ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ
ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನೋ ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ
ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ
ಉದಯದೊಳೇನ್ ಹೃದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ
ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ
ಘಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ ಜ್ಯೋತಿಯಿಲ್ಲ
ಭಗವಂತನಾನಂದ ರೂಪುಗೊಂಡಿಹುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈ ಮರೆತು ತೇಲುತಿದೆ ಭೂಭಾರವಿಲ್ಲಿ!
* * *
ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ
ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ
ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ
ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ
ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಹೋಗುವೆನು ನಾ…….
ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು
ಹೋಗುವೆ ಮಲೆಯ, ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ |
ಅಲ್ಲಿ ಕಾನನ ಮಧ್ಯೆ ತುಂಗೆಯು
ಮುತ್ತನಿಡುವಳು ಕಣ್ಣಿಗೆ
ದಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಚಾಮರ ತಣ್ಣಗೆ
ಬೀಸು ಗಾಳಿಗೆ ವಲೆಯೆ ಭದ್ರೆಯು
ತುಂಬಿ ಹರಿವಳು ನುಣ್ಣಗೆ
ಮಲೆಯ ಬಿತ್ತರದೆದುರು
ಹೊನಲುಗಳೆನಿತು ನೋಡದೋ ಸಣ್ಣಗೆ |
ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ
ಪೈರು ಪಚ್ಚೆಯ ಬೆಳೆವುದೋ
ಎಲ್ಲಿ ಗದ್ದೆಯ ಕೋಗು
ಪವನನ ಹಸಿಗೆ ತೆರೆತೆರೆಯೊಲೆವುದೋ
ಬಿಂಕಗಂಗಳ ಮಲೆಯ ಹೆಣ್ಗಳ
ಭಿತ್ತಿ ಎಲ್ಲೆಡೆ ಸೆಳೆವುದೋ
ಎಲ್ಲಿ ಕಾಲವು ತೇಲಿ ಸುಖದಲಿ
ತಿಳಿಯದಂತೆಯೆ ಕಳೆವುದೋ |
ಹಾತೊರೆಯುತಿದೆ ಕಾತರಿಸುತಿದೆ
ಮನಕೆ ಮನೆ ಗಿರ ಹಿಡಿದಿದೆ
ನೆನಪಿನಳರಿನ ಬಂಧನಾತ್ಮದ
ಭೃಂಗ ಹೊಡೆನಲಿಕುಡಿದಿದೆ
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಬಿಳಿಯ ತಿಂಗಳ ಸಿರಿವನಂಗಳ
ಮಲೆಯ ಮಂಗಳ ನಾಡಿಗೆ |
ಕವಿ : ಕುವೆಂಪು
ದೂರ ಬಹುದೂರ ಹೋಗುವ ಬಾರಾ
ಅಲ್ಲಿ ಇಹುದೆಮ್ಮ ಊರ ತೀರ
ಜಲಜಲದಲೆಗಳ ಮೇಲ್ಕುಣಿದಾಡಿ
ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ
ಗೆಲುವಿನ ಉಲಿಗಳ ಹಾಡಿ
ಒಲುಮೆಯ ಮಾತಾಡಿ
ಹಕ್ಕಿಗಳಿಂಚರ ಕೇಳಿ ಆನಂದವ ತಾಳಿ
ಹಿಮಮಣಿಕಣಗಣ ಸಿಂಚಿತ ಅಂಚಿನ
ಹಸುರಿನ ತೀರದ ಮೇಲಾಡಿ
ಕಿಸಲಯಕಂಪನದಿಂಪನು ನೋಡಿ
ಕೂಡಿ ಆಡಿ ನೋಡಿ ಹಾಡಿ
ತೇಲಿ ತೇಲಿ ಹೋಗುವ ಬಾರ
ಎಲ್ಲಿರುವುದು ನಾ ಸೇರುವ ಊರು
ಬಲ್ಲಿದರರಿಯದ ಯಾರೂ ಕಾಣದ
ಎಲ್ಲಿಯೂ ಇರದ ಊರು
ಭವಭಯವಿಲ್ಲದ ಊರಂತೆ
ದಿವಿಜರು ಬಯಸುವ ಊರಂತೆ
ತವರೂರಂತೆ ಬಹುದೂರಂತೆ
ಕವಿಗಳು ಕಂಡಿಹ ಊರಂತೆ
ಜ್ಞಾನಿಗಳಿರುವುದೇ ಆ ಊರು
ಜ್ಞಾನದ ಮೇರೆಯೇ ಆ ಊರು
ನಾನಿಹ ಊರು ಸಮೀಪದ ಊರು
ಮೌನತೆಯಾಳುವ ತವರೂರು
ಎಲ್ಲಿರುವುದು ನಾ ಸೇರುವ ಊರು
ಬಲ್ಲಿದರರಿತ ಎಲ್ಲರೂ ಕಾಣುವ
ಎಲ್ಲಿಯೂ ಇರದ ಊರು
*******************
ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ !
ಹಸುರಾಗಸ, ಹಸುರು ಮುಗಿಲು ;
ಹಸುರು ಗದ್ದೆಯಾ ಬಯಲು ;
ಹಸುರಿನ ಮಲೆ ; ಹಸುರು ಕಣಿವೆ ;
ಹಸುರು ಸಂಜೆಯೀ ಬಿಸಿಲೂ !
ಆಶ್ವೀಜದ ಶಾಲಿವನದ
ಗಿಳಿಯೆದೆ ಬಣ್ಣದ ನೋಟ ;
ಅದರೆಡೆಯಲಿ ಬನದಂಚಲಿ
ಕೊನೆವೆತ್ತಡಕೆಯ ತೋಟ !
ಅದೊ ಹುಲ್ಲಿನ ಮಕಮಲ್ಲಿನ
ಹೊಸ ಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈ ಮುಚ್ಚಿರೆ
ಬೇರೆ ಬಣ್ಣವನೆ ಕಾಣೆ !
ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು !
ಹಕ್ಕಿಯ ಕೊರಲಿಂಪು ಹಸುರು ;
ಹಸುರು ಹಸುರಿಳೆಯುಸಿರೂ !
ಹಸುರತ್ತಲ್ ! ಹಸುರಿತ್ತಲ್ !
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ !*
ಕವಿ ಕಾಣುವ ನೀಸರ್ಗದಾಟವು--ಆನವರತ.......ನೀಲಾ೦ಜನ
ಸರ್ ಹಸುರು ಪದ್ಯದ ವಿಮರ್ಶೆಯನ್ನು ಬರೆದು ಕಳಿಸಿ
ReplyDelete