Monday, November 1, 2010
ಮೌನ ಮೊಗ್ಗೆಯನೊಡಿದು ಮಾತರಳಿ ಬರಲಿ ಮೂರು ಘಳಿಗೆಯ ಬಾಳು ಮಗಮಗಿಸುತಿರಲಿ-----.ಚೆನ್ನವೀರ ಕಣವಿ
ನಿನ್ನ ಕರುಣೆಗೆ -
ನಿನ್ನ ಕರುಣೆಗೆ ನಾನು ಕೇಂದ್ರವಾಗಿ
ನಿಂದಿರುವೆ ಮೌನದಲಿ ತಲೆಯ ಬಾಗಿ
ಮುಗಿಲಿಂದ, ಹಗಲಿಂದ, ಇರುಳಿಂದ ಬಂದು
ಮುಗಿಯದಾವುದೊ ಮಹಾದ್ಭುತವ ತಂದು,
ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು
ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು.
ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ
ಮಂಜು ಮುಗಿಬೀಳುವುದು ಭೂಮಿ ಬಾನೆಲ್ಲ:
ಹಿಂಜುವುದು ನೇಸರನ ನೂರಾರು ಕಿರಣ
ಜೇಡಬಲೆ ತುಂಬೆಲ್ಲ ಮುತ್ತಿನಾಭರಣ.
ಒಂದೊಂದು ಹೂವುಗಳ ಆಯುವುದು ಹೇಗೆ?
ಆ ಬಣ್ಣ, ಆ ನವುರು ಅದಕದರ ಸೋಗೆ.
ಸೃಷ್ಟಿಯಲಿ, ದೃಷ್ಟಿಯಲಿ ನಡೆದಿಹುದು ಪೂಜೆ
ಕಷ್ಟ-ಸುಖ-ಸಂಭ್ರಮದ ಸಂತೋಷದಾಚೆ.
*ಕವನ : ಗಗನದಿ ಸಾಗಿವೆ
ಗಗನದಿ ಸಾಗಿವೆ ಬಾಗಿವೆ ಮೋಡ
ಹೋಗಿದೆ ನೀರನು ಸುರಿದು;
ಬರುವುವು, ಬಂದೇ ಬರುವುದು ನೋಡ
ತುಂಬಿಸಿ, ತುಳುಕಿಸಿ ಹರಿದು.
ಇಳೆಗೂ ಬಾನಿಗು ಮಳೆ ಜೋಕಾಲಿ
ತೂಗಿದೆ, ತಂಗಿದೆ ಚೆಲುವು;
ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ
ಹೆಸರಿಗು ಕಾಣದು ನೆಲವು.
ನಸುಕೋ, ಸಂಜೆಯೊ, ಮಿಸುಕದು ಬೆಳಕು,
ತಾಯಿಯ ಮೊಲೆಗಿದೆ ಕೂಸು;
ಇರುಳೇ ಹೊರಳಿತು, ಹಗಲೇ ಮರಳಿತು,
ಚಿಗುರೆಲೆ ಹೂವಿಗೆ ಹಾಸು.
ಬೇಸಗೆ ಬಣಬಣ, ಚಳಿಗೋ ಒಣ ಒಣ
ಶ್ರಾವಣ ತಣ್ಣಗೆ ನಡುವೆ;
ಎಲ್ಲಿದೆ ಬೆಂಕಿ? ಎಲ್ಲಿದೆ ಬೆಳಕು?
ಬೀಸುವ ಗಾಳಿಗೆ ಬಿಡುವೆ?
ನೀರೇ ಹರಿದಿದೆ, ನೀರೇ ಬೆರೆದಿದೆ
ನೀರೇ ಕರೆದಿದೆ ಮೊರೆದು;
ಯಾರೆ? ಎಂದರು, ನೀರೇ ಬರುವದು
ಬೆನ್ನಿನ ಹಿಂದೆಯೆ ಸರಿದು.
ಬೆಚ್ಚಗೆ ಒಳಗೆ, ಹಚ್ಚಗೆ ಹೊರಗೆ
ಹುಚ್ಚನು ಬಿಡಿಸಿದೆ ಮಳೆಯು;
ಎಚ್ಚರು ಎಚ್ಚರು ಎನ್ನುತ ಹರಿದಿದೆ
ತುಂಬಿದ ಬಾಳಿನ ಹೊಳೆಯು.
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
‘ಸೋ ‘ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ;
ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತ್ತಿತ್ತು.
ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ;
ಮೂಡಣದಿ ನೇಸರನ ನಗೆ ಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು.
ಹುಲ್ಲೆಸಳು, ಹೂಪಕಳೆ, ಮುತ್ತು-ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತ್ತಿತ್ತು ;
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು.
ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು ;
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣಗುಣಿತ ಹಾಕುತ್ತಿತ್ತು.
ಉಷೆಯ ನುಣ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತ್ತಿತ್ತು ;
ಸೃಷ್ಟಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತ್ತಿತ್ತು.
ಹೂವು ಹೊರಳುವುವು ಸೂರ್ಯನ ಕಡೆಗೆ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರ ಬರುವನು ಕೂಸಿನ ಹಾಗೆ
ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು
ಅದಕೆ ಅದರ ಗುಣ ದೋಷಗಳಂಟಿಸಿ
ಬಿಡಿಸಿ ಬಿಟ್ಟ ತೊಡಕು
ಗಿಡದಿಂದುರುವ ಎಲೆಗಳಿಗೂ ಮುದ
ಚಿಗುರುವಾಗಲು ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನು ಕಲಾವಿದ?
ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾಘಳಿಗೆ
ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ
****************
ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ
ಜಯಭಾರತಿ, ಕರುನಾಡ ಸರಸ್ವತಿ
ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ.
ವಿಶ್ವವಿನೂತನ…………………….||೧||
ಗಂಗ, ಕದಂಬಾ, ರಾಷ್ಟ್ರಕೂಟ ಬಲ
ಚಲುಕ್ಯ, ಹೊಯ್ಸಳ,ಬಲ್ಲಾಳ
ಹುಕ್ಕ,ಬುಕ್ಕ,ಪುಲಕೇಶಿ, ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ.
ವಿಶ್ವವಿನೂತನ…………………….||೨||
ಆಚಾರ್ಯತ್ರಯ ಮತಸಂಸ್ಥಾಪನ
ಬಸವಾಲ್ಲಮ ಅನುಭಾವ ನಿಕೇತನ
ಶರಣ, ದಾಸ, ತೀರ್ಥಂಕರ ನಡೆ-ನುಡಿ ವಿಶ್ವತಮೋಹಾರಿ.
ವಿಶ್ವವಿನೂತನ…………………….||೩||
ಪಂಪ, ರನ್ನ, ನೃಪತುಂಗ, ಹರೀಶ್ವರ
ರಾಘವಾಂಕ, ಸರ್ವಜ್ಞ, ಪುರಂದರ
ಕುವರವ್ಯಾಸ, ರತ್ನಾಕರ, ಜನಪದ ಕಾವ್ಯ ಸಮುದ್ರವಿಹಾರಿ.
ವಿಶ್ವವಿನೂತನ…………………….||೪||
ಸಾಯಣ, ವಿದ್ಯಾರಣ್ಯ, ಭಾಸ್ಕರ
ಮಹಾದೇವಿ, ಮುಕ್ತಾಯಿ ಮಹಂತರ,
ಕಂತಿ-ಹಂಪ, ಸುಮನೋರಮೆ-ಮುದ್ದಣ
ಸರಸ ಹೃದಯ ಸಂಚಾರಿ.
ವಿಶ್ವವಿನೂತನ…………………….||೫||
ತ್ಯಾಗ-ಭೋಗ-ಸಮಯೋಗದ ದೃಷ್ಟಿ
ಬೆಳುವೊಲ, ಮಲೆ, ಕರೆ, ಸುಂದರ ಸೃಷ್ಟಿ
ಜ್ಞಾನದ, ವಿಜ್ಞಾನದ, ಕಲೆಯೈಸಿರಿ,
ಸಾರೋದಯ ಧಾರಾನಗರಿ.
ವಿಶ್ವವಿನೂತನ…………………….||೬||
ಅರಿವೇ ಗುರು, ನುಡಿ ಜ್ಯೋತಿರ್ಲಿಂಗ,
ದಯವೇ ಧರ್ಮದ ಮೂಲ ತರಂಗ
ವಿಶ್ವಭಾರತಿಗೆ ಕನ್ನಡದಾರತಿ,
ಮೊಳಗಲಿ ಮಂಗಲ ಜಯಭೇರಿ.
ವಿಶ್ವವಿನೂತನ…………………….||೭||
ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತವು ಹೂವು ಸುರಿಸಿದಂತೆ,
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ ;
ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲಿ ತುಳುಕುವಂತೆ,
ಸುಳಿಗಾಳಿಯೊಂದಿನಿತು ಸೂಸಿ ಬಂದರೂ ಸಾಕು;
ಮರವನಪ್ಪಿದ ಬಳ್ಳಿ ಬಳುಕುವಂತೆ ;
ನಾವು ಆಡುವ ಮಾತು ಹೀಗಿರಲಿ ಗೆಳೆಯ,
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ,
ಮೌನ ಮೊಗ್ಗೆಯನೊಡಿದು ಮಾತರಳಿ ಬರಲಿ
ಮೂರು ಘಳಿಗೆಯ ಬಾಳು ಮಗಮಗಿಸುತಿರಲಿ.
ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ
ಇಳಿಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ
ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು
ಉಸಿರುಸಿರಿಗೂ ತಂಪೆರಚಿದೆ ನಿನ್ನೆದೆ ಪರಿಮಳವು
ತಿಂಗಳ ತನಿವೆಳಕಲಿ ಮೈದೊಳೆದಿಹ ಮನದನ್ನೆ
ಮಂಗಳವೀ ಮನೆಯಂಗಳ ಚೆಂಗಲವೆಯ ಚೆನ್ನೆ
ಹಿತವಾಗಿದೆ ಮೆಲ್ಲಲರುಲಿ ಮಿತವಾಗಿದೆ ಮೌನ
ಜೊತೆಗೂಡುತ ಮಾತಾಡಿವೆ ಅರೆನಿದ್ದೆಯೊಳೇನ?
ಲೋಕದ ಮೈನೋವಿಗೆ ಶ್ರೀಗಂಧದ ತನಿಲೇಪ
ಆಕಾಶದ ಗುಡಿಯಿಂದಲಿ ಹೊರ ಸೂಸಿದ ಧೂಪ!
ಒಳಿತೆಲ್ಲವೂ ಬೆಳಕಾಯಿತು ಬಾನ್ ಕರೆಯಿತು ಜೇನು
ಆನಂದದ ಕಡಲಾಳದಿ ನಾವಾದೆವೇ ಮೀನು
ಎವೆಯಿಕ್ಕದೆ ಮಿನುಗುತ್ತಿದೆ ಚಿಕ್ಕೆಯ ಹನಿ ದೀಪ
ತಮ್ಮಷ್ಟಕೆ ಧ್ಯಾನಿಸುತಿವೆ ಯಾವುದೋ ಸವಿನೆನಪ!
ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ
ಏಳು ಮಂಗಳದಾಯಿ, ಉಷೆಯ ಗೆಳತಿ!
ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ,
ಏಳು ಬಣ್ಣದ ಬಿಲ್ಲೇ, ಮಾಟಗಾತಿ!
ಏಳೆನ್ನ ಕಲ್ಯಾಣಿ, ಏಳು ಭಾವದ ರಾಣಿ
ನೋಡು ಮೂಡಲದಲ್ಲಿ ರಾಗ ಮಿಲನ
ಮರ ತುದಿಯ ತೋರಣದಿ ಹೊಂಬಿಸಿಲ ಬಾವುಟವು
ಗಾಳಿ ಹೊಟ್ಟೆಯಲದರ ಚಲನ ವಲನ
ಮಂಜಿನರಳೆಯ ಹಿಂಜಿ ತೋರುತಿಹ ನೇಸರನು
ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೊಗರೇರಿಹನು, ಏಳೆನ್ನ ಹೊಂಗೆಳತಿ
ಮೊಗದ ಜವನಿಕೆ ತೆರೆದು ನಗೆಯ ನೀಡು
ಲಲಿತ ಶೃಂಗಾರ ರಸಪೂರ್ಣೇ ಚಂದಿರ ವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
ಒಂದು ಚಣ ಜಗವನ್ನೇ ಮರೆತುಬಿಡುವೆ
ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ
ಹೊಸೆದ ಹಾಗೆ ಹುರಿಗೊಳ್ಳುವ
ಗುರಿ ತಾಗುವ ಕನ್ನಡ
ಕುರಿತೋದದ ಪರಿಣತಮತಿ
ಅರಿತವರಿಗೆ ಹೊಂಗೊಡ
ಪಡುಗಡಲಿನ ತೆರೆಗಳಂತೆ
ಹೆಡೆ ಬಿಚ್ಚುತ ಮೊರೆಯುವ
ಸಹ್ಯಾದ್ರಿಯ ಶಿಖರದಂತೆ
ಬಾನೆತ್ತರ ಕರೆಯುವ
ಗುಡಿ ಗೋಪುರ ಹೊಂಗಳಸಕೆ
ಚೆಂಬೆಳಕಿನ ಕನ್ನಡ
ನಮ್ಮೆಲ್ಲರ ಮೈಮನಸಿನ
ಹೊಂಗನಸಿನ ಕನ್ನಡ
ತ್ರಿಪದಿಯಿಂದ ಸಾಸಿರಪದಿ
ಸ್ವಚ್ಚಂದದ ಉಲ್ಲಸ
ಭಾವಗೀತ ಮಹಾಕಾವ್ಯ
ವೀರ ವಿನಯ ಸಮರಸ
ಹಳ್ಳಿ-ಊರು ನಗರ-ಜಿಲ್ಲೆ
ಮೊಗೆದ ಹೊಗರು ಕನ್ನಡಿ
ಎಲ್ಲ ದಿಸೆಗು ಚೆಲ್ಲುವರೆದ
ಚೈತನ್ಯದ ದಾಂಗುಡಿ
ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ
ನಾವು ಆಡುವ ಮಾತು ಹೀಗಿರಲಿ ಗೆಳೆಯ,
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ Neelanjana
Subscribe to:
Post Comments (Atom)
No comments:
Post a Comment