ತೋರಲು ಪ್ರತಿಯಿಲ್ಲವೋ.

೩೨೭.
ಇಟ್ಟಯ ಹಣ್ಣ ನರಿ ತಿಂದು
ಸೃಷ್ಟಿ ತಿರುಗಿತೆಂಬಂತೆ,
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದರೆ
ಜಗಕ್ಕೆ ಯಿರುಳಪ್ಪುದೆ ಮರುಳೆ ?
ಹೋಮದ ನೆವದಿಂದ ಹೋತನ ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವುದೇನು
ಕೂಡಲಸಂಗಮದೇವ.

೩೨೮.
ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ.

೩೨೯.
ಕಣ್ಣಮುಚ್ಚಿ ಕನ್ನಡಿಯ ತೋರುವಂತೆ!
ಇರುಳು ಹಗಲಿನ ನಿದ್ರೆ ಸಾಲದೆ ?
ಬೆರಳನೆಣಿಸಿ ಪರಮಾರ್ಥವ ಹಡೆವುದು
ಚೋದ್ಯವಲ್ಲವೆ ಹೇಳಾ ?
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ ಕೂಡಲಸಂಗಮದೇವ.

೩೩೦.
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು.
ನಿಮಗೆರಗದ ಕಾರಣ ಕೊರಳಲ್ಲಿ ನೇಣು.
ಹಿಂಡಲೇಕೋ, ತೊಳೆಯಲೇಕೊ ?
ಮುಳುಮುಳುಗಿ ಮೂಗ ಹಿಡಿಯಲೇಕೋ ?
ಕೂಡಲಸಂಗನ ಶರಣರಲ್ಲಿ
ಡೋಹರಕಕ್ಕಯ್ಯನಾವ ತೊರೆಯಲ್ಲಿ ಮಿಂದ ?

೩೩೧.
ವ್ಯಾಸ ಬೋಯಿತಿಯ ಮಗ.
ಮಾರ್ಕಂಡೇಯ ಮಾತಂಗಿಯ ಮಗ.
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿ ಭೋ!
ಕುಲದಿಂದ ಮುನ್ನೇನಾದಿರಿ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ.
ದೂರ್ವಾಸ ಮಚ್ಚಿಗ.
ಕಶ್ಯಪ ಕಮ್ಮಾರ.
ಕೌಂಡಿನ್ಯನೆಂಬ ಋಷಿ
ಮೂರುಲೋಕವರಿಯೆ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು-
"ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ!

೩೩೨.
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲಬಿಂದುವಿನ ವ್ಯವಹಾರವೊಂದೇ.
ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ.
ಏನನೋದಿ ಏನ ಕೇಳಿ ಏನು ಫಲ ?!
ಕುಲಜನೆಂಬುದಕ್ಕೆ ಆವುದು ದೃಷ್ಟ ?
"ಸಪ್ತಧಾತುಸಮಂ ಪಿಂಡಂ
ಸಮಯೋನಿಸಮುದ್ಭವಂ |
ಆತ್ಮಾಜೀವಸ್ಸಮಸ್ತಸ್ಮಾತ್
ವರ್ಣಾನಾಂ ಕಿಂ ಪ್ರಯೋಜನಂ ?" ||
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾರಣ, ಕೂಡಲಸಂಗಮದೇವ,
ಲಿಂಗಸ್ಥಲವನರಿದವನೇ ಕುಲಜನು!

೩೩೩.
ಕೊಲುವವನೇ ಮಾದಿಗ!
ಹೊಲಸ ತಿಂಬವನೇ ಹೊಲೆಯ!
ಕುಲವೇನೋ ? ಆವದಿರ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು!

೩೩೪.
ಹೊನ್ನ ನೇಗಿಲಲುತ್ತು
ಎಕ್ಕೆಯ ಬೀಜವ ಬಿತ್ತುವರೆ ?
ಕರ್ಪೂರದ ಮರನ ಕಡಿದು
ಕಳ್ಳಿಗೆ ಬೇಲಿಯನಿಕ್ಕುವರೆ ?
ಶ್ರೀಗಂಧದ ಮರನ ಕಡಿದು
ಬೇವಿಂಗೆ ಅಡೆಯನಿಕ್ಕುವರೆ ?
ನಮ್ಮ ಕೂಡಲಸಂಗನ
ಶರಣರಿಗಲ್ಲದೆ ಬೇರೆ ಇಚ್ಛಾಭೋಜನವಿಕ್ಕಿದರೆ
ಕಿಚ್ಚಿನೊಳಗುಚ್ಚೆಯ ಹೊಯ್ದು
ಹವಿಯ ಬೇಳ್ದಂತಾಯಿತ್ತು.

೩೩೫.
ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು
ತೆರನನರಿಯದೇ ತನಿರಸದ,
ಹೊರಗಣೆಲೆಯನೇ ಮೇದುವು!
ನಿಮ್ಮನರಿವ ಮದಕರಿಯಲ್ಲದೆ
ಕುರಿಯೇನ ಬಲ್ಲುದೋ ಕೂಡಲಸಂಗಮದೇವ ?

೩೩೬.
ದೇವ, ನಿಮ್ಮ ಪೂಜಿಸಿ
ಚೆನ್ನನ ಕುಲ ಚೆನ್ನಾಯಿತ್ತು!
ದೇವ, ನಿಮ್ಮ ಪೂಜಿಸಿ
ದಾಸನ ಕುಲ ದೇಸಿವಡೆಯಿತ್ತು!
ದೇವ, ನಿಮ್ಮಡಿಗೆರಗಿ
ಮಡಿವಾಳ ಮಾಚಯ್ಯ ನಿಮ್ಮಡಿಯಾದ!
ನೀನೊಲಿದ ಕುಲಕ್ಕೆ
ನೀನೊಲಿದ ಹೊಲೆಗೆ ಮೇರೆಯುಂಟೇ, ದೇವ ?
ಶ್ವಪಚೋಪಿ ಮುನಿಶ್ರೇಷ್ಠಃ
ಯಸ್ತು ಲಿಂಗಾರ್ಚನೇ ರತಃ |
ಲಿಂಗಾರ್ಚನವಿಹೀನೋಪಿ
ಬ್ರಾಹ್ಮಣಃ ಶ್ವಪಚಾಧಮಃ ||
ಎಂದುದಾಗಿ ಜಾತಿ-ವಿಜಾತಿಯಾದರೇನು
ಅಜಾತಂಗೆ ಶರಣೆಂದೆನ್ನದವನು ?
ಆತನೇ ಹೊಲೆಯ ಕೂಡಲಸಂಗಮದೇವ.

೩೩೭.
ಭಕ್ತಿಹೀನನ ದಾಸೋಹವ
ಸದ್ಭಕ್ತರು ಸವಿಯರು!
ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ
ಕೋಗಿಲೆಗೆ ಮೆಲಲಾಗದು!
ಲಿಂಗಸಂಬಂಧವಿಲ್ಲದವರ ನುಡಿ
ಕೂಡಲಸಂಗನ ಶರಣರಿಗೆ ಸಮನಿಸದು.

೩೩೮.
ಬಂದು ಬಲ್ಲಹ ಬಿಡಲು
ಹೊಲಗೇರಿಯೆಂಬ ಹೆಸರೊಳವೇ ಅಯ್ಯ!
ಲಿಂಗವಿದ್ದವರ ಮನೆ
ಕೈಲಾಸವೆಂದು ನಂಬಬೇಕು!
ಇದಕ್ಕೆ ಪ್ರಮಾಣ:-
ಚಂಡಾಲವಾಟಿಕಾಯಾಂ ವಾ
ಶಿವಭಕ್ತಃಸ್ಸ್ಥಿತೋ ಯದಿ |
ತತ್ ಶ್ರೇಣಿಶ್ಯಿವಲೋಕಸ್ಯಾತ್
ತದ್ ಗೃಹಂ ಶಿವಮಂದಿರಂ ||
ಲೋಕದ ಡಂಭಕರ ಮಾತು ಬೇಡ.
ಕೂಡಲಸಂಗನಿದ್ದುದೇ ಕೈಲಾಸ!

೩೩೯.
ದೇವನೊಬ್ಬ ನಾಮ ಹಲವು.
ಪರಮ ಪತಿವ್ರತೆಗೆ ಗಂಡನೊಬ್ಬ.
ಮತ್ತೊಂದಕ್ಕೆರಗಿದರೆ
ಕಿವಿ ಮೂಗ ಕೊಯ್ವನು.
ಹಲವು ದೈವದ ಎಂಜಲ
ತಿಂಬವರನೇನೆಂಬೆ ಕೂಡಲಸಂಗಮದೇವ.

೩೪೦.
ಎಲವೋ! ಎಲವೋ!
ಪಾಪಕರ್ಮವ ಮಾಡಿದವನೇ
ಎಲವೊ! ಎಲವೊ!
ಬ್ರಹ್ಮೇತಿಯ ಮಾಡಿದವನೇ
ಒಮ್ಮೆ ಶರಣೆನ್ನೆಲವೋ!
ಒಮ್ಮೆ ಶರಣೆಂದರೆ
ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ
ಹೊನ್ನಪರ್ವತಂಗಳೆಯ್ದವು!
ಓರ್ವಂಗೆ ಶರಣೆನ್ನು ನಮ್ಮ ಕೂಡಲಸಂಗಮದೇವಂಗೆ!

೩೪೧.
ಅರಸು-ವಿಚಾರ, ಸಿರಿಯು-ಶೃಂಗಾರ
ಸ್ಥಿರವಲ್ಲ ಮಾನವ!
ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ!
ಒಬ್ಬ ಜಂಗಮನಭಿಮಾನದಿಂದ
ಚಾಳುಕ್ಯರಾಯನಾಳ್ವಿಕೆ ತೆಗೆಯಿತ್ತು
ಸಂದಿತ್ತು, ಕೂಡಲಸಂಗಮದೇವ,
ನಿನ್ನ ಕವಳಿಗೆಗೆ.

೩೪೨.
ಬೇವಿನ ಬೀಜವ ಬಿತ್ತಿ,
ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು,
ಜೇನುತುಪ್ಪವ ಹೊಯ್ದರೆ
ಸಿಹಿಯಾಗಬಲ್ಲುದೆ ಕಹಿಯಹುದಲ್ಲದೆ ?
ಶಿವಭಕ್ತರಲ್ಲದವರ ಕೂಡೆ
ನುಡಿಯಲಾಗದು ಕೂಡಲಸಂಗಮದೇವ.

೩೪೩.
ಮಾರಿ ಮಸಣಿ ಎಂಬವು ಬೇರಿಲ್ಲ ಕಾಣಿರೋ!
ಮಾರಿ ಎಂಬುದೇನು ?
ಕಂಗಳು ತಪ್ಪಿ ನೋಡಿದರೆ ಮಾರಿ!
ನಾಲಿಗೆ ತಪ್ಪಿ ನುಡಿದರೆ ಮಾರಿ!
ನಮ್ಮ ಕೂಡಲಸಂಗಯ್ಯನ ನೆನಹ ಮರೆದರೆ ಮಾರಿ!

೩೪೪.
ಆಯುಧವಿಕ್ಕಿದವಂಗೆ ವೀರದ ಮಾತೇಕೆ ?
ಲಿಂಗವು ಅಂತರಿಸಿದವಂಗೆ ಒಳುನುಡಿಯೇಕೆ ?
ಐದೆಯರ ಪೋಚಿ ಇಲ್ಲದವಳಿಗೆ
ಸೌಭಾಗ್ಯದ ಹೂವಿನ ಬಟ್ಟೇಕೆ ?
ಸತ್ಯನಲ್ಲದವಂಗೆ ನಿತ್ಯನೇಮವೇಕೆ ?
ಕರ್ತಾರ, ನಿನ್ನ ಒಲವಿಲ್ಲದವಂಗೆ
ಶಂಭುವಿನ ಬಂಧುಗಳೇಕೆ ?
ಕೂಡಲಸಂಗಮದೇವಯ್ಯ
ನೀವಿಲ್ಲದವಂಗೆ ಶಿವಾಚಾರದ ಮಾತೇಕೆ ?

೩೪೫.
ಸಿಂಗದ ನಡು ಮುರಿಯಲಾ ಸಿಂಗವೇಬಾತೆ!
ಸೊಂಡಿಲು ಮುರಿದರೆ ಆ ಗಜವೇಬಾತೆ!
ಸಂಗ್ರಾಮದಲ್ಲಿ ಧೀರನುಳಿಯೆ ಆ ಧೀರತ್ವವೇಬಾತೆ!
ಸಿಂಗಾರದ ಮೂಗು ಹೋದರಾ ಶೃಂಗಾರವೇಬಾತೆ!
ನಿಜತುಂಬಿದ ಭಕ್ತಿ ತುಳುಕಾಡದವರ ಸಂಗವೇಬಾತೆ!
ಕೂಡಲಸಂಗಮದೇವ.

೩೪೬.
ಗೀಜಗನ ಗೂಡು, ಕೋಡಗದಣಲ ಸಂಚ,
ಬಾದುಮನ ಮದುವೆ, ಬಾವಲನ ಬಿದ್ದಿನಂತೆ:
ಜೂಜುಗಾರನ ಮಾತು, ಬೀದಿಯ ಗುಂಡನ ಸೊಬಗು;
ಓಡಿನೊಳಗಗೆಯ ಹೊಯ್ದಂತೆ ಕಾಣಿರೇ;
ಶಿವನಾದಿಯಂತುವನರಿಯದವನ ಭಕ್ತಿ
ಸುಖಶೋಧನೆಗೆ ಮದ್ದ ಕೊಂಡಂತೆ
ಕೂಡಲಸಂಗಮದೇವ.

೩೪೭.
ತೊತ್ತಿನ ಕೊರಳಲ್ಲಿ
ಹೊಂಬಿತ್ತಾಳಿಯ ಸಿಂಗಾರವ ಮಾಡಿದಂತೆ!
ಕುಚಿತ್ತರ ಸಂಗ ಸುಸಂಗಿಗೆ ಸಂಗವಲ್ಲ.
ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ ?
ಕೂಡಲಸಂಗಮದೇವ.

೩೪೮.
ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!

೩೪೯.
ಇಂದ್ರಿಯನಿಗ್ರಹವ ಮಾಡಿದರೆ
ಹೊಂದುವವು ದೋಷಂಗಳು.
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೇ ಸಿರಿಯಾಳ-ಚೆಂಗಳೆಯರು ?
ಸತಿಪತಿರತಿಸುಖ ಭೋಗೋಪಭೋಗವಿಳಾಸವ
ಬಿಟ್ಟರೇ ಸಿಂಧುಬಲ್ಲಾಳನವರು ?
ನಿಮ್ಮ ಮುಟ್ಟಿ, ಪರಧನ ಪರಸತಿಯರಿಗೆಳಸಿದರೆ
ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ.

೩೫೦.
ನೋಡಲಾಗದು, ನುಡಿಸಲಾಗದು ಪರಸ್ತ್ರೀಯರ;
ಬೇಡ ಕಾಣಿರೋ!
ತಗರ ಬೆನ್ನಲಿ ಹರಿವ ಸೊಣಗನಂತೆ;
ಬೇಡ ಕಾಣಿರೋ!
ಒಂದಾಸೆಗೆ ಸಾಸಿರ ವರುಷ
ನರಕದಲದ್ದುವ ಕೂಡಲಸಂಗಮದೇವ.

೩೫೧.
ತೊರೆಯ ಮೀವ ಅಣ್ಣಗಳಿರಾ,
ತೊರೆಯ ಮೀವ ಸ್ವಾಮಿಗಳಿರಾ,
ತೊರೆಯಿಂ ಭೋ, ತೊರೆಯಿಂ ಭೋ!
ಪರನಾರಿಯ ಸಂಗವ ತೊರೆಯಿಂ ಭೋ!
ಪರಧನದಾಮಿಷವ ತೊರೆಯಿಂ ಭೋ!
ಇವ ತೊರೆಯದೇ, ಹೋಗಿ ತೊರೆಯ ಮಿಂದರೆ
ಬರುದೊರೆ ಹೋಹುದು ಕೂಡಲಸಂಗಮದೇವ.

೩೫೨.
ಹುತ್ತವ ಕಂಡಲ್ಲಿ ಹಾವಾಗಿ,
ನೀರ ಕಂಡಲ್ಲಿ ಹೊಳೆಯಾದವನ ಮೆಚ್ಚುವನೆ ?
ಬಾರದ ಭವಕ್ಕೆ ಬರಿಸುವನಲ್ಲದೆ ಮೆಚ್ಚುವನೆ ?
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ?
ಅಟಮಟದ ಭಕ್ತರ ಕಂಡರೆ
ಕೋಟಲೆಗೊಳಿಸುವನು ಕೂಡಲಸಂಗಯ್ಯನು.

೩೫೩.
ಕುಳ್ಳಿದ್ದು ಲಿಂಗವ ಪೂಜಿಸಿ
ಅಲ್ಲದಾಟವನಾಡುವರಯ್ಯ;
ಬೆಳ್ಳೆತ್ತಿನ ಮರೆಯಲ್ಲಿದ್ದು
ಹುಲ್ಲೆಗೆ ಅಂಬ ತೊಡುವಂತೆ!
ಕಳ್ಳ-ಹಾದರಿಗರ ಕೈಯಲು ಪೂಜೆಯ ಕೊಳ್ಳ
ನಮ್ಮ ಕೂಡಲಸಂಗಮದೇವ.

೩೫೪.
ತನುಶುಚಿಯಿಲ್ಲದವನ ದೇಹಾರವೇಕೆ ?
ದೇವರು ಕೊಡನೆಂಬ ಭ್ರಾಂತೇಕೆ ?
ಮನಕ್ಕೆ ಮನವೇ ಸಾಕ್ಷಿ ಸಾಲದೆ ಲಿಂಗ ತಂದೆ ?!
ಹೇಂಗೆ ಮನ ಹಾಂಗೆ ಘನ!
ತಪ್ಪದು ಕೂಡಲಸಂಗಮದೇವ.

೩೫೫.
ನೂರನೋದಿ ನೂರ ಕೇಳಿದರೇನು ?
ಆಶೆ ಹರಿಯದು, ರೋಷ ಬಿಡದು!
ಮಜ್ಜನಕ್ಕೆರೆದು ಫಲವೇನು ?
ಮಾತಿನಂತೆ ಮನವಿಲ್ಲದ
ಜಾತಿ-ಡೊಂಬರ ನೋಡಿ ನಗುವನಯ್ಯ
ಕೂಡಲಸಂಗಮದೇವರು.

೩೫೬.
ಗುರೂಪದೇಶ ಮಂತ್ರವೈದ್ಯ!
ಜಂಗಮೋಪದೇಶ ಶಸ್ತ್ರವೈದ್ಯ ನೋಡಾ!
ಭವರೋಗವ ಕಳೆವ ಪರಿಯ ನೋಡಾ!
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ!

೩೫೭.
ಶ್ವಪಚನಾದರೇನು ಲಿಂಗಭಕ್ತನೇ ಕುಲಜನು.
ನಂಬಿ ನಂಬದಿದ್ದರೆ, ಸಂದೇಹಿ ನೋಡಾ!
ಕಟ್ಟಿದರೇನು, ಮುಟ್ಟಿದರೇನು,
ಪೂಸಿದರೇನು ಮನಮುಟ್ಟದನ್ನಕ ?
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು
ಕೂಡಲಸಂಗಮದೇವನೊಲಿದವಂಗಲ್ಲದೆ.

೩೫೮.
ಅರಗಿನ ಪುತ್ಧಳಿಗೆ ಉರಿಯ ನಾಲಗೆ ಹೊಯ್ದು
ಮಾತಾಡುವ ಸರಸ ಬೇಡ!
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ
ಚಲ್ಲವಾಡಿದರೆ ಹಲ್ಲು ಹೋಹುದು!
ಕೂಡಲಸಂಗನ ಶರಣರೊಡನೆ ಸರಸವಾಡಿದರೆ
ಅದು ವಿರಸ ಕಾಣಿರಣ್ಣ.

೩೫೯.
ಹಾವಿನ ಹೆಡೆಗಳ ಕೊಂಡು
ಕೆನ್ನೆಯ ತುರಿಸಿಕೊಂಬಂತೆ,
ಉರಿವ ಕೊಳ್ಳಿಯ ಕೊಂಡು
ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು
ಒಲೆದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ!

೩೬೦.
ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡೆ
ಉರಿವುದು ಮಾಣ್ಬುದೇ ?
ಕಲ್ಲ ಗುಗ್ಗುರಿಯ ಮೆಲಿದರೆ
ಹಲ್ಲು ಹೋಹುದು ಮಾಣ್ಬುದೇ ?
ಶರಣರೊಡನೆ ಸರಸವಾಡಿದರೆ
ನರಕ ತಪ್ಪದು ಕಾಣಾ ಕೂಡಲಸಂಗಮದೇವ.

೩೬೧.
ಕೋಣನ ಹೇರಿಗೆ ಕುನ್ನಿ ಬಸುಗುತ್ತಬಡುವಂತೆ
ತಾವು ನಂಬರು, ನಂಬುವರನು ನಂಬಲೀಯರು!
ತಾವು ಮಾಡರು, ಮಾಡುವರನು ಮಾಡಲೀಯರು!
ಮಾಡುವ ಭಕ್ತರ ಕಂಡು ಸೈರಿಸಲಾರದವರ
ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ.

೩೬೨.
ಚೇಳಿಂಗೆ ಬಸುರಾಯಿತ್ತೆ ಕಡೆ!
ಬಾಳೆಗೆ ಫಲವಾಯಿತ್ತೆ ಕಡೆ ನೋಡಾ !
ರಣರಂಗದಲ್ಲಿ ಕಾದುವ ಓಲೆಯಕಾರಂಗೆ ಓಸರಿಸಿತ್ತೆ ಕಡೆ!
ಮಾಡುವ ಭಕ್ತಂಗೆ ಮನಹೀನವಾದರೆ
ಅದೇ ಕಡೆ ಕೂಡಲಸಂಗಮದೇವ.

೩೬೩.
ಹುಲಿಯ ಹಾಲು ಹುಲಿಗಲ್ಲದೆ
ಹೊಲದ ಹುಲ್ಲೆಗುಣಬಾರದು
ಕಲಿಯ ಕಾಲ ತೊಡರು ಛಲದಾಳಿಂಗಲ್ಲದೆ ಇಕ್ಕಬಾರದು.
ಅಳಿಮನದಾಸೆಯವರ ಮೂಗ ಹಲುದೋರ ಕೊಯ್ವ
ಕೂಡಲಸಂಗಮದೇವ.

೩೬೪.
ಅಲಗಲಗು ಮೋಹಿದಲ್ಲದೆ
ಕಲಿತನವ ಕಾಣಬಾರದು.
ನುಡಿವ ನುಡಿ ಜಾರಿದರೆ
ಮನಕ್ಕೆ ಮನ ನಾಚಬೇಕು.
ಶಬ್ದಗಟ್ಟಿಯತನದಲ್ಲಿ
ಎಂತಪ್ಪುದಯ್ಯ ಭಕ್ತಿ ?
ಪಾಪಿಯ ಕೂಸನೆತ್ತಿದಂತೆ-
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯ!

೩೬೫.
ಹರಬೀಜವಾದರೆ ಹಂದೆ ತಾನಪ್ಪನೇ ?
ಒರೆಯ ಬಿಚ್ಚಿ ಇರಿಯದವರ ಲೋಕ ಮೆಚ್ಚುವುದೆ ?
ಚಲ್ಲಣವುಟ್ಟು ಕೈಯ ಪಟ್ಟೆಹವಿಡಿದು
ಗರುಡಿಯ ಕಟ್ಟಿ ಶ್ರಮವ ಮಾಡುವ-
ಅಂತೆ ತನ್ನ ತಪ್ಪಿಸಿಕೊಂಡರೆ ಶಿವ ಮೆಚ್ಚುವನೆ ?
ಅರಿಯದವರಿಗೆ ಒಳ್ಳೆ ಹೆಡೆಯೆತ್ತಿ ಆಡುವಂತೆ
ಬೊಳ್ಳೆಗನ ಭಕ್ತಿ ಕೂಡಲಸಂಗಮದೇವ.

೩೬೬.
ಮೊನೆ ತಪ್ಪಿದ ಬಳಿಕ,
ಅಲಗೇನ ಮಾಡುವುದು ?
ವಿಷ ತಪ್ಪಿದ ಬಳಿಕ,
ಹಾವೇನ ಮಾಡುವುದು ?
ಭಾಷೆ ತಪ್ಪಿದ ಬಳಿಕ
ದೇವನೇ ಬಲ್ಲಿದ;
ಭಕ್ತನೇನ ಮಾಡುವನಯ್ಯ ?
ಭಾಷೆ ತಪ್ಪಿದ ಬಳಿಕ
ಪ್ರಾಣದಾಸೆಯನು ಹಾರಿದರೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವ.

೩೬೭.
ವೀರ, ವ್ರತಿ, ಭಕ್ತನೆಂದು ಹೊಗಳಿಕೊಂಬಿರಿ!
ಹೇಳಿರಯ್ಯ.
ವೀರನಾದರೆ ವೈರಿಗಳು ಮೆಚ್ಚಬೇಕು!
ವ್ರತಿಯಾದರೆ ಅಂಗನೆಯರು ಮೆಚ್ಚಬೇಕು!
ಭಕ್ತನಾದರೆ ಜಂಗಮ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.

೩೬೮.
ಕಟ್ಟಿ ಬಿಡುವನೇ ಶರಣನು ?
ಬಿಟ್ಟು ಹಿಡಿವನೇ ಶರಣನು ?
ನಡೆದು ತಪ್ಪುವನೇ ಶರಣನು ?
ನುಡಿದು ಹುಸಿವನೇ ಶರಣನು ?
ಸಜ್ಜನಿಕೆ ತಪ್ಪಿದರೆ
ಕೂಡಲಸಂಗಯ್ಯ ಮೂಗ ಹಲುದೋರ ಕೊಯ್ವ!

೩೬೯.
ಒಡನೆ ಹುಟ್ಟಿದುದಲ್ಲ;
ಒಡನೆ ಬೆಳೆದುದಲ್ಲ;
ಎಡೆಯಲಾದೊಂದುಡಿಗೆಯನುಟ್ಟು ಸಡಿಲಿದರೆ
ಲಜ್ಜೆ-ನಾಚಿಕೆಯಾಯಿತ್ತೆಂಬ ನುಡಿ ದಿಟವಾಯಿತ್ತು ಲೌಕಿಕದಲ್ಲಿ
ಪಡೆದ ಗುರುಕರುಣದೊಡನೆ ಹುಟ್ಟಿದ
ನೇಮವನು ಬಿಡದಿರೆಲವೋ!
ಬಿಟ್ಟರೆ ಕಷ್ಟ!
ಕೂಡಲಸಂಗಮದೇವನು
ಅಡಸಿ ಕೆಡಹುವ ನಾಯಕನರಕದಲ್ಲಿ.

೩೭೦.
ಛಲಬೇಕು ಶರಣಂಗೆ ಪರಧನವನೊಲ್ಲೆಂಬ!
ಛಲಬೇಕು ಶರಣಂಗೆ ಪರಸತಿಯನೊಲ್ಲೆಂಬ!
ಛಲಬೇಕು ಶರಣಂಗೆ ಪರದೈವವನೊಲ್ಲೆಂಬ
ಛಲಬೇಕು ಶರಣಂಗೆ ಲಿಂಗಜಂಗಮವೊಂದೆಂಬ!
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ!
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

೩೭೧.
ಜಂಬೂದ್ವೀಪನವಖಂಡಪೃಥ್ವಿಯೊಳಗೆ
ಕೇಳಿರಯ್ಯ ಎರಡಾಳಿನ ಭಾಷೆಯ!
ಕೊಲುವೆನೆಂಬ ಭಾಷೆ ದೇವನದು,
ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ.

೩೭೨.
ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ
ನುಗ್ಗುಮಾಡುವ, ನುಸಿಯ ಮಾಡುವ!
ಮಣ್ಣುಮಾಡುವ, ಮಸಿಯ ಮಾಡುವ!
ಕೂಡಲಸಂಗಮದೇವರ ನೆರೆನಂಬಿದನಾದರೆ
ಕಡೆಗೆ ತನ್ನಂತೆ ಮಾಡುವ.

೩೭೩.
ಅರೆವನಯ್ಯ ಸಣ್ಣವಹನ್ನಕ
ಒರೆವನಯ್ಯ ಬಣ್ಣಗಾಬನ್ನಕ
ಅರೆದರೆ ಸುಣ್ಣವಾಗಿ,
ಒರೆದರೆ ಬಣ್ಣವಾದರೆ
ಕೂಡಲಸಂಗಮದೇವನೊಲಿದು ಸಲಹುವನು.

೩೭೪.
ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ!
ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ!
ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು!
ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು!

೩೭೫.
ಅಂಜಿದರಾಗದು, ಅಳುಕಿದರಾಗದು!
ವಜ್ರಪಂಜರದೊಳಗಿದ್ದರಾಗದು!
ತಪ್ಪದೆಲವೋ ಲಲಾಟಲಿಖಿತ!
ಕಕ್ಕುಲತೆಬಟ್ಟರಾಗದು ನೋಡಾ!
ಧೃತಿಗೆಟ್ಟು ಮನ ಧಾತುಗೆಟ್ಟರೆ
ಅಪ್ಪುದು ತಪ್ಪದು ಕೂಡಲಸಂಗಮದೇವ.

೩೭೬.
ಆಯುಷ್ಯ ತೀರಿದಲ್ಲದೆ ಮರಣವಿಲ್ಲ.
ಭಾಷೆ ತೀರಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲದೇಕೋ ಲೋಕವಿಗರ್ಹಣೆಗೆ ?
ಅಂಜಲದೇಕೋ ಕೂಡಲಸಂಗಮದೇವ ನಿಮ್ಮಾಳಾಗಿ ?

೩೭೭.
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ;
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ
ನಚ್ಚು ಮಚ್ಚು ಪಾರವೈದುವುದೆ ?
ಶಿರ ಹರಿದರೇನು ? ಕರುಳು ಕುಪ್ಪಳಿಸಿದರೇನು ?
ಇಂತಪ್ಪ ಸಮಸ್ತ ವಸ್ತುವೆಲ್ಲ ಹೋದರೇನು ?
ಚಿತ್ತ-ಮನ-ಬುದ್ಧಿಯೊಂದಾದ ಮಚ್ಚು
ಬಿಚ್ಚಿ ಬೇರಾಗದಿದ್ದರೆ
ಮೆಚ್ಚುವ ನಮ್ಮ ಕೂಡಲಸಂಗಮದೇವ.

೩೭೮.
ಎನಿಸೆನಿಸೆಂದಡೆಯೂ ನಾ ಧೃತಿಗೆಡೆನಯ್ಯ ?
ಎಲುದೋರಿದಡೆಯೂ, ನರ ಹರಿದಡೆಯೂ,
ಕರಳು ಕುಪ್ಪಳಿಸಿದಡೆಯೂ ನಾ ಧೃತಿಗೆಡೆನಯ್ಯ ?
ಸಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆಯೂ
ನಾಲಗೆ ಕೂಡಲಸಂಗ ಶರಣೆನುತಿಪ್ಪುದಯ್ಯ ?

೩೭೯.
ಒಣಗಿಸಿಯೆನ್ನ ಘಣಘಣಲನೆ ಮಾಡಿದಡೆಯೂ
ಹರಣವುಳ್ಳನ್ನಕ ನಿಮ್ಮ ಚರಣವ ನೆನೆವುದ ಮಾಣೆ, ಮಾಣೆ!

ಶರಣೆಂಬುದ ಮಾಣೆ, ಮಾಣೆ!
ಕೂಡಲಸಂಗಮದೇವಯ್ಯ
ಎನ್ನ ಹೆಣನ ಮೇಲೆ ಕಂಚಿಟ್ಟುಂಡೊಡೆಯು ಮಾಣೆ, ಮಾಣೆ!

೩೮೦.
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ
ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ!
ಹುಸಿಯಾದಡ ದೇವಾ, ತಲೆದಂಡ! ತಲೆದಂಡ!
ಕೂಡಲಸಂಗಮದೇವ ನೀವಲ್ಲದೆ ಅನ್ಯವ ನೆನೆದಡೆ
ತಲೆದಂಡ, ತಲೆದಂಡ!

೩೮೧.
ಸುಖ ಬಂದರೆ ಪುಣ್ಯದ ಫಲವೆನ್ನೆನು,
ದುಃಖ ಬಂದರೆ ಪಾಪದ ಫಲವೆನ್ನೆನು,
ನೀ ಮಾಡಿದಡಾಯಿತ್ತೆನ್ನೆನು,
ಕರ್ಮಕ್ಕೆ ಕರ್ತೃವೇ ಕಡೆಯೆನ್ನೆನು,
ಉದಾಸೀನವಿಡಿದು ಶರಣೆನ್ನೆನು ಕೂಡಲಸಂಗಮದೇವ.
ನೀ ಮಾಡಿದುಪದೇಶವು ಎನಗೀ ಪರಿಯಲಿ!
ಸಂಸಾರವ ಸವೆಯ ಬಳಸುವೆನು.

೩೮೨.
ಕಾಯದ ಕಳವಳಕಂಜಿ ಕಾಯಯ್ಯ ಎನ್ನೆನು.
ಜೀವನೋಪಾಯಕಂಜಿ ಈಯಯ್ಯ ಎನ್ನೆನು.
'ಯದ್ಭಾವಂ ತದ್ಭವತಿ'
ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯ!
ಆನು ನಿಮ್ಮ ಹಾರೆನು, ಮಾನವರ ಬೇಡೆನು;
ಆಣೆ, ನಿಮ್ಮಾಣೆ ಕೂಡಲಸಂಗಮದೇವ.

೩೮೩.
ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು ? ಇದಕಾರಳುಕುವರು-
'ಜಾತಸ್ಯ ಮರಣಂ ಧ್ರುವಂ' ಎಂದುದಾಗಿ ?
ನಮ್ಮ ಕೂಡಲಸಂಗಮದೇವ ಬರೆದ
ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ ?

೩೮೪.
ಕಳ ಹೋದರೆ ಕನ್ನದುಳಿಯ ಹಿಡಿವೆ.
ಬಂದಿವಿಡಿದರೆ ನಿಮ್ಮಿಂದ ಮುಂದೆ ನಡೆವೆ,
ಮನಭೀತಿ ಮನಶಂಕೆಗೊಂಡೆನಾದರೆ,
ನಿಮ್ಮಾಣೆ ನಿಮ್ಮ ಪುರಾತರಾಣೆ.
ಆಳ್ದರ ನಡೆ ಸದಾಚಾರವೆನ್ನದಿದ್ದರೆ
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ
ಕೂಡಲಸಂಗಮದೇವ.

೩೮೫.
ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯ!
ಹಾಳುಗೆಟ್ಟೋಡುವಾಳು ನಾನಲ್ಲಯ್ಯ,
ಕೇಳು, ಕೂಡಲಸಂಗಮದೇವ,
ಮರಣವೇ ಮಹಾನವಮಿ.

೩೮೬.
ಎನಗೆ ಜನನವಾಯಿತ್ತೆಂಬರು,
ಎನಗೆ ಜನನವಿಲ್ಲಯ್ಯ!
ಎನಗೆ ಮರಣವಾಯಿತ್ತೆಂಬರು,
ಎನಗೆ ಮರಣವಿಲ್ಲಯ್ಯ!
ಜನನವಾದರೆ ನಿಮ್ಮ ಪಾದೋದಕಪ್ರಸಾದವ ಕೊಂಬೆ.
ಮರಣವಾದರೆ ನಿಮ್ಮ ಶ್ರೀ ಚರಣವನೆಯ್ದುವೆ.
ಬಾವನ್ನದ ವೃಕ್ಷ ಊರೊಳಗಿದ್ದರೇನು ?
ಅಡವಿಯೊಳಗಿದ್ದರೇನು ?
ಪರಿಮಳವೊಂದೆ!
ಕೂಡಲಸಂಗಮದೇವ.

೩೮೭.
ಒಡೆಯರುಳ್ಳಾವಿಂಗೆ ಕೇಡಿಲ್ಲ ಕಾಣಿರೋ
ಊರೆನ್ನದೆ ಅಡವಿಯೆನ್ನದೆ ಆಳನರಸಿ ಬಹ ಆಳ್ದರುಂಟೆ!
ಜೋಳವಾಳಿಂಗೆ ಬಿಜ್ಜಳಂಗೆ ಆಳಾದರೇನು ?
ವೇಳೆವಾಳಿಂಗೆ ಕೊಡಿಕೊಂಡಿಪ್ಪ ಕೂಡಲಸಂಗಮದೇವ!

೩೮೮.
ಕರ್ಮವೆಂಬ ಅಂಕದೊಡನೆ ತೊಡರಿದೆ
ಬಿನ್ನಪವ ಅವಧಾರು-ನಿಮ್ಮಾಳಿನ ಭಾಷೆಯ:
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋಸರಿಸಿದರೆ ನಿಮ್ಮಾಳಲ್ಲ!
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬಲಗಿನಿಂದಿರಿವೆ
ಕೂಡಲಸಂಗಮದೇವ.

೩೮೯.
ಎಲೆ ಗಂಡುಗೂಸೆ ನೀ ಕೇಳಾ!
ನಿನಗೊಬ್ಬಗೆಂದುಟ್ಟೆ ಗಂಡುಡುಗೆಯನು;
ಮತ್ತೊಮ್ಮೆಯಾನು ಗಂಡಪ್ಪೆನಯ್ಯ;
ಮತ್ತೊಮ್ಮೆಯಾನು ಹೆಣ್ಣಪ್ಪೆನಯ್ಯ!
ಕೂಡಲಸಂಗಮದೇವ,
ನಿಮಗೆ ವೀರನಪ್ಪೆ! ನಿಮ್ಮ ಶರಣರಿಗೆ ವಧುವಪ್ಪೆ!

೩೯೦.
ಹುಟ್ಟುತ್ತ ದ್ರವ್ಯವನರಿಯದವಂಗೆ
ಐಶ್ವರ್ಯವಂತ ಮಗನಾದರೆ
ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷಂಬಡಿಸುವಂತೆ;
ಕಾಳಗದ ಮುಖವಾವುದೆಂದರಿಯದ ಹಂದೆ-ನೃಪಂಗೆ
ಒಬ್ಬ ಕ್ಷತ್ರಿಯನಂತಹ ಕುಮಾರ ಹುಟ್ಟಿ
ಕಿಗ್ಗಡಲ ರಕ್ತದ ಹೊನಲಲ್ಲಿ ಕಡಿದು ಮುಳುಗಾಡುವ
ಕೊಳುಗುಳವ ಕಂಡು ಪರಿಣಾಮಿಸುವಂತೆ
ಆನು ಪರಿಣಾಮಿಸುವೆನಯ್ಯ, ಕೂಡಲಸಂಗಮದೇವ,
ನೀ ಬಂದೆನ್ನ ಬೇಡಿದರೆ.

೩೯೧.
ಒಡವೆ-ಭಂಡಾರ-ಕಡವರ-ದ್ರವ್ಯವ
ಬಡ್ಡಿಯ ವ್ಯವಹಾರಕ್ಕೆ ಕೊಟ್ಟು
ಮನೆಯ ಗೊಂಟಿನಲ್ಲಿ ಹೊಯ್ದುಕೊಂಡಿದ್ದೆನಾದರೆ
ಅದು ಎನ್ನರ್ಥವಲ್ಲ! ಅನರ್ಥವೆಂಬೆ!!
ಸಂಗಮ ದೇವ, ನೀ ಜಂಗಮರೂಪಾಗಿ ಬಂದು
ಆ ಧನವನು ನೀ ಬಲ್ಲಂತೆನ್ನ ಮುಂದೆ ಸೂರೆಗೊಳ್ಳುತ್ತಿರಲು
ನಾ ಬೇಕು-ಬೇಡೆಂದು ಮನದಲ್ಲಿ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ-
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆ ಚೆಲುವೆ
ಆಕೆಯನು, ಸಂಗಮದೇವ, ನೀ ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿದ್ದ ಸತಿಯೆಂದು ವಾಯಕ್ಕೆ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ ಮನದೊಡೆಯ, ನೀನೆ ಬಲ್ಲೆ!
ಪ್ರತ್ಯಕ್ಷವಾಗಿ ಸಿರಿಯಾಳ-ಚಂಗಳೆಯರ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ-
ಸಂಗಮ ದೇವ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಹನು
ನೀ ಜಂಗಮರೂಪಾಗಿ ಬಂದು ಅವನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ ಚಿನಿಖಂಡವ ಮಾಡಿ
ಬಾಣಸವ ಮಾಡುವಾಗಲು
ಎನ್ನುದರದಲ್ಲಿ ಬಂದ ಪುತ್ರನೆಂದು ವಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಇಂತೀ ತ್ರಿವಿಧವು ಹೊರಗಣವು-
ಎನ್ನ ನೋವಿನೊಳಗಲ್ಲ! ಎನ್ನ ಬೇನೆಯೊಳಗಲ್ಲ!
ಇನ್ನು ನಾನಿದ್ದಿಹೆ-
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ ನೀ ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು!
ಬಸಿವ ಶೂಲಪ್ರಾಪ್ತಿಯ ಮಾಡಿ ನೋಡು!
ಸೂಜಿಯ ಮೊನೆಯಂತಿದ್ದ ಶೂಲದ ಮೇಲಿಕ್ಕಿ ನೋಡು!
ನವಖಂಡವ ಮಾಡಿ ಕಡಿಕಡಿದು ನೋಡು!
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ
ನೋಡು!
ಎಂತೆನ್ನ ಭಂಗಬಡಿಸಿ ನೋಡಿದರೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದು ಬಿಡೆ.
ಪಾದತೀರ್ಥ ಪ್ರಸಾದವ ಕೊಂಬುದ ಬಿಡೆ.
ಇಂತೀ ತ್ರಿವಿಧಕ್ಕೆ ರೋಷವ ಮಾಡಿ ಬಿಟ್ಟೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಇನಿತರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗ ಕೊಯಿ
ಕೂಡಲಸಂಗಮದೇವ.

೩೯೨.
ಅರ್ಥವನರ್ಥವ ಮಾಡಿ ಕೋಳಾಹಳಂಗೈವುತ್ತಿರಲಿ;
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ!
ಮುಟ್ಟಿದ ಸ್ತ್ರೀಯ ಕಣ್ಣ ಮುಂದೆ ಅಭಿಮಾನಂಗೊಂಡು
ನೆರೆವುತ್ತಿರಲಿ.
ಇಂತೀ ತ್ರಿವಿಧವು ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ.
ಇಕ್ಕುವ ಶೂಲ ಪ್ರಾಪ್ತಿಸಲಿ
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ,
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ,
ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದರೆ
ನೀನಂದೇ ಮೂಗ ಕೊಯಿ ಕೂಡಲಸಂಗಮದೇವ.

೩೯೩.
ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ; ಬೇಡು ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ.
ಕೂಡಲ ಸಂಗಮ ದೇವ,
ನಿಮಗಿತ್ತು ಶುದ್ಧನಾಗಿಪ್ಪೆ ನಿಮ್ಮ ಪುರಾತರ ಮನೆಯಲ್ಲಿ.

೩೯೪.
ಓಡದಿರೋಡದಿರು ನಿನ್ನ ಬೇಡುವವ ನಾನಲ್ಲ!
ಶಿವನೇ, ನೋಡುವೆ ಕಣ್ಣ ತುಂಬ! ಆಡಿ-ಪಾಡಿ ನಲಿದಾಡುವೆ!
ಬೇಡೆನ್ನ ಕೂಡೆ ಮಾತನಾಡಲಾಗದೆ ?
ಕೂಡಲಸಂಗಮದೇವ, ನೀನಾಡಿಸುವ ಗೊಂಬೆ ನಾನು!

೩೯೫.
ನಾನು ಆರಂಬವ ಮಾಡುವೆನಯ್ಯ ಗುರುಪೂಜೆಗೆಂದು.
ನಾನು ಬೆವಹಾರವ ಮಾಡುವೆನಯ್ಯ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯ
ಜಂಗಮದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮಫಲಭೋಗವ ನೀ ಕೊಡುವೆಯೆಂಬುದ
ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯದ ನಿಮಗಲ್ಲದೆ
ಮತ್ತೊಂದು ಕ್ರೀಯ ಮಾಡೆನು.
ನಿಮ್ಮ ಸೊಮ್ಮ ನಿಮಗೆ ಸಲ್ಲಿಸುವೆನು
ನಿಮ್ಮಾಣೆ ಕೂಡಲಸಂಗಮದೇವ.

೩೯೬.
ಹೊತ್ತಾರೆಯೆದ್ದು ಕಣ್ಣ ಹೊಸೆವುತ್ತ
ಎನ್ನ ಒಡಲಿಂಗೆ, ಎನ್ನ ಒಡವೆಗೆ,
ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದರೆ
ಎನ್ನ ಮನಕ್ಕೆ ಮನವೇ ಸಾಕ್ಷಿ!
"ಆಶನೇ ಶಯನೇ ಯಾನೇ
ಸಂಪರ್ಕೇ ಸಹಭೋಜನೇ,
ಸಂಚರಂತಿ ಮಹಾಘೋರೇ
ನರಕೇ ಯಾವದಕ್ಷಯೇ"
ಎಂಬ ಶ್ರುತಿಯ ಬಸವಣ್ಣನೋದುವನು.
ಭವಿಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹೆನೆಂದು ನುಡಿವರಯ್ಯ ಪ್ರಮಥರು;
ಕೊಡುವೆನ್ನುತ್ತರವನವರಿಗೆ - ಕೊಡಲಮ್ಮೆ,
ಪ್ರತ್ಯುತ್ತರ ನಾಯಕನರಕವೆಂಬುದುಂಟಾಗಿ,
ಹೊಲೆಹೊಲೆಯರ ಮನೆಯ ಹೊಕ್ಕಾದರೆಯು,
ಸಲೆ ಕೈಕೂಲಿಯ ಮಾಡಿಯಾದರೆಯು,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ,
ಎನ್ನ ಒಡಲವಸರಕ್ಕೆ ಕುದಿದೆನಾದರೆ
ತಲೆದಂಡ ಕೂಡಲಸಂಗಮದೇವ.

೩೯೭.
ಅಣ್ಣ, ತಮ್ಮ, ಹೆತ್ತಣ್ಣ ಗೋತ್ರವಾದರೇನು
ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯ.
ನಂಟು-ಭಕ್ತಿ-ನಾಯಕನರಕ ಕೂಡಲಸಂಗಮದೇವ.

೩೯೮.
ಹೊನ್ನು-ಹೆಣ್ಣು-ಮಣ್ಣೆಂಬ
ಕರ್ಮದ ಬಲೆಯಲ್ಲಿ ಸಿಲುಕಿ
ವೃಥಾ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ!
ಹಾರುವೆನಯ್ಯ ಶರಣರ ಬರವ ಗುಡಿಗಟ್ಟಿ!
ಕೂಡಲಸಂಗಮದೇವನು
ವಿಪ್ರಕರ್ಮವ ಬಿಡಿಸಿ
ಅಶುದ್ಧನ ಶುದ್ಧನ ಮಾಡಿದನಾಗಿ.

೩೯೯.
ವೇದಕ್ಕೆ ಒರೆಯ ಕಟ್ಟುವೆ!
ಶಾಸ್ತ್ರಕ್ಕೆ ನಿಗಳವನಿಕ್ಕುವೆ!
ತರ್ಕದ ಬೆನ್ನ ಬಾರನೆತ್ತುವೆ!
ಆಗಮದ ಮೂಗ ಕೊಯ್ವೆ!
ನೋಡಯ್ಯ, ಮಹಾದಾನಿ ಕೂಡಲಸಂಗಮದೇವ,
ಮಾದರ ಚೆನ್ನಯ್ಯನ ಮನೆಯ ಮಗ ನಾನಯ್ಯ!

೪೦೦.
ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ,
ಬಂಟನೋಲೆಯಕಾರನೆಂದೆನಾದರೆ,
ನೀ ಮುಂತಾಗಿ ಬಂದ ಭಕ್ತರ ನೀನೆನ್ನದಿದ್ದರೆ,
ಅದೇ ದ್ರೋಹ!
ನಡೆ-ನುಡಿ ಹುಸಿಯುಂಟಾದರೆ
ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ.

    *

No comments:

Post a Comment