Thursday, October 14, 2010

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.(ಯುಗಾದಿಯು ಋತುಚಕ್ರದ ಆದಿಬಿಂದು--. ಬೇಂದ್ರೆ )

ಇದು ವಸಂತ ಋತುವಿನ, ಚೈತ್ರಮಾಸದ ಪ್ರಾರಂಭವಾಗಿದೆ. ಮನುಜನು ತನ್ನ ಬುದ್ಧಿಶಕ್ತಿಯ ಆಧಾರದಿಂದ, ಪೃಥ್ವಿ ಹಾಗು ಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ಕ್ಷಣದವರೆಗೂ ನಿರ್ಧರಿಸುತ್ತಾನೆ.

ಮನುಜನ ಹೊರತಾದ ನಿಸರ್ಗಕ್ಕೆ ಮನುಜನಂತಹ ಬುದ್ಧಿಶಕ್ತಿಗಿಂತ ಬೇರೊಂದು ರೂಪದ ಬುದ್ಧಿಶಕ್ತಿ ಇದೆ. ಮನುಜನ ಬುದ್ಧಿಶಕ್ತಿಗೆ conscious intelligence ಎಂದು ಕರೆಯಬಹುದಾದರೆ, ನಿಸರ್ಗದ ಬುದ್ಧಿಶಕ್ತಿಗೆ unconscious intelligence ಎಂದು ಕರೆಯಬಹುದು.(?) ನಿಸರ್ಗದ unconscious intelligence ಎದುರಿಗೆ ಮನುಜನ conscious intelligence ನಗಣ್ಯ. ನಿಸರ್ಗವು ಯುಗಾದಿಯನ್ನು ಗುರುತಿಸುವ ಬಗೆಯೇ ಬೇರೆ. ಅದು ಮನುಜನ ಬುದ್ಧಿಗೆ ನಿಲುಕಲಾರದು.

ಅಂಬಿಕಾತನಯದತ್ತರು ತಮ್ಮ ‘ಯುಗಾದಿ’ ಕವನದಲ್ಲಿ ಸೃಷ್ಟಿಕ್ರಮವು ಪುನರಾವರ್ತಿಸುವ ಬಗೆಯನ್ನು ಬಣ್ಣಿಸುತ್ತಿದ್ದಾರೆ. ಯುಗಾದಿಯೊಡನೆ ನಿಸರ್ಗವು ಹೊಸ ರೂಪವನ್ನು ತಾಳುವ ರೀತಿಯನ್ನು ವರ್ಣಿಸುತ್ತಾರೆ. ಅವರು ಬಣ್ಣಿಸುವ ಯುಗಾದಿಯು ಪ್ರಕೃತಿಯ ಯುಗಾದಿ, ಇದು ಮನುಜರ ಯುಗಾದಿಯಲ್ಲ.

ಯುಗಾದಿ’ ಕವನದ ಪೂರ್ಣಪಾಠ ಹೀಗಿದೆ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ!
. . . . . . . . . .. . . . . . .. . . . . . . . .. . . . . . . . . . . . . . .
ಸೂರ್ಯ,ಭೂಮಿ ಹಾಗು ಚಂದ್ರರ ಸೃಷ್ಟಿಯಾದ ನಂತರ ಅನೇಕ ಕೋಟಿ ಯುಗಗಳು ಕಳೆದು ಹೋಗಿವೆ. ಪ್ರತಿ ವರ್ಷದ ಆದಿಯಲ್ಲಿ ನಾವು ಯುಗಾದಿ ಎಂದು ಕರೆಯುವ ದಿನವು ಪುನರಾವರ್ತನೆಗೊಳ್ಳುತ್ತದೆ. ಪ್ರತಿ ಸಲವೂ ಈ ವರ್ಷಾರಂಭವು ನಿಸರ್ಗದಲ್ಲಿ ಹೊಸ ಹರ್ಷವನ್ನು ತರುತ್ತದೆ. ಅದನ್ನು ಬೇಂದ್ರೆ ಹೀಗೆ ಹೇಳುತ್ತಾರೆ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ವಸಂತ ಋತುವಿನ ಪ್ರಕೃತಿಯನ್ನು ಗಮನಿಸಿ:
ಸಸ್ಯಸಂಕುಲವೆಲ್ಲ ಬಣ್ಣ ಬಣ್ಣದ,ಬಗೆಬಗೆಯ ಸುವಾಸನೆಯ ಹೊಸ ಹೂವುಗಳಿಂದ ಶೋಭಿಸತೊಡಗುತ್ತದೆ. ಪ್ರಕೃತಿಯು ಹೊಸ ಉಲ್ಲಾಸದಿಂದ ತುಂಬುತ್ತದೆ. ನಿಸರ್ಗದಲ್ಲಿ ಹೊಸ ಸಂಭ್ರಮವಿದೆ. ಈ ನವೋಲ್ಲಾಸಕ್ಕೊಂದು ಕಾರಣವಿರಬೇಕಲ್ಲವೆ? ಈ ಕಾರಣವೆಂದರೆ ನಿಸರ್ಗದ ಮೂಲ ಬಯಕೆ ಅರ್ಥಾತ್ ಹೊಸ ಸಂತಾನದ ಉತ್ಪತ್ತಿ.

ಚಿಕ್ಕ ಕೂಸನ್ನು ನೋಡಿದಾಗ ಎಲ್ಲರಿಗೂ ಆ ಕೂಸಿನ ಮೇಲೆ ಪ್ರೀತಿ ಹುಟ್ಟುತ್ತದೆ. ಈ ಕೂಸೇ ‘ಹೊಸ ಹರುಷ’! ನಿಸರ್ಗದಲ್ಲಿಯ ಸಸ್ಯಸಂಕುಲವು ಹೊಸ ಹೂವನ್ನು ಬಿಡುವುದರೊಂದಿಗೆ ಸಂತಾನೋತ್ಪತ್ತಿಯನ್ನು ಪ್ರಾರಂಭಿಸುತ್ತವೆ. ಆದುದರಿಂದ ಇದು ಹೊಸ ಹರುಷ!
ಬೇಂದ್ರೆ ಈ ಮಾತನ್ನು ಮುಂದಿನ ನುಡಿಯಲ್ಲಿ ಹೀಗೆ ಹೇಳಿದ್ದಾರೆ:

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಪರಾಗಸ್ಪರ್ಷಕ್ಕಾಗಿ ಭೃಂಗಗಳನ್ನು ಆಹ್ವಾನಿಸಲು ಹೊಂಗೆ ಹೂವು ಗೊಂಚಲು ಗೊಂಚಲಾಗಿ ಹೂವುಗಳನ್ನು ಸುರಿಸುತ್ತದೆ. ದುಂಬಿಗಳ ಗುಂಗುಂಗಾನ ಈ ವರುಷವೂ ಪುನರಾವರ್ತಿಸುತ್ತಿದೆ. ಇಡೀ ವರುಷವೆಲ್ಲ ಕಹಿಯಾದ ಎಲೆ ಹಾಗೂ ಕಹಿಯಾದ ಕಾಯಿಗಳನ್ನೇ ಇಟ್ಟುಕೊಂಡ ಬೇವಿನ ಮರವು ಯುಗಾದಿಯಂದು ನಸುಕಂಪಿನ ಹೂವನ್ನು ಪಡೆದಿದೆ. ಹೀಗಾಗಿ ಅದಕ್ಕೂ ಸಹ ಒಂದು ಹೊಸ ಜೀವಕಳೆ ಬಂದಿದೆ!

ಈ ಸಂದರ್ಭದಲ್ಲಿ ಮತ್ತೊಂದು ಮಾತನ್ನು ಗಮನಿಸಬೇಕು. ಕವಿ ಎಂದು ಯಾರನ್ನು ಕರೆಯಬೇಕು? ಚೆಲುವನ್ನು ಕಾಣುವವನೇ ಕವಿ. ಆತ ಚರಾಚರ ಸೃಷ್ಟಿಯಲ್ಲಿಯ ಎಂಥಾ ಸಣ್ಣ ಕಣದಲ್ಲಿಯ ಚೆಲುವನ್ನೂ ಗಮನಿಸಿ ಸಂತೋಷಪಡುತ್ತಾನೆ. ಬೇಂದ್ರೆಯವರಿಗೆ ತಮ್ಮ ಹಿತ್ತಲಿನ, ತಮ್ಮ ಸುತ್ತಲಿನ ಹೊಂಗೆ, ಬೇವು, ಹುಣಸಿಯ ಮರ ಎಲ್ಲವೂ ಸಂತೋಷವನ್ನು ನೀಡುತ್ತವೆ. ಹುಣಸಿಯ ಮರವನ್ನು ನೆವ ಮಾಡಿ ಅವರು ಹೇಳಿದ ಕವನದ ಪ್ರಸಿದ್ಧ ಸಾಲುಗಳು ಹೀಗಿವೆ:
“ಕವಿಗೇನು ಬೇಕs?
ಹೂತ ಹುಣಸಿಮರ ಸಾಕs!”

ವಸಂತ ಋತುವಿನ ಆದಿಯಲ್ಲಿ ಗಿಡ, ಮರ, ಬಳ್ಳಿಗಳು ಹೂವುಗಳಿಂದ ಕಂಗೊಳಿಸುವ ಕಾರಣವನ್ನು ಕವಿ ಹೀಗೆ ಹೇಳುತ್ತಾರೆ:
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.

ಪುಷ್ಪವತಿಯಾದ ಸಸ್ಯಸಂಕುಲವು ಫಲವತಿಯಾಗಿ ಸಾರ್ಥಕ್ಯವನ್ನು ಪಡೆಯಬೇಕಾದರೆ ಪಕ್ಷಿಸಂಕುಲದ ನೆರವು ಬೇಕು. ಹಣ್ಣುಗಳ ಸುಗ್ಗಿಯ ಮುನ್ಸೂಚನೆಯನ್ನು ಪಡೆದ ಪಕ್ಷಿಸಂಕುಲವು ಗಿಡಮರಗಳಿಗೆ ಮುಗಿಬೀಳುತ್ತವೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.
ಮಾಮರವು ಇನ್ನೂ ಹಣ್ಣು ಬಿಟ್ಟಿಲ್ಲ. ಆದರೆ ಹಣ್ಣಿನ ಸುಗ್ಗಿ ಇನ್ನೇನು ಬಂದೇ ಬಿಟ್ಟಿತು ಎಂದು ಹಿಗ್ಗುತ್ತ ಗಿಳಿಗಳ ಸಾಲುಗಳು ಮಾಮರವನ್ನು ಆಶ್ರಯಿಸಿವೆ. ಗಿಳಿಗಳ ಈ ಸಾಲುಗಳು ಕವಿಗೆ ತೋರಣದಂತೆ ಕಾಣುತ್ತವೆ. ಆದರೆ ಇದು ಕಾಮದೇವನನ್ನು ಸ್ವಾಗತಿಸುವ ತೋರಣ.

ಈ ರೀತಿಯಾಗಿ ನಿಸರ್ಗವೆಲ್ಲ (--ಮನುಜನನ್ನು ಹೊರತುಪಡಿಸಿ--) ಹೊಸ ವರ್ಷದೊಡನೆ ಹೊಸ ಜನ್ಮ ತಾಳಿ ಸಂಭ್ರಮಿಸುತ್ತದೆ. ಹಳೆಯ ನೆಲೆಯನ್ನು ಕಳಚಿ ಹಾಕಿ, ಹರ್ಷದ ಹೊಸ ನೆಲೆಯನ್ನು ಪಡೆಯುತ್ತದೆ. ಪ್ರತಿ ವರುಷದಲ್ಲೂ ಪ್ರಕೃತಿಯು ಹೊಸ ಬಾಲ್ಯ ಹಾಗು ಹೊಸ ಯೌವನವನ್ನು ಪಡೆಯುತ್ತದೆ.
ಆದರೆ, ಮನುಜನ ಸ್ಥಿತಿ ಹೇಗಿದೆ?

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ಮನುಜಕುಲಕ್ಕೆ ಮಾತ್ರ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಹಾಗೂ ಒಂದೇ ಯೌವನ! ನಮಗೂ ಸಹ ನಿದ್ದೆಯು ನಮ್ಮ ಹಳತನ್ನು ಕಳೆದೊಗೆದು, ಎಚ್ಚರವಾದೊಡನೆ ಹೊಸ ಜೀವನವನ್ನು ಕೊಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?

ಕವಿಯು ಕಾಮದೇವನನ್ನು (=ಸನತ್ಕುಮಾರನನ್ನು) ಪ್ರಶ್ನಿಸುತ್ತಾನೆ.
‘ಕಾಮದೇವಾ, ನೀನು ಚಿರಂಜೀವಿ, ನೀನು ಸಾಹಸಿ. ನಿನ್ನಂಥವನು ಮನುಜರಿಗೂ ಸಹ ಇಂತಹ ವೈಭೋಗ ಕೊಡಬೇಕಾಗಿತ್ತು. ಕೊಡದಿರುವ ಕಾರಣವೇನು? ನಿನಗೆ ಲೀಲೆ (=play) ಸೇರದೊ?’
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಕವಿಯು ಪ್ರಕೃತಿಯ ಹಾಗು ಮನುಜರ ನಡುವಿನ ಈ ಕಂದರವನ್ನು ನೆನೆದು ವಿಷಾದಿಸುತ್ತಾನೆ:
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ! ----Neelanjan

No comments:

Post a Comment