ಏಲಾವನ ಲವಲೀಬನ ಲವಂಗ ಬನಗಳಲಿs
ನಾಗಲತಾ ಸಂಕುಲ ಬನವಾಸಿಯ ಜನಗಳಲಿsss
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss | ಏಲಾವನ
ಏಲಾಪದ ಲೀಲಾಪದ ಆಲಾಪದ ಸರಣಿs
ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿs
ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿs | ಏಲಾವನ
ಙಂ ಞಣನಮಾ, ಅಂ ಜ್ಞ ಓಂ, ಜಂ ಸಂ ಶಂ ಎಂಬಾ
ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ
ಬಾ ಅಮ್ಮಾ ಅಮ್ಮಾ ಬಾ ಬಾರೇ ಜಗದಂಬಾ. | ಏಲಾವನ
ಉಸಿರುಸಿರಲಿ ಸರಿವರಿದೂ ಊದೂದುತ ನಲಿದು
ದನಿಯೆ ನದಿಯೊಲು ಚಲಿಸಿತು ಕೊಂಕೊಂಕೆನೆ ಒಲೆದು
ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು. | ಏಲಾವನ
ಕಿನ್ನರಕಿನ್ನರಿ ಮಿಥುನವು ಅರೆಅರೆ ಮೈಗೂಡಿ
ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ
ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ. | ಏಲಾವನ
ನರಗಳಲಿಂಗಿಂಗೀ ನರನಾಳದೆ ತಂಗಿs
ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss. | ಏಲಾವನ
ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ
ರತಿರಮಣನ ನಿಜಜನಕನ ಎದೆಯಾಳವನಾಳಿ
ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ. | ಏಲಾವನ
ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು
ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು
ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. | ಏಲಾವನ
ಯಾಳದ ಜತಿ, ಏಳೆಯ ಗತಿ ಏಳೇಳೇಳೆಂದು
ಎಬ್ಬಿಸಿ, ಮಬ್ಬನು ಚೆದರಿಸಿ ಬಾಳ್ ಬಾಳ್ ಬಾಳೆಂದು
ತಂತಿಯ ತಾಳಕೆ ಮಿಡಿದಿರೆ, ಎಲ್ಲಾಯಿತು ಒಂದು. | ಏಲಾವನ
ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ
ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ
ಆಕ್ಷಣವನು ಈಕ್ಷಣವನು ಮಾಡಿತು ಸುಪವಿತ್ರ. | ಏಲಾವನ
……………………………………………………..
…………………………………………………….
ಕಾವ್ಯೋದ್ಯೋಗವು ಅನೇಕ ಕವಿಗಳಿಗೆ ಶಬ್ದ-ಯೋಗ ; ಆದರೆ ಬೇಂದ್ರೆಯವರಿಗೆ ಅದು ನಾದ-ಯೋಗ. ನವ್ಯಕವಿಗಳಿಗಂತೂ ಅದು ಒಂದು intellectual exercise. ಶ್ರೀ ಏ.ಕೆ ರಾಮಾನುಜನ್ ಅವರು ಬರೆದ ಕವಿತೆಯ ಈ ಸಾಲುಗಳು ಇಂತಹ ಧೋರಣೆಗೆ ಒಳ್ಳೆಯ ಉದಾಹರಣೆ ಆಗಿವೆ:
“ಕವಿತೆ ಬರೆಯುವದು ಕಷ್ಟವೆ, ಸ್ವಾಮಿ?
ಬರೆಯದಿರುವದೆ ಕಷ್ಟ.”
ಕವಿತೆ ಇವರಿಗೆ ಕೇವಲ ’ಬರೆಯುವ’ ವಸ್ತುವಾಗಿದೆ. ಬೇಂದ್ರೆಯವರ ಮನಸ್ಸಿನಲ್ಲಿ ಕವನವು ಬಹುತೇಕವಾಗಿ ನಾದರೂಪದಿಂದ ಮೂಡುತ್ತಿತ್ತು ಎನ್ನುವ ಮಾತನ್ನು ಅವರು ತಮ್ಮ ಅನೇಕ ಕವನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ ’ಗಂಗಾವತರಣ’ ಕವನಸಂಕಲನದಲ್ಲಿಯ ’ “ಗಾಳಿಗಡಲಿನಲ್ಲಿ” ಕವನದ ಮೊದಲ ನುಡಿಯನ್ನು ನೋಡಿರಿ:
“ಗಾಳಿಗಡಲಿನಲ್ಲಿ ತೇಲಿ ಬರುತಲಿಹವು ನಾದಾ
ಭಂಡವಾಳದಂತೆ ತುಂಬಿ ವಿವಿಧ ಭಾವ ಮೋದಾ
ಯಾವ ಗೆಳೆಯ ಗುರುವಿನಿಂದ ಬಂದಿತೋ ಪ್ರಸಾದಾ
ಎನುವೆ ಹೈ ಹಸಾದಾ ||”
ಅಥವಾ ಅದೇ ಕವನಸಂಕಲನದ “ಕಣ್ಣ ಕಾಣಿಕೆ” ಕವನದ ಮೊದಲ ನುಡಿಯನ್ನು ನೋಡಿರಿ:
“ ಅಂತರಂಗದಾ ಮೃದಂಗ ಅಂತು ತೋಂ ತನಾನಾ |
ಚಿತ್ತ ತಾಳ ಬಾರಿಸುತ್ತಲಿತ್ತು ಝಂಝಣಾಣಾ |
ನೆನವು ತಂತಿ ಮೀಟುತಿತ್ತು ತಂತನನ ತಾನಾ ||
ಅಂತರಂಗದಾ……..”
‘ಏಲಾಗೀತ ’ ಸಹ ಕಾವ್ಯ-ಸೃಷ್ಟಿಯನ್ನು ವರ್ಣಿಸುವ ಒಂದು ಅದ್ಭುತವಾದ ಕವನ. ಕವನ ಪ್ರಾರಂಭವಾಗುವದು ಬನವಾಸಿಯ ವರ್ಣನೆಯಿಂದ. ಈ ಕವನಕ್ಕೆ ಬನವಾಸಿಯದೇನು relevance ಎನ್ನುವ ಪ್ರಶ್ನೆ ಬರಬಹುದು. ‘ಏಲಾಗೀತ’ವು ಎಲ್ಲಿಯೋ ಹುಟ್ಟುವಂತಹ ಕವನವಲ್ಲ. ಈ ಗೀತೆಗೆ ಮನೋಹರವಾದ ನಿಸರ್ಗ ಹಾಗು ಅಷ್ಟೇ ಧೀಮಂತರಾದ ಜನರು ಬೇಕು. ಇವರು ವನವಾಸಿ ಜನರು ಅನ್ನುವ ಒಂದು ಅರ್ಥಸಾಧ್ಯತೆ ಇದೆ. ಆದರೆ ಎಲೆ, ಲವಂಗ ಮೊದಲಾದ ಪದಾರ್ಥಗಳು ಬೆಳೆಯುವ ದೇಶವೆಂದರೆ ಘಟ್ಟದ ಪ್ರದೇಶವಾದ ಬನವಾಸಿ ಹಾಗು ನಮ್ಮ ಬನವಾಸಿಯಲ್ಲಿರುವ ಜನರು ಸಂಸ್ಕಾರಸಂಪನ್ನರೆಂದು ಕನ್ನಡದ ಆದಿಕವಿ ಪಂಪ ಪ್ರಮಾಣಪತ್ರವನ್ನೆ ಕೊಟ್ಟಿದ್ದಾನೆ.
“ಚಾಗದ ಭೋಗದಕ್ಕರದ ಗೇಯದ ಗೊಟ್ಟಿ
ಯಲಂಪಿನಿಂಪಿಗಳ್ಗಾರವಾದ ಮಾನಸರೆ ಮಾನಸರ್
…………………………..
……………………………
ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ
ಪುಟ್ಟುವದು ನಂದನದೊಳ್ ಬನವಾಸಿ ದೇಶದೊಳ್”
…………………………………………….
…………………………………………..
‘ಏಲಾಗೀತ’ ಕವನದ ಮೊದಲನೆಯ ನುಡಿಯನ್ನು ನೋಡಿರಿ:
“ಏಲಾವನ ಲವಲೀಬನ ಲವಂಗ ಬನಗಳಲಿs
ನಾಗಲತಾ ಸಂಕುಲ ಬನವಾಸಿಯ ಜನಗಳಲಿsss
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss | ಏಲಾವನ”
ಏಲಾ ಇದು ವಿರಳವಾಗಿ ದೊರೆಯುವ ಒಂದು ಆಯುರ್ವೇದೀಯ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು: mimosa octandra. ಸಂಸ್ಕೃತದಲ್ಲಿ ಇದಕ್ಕೆ ‘ರಸ್ನಾ’ ಎಂದೂ ಅನ್ನುತ್ತಾರೆ. ಇದರ ಇತರ ಭಾರತೀಯ ಹೆಸರುಗಳು ವಲ್ಲಗ ಹಾಗೂ ಬದರಾ. ಲವಲೀವನ ಅಂದರೆ ಅರೆನೆಲ್ಲಿಯ ವನ; ಲವಂಗವಂತೂ ನಮಗೆಲ್ಲರಿಗೂ ಗೊತ್ತಿದ್ದದ್ದೆ. ನಾಗಲತೆ ಅಂದರೆ ಒಂದು ಜಾತಿಯ ವೀಳ್ಯದೆಲೆ.
ಇಂತಹ ಸಸ್ಯಗಳಿಂದ ತುಂಬಿರುವ ಬನವಾಸಿಯ ತೋಟಗಳಲ್ಲಿ ಹೆಣ್ಣು ಮಕ್ಕಳು ಉಯ್ಯಾಲೆಗಳಲ್ಲಿ (=ದೋಲಾ) ನಿರಾಯಾಸ ಕ್ರಮದಲ್ಲಿ (=ಲೀಲಾಂದೋಲಿತ), ತಮ್ಮನ್ನು ತೂಗಿಕೊಳ್ಳುತ್ತ, ಗೆಳೆಯ ಗೆಳೆತಿಯರ ಜೊತೆಗೆ ಹಾಡುತ್ತ ಕಾಲ ಕಳೆಯುವರು. ಗೆಳೆಯ- ಗೆಳತಿಯರ ಗೀತಾಲಾಪನೆಯ ವರ್ಣನೆ ಈ ಮುಂದಿನ ನುಡಿಯಲ್ಲಿದೆ:
“ಏಲಾಪದ ಲೀಲಾಪದ ಆಲಾಪದ ಸರಣಿs
ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿs
ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿs | ಏಲಾವನ ”
ಸಖ ಸಖಿಯರು ಜೊತೆಗೂಡಿ (=ಮೇಳಾಪಿಸಿ), ಪರಸ್ಪರ ಸ್ನೇಹದಲ್ಲಿ ಅವರು ಮುಕ್ತಮನಸ್ಕರಾದಾಗ (=ತೆರೆದಿರೆ ಎದೆ ಭರಣಿ), ಹಾಡುವ ಗೀತೆಗಳನ್ನು ಗಂಡು ಹಾಗು ಹೆಣ್ಣು ಚಿಗರೆಗಳು ಆಲಿಸುತ್ತ ಹಾಗು ಪರಸ್ಪರರನ್ನು ತಿಕ್ಕುತ್ತ (ಮಾಲಿಸು=bend), ಆನಂದಭರಿತವಾಗಿ ನಿಂತುಕೊಂಡಿವೆ. ಅಂದರೆ ತೋಟಗಳಲ್ಲಿ ಗೆಳೆಯ ಗೆಳತಿಯರು ತೂಗಿಕೊಳ್ಳುತ್ತ ಗೀತೆಗಳನ್ನು ಹಾಡುತ್ತಿದ್ದರೆ, ಮೃಗಗಳೂ ಸಹ ಈ ಗೀತೆಗಳನ್ನು ಕೇಳುತ್ತಿವೆ. ಅಷ್ಟು ಸಮ್ಮೋಹಕವಾದ ಗಾಯನವಿದು. ಅಂತಹ ಯಾವ ಗೀತೆ ಅಥವಾ ಸಂಗೀತವಿರಬಹುದು ಇದು ಎನ್ನುವ ಪ್ರಶ್ನೆಗೆ ಉತ್ತರ ಈ ನುಡಿಯ ಮೊದಲ ಸಾಲಿನಲ್ಲಿಯೇ ಇದೆ: “ಏಲಾಪದ ಲೀಲಾಪದ ಆಲಾಪದ ಸರಣಿs”
ಈ ’ಏಲಾಪದ’ ಅಂದರೆ ಏನು? ಏಲಾಪದ= ಏಲಾ+ಪದ. ಕನ್ನಡದಲ್ಲಿ ಏಲಾ ಅನ್ನುವ ತ್ರಿಪದಿ ವರ್ಗದ ಒಂದು ಛಂದಸ್ಸಿದೆ. ಆ ಛಂದಸ್ಸಿನ, ತ್ರಿಪದಿವರ್ಗದ ಗೀತೆಗಳನ್ನು ಸಹಜ ಸರಳತೆಯಿಂದ (=ಲೀಲಾ-ಪದ) ಇವರು ಆಲಾಪಿಸುತ್ತಿದ್ದಾರೆ. ಗೀತೆಗಳು ಸಹಜವಾಗಿ ನಿರಾಯಾಸವಾಗಿ ಬರುತ್ತಿರುವದರಿಂದ ಅವು ಲೀಲಾ-ಪದಗಳ ಸರಣಿಯಾಗಿವೆ.
“ ಕಿನ್ನರಕಿನ್ನರಿ ಮಿಥುನವು ಅರೆಅರೆ ಮೈಗೂಡಿ
ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ
ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ. | ಏಲಾವನ”
ಬೇಂದ್ರೆಯವರು ಇಲ್ಲಿ ಮತ್ತೊಂದು ವಿಷಯವನ್ನು ಈಗ ಸೇರಿಸಿದ್ದಾರೆ. ಸ್ವರಮೂರ್ತಿಯಂದರೆ ಒಂದು ಶರೀರ ತಾನೆ? ಈ ಶರೀರಕ್ಕೆ ಹಾಗು ಅದರ ಜೀವಕ್ಕೆ (= ಹುರುಳಿಗೆ =ಅರ್ಥಕ್ಕೆ) ಇರುವದು ಅನ್ಯೋನ್ಯ ಸಂಬಂಧ. ಅದು ಬಹು ಚೆನ್ನಾಗಿ (=ಹದುಳದೊಳು) ಅಭಿವ್ಯಕ್ತವಾಗುತ್ತಿದೆ (=ಒಡಮೂಡಿ). ಇಲ್ಲಿ ಕವಿ ಕಾಳಿದಾಸನ ವಿಖ್ಯಾತ ಲಕ್ಷಣಕಾವ್ಯವನ್ನು ಬೇಂದ್ರೆ ಕನ್ನಡಿಸಿ ಬಳಸಿಕೊಂಡಿದ್ದಾರೆ:
“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೆ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ”.
ಈ ಶ್ಲೋಕದಲ್ಲಿರುವ “ವಾಗರ್ಥಾವಿವ ಸಂಪೃಕ್ತೌ” ಇದು “ನುಡಿಯಲಿ ಹುದುಗಿದ ಹುರುಳು” ಆಗಿದೆ.
ನಾಲಿಗೆಯ ನಾಡಿಯಲ್ಲಿ ಹುಟ್ಟಿದ ಈ ಸ್ವರವು ನರನರಗಳಲಿ ಪೂರ್ಣವಾಗಿ ಇಂಗಿ, ನರಗಳ ನಾಳದಲ್ಲಿ ಸ್ಥಾಯಿಯಾಗುವದೆಂದು (=ತಂಗು) ಬೇಂದ್ರೆ ಮುಂದಿನ ನುಡಿಯಲ್ಲಿ ಹೇಳುತ್ತಾರೆ:
“ ನರಗಳಲಿಂಗಿಂಗೀ ನರನಾಳದೆ ತಂಗಿs
ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss. | ಏಲಾವನ ”
ಈ ಸ್ವರವು ನಾಡಿಗಳಲ್ಲಿ ಸಂಚರಿಸುವ ಭಂಗಿಯು ಹೇಗಿದೆಯೆಂದರೆ:
“ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss.”
ಪರಶಿವನ ನೃತ್ಯಕ್ಕೆ ’ತಾಂಡವ ನೃತ್ಯ’ ಎನ್ನುತ್ತಾರೆ. ಪಾರ್ವತಿಯದು ‘ಲಾಸ್ಯ ನೃತ್ಯ’, ಅಂದರೆ ಸುಕೋಮಲ ನೃತ್ಯ. ಈ ಲಾಸ್ಯದಲ್ಲಿ ಹಾಸ್ಯವನ್ನು ಅಂದರೆ ಆಹ್ಲಾದದ ನಗುವನ್ನು ಮಿಂಚಿಸಿದಂತೆ ಹಾಗು ಕಾಲವೇ ತಾಲವನ್ನು ಹಾಕುತ್ತಿರುವಂತೆ ( ಸೊಲ್ಲಿಸು=ಧ್ವನಿಗೈಯು), ಈ ಸ್ವರಸಂಚಾರದಿಂದ ಭಾಸವಾಗುತ್ತಿದೆ.
ಇಂತಹ ದೈವಿಕ ಸಂಗೀತದ ಸ್ವರಸಂಚಾರದ ಪರಿಣಾಮವನ್ನು ಹೇಳಬೇಕಷ್ಟೆ. ಅದು ಮುಂದಿನ ನುಡಿಯಲ್ಲಿದೆ:
“ ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ
ರತಿರಮಣನ ನಿಜಜನಕನ ಎದೆಯಾಳವನಾಳಿ
ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ. | ಏಲಾವನ ”
ನೆಲೆಯನ್ನು ಅಂದರೆ ಮನುಷ್ಯನ ಅಂತರಂಗವನ್ನು ಕೆಡಿಸುವಂತಹ ವಾಸನೆಗಳ (=ಕಾಮ, ಕ್ರೋಧ ಇತ್ಯಾದಿ) ಹುಟ್ಟನ್ನು ಸೀಳಿ ಒಗೆಯುವದು ಈ ದೈವಿ ಸಂಗೀತದ ಮೊದಲ ಪರಿಣಾಮ. ಅದರ ನಂತರ, ರತಿರಮಣನ ಅಂದರೆ ಕಾಮದೇವನ ತಂದೆಯಾದ ವಿಷ್ಣುವಿನ (=ನಿಜಜನಕನ) ಎದೆಯ ಆಳವನ್ನು ಆಳುವದು ಅಂದರೆ ಆ ವಿಶ್ವಚೈತನ್ಯನಲ್ಲಿ ಭಕ್ತಿಯನ್ನು ಹುಟ್ಟಿಸುವದು ಇದರ ಮುಂದಿನ ಪರಿಣಾಮ. ಇದು ಸಾಧಿಸಿದಾಗ ಹೃದಯಾಕೂತಿಯು ಅನುಪಮ ಲಾವಣ್ಯವನ್ನು ತಾಳುವದು. ಆಕೂತಿ ಎಂದರೆ ಉದ್ದೇಶ. ಹೃದಯಾಕೂತಿ ಎಂದರೆ ಅಂತರಂಗದ ಹಂಬಲ. ಋಗ್ವೇದದಲ್ಲಿ ಈ ರೀತಿಯಾಗಿ ಹೇಳಲಾಗಿದೆ:
“ ಸಮಾನೀವ ಆಕೂತಿ ಸಮಾನಾ ಹೃದಯಾನಿವ” (=ನಿಮ್ಮ ಉದ್ದೇಶಗಳು ಒಂದೇ ಆಗಿರಲಿ, ನಿಮ್ಮ ಮನಸ್ಸು ಒಂದುಗೂಡಿರಲಿ).
‘ಆಕೂತಿ’ ಪದಕ್ಕೆ ಮತ್ತೂ ಒಂದು ಅರ್ಥವಿದೆ:
ಆಕೂತಿ ಇವಳು ಸ್ವಯಂಭೂ ಮನು ಹಾಗು ಶತರೂಪಾ ಇವರ ಮಗಳು; ರುಚಿಪ್ರಜಾಪತಿಯನ್ನು ಮದುವೆಯಾದವಳು. ಇವರೆಲ್ಲ ದೇವರಿಂದ ಆದಿಷ್ಟರಾಗಿ ಪ್ರಜೋತ್ಪತ್ತಿಯನ್ನು ಮಾಡುವವರು ತಾನೆ? ಆ ಪ್ರಕಾರವಾಗಿ ಈ ಸಂಗೀತವೂ ಸಹ ದೇವೋದ್ದೇಶಕ್ಕಾಗಿ ಅನುಪಮ ಲಾವಣ್ಯವನ್ನು ತಳೆದಿದೆ.
ಸೂಕ್ಷ್ಮ ಶರೀರದಲ್ಲಿರುವ ಈ ಸುಮಧುರ ನಾದ ಹೊರಬರಬೇಕಲ್ಲವೆ? (ಅನಾಹತ ಚಕ್ರದಲ್ಲಿರುವದು ಪರಾ ನಾದ. ಅದು ಪಶ್ಯಂತಿಯಾಗಿ ಬದಲಾಗಿ, ಕೊನೆಗೆ ವೈಖರೀ ರೂಪದಲ್ಲಿ ಹೊರಬರುವದು.) ಅದನ್ನು ಹೇಗೆ ಸಾವಧಾನವಾಗಿ ಹೊರಗೆಳೆಯಬೇಕೆಂದು ಮುಂದಿನ ನುಡಿಯಲ್ಲಿ ಬೇಂದ್ರೆ ವರ್ಣಿಸುತ್ತಾರೆ:
“ ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು
ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು
ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. | ಏಲಾವನ “
ಸ್ವಾದಪೂರ್ಣವಾದ ನಾದದ ಸಂತೋಷದ ಗರ್ಭವನ್ನು ಬಗೆದು, ಅದರಲ್ಲಿರುವ ಹುಂಕಾರವನ್ನು ನೂಲಿನಂತೆ ಎಳೆಯಬೇಕು. ತಕಲಿಯಿಂದ ಅಥವಾ ರಾಟಿಯಿಂದ ನೂಲು ತೆಗೆದ ಅಭ್ಯಾಸ ಬಹುಶಃ ನಮಗಾರಿಗೂ ಇರಲಿಕ್ಕಿಲ್ಲ. ಹಾಗಾದರೆ, ರಾಟಿಯಿಂದ ನೂಲು ತೆಗೆಯುತ್ತಿರುವ ಮಹಾತ್ಮಾ ಗಾಂಧೀಜಿಯವರ ಚಿತ್ರವನ್ನು ನೋಡಿರಿ. ನೂಲು ತೆಗೆಯುವದರಲ್ಲಿ ಅವರು ತನ್ಮಯರಾಗಿರುವದನ್ನು ಕಾಣುವಿರಿ. ಅಂತಹ ತನ್ಮಯತೆ ಹಾಗು ತಾಳ್ಮೆಯಿಂದ ಈ ಸ್ವರದ ಒಳನೂಲನ್ನು ಮೆಲ್ಲನೆ ಹೊರತೆಗೆಯಬೇಕಾಗುತ್ತದೆ. ಆ ಸ್ವರವು ಕೊನೆಗೊಳ್ಳುವದು ‘ತನಿಮೌನದಲ್ಲಿ’ (=sweet silence). ಈ ತನಿಮೌನವೇ ಮುಂದೆ ಮೂಡುವ ಶಬ್ದಕ್ಕೆ ಹಾಸಿಗೆ.
(ಈ ಸಂದರ್ಭದಲ್ಲಿ ಬೇಂದ್ರೆಯವರು ತಮ್ಮ ಅತ್ಯಂತ ಪ್ರೀತಿಯ ಗೆಳೆಯರಾದ ಮಧುರಚೆನ್ನರನ್ನು (=ಹಲಸಂಗಿ ಚೆನ್ನಮಲ್ಲಪ್ಪನವರನ್ನು) ಉದ್ದೇಶಿಸಿ ಬರೆದ ಕವನವೊಂದನ್ನು ನೆನಸಿಕೊಳ್ಳಬಹುದು:
“ಮಾತಾಡೊ ಮಾತಾಡೊ ಲಿಂಗವೇ |ನೀ|
ಮಾತಾಡಲೊಲ್ಲೇಕೊ ಲಿಂಗವೇ ||
ಮಾತಿನ ತಾಯಾದ ಮೌನದ ಬಸುರಲಿ |
ಹೂತೆಯೊ ಹೇ ಚೆನ್ನಲಿಂಗವೇ .” )
So, ಈ ತನಿಮೌನದ ಶಯ್ಯೆಯಲ್ಲಿ ಪವಡಿಸಿರುವ ಗೀತೆಯನ್ನು ಏಳಿಸುವದು ಹೇಗೆ? ಆ ಕ್ರಿಯೆ ಮುಂದಿನ ನುಡಿಯಲ್ಲಿದೆ:
“ ಯಾಳದ ಜತಿ, ಏಳೆಯ ಗತಿ ಏಳೇಳೇಳೆಂದು
ಎಬ್ಬಿಸಿ, ಮಬ್ಬನು ಚೆದರಿಸಿ ಬಾಳ್ ಬಾಳ್ ಬಾಳೆಂದು
ತಂತಿಯ ತಾಳಕೆ ಮಿಡಿದಿರೆ, ಎಲ್ಲಾಯಿತು ಒಂದು. | ಏಲಾವನ “
‘ಯಾಳ’ ಅಂದರೆ ಒಂದು ಬಗೆಯ ವಾದ್ಯ. ಈ ವಾದ್ಯದ ಜೊತೆಗೆ ಏಳೆಯ ಅಂದರೆ ಈ ತ್ರಿಪದಿ ಛಂದಸ್ಸಿನ ಗೀತೆಯ ಗತಿಯನ್ನು ಸೇರಿಸುವದು ಒಂದು ಅರ್ಥ. ಸಂಗೀತದಲ್ಲಿ ’ಜತಿ’ ಎನ್ನುವದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಆ ಜತಿಯಲ್ಲಿ ಏಳಾ ಛಂದಸ್ಸಿನ ಗತಿಯನ್ನು (=ಸಂಚಲನ ವೇಗವನ್ನು) ಸೇರಿಸುವದು ಇನ್ನೊಂದು ಅರ್ಥ. ಈ ಜತಿ-ಗತಿ ಸೇರಿದಾಗ , ಅದು ಹೇಳುವದು : ಏಳ್, ಏಳ್ ಎಂದು. ಅಲ್ಲದೆ ಇದು ಸಪ್ತಸ್ವರಗಳನ್ನೂ ಸೂಚಿಸಬಹುದು. ಈ ರೀತಿಯಾಗಿ ಸ್ವರಗಳನ್ನು ಎಬ್ಬಿಸಿ, ಕೇಳುಗರ ಮಬ್ಬನ್ನು ಚೆದುರಿಸಿ, ಅವರಿಗೆ “ ಬಾಳ್ ” ಎನ್ನುವ ಒಸಗೆಯನ್ನು ಕೊಡುವದು ಈ ಏಲಾಗೀತೆ. ಈ ಸಂದೇಶದೊಡನೆ, ಈ ಗೀತೆ ಈ ರೀತಿಯಾಗಿ ಹೊಮ್ಮುತ್ತಿರಲು “ಎಲ್ಲಾಯಿತು ಒಂದು” ! ಅಂದರೆ, ಬನವಾಸಿಯ ಗೆಳೆಯ ಗೆಳೆತಿಯರು, ಅಲ್ಲಿಯ ಹರಿಣ ಮಿಥುನಗಳು, ಕಿನ್ನರ ಲೋಕದ ಕಿನ್ನರಕಿನ್ನರಿಯರು ,ದೇವಲೋಕದಲ್ಲಿರುವ ಸರಸ್ವತಿಯ ವೀಣೆ, ವೀಣಾನಾದ , ನಾದದ ಸುಖ ಎಲ್ಲವೂ ಒಂದಾದವು ಎನ್ನುತ್ತಾರೆ ಬೇಂದ್ರೆ.
ಕೊನೆಯ ನುಡಿ ಹೀಗಿದೆ:
“ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ
ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ
ಆಕ್ಷಣವನು ಈಕ್ಷಣವನು ಮಾಡಿತು ಸುಪವಿತ್ರ. | ಏಲಾವನ”
ಈ ರೀತಿಯಾಗಿ ಏಲಾಛಂದಸ್ಸಿನ ಬಗೆಗಿರುವ ಗೀತೆಯೊಂದು ಬೇಂದ್ರೆಯವರ ಮನದಲ್ಲಿ ಮೂಡಿ ದನಿ ಪಡೆದು, ಕಣ್ಣು ಪಡೆದು ಕವನವಾಗಿದ್ದು ಒಂದು ವಿಚಿತ್ರವೆನ್ನುತ್ತಾರೆ ಬೇಂದ್ರೆ. ಈ ಕವನವು ಸಹ ಏಲಾ ಛಂದಸ್ಸಿನಲ್ಲಿಯೇ ಇರುವ ತ್ರಿಪದಿಯಾಗಿರಬಹುದು. ಆದರೆ ಕನ್ನಡ ಛಂದಸ್ಸಿನ ಜ್ಞಾನವಿಲ್ಲದ ನಾನು ‘ಇದಮಿತ್ಥಮ್ ’ ಎಂದು ಹೇಳುಲಾರೆ.
ಕನ್ನಡದ ಒಂದು ತ್ರಿಪದಿ ಛಂದಸ್ಸನ್ನು ಧ್ಯಾನಿಸಿ, ಅದರ ನಾದವನ್ನು ಮನದಲ್ಲಿ ಅನುಭವಿಸಿ, ವರಕವಿಗಳು ಒಂದು ಗೀತೆಗೆ ಜನ್ಮ ನೀಡಿದ್ದಾರೆ. ಈ ಅನುಭವವು ತಮ್ಮಲ್ಲಿ ಪವಿತ್ರ ಭಾವನೆಯನ್ನು ಮೂಡಿಸಿತು ಎಂದು ಬೇಂದ್ರೆ ಹೇಳುತ್ತಾರೆ.
ಆಶ್ಚರ್ಯವಲ್ಲ ; ನಾದ-ಕಾವ್ಯ-ಯೋಗಿಗೆ ನಾದವೇ ಅನುಭಾವವಾಗುತ್ತದೆ.
Be with space which accured after reading this poem--Neelanjan
No comments:
Post a Comment