Friday, September 24, 2010

ಅಕ್ಕನ ವಚನಗಳು - 201 ರಿಂದ 300 ರವರೆಗೆ



ಅಕ್ಕನ ವಚನಗಳು - 201 ರಿಂದ 300 ರವರೆಗೆ

೨೦೧.
ಭಕ್ತೆ ಏನಪ್ಪೆನಯ್ಯ ಕರ್ತೃ-ಭೃತ್ಯತ್ವವ ನಾನರಿಯೆ
ಮಾಹೇಶ್ವರಿ ಏನಪ್ಪೆನಯ್ಯ? ವ್ರತ-ನೇಮ-ಛಲವ ನಾನರಿಯೆ
ಪ್ರಸಾದಿ ಏನಪ್ಪೆನಯ್ಯ?
ಅರ್ಪಿತಾನರ್ಪಿತವೆಂಬ ಭೇದವ ನಾನರಿಯೆ
ಪ್ರಾಣಲಿಂಗಿ ಏನಪ್ಪೆನಯ್ಯ?
ಅನುಭಾವದ ಗಮನವ ನಾನರಿಯೆ
ಶರಣೆ ಏನೆಪ್ಪೆನಯ್ಯ?
ಶರಣಸತಿ-ಲಿಂಗಪತಿಯೆಂಬ ಭಾವವ ನಾನರಿಯೆ
ಐಕ್ಯೆ ಏನೆಪ್ಪೆನಯ್ಯ?
ಬೆರಸಿದ ಭೇದವ ನಾನರಿಯೆ
ಚೆನ್ನಮಲ್ಲಿಕಾರ್ಜುನಯ್ಯ,
ಷಟ್ಸ್ಥಲದಲ್ಲಿ ನಿಸ್ಥಲವಾಗಿಪ್ಪೆನು

೨೦೨.
ಬಸವಣ್ಣ, ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಇಂತೀ ಮೂವರೂ ಒಂದೊಂದ ಕೊಟ್ಟ ಕಾರಣ
ಎನಗೆ ಮೂರು ಭಾವವಾಯಿತ್ತು
ಆ ಮೂರು ಭಾವವ ನಿಮ್ಮಲ್ಲಿ ಸಮರ್ಪಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ನೆನಹಾದಲ್ಲಿ
ನಿಮ್ಮ ಕರುಣದ ಕಂದನು ಕಾಣಾ ಚೆನ್ನಬಸವಣ್ಣ

೨೦೩.
ಸಂಗನ ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ನಾಸ್ತಿಯಾಯಿತ್ತು
ಪ್ರಭುವೇ ! ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನಗೆ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗಾವ ಜಂಜಡವಿಲ್ಲವಯ್ಯ ಪ್ರಭುವೇ

೨೦೪.
ಬಸವಣ್ಣನೇ ಗುರು, ಪ್ರಭುದೇವರೇ ಲಿಂಗ
ಸಿದ್ಧರಾಮಯ್ಯನೇ ಜಂಗಮ
ಮಡಿವಾಳಯ್ಯನೇ ತಂದೆ, ಚೆನ್ನಬಸವಣ್ಣನೇ ಎನ್ನ ಪರಮಾರಾಧ್ಯರು
ಇನ್ನು ಶುದ್ಧವಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ

೨೦೫.
ಬಸವಣ್ಣ ನಿಮ್ಮಂಗದಾಚಾರವ ಕಂಡು ಎನಗೆ
ಲಿಂಗಸ್ವಾಯತವಾಯಿತಯ್ಯ
ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ
ಜಂಗಮಸಂಬಂಧವಾಯಿತ್ತಯ್ಯ
ಬಸವಣ್ಣ ನಿಮ್ಮ ಸದ್ಭಕ್ತಿಯ ತಿಳಿದೆನಗೆ
ನಿಜವು ಸಾಧ್ಯವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಹೆಸರಿಟ್ಟ ಗುರು ನೀವಾದ ಕಾರಣ
ನಿಮ್ಮ ಶ್ರೀಪಾದಕ್ಕೆ
ನಮೋ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣ

೨೦೬.
ದೇವಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ಮೇರುಗಿರಿ-ಮಂದರಗಿರಿ ಮೊದಲಾದವೆಲ್ಲಕ್ಕು ಬಸವಣ್ಣನೇ ದೇವರು
ಚೆನ್ನಮಲ್ಲಿಕಾರ್ಜುನಯ್ಯ, ನಿಮಗೂ ಎನಗೂ ಎಮ್ಮ ಶರಣರಿಗೂ
ಬಸವಣ್ಣನೇ ದೇವರು

೨೦೭.
ಆದಿ-ಅನಾದಿಗಳಿಂದತ್ತಲಯ್ಯ ಬಸವಣ್ಣ
ಮೂಲದೇವರ ಮೂಲಸ್ಥಾನವಯ್ಯ ಬಸವಣ್ಣ
ನಾದ-ಬಿಂದು-ಕಳಾತೀತ ಆದಿನಿರಂಜನನಯ್ಯ ಬಸವಣ್ಣ
ಅನಾದಿಸ್ವರೂಪವೇ ಬಸವಣ್ಣನಾದ ಕಾರಣ
ಆ ಬಸವನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ

೨೦೮.
ಶಿವಶಿವಾ ಆದಿಅನಾದಿಯೆಂಬೆರಡೂ ಇಲ್ಲದೆ
ನಿರವಯವಾಗಿಪ್ಪ ಶಿವನೇ, ನಿಮ್ಮ ನಿಜವನಾರು ಬಲ್ಲರಯ್ಯ?
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು,
ಪುರಾಣಕ್ಕಗಮ್ಯನು, ಆಗಮಕ್ಕಗೋಚರನು, ತರ್ಕಕ್ಕತರ್ಕ್ಯನು
ವಾಙ್ಮನಕ್ಕತೀತವೆನಿಪ ಪರಶಿವಲಿಂಗನು
ಕೆಲಬರು ಸಕಲನೆಂಬರು, ಕೆಲಬರು ನಿಷ್ಕಲನೆಂಬರು
ಕೆಲವರು ಸೂಕ್ಷ್ಮನೆಂಬರು, ಕೆಲವರು ಸ್ಥೂಲನೆಂಬರು
ಈ ಬಗೆಯ ಭಾವದಿಂ ಹರಿ-ಬ್ರಹ್ಮ-ಇಂದ್ರ-ಚಂದ್ರ
ರವಿ-ಕಾಲ-ಕಾಮ-ದಕ್ಷ-ದೇವ-ದಾನವ-ಮಾನವರೊಳಗಾದವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾಗಿ ಹೋದರು
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು
ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಬಂದು
ವೀರಶೈವಮಾರ್ಗವರಿಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನು ಅದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿರುದ್ರಾಕ್ಷಿಧಾರಕನು
ಪಂಚಾಕ್ಷರಿಭಾಷಾಸಮೇತನು, ಲಿಂಗಾಂಗಸಂಬಂಧಿ,
ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣ ಸಂಗಮೇಶ್ವರನು, ತ್ರಿವಿಧದಲ್ಲಿ ಆಯತನು,
ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವಸ್ಮರಣೆಯ ಹೊದ್ದ
ಭವಿಸಂಗವ ಮಾಡ, ಭವಪಾಶವ ಕೊಳ್ಳ,
ಪರಸತಿಯ ಬೆರೆಸ, ಪರಧನವನೊಲ್ಲ,
ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ,
ತಾಮಸಭಕ್ತಸಂಗವ ಮಾಡ,
ಅರ್ಥ-ಪ್ರಾಣಾಭಿಮಾನ ಮುಂತಾಗಿ ಗುರುಲಿಂಗಜಂಗಮಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಭೋಗಿಸುವ,
ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ,
ಅನ್ಯರನಾಶೆಗೈಯ್ಯ ಪಾತ್ರಾಪಾತ್ರವನರಿದೀವ
ಚತುರ್ವಿಧ ಪದವಿಯ ಹಾರ, ಅರಿಷಡ್ವರ್ಗಕ್ಕಳುಕ
ಕುಲಾದಿ ಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ
ಸಂಕಲ್ಪ ವಿಕಲ್ಪವ ಮಾದುವನಲ್ಲ, ಕಾಲೋಚಿತವ ಬಲ್ಲ,
ಕ್ರಮಯುಕ್ತವಾಗಿ ಷಟ್ಝಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ-
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವ ನಮ್ಮ ಬಸವಣ್ಣನು
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನ

೨೦೯.
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಆ ಅರಿವೆ ಲಿಂಗಜಂಗಮವೆಂದು ತೋರಿದ
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ

೨೧೦.
ಅಂಗ ಕ್ರಿಯಾಲಿಂಗವ ವೇದಿಸಿ
ಅಂಗ ಲಿಂಗದೊಳಗಾಯಿತು
ಮನ ಅರಿವ ಬೆರೆಸಿ, ಜಂಗಮಸೇವೆಯ ಮಾಡಿ
ಮನ ಜಂಗಮಲಿಂಗದೊಳಗಾಯಿತು
ಭಾವ ಗುರುಲಿಂಗದೊಳಗೆ ಬೆರೆಸಿ, ಮಹಾಪ್ರಸಾದವ ಭೋಗಿಸಿ
ಭಾವ ಗುರುಲಿಂಗದೊಳಗಾಯಿತು
ಚೆನ್ನಮಲ್ಲಿಕಾರ್ಜುನ ನಿಮ್ಮ ಒಲುಮೆಯಿಂದ
ಸಂದಳಿದು ಸ್ವಯಲಿಂಗವಾದೆನಯ್ಯ ಪ್ರಭುವೆ

೨೧೧.
ಅಂಗಸಂಗಿಯಾಗಿ ಸಂಬಂಧಿಯಲ್ಲ
ಲಿಂಗದೊಳಗಾಪ್ಯಾಯಿನಿಯಾಗಿ ಇತರ ಸು-
ಖಂಗಳ ಬಿಟ್ಟು ಕಳೆದು ಸಮನ ಸಾರಾಯನಾದ ಶರಣನು ||ಪಲ್ಲವ||
ಗುರುಕರುಣಸಂಗದಿಂದ ಶಿಷ್ಯನಿಂತು ಕರದಲ್ಲಿ ಹುಟ್ಟಿದನು
ಕರಣಸಹಿತ ಅವಗ್ರಾಹಿಯಾಗಿ ಘಾಳಿ ಸುಳುಹಡಗಿದ ಶರಣನು ||೧||
ಆಸೆಯೆಂಬ ಹದನುಳುಹಾಗಿ ಹಿಡಿದ ಛಲ ಬಿಡದೆಂಬ ಬೇರೂರಿ
ಸಂಕಲ್ಪವಿಕಲ್ಪಗಳೆರಡೂ ಇಲ್ಲದೆ ನಿಃಕಳಂಕನಾದನು ಶರಣನು ||೨||
ಮಾಡುವವರ ಕಂಡು ಮಾಡುವವನಲ್ಲ
ಮಾಡದವರ ಕಂಡು ಮಾಡದವನಲ್ಲ
ತಾ ಮಾಡುವ ಮಾಟಕೆ ತವಕಿಗನಾಗಿಪ್ಪ
ಹಿಂದುಮುಂದರಿಯದ ಶರಣನು ||೩||
ಎಲ್ಲವು ತಾನೆಂಬ ಕರುಣಾಕರನಲ್ಲ
ನಿಃಕರುಣಿಯಾಗಿ ಜಡದೇಹಿಯಲ್ಲ
ಭೋಗಿಪ ಭೋಗಂಗಳಾಮಿಷ
ತಾಮಸ ವಿಷಯವಿರಹಿತನು ಶರಣನು ||೪||
ಘನವನಿಂಬುಗೊಂಡ ಮನದ ಬೆಂಬಳಿವಿಡಿದುಳೆದಲ್ಲಿ
ನಿಜವಾಗಿ ನಿಂದನು ತಾನೆಂಬುದಿಲ್ಲ
ನಿರಂತರ ಸದ್ಗುರು ಚೆನ್ನಮಲ್ಲಿಕಾರ್ಜುನ
ನಿಮ್ಮ ಶರಣ ಬಸವಣ್ಣನು ||೫||

೨೧೨.
ಅಂಗದಲ್ಲಿ ಲಿಂಗಸಂಗ
ಲಿಂಗದಲ್ಲಿ ಅಂಗಸಂಗ ಮಾಡಿದನೆಂದರೆ
ಎನ್ನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನನ ಸ್ನೇಹದಲ್ಲಿ
ನಿನ್ನ ಕರುಣದ ಶಿಶು ನಾನು ಕಾಣ
ಸಂಗನಬಸವಣ್ಣ

೨೧೩.
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
ಇಂಗಿತವೇನೆಂದು ಬೆಸಗೊಂಬಿರಯ್ಯ?
ಅವರ ನಡೆಯೇ ಆಗಮ, ಅವರ ನುಡಿಯೇ ವೇದ
ಅವರ ಲೋಕದ ಮಾನವರೆನ್ನಬಹುದೇ?
ಆದೆಂತೆಂದೊಡೆ
"ಬೀಜಾದ್ಭವತಿ ವೃಕ್ಷಂ ತು
ಬೀಜೇ ತು ಲೀಯತೇ ಪುನಃ
ರುದ್ರಲೋಕಂ ಪರಿತ್ಯಕ್ತ್ವಾ
ಶಿವಲೋಕೇ ಭವಿಷ್ಯತಿ"
ಎಂಬುದಾಗಿ ಅಂಕೋಲೆಯ ಬೀಜದಿಂದಾಯಿತ್ತು ವೃಕ್ಷವು
ಆ ವೃಕ್ಷವು ಮರಳಿ ಆ ಬೀಜದೊಳಡಗಿತ್ತು
ಆ ಪ್ರಾಕಾರದಿಂ
ಆ ಲಿಂಗದೊಳಗಿದ್ದ ಪುರಾತನರು
ಆ ಲಿಂಗದೊಳಗೆ ಬೆರೆಸಿದರು ನೋಡಿರಯ್ಯ
ಇಂತಪ್ಪ ಪುರಾತನರಿಗೆ ನಾನು ಶರಣೆಂದು
ಹುಟ್ಟುಗೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ

೨೧೪.
ಲಿಂಗಕ್ಕೆ ರೂಪ ಸಲಿಸುವೆ
ಜಂಗಮಕ್ಕೆ ರುಚಿಯ ಸಲಿಸುವೆ
ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ
ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ
ನಿಮ್ಮ ಪ್ರಸಾದದಿಂದ ಧನ್ಯಳಾದೆನು ಚೆನ್ನಮಲ್ಲಿಕಾರ್ಜುನಯ್ಯ

೨೧೫.
ನಾನು ಮಜ್ಜನವ ಮಾಡುವುದಕ್ಕೆ ಮುನ್ನವೇ
ಜಂಗಮಕ್ಕೆ ಮಜ್ಜನ ಮಾಡಿಸುವೆ
ನಾನು ಸೀರೆಯನುಡುವುದಕ್ಕೆ ಮುನ್ನವೇ
ಜಂಗಮಕ್ಕೆ ದೇವಾಂಗವನುಡಿಸುವೆ
ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಸುಗಂಧದ್ರವ್ಯಗಳ ಲೇಪಿಸುವೆ
ನಾನು ಅಕ್ಷತೆಯನಿಡುವುದಕ್ಕೆ ಮುನ್ನವೇ
ಜಂಗಮಕ್ಕೆ ಅಕ್ಷತೆಯನಿಡುವೆ
ನಾನು ಧೂಪವಾಸನೆಯ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಧೂಪವಾಸನೆಯ ಕೊಡುವೆ
ನಾನು ಧೂಪಾರತಿಯ ನೋಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆರತಿಯ ನೋಡಿಸುವೆ
ನಾನು ಸಕಲ ಪದಾರ್ಥವ ಸ್ವೀಕರಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಮಿಷ್ಟಾನ್ನವ ನೀಡುವೆ
ನಾನು ಪಾನಂಗಳ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಅಮೃತಪಾನಂಗಳ ಕೊಡುವೆ
ನಾನು ಕೈಯ ತೊಳೆವುದಕ್ಕೆ ಮುನ್ನವೇ
ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ
ನಾನು ವೀಳೆಯಂ ಮಡಿವುದಕ್ಕೆ ಮುನ್ನವೇ
ಜಂಗಮಕ್ಕೆ ತಾಂಬೂಲವ ಕೊಡುವೆ
ನಾನು ಗದ್ದಿಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಉನ್ನತಾಸನವನಿಕ್ಕುವೆ
ನಾನು ಸುನಾದಗಳ ಕೇಳುವ ಮುನ್ನವೇ
ಜಂಗಮಕ್ಕೆ ಸಂಗೀತವಾದ್ಯಂಗಳ ಕೇಳಿಸುವೆ
ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆಭರಣಂಗಳ ತೊಡಿಸುವೆ
ನಾನು ವಾಹನಂಗಳನೇರುವುದಕ್ಕೆ ಮುನ್ನವೇ
ಜಂಗಮಕ್ಕೆ ವಾಹನವನೇರಿಸುವೆ
ನಾನು ಮನೆಯೊಳಗಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಗೃಹವ ಕೊಡುವೆ
ಇಂತೀ ಹದಿನಾರು ತೆರನ ಭಕ್ತಿಯ ಚರಲಿಂಗಕ್ಕೆ ಕೊಟ್ಟು
ಆ ಚಿರಲಿಂಗಮೂರ್ತಿ ಭೋಗಿಸಿದ ಬಳಿಕ
ನಾನು ಪ್ರಸಾದವ ಮುಂತಾಗಿ ಭೋಗಿಸುವೆನಲ್ಲದೆ
ಜಂಗಮನಿಲ್ಲದೆ ಇನಿತರೊಳಗೊಂದು
ಭೋಗವನಾದರೂ ನಾನು ಭೋಗಿಸಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಇಂತೀ ಕ್ರಮವಲ್ಲಿ ನಡೆದಾತಂಗೆ
ಗುರುವುಂಟು, ಲಿಂಗವುಂಟು, ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು,
ಆಚಾರವುಂಟು, ಭಕ್ತಿಯುಂಟು
ಈ ಕ್ರಮದಲ್ಲಿ ನಡೆಯದಾತಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ,
ಆಚಾರವಿಲ್ಲ, ಸದ್ಭಕ್ತಿಯಿಲ್ಲ
ಅವನ ಬಾಳುವೆ ಹಂದಿಯ ಬಾಳುವೆ
ಅವನ ಬಾಳುವೆ ಕತ್ತೆಯ ಬಾಳುವೆ
ಅವನು ಸುರೆ-ಮಾಂಸ ಭುಂಜಕನು
ಅವನು ಸರ್ವಚಂಡಾಲನಯ್ಯ ಚೆನ್ನಮಲ್ಲಿಕಾರ್ಜುನ

೨೧೬.
ಅಯ್ಯ ಸದಾಚಾರ-ಸದ್ಭಕ್ತಿ-ಸತ್ಕ್ರಿಯೆ-ಸಮ್ಯಜ್ಞಾನ
ಸದ್ವರ್ತನೆ-ಸಗುಣ-ನಿರ್‍ಗುಣ-ನಿಜಗುಣ-ಸಚ್ಚರಿತ-ಸದ್ಭಾವ
ಅಕ್ರೋಧ-ಸತ್ಯವಚನ-ಕ್ಷಮೆ-ದಯೆ-ಭವಿಭಕ್ತಭೇದ
ಸತ್ಪಾತ್ರದ್ರವ್ಯಾರ್ಪಣ-ಗೌರವಬುದ್ಧಿ-ಲಿಂಗಲೀಯ
ಜಂಗಮಾನುಭಾವ-ದಶವಿಧ ಪಾದೋದಕ-ಏಕಾದಶಪ್ರಸಾದ
ಷೋಡಶ ಭಕ್ತಿನಿರ್ವಾಹ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ
ತ್ರಿವಿಧ ಷಡ್ವಿಧ ನವವಿಧ ಜಪ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಿತ
ಚಿದ್ವಿಭೂತಿ ಸ್ನಾನ ಧೂಳನ ಧಾರಣ
ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿ ಧಾರವ
ತಾ ಮಾಡುವ ಸತ್ಯಕಾಯಕ
ತಾ ಬೇಡುವ ಸದ್ಭಕ್ತಿ ಭಿಕ್ಷ
ತಾ ಕೊಟ್ಟು ಕೊಂಬ ಭೇದ
ತಾನಾಚರಿಸುವ ಸತ್ಯ ನಡೆನುಡಿ
ತಾ ನಿಂದ ನಿರ್ವಾಣಪದ-
ಇಂತೀ ಮುವ್ವತ್ತೆರಡು ಕಲೆಗಳ ಸದ್ಗುರುಮುಖದಿಂದರಿದ
ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ
ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರೂ ನೋಡಾ!
ಇಂತು ಪ್ರಮಥಗಣಂಗಳಾಚರಿಸಿದ ಸತ್ಯಸನ್ಮಾರ್ಗವನರಿಯದ
ಮೂಢ ಅಧಮರನೆಂತು
ಶಿವಶಕ್ತಿ-ಶಿವಭಕ್ತಿ-ಶಿವಜಂಗಮವೆಂಬೆನಯ್ಯ
ಚೆನ್ನಮಲ್ಲಿಕಾರ್ಜುನ

೨೧೭.
ಸಪ್ತಕೋಟಿಮಹಾಮಂತ್ರಂಗಳಿಗೆ
ಉಪಮಂತ್ರಂಗಳುಂಟು
ಆ ಉಪಮಂತ್ರಂಗಳಿಂಗೆ ಲೆಕ್ಕವಿಲ್ಲ
ಆ ಜಾಳು ಮಂತ್ರಂಗಳಿಗೆ ಭ್ರಮಿಸಿ
ಚಿತ್ತವ್ಯಾಕುಲವಾಗಿ ಕೆಟ್ಟುಹೋಗದಿರು ಮನವೇ
ಶಿವಶಿವಾ ಎಂದೆಡೆ ಸಾಲದ್?
ಒಂದು ಕೋಟಿ ಮಹಾಪಾತಕ ಪರಿಹಾರವಕ್ಕು
ಆದೆಂತೆಂದಡೆ ಶಿವಧರ್ಮೇ
ಶಿವೇತಿ ಮಂಗಲಂ ನಾಮ
ಯಸ್ಯ ವಾಚಿ ಪ್ರವರ್ತತೇ
ಭಸ್ಮೀಭವಂತಿ ತಸ್ಯಾಶು
ಮಹಾಪಾತಕಕೋಟಯಃ
ಎಂದುದಾಗಿ, ಸದ್ಗುರು ಚೆನ್ನಮಲ್ಲಿಕಾರ್ಜುನ ತೋರಿದ
ಸಹಜಮಂತ್ರವೆನಗಿದೇ ಪರಮತತ್ವವಯ್ಯ

೨೧೮.
ಒಪ್ಪುವ ಶ್ರೀವಿಭೂತಿಯ ನೊಸಲಲ್ಲಿ ಧರಿಸಿ
ದೃಷ್ಟಿವಾರೆ ನಿಮ್ಮ ನೋಡಲೊಡನೆ
ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ
ದುರಿತವ ಪರಿಹರಿಸಬಲ್ಲಡೆ
ಓಂ ನಮಶ್ಶಿವಾಯ ಶರಣೆಂಬುದೇ ಮಂತ್ರ
ಓಂ ನಮಶ್ಶಿವಾಯೇತಿ ಮಂತ್ರಂ
ಯಃ ಕರೋತಿ ತ್ರಿಪುಂಡ್ರಕಂ
ಸಪ್ತ ಜನ್ಮಕೃತಂ ಪಾಪಂ
ತತ್ ಕ್ಷಣಾದೇವ ವಿನಶ್ಯತಿ
ಎಂದುದಾಗಿ ಸಿಂಹದ ಮರಿಯ ಸೀಳುನಾಯಿ ತಿಂಬಡೆ
ಭಂಗವಿನ್ನಾರದು ಚೆನ್ನಮಲ್ಲಿಕಾರ್ಜುನ?

೨೧೯.
ಹಿತವಿದೇ, ಸಕಲಲೋಕದ ಜನಕ್ಕೆ ಮತವಿದೇ
ಶೃತಿ-ಪುರಾಣಾಗಮದ ಗತಿಯಿದೇ
ಭಕುತಿಯ ಬೆಳಗಿನ ಉನ್ನತಿಯಿದೇ
ಇಂತಪ್ಪ ಶ್ರೀವಿಭೂತಿಯ ಧರಿಸಿರೆ
ಭವವ ಪರಿವುದು, ದುರಿತಸಂಕುಳವನೊರೆಸುವುದು
ನಿರುತವಿದು ನಂಬು ಮನುಜ! ಜವನ ಭೀತಿಯೀ ವಿಭೂತಿ
ಮರಣಭಯದಿಂದ ಅಗಸ್ತ್ಯ-ಕಶ್ಯಪ-ಜಮದಗ್ನಿಗಳು
ಧರಿಸಿದರಂದು ನೋಡಾ
ಶ್ರೀಶೈಲಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ

೨೨೦.
ಹಾಲು ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?
ಲಿಂಗದ ಪಾದತೀರ್ಥಪ್ರಸಾದವ ಕೊಂಡು
ಅನ್ನಬೋಧೆ-ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದರೆ
ತಡೆಯದೇ ಹುಟ್ಟಿಸುವ ಶ್ವಾನಗರ್ಭದಲ್ಲಿ
ಆದೆಂತೆಂದಡೆ-ಶಿವಧರ್ಮಪುರಾಣೇ
ಇಷ್ಟಲಿಂಗಮವಿಶ್ವಸ್ಯ
ತೀರ್ಥಲಿಂಗಂ ನಮಸ್ಕೃತಃ
ಶ್ವಾನಯೋನಿಶತಂ ಗತ್ವಾ
ಚಂಡಾಲಗೃಹಮಾಚರೇತ್
ಎಂದುದಾಗಿ-ಇದನರಿದು
ಗುರು ಕೊಟ್ಟ ಲಿಂಗದಲ್ಲಿಯೇ
ಎಲ್ಲಾ ತೀರ್ಥಂಗಳು, ಎಲ್ಲಾ ಕ್ಷೇತ್ರಂಗಳು
ಇಹವೆಂದು ಭಾವಿಸಿ ಮುಕ್ತರಪ್ಪುವುದಯ್ಯ
ಇಂತಲ್ಲದೆ-ಗುರು ಕೊಟ್ಟ ಲಿಂಗವ ಕಿರಿದು ಮಾಡಿ
ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ
ಅಘೋರನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನ

೨೨೧.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತತ್ ಶಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದಡೆ
ಮುಕ್ತಿಸಾಮ್ರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಲಶದ ಅಭಿಷೇಕವ ಮಾಡಿಸಲು
ಶಿವನ ಕಾರುಣ್ಯಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಂಗಳ ಮಧ್ಯದಲ್ಲಿ
ಮಹಾಲಿಂಗವನು ಕರಸ್ಥಲಾಮಲಕವಾಗಿ
ಶಿಷ್ಯನ ಕರಸ್ಥಲಕ್ಕೆ ಇಟ್ಟು, ಅಂಗದಲ್ಲಿ ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂದು ಮುಂದ ತೋರಿ ಹಿಂದ ಬಿಡಿಸಿದ
ಶ್ರೀಗುರುವಿನ ಸಾನಿದ್ಧ್ಯದಿಂದಾನು
ಬದುಕಿದೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ

೨೨೨.
ನಮ್ಮ ಮನೆಯಲಿಂದು ಹಬ್ಬ
ನಮಗೆ ಸಂದಣಿ ಬಹಳ
ಒಮ್ಮೆ ನುಡಿಸ ಹೊತ್ತಿಲ್ಲ
ಹೋಗಿ ವಿಷಯಗಳಿರಾ
ತನುವೆಂಬ ಮನೆಯೊಳಗೆ ನೆಲಸಿಪ್ಪ ಪರಮಾತ್ಮ
ಮನೆಯ ದೇವರ ಹಬ್ಬ! ಆ ಹಬ್ಬಕಿಂದು
ನೆನೆಯದೆ ಮಿಂದು ನಡೆಯದೆ ಹೋಗಿ ಬಲಗೊಂಡು
ನೆನಹಿನಮೃತಾನ್ನದುಪಹಾರವಿಡಬೇಕು
ನೆರಹುಗುಡದೆ ಏಕಾಂತದೊಳಗಿರಬೇಕು
ನೆರಹಬೇಕಮಲಗುಣ ಪರವಸ್ತುಗಳನು
ಪರಿಹರಿಸಿ ಕಳೆಯಬೇಕಯ್ಯ ವಿಷಯಗಳನು
ಎರಡಿಲ್ಲದೊಂದು ಮನದಲ್ಲಿ ಭಜಿಸಬೇಕು
ನೋಡದೆ ಕಂಡು, ನುಡಿಸದೆ ಹೊಗಳಿ ಭಕ್ತಿಯಿಂ
ಬೇಡದೆ ಪರಮಪದವಿಯ ಪಡೆಯಬೇಕು
ನಾಡಾಡಿ ದೈವದಂತಲ್ಲವಿದು ಅಸಮಾಕ್ಷ
ರೂಢಿಯೊಳು ಚೆನ್ನಮಲ್ಲನ ಭಜಿಸಬೇಕು

೨೨೩.
ಕಂಗಳ ನೋಟವು, ಕಾಯದ ಕರದಲಿ
ಲಿಂಗದ ಕೂಟವು ಶಿವಶಿವ ಚೆಲುವನು
ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆನಾರತಿಯ ||ಪಲ್ಲವ||
ಜಗವಂದ್ಯಗೆ ಬೇಟವ ಮಾಡಿದೆ, ನಾ
ಹಗೆಯಾದೆನು ಸಂಸಾರಕೆಲ್ಲ
ನಗುತೈದರೆ ಲಜ್ಜೆ ನಾಚಿಕೆಯೆಲ್ಲವ ತೊರೆದವಳೆಂದೆನ್ನ
ಗಗನಗಿರಿಯ ಮೇಲಿರ್ದಹನೆಂದೆಡೆ
ಲಗುನಿಯಾಗಿ ನಾನರುಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು ಮಿಗೆ ಒಲಿದಾರತಿಯ ||೧||
ಭಕುತಿರತಿಯ ಸಂಭಾಷಣೆಯಿಂದವೆ
ಯುಕುತಿಯ ಮರೆದೆನು, ಕಾಯದ ಜೀವದ
ಪ್ರಕೃತಿಯ ತೊರೆದೆನು, ಸುತ್ತಿದ ಮಾಯಾಪಾಶವ ಹರಿದೆನಲಾ
ಸುಕೃತಿಯಾಯಿತು ನಿಮ್ಮಯ ನೆನಹಿಂದವೆ
ಮುಕುತಿಯ ಫಲಗಳ ದಾಂಟಿಯೆ ಬಂದೆನು
ಸಕುತಿಯಾದೆ ನಾ ಪ್ರಾಣಲಿಂಗಕೆ ಮನವೊಲಿದಾರತಿಯ ||೨||
ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇರೊಂದೆನಿಸದೆ, ಪ್ರಾಣವು
ಬೆಚ್ಚಂತಿರ್ದುದು, ಅಚ್ಚೊತ್ತಿದಾ ಮಹಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗು ಪ್ರಕಾಶವು
ನಿಚ್ಚನಿರಂಜನ ಚೆನ್ನಮಲ್ಲಿಕಾರ್ಜುನ
ಗೆತ್ತುವೆನಾರತಿ ಈ ರತಿಯಿಂದವೆ ಮನವೊಲಿದಾರತಿಯ ||೩||

೨೨೪.
ಅಯ್ಯ, ಸರ್ವಮೂಲಾಹಂಕಾರವಿಡಿದು
ಕುಲಭ್ರಮೆ! ಬಲಭ್ರಮೆ! ಜಾತಿಭ್ರಮೆ!
ನಾಮ-ವರ್ಣ-ಆಶ್ರಮ-ಮತ-ಶಾಸ್ತ್ರಭ್ರಮೆ! ರಾಜ್ಯಭ್ರಮೆ!
ಧನ-ಧಾನ್ಯ-ಪುತ್ರ-ಮಿತ್ರ-ಐಶ್ವರ್ಯ-ತ್ಯಾಗ-ಯೋಗಭ್ರಮೆ!
ಕಾಯ-ಕರಣ-ವಿಷಯಭ್ರಮೆ!
ವಾಯು-ಮನ-ಭಾವ-ಜೀವ-ಮೋಹಭ್ರಮೆ!
ನಾಹಂ-ಕೋಹಂ ಭ್ರಮೆ! ಶಿವೋಹಂ ಭ್ರಮೆ ಮಾಯಾಭ್ರಮೆ!
ಮೊದಲಾದ ಮೂವತ್ತೆರಡು ಪಾಶಭ್ರಮಿತರಾಗಿ ತೊಳಲುವ
ವೇಷಧಾರಿಗಳ ಕಂಡು-
ಶಿವಭಕ್ತಿ-ಶಿವಭಕ್ತ-ಶಿವಪ್ರಸಾದಿ-ಶಿವಶರಣ-
ಶಿವೈಕ್ಯ-ಶಿವಜಂಗಮವೆಂದು
ನುಡಿಯಲಾರದೆ ಎನ್ನ ಮನ ನಾಚಿ
ನಿಮ್ಮಡಿಗಳಿಗಭಿಮುಖವಾಯಿತ್ತಯ್ಯ, ಚೆನ್ನಮಲ್ಲಿಕಾರ್ಜುನ

೨೨೫.
ಅಯ್ಯ ಚಿದಂಗ-ಚಿದ್ರನಲಿಂಗ-
ಶಿವ-ಭಕ್ತಿ-ಹಸ್ತ-ಮುಖ-ಪದಾರ್ಥ-ಪ್ರಸಾದ
ಎಂಬಿವಾದಿಯಾದ ಸಮಸ್ತಸಕೀಲಂಗಳ ನೆಲೆಕಲೆಯನರಿಯದೆ
ಜಿಹ್ವಾಲಂಪಟಕ್ಕೆ ಆಹ್ವಾನಿಸಿ
ಗುಹ್ಯಲಂಪಟದಲ್ಲಿ ವಿಸರ್ಜಿಸಿ
ಸಕಲೇಂದ್ರಿಯ ಮುಖದಲ್ಲಿ ಮೋಹಿಯಾಗಿ
ಸದ್ಗುರು ಕರುಣಾಮೃತರಸ ತಾನೆಂದರಿಯದೆ
ಬರಿದೆ, ಭಕ್ತ-ಮಾಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ
ಗುರು-ಚರ-ಪರವೆಂದು ಬೊಗಳುವ ಕುನ್ನಿಗಳ ನೋಡಿ
ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ

೨೨೬.
ಹಸಿವಿಂಗೆ ಭಿಕ್ಷವುಂಟು
ತೃಷೆಗೆ ಹಳ್ಳದಲ್ಲಿ ಸುಚಿತ್ತವಾದ ಅಗ್ರವಣಿಯುಂಟು
ಕಟ್ಟಿಕೊಂಬೆಡೆ ತಿಪ್ಪೆಯ ಮೇಲೆ ಅರಿವೆಯುಂಟು
ಶಯನಕ್ಕೆ ಹಾಳುದೇಗುಲವುಂಟು
ನಮ್ಮ ಸಮಸುಖಿಯಾಗಿ ನಿಮ್ಮ ಜ್ಞಾನವುಂಟು
ಚೆನ್ನಮಲ್ಲಿಕಾರ್ಜುನ

೨೨೭.
ಯೋಗಿಗೆ ಯೋಗಿಣಿಯಾಗಿಹಳು ಮಾಯೆ
ಜೋಗಿಗೆ ಜೋಗಿಣಿಯಾಗಿಹಳು ಮಾಯೆ
ಶ್ರವಣಗೆ ಕಂತಿಯಾದಳು ಮಾಯೆ
ಯತಿಗೆ ಪರಾರ್ಥ [=ಪರಾಕಿ]ವಾದಳು ಮಾಯೆ
ಹೆಣ್ಣಿಗೆ ಗಂಡು ಮಾಯೆ
ಗಂಡಿಗೆ ಹೆಣ್ಣು ಮಾಯೆ
ನಿಮ್ಮ ಮಾಯೆಗೆ ನಾನಂಜುವವಳಲ್ಲ ಚೆನ್ನಮಲ್ಲಿಕಾರ್ಜುನ

೨೨೮.
ಕಲ್ಯಾಣ-ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರೈಯ್ಯಾ ?
ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನ

೨೨೯.
ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗರುವಂಗೆ ಜಗವೆಲ್ಲ ಹೆಣ್ಣು ನೋಡಾ!

೨೩೦.
ಲೋಕವಿಡಿದು ಲೋಕದ ಸಂಗದಿಂದಿಪ್ಪೆನು
ಆಕಾರವಿಡಿದು ಸಾಕಾರಸಹಿತ ನಡೆವೆನು
ಹೊರಗೆ ಬಳಸಿ ಒಳಗೆ ಮೈಮರೆದಿಪ್ಪೆನು
ಬೆಂದ ನುಲಿಯಂತೆ ಹುರಿಗುಂದದಿಪ್ಪೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ,
ಹತ್ತರೊಳಗೆ ಹನ್ನೊಂದಾಗಿ ನೀರ ತಾವರೆಯಂತಿಪ್ಪೆನು

೨೩೧.
ತನುವ ಮೀರಿತ್ತು, ಮನವ ಮೀರಿತ್ತು
ಮಹವ ಮೀರಿತ್ತು
ಅಲ್ಲಿಂದತ್ತ ಭಾವಿಸುವ ಭಾವಕರಿಲ್ಲಾಗಿ ತಾರ್ಕಣೆಯಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ ಬೆರಸಲಿಲ್ಲದ ನಿಜತತ್ವವು

೨೩೨.
ಆಧಾರ-ಸ್ವಾಧಿಷ್ಠಾನ-ಮಣಿಪೂರಕ-
ಅನಾಹುತ-ವಿಶುದ್ಧಿ-ಆಜ್ಞೇಯವ ನುಡಿದರೇನು?
ಆದಿಯನಾದಿಯ [ಸುದ್ದಿಯ] ಕೇಳಿದಡೇನು, ಹೇಳಿದಡೇನು
ತನ್ನಲ್ಲಿದ್ದುದ ತಾನರಿಯದನ್ನಕ್ಕರ
ಉನ್ಮನಿರಭಸದ ಮನ ಪವನದ ಮೇಲೆ
ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲಯದವರು?

೨೩೩.
ನಿತ್ಯವೆಂಬ ನಿಜಪದವೆನ್ನ ಹತ್ತೆ ಸಾರ್ದುದ ಕಂಡ ಬಳಿಕ
ಚಿತ್ತ ಕರಗಿ ಮನ ಕೊರಗಿ
ಹೃದಯವರಳಿತು ನೋಡಯ್ಯ
ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ
ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ
ಮರೆದೊರಗಿದೆ ನೋಡಯ್ಯ

೨೩೪.
ಆಶೆಯಾಮಿಷವಳಿದು
ಹುಸಿ ವಿಷಯಂಗಳೆಲ್ಲಾ ಹಿಂಗಿ
ಸಂಶಯಸಂಬಂಧ ವಿಸಂಬಂಧವಾಯಿತ್ತು ನೋಡಾ
ಎನ್ನ ಮನದೊಳಗೆ ಘನಪರಿಣಾಮವ ಕಂಡು
ಮನ ಮಗ್ನವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ,
ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯ

೨೩೫.
ಆದಿಅನಾದಿಯ ನಿತ್ಯಾನಿತ್ಯವ ತಿಳಿಯಲರಿಯದೆ
ವಾಯಕ್ಕೆ ಪರಬ್ರಹ್ಮವ ನುಡಿವ
ವಾಯುಪ್ರಾಣಿಗಳವರೆತ್ತ ಬಲ್ಲರೋ ಆ ಪರಬ್ರಹ್ಮದ ನಿಲವ?
ಅದೆಂತೆಂದಡೆ
ಆದಿಯೇ ದೇಹ, ಅನಾದಿಯೇ ನಿರ್ದೇಹ
ಆದಿಯೇ ಸಕಲ, ಅನಾದಿಯೇ ನಿಷ್ಕಲ
ಆದಿಯೇ ಜಡ, ಅನಾದಿಯೇ ಅಜಡ
ಆದಿಯೇ ಕಾಯ, ಅನಾದಿಯೇ ಪ್ರಾಣ
ಈ ಎರಡರ ಯೋಗವ ಭೇದಿಸಿ
ತನ್ನಿಂದ ತಾ ತಿಳಿದು ನೋಡಲು
ಆದಿಸಂಬಂಧಮಪ್ಪ ಭೂತಂಗಳೂ ನಾನಲ್ಲ,
ದಶೇಂದ್ರಿಯಗಳೂ ನಾನಲ್ಲ,
ಅಷ್ಟಮದಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು
ಷಡ್ಭಾವವಿಕಾರಂಗಳು ಷಟ್ಕರ್ಮಂಗಳು, ಷಡ್ಧಾತುಗಳು
ಸಪ್ತವ್ಯಸನಂಗಳು, ತನುತ್ರಯಂಗಳು, ಜೀವತ್ರಯಂಗಳು,
ಮನತ್ರಯಂಗಳು, ಮಲತ್ರಯಂಗಳು, ಗುಣತ್ರಯಂಗಳು,
ಭಾವತ್ರಯಂಗಳು, ತಾಪತ್ರಯಂಗಳು, ಷಟ್ಕರಣಂಗಳು,
ಇಂತಿವು ಆದಿಯಾಗಿ ತೋರುವ ತೋರಿಕೆಯೆ ನಾನಲ್ಲ
ಎನ್ನವೇ ಅಲ್ಲ!
ಎನ್ನ ಅಧೀನವಾಗಿರ್ಪವು, ನಾನಿವರ ಅಧೀನವಲ್ಲ
ಎನ್ನ ತುರ್ಯಾತುರ್ಯತೀತವಪ್ಪ ಸಚ್ಚಿದಾನಂದ,
ನಿತ್ಯಪರಿಪೂರ್ಣವೇ ತನ್ನಿರವೆಂದು ತಿಳಿಯೆ-
ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದಾ ಬೆಸುಗೆ ಬಿಟ್ಟು
ನಿರಾಳದಲ್ಲಿ ನಿರವಯವನೆಯ್ದಲರಿಯದೆ
ಮತ್ತೆಯೂ ಭೌತಿಕಸಂಬಂಧಿಯಾಗಿ ಇರುತಿರಲು
ಈ ತತ್ವದಾದಿ ತಾನೆಂತೆನಲು
ಆ ಪರಬ್ರಹ್ಮವಪ್ಪ-ನಿತ್ಯನಿರಾಳ ನಿಶ್ಶೂನ್ಯಲಿಂಗವೇ
ತನ್ನ ಲೀಲಾವಿಲಾಸದಿಂದ ತಾನೇ ಸುನಾದ-ಬಿಂದು-ಪ್ರಕಾಶ
ತೇಜೋಮೂರ್ತಿಯಾಗಿ ನಿಂದು
ಆ ಮಹಾಲಿಂಗವೆನಿಸಿತ್ತು
ಆ ಪಂಚಸಾದಾಖ್ಯವೇ ಪಂಚಲಿಂಗಪ್ರಕಾಶವೆನಿಸಿತ್ತು
ಆ ಪಂಚಲಿಂಗಪ್ರಕಾಶವೇ ಪಂಚಮುಖವೆನಿಸಿತ್ತು

ಆ ಪಂಚಮುಖದಿಂದವೇ ಪಂಚಾಕ್ಷರಿ ಉತ್ಪತ್ತಿ
ಆ ಪಂಚಾಕ್ಷರಿಯಿಂದವೇ ಪಂಚಕಲೆಗಳುತ್ಪತ್ತಿ
ಆ ಪಂಚಕಲೆಗಳಿಂದಲೇ ಪಂಚಶಕ್ತಿಗಳುತ್ಪತ್ತಿ
ಆ ಪಂಚಶಕ್ತಿಗಳಿಂದವೇ
ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳ ಜನನ
ಆ ಜ್ಞಾನ-ಮನ-ಬುದ್ಧಿ-ಅಹಂಕಾರಗಳಿಂದವೇ
ಪಂಚತನ್ಮಾತ್ರೆಗಳುತ್ಪತ್ತಿ
ಆ ಪಂಚತನ್ಮಾತ್ರೆಗಳಿಂದವೇ ಪಂಚಭೂತಂಗಳುತ್ಪತ್ತಿ
ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು
ಆ ಅಂಗಕ್ಕೆ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳು
ಪ್ರತ್ಯಂಗವೆನಿಸಿತ್ತು
ಇಂತೀ ದೇಹಸಂಬಂಧಮಂ
ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ
ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು
ಎಲ್ಲಿ ಆಯಿತು ಅಲ್ಲೇ ಅಡಗಿಸಿ
ಆ ಕಾಯದ ಪೂರ್ವಾಶ್ರಯವನಳಿದು
ಮಹಾಘನಲಿಂಗವ ವೇಧಿಸಿ [ಕೊಟ್ಟು]
ಶಿವ ತಾನೆ ಗುರುವಾಗಿ ಬಂದು
ಆ ಗುರು ತಾನೆ ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿಯೆಂತೆಂದೆಡೆ
ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ
ಆ ಅಂಗಕ್ಕೆ ಕಲೆಗಳನೆ ಷಡ್ವಿಧಭಕ್ತಿಗಳೆಂದೆನಿಸಿ
ಆ ಶಕ್ತಿಗಳಿಗೆ ಷಡ್ವಿಧಭಕ್ತಿಯನಳವಡಿಸಿ
ಆ ಭಕ್ತಿಗಳಿಗೆ ಭಾವ-ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳನೆ
ಷಡ್ವಿಧ ಹಸ್ತಂಗಳೆನಿಸಿ
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ
ಷಡ್ವಿಧ ಲಿಂಗಗಳೆಂದೆನಿಸಿ
ಆ ಲಿಂಗಂಗಳಿಗೆ ಷಡಕ್ಷರಿಯನೇ ಷಡ್ವಿಧ ಮಂತ್ರವೆಂದೆನಿಸಿ
ಆ ಮಂತ್ರಲಿಂಗಂಗಳಿಗೆ ಹೃದಯವೊಂದುಗೂಡಿ
ಆ ಪಂಚೇಂದ್ರಿಯಂಗಳನೆ ಷಡ್ವಿಧಮುಖಂಗಳೆಂದೆನಿಸಿ
ಆ ಮುಖಂಗಳಿಗೆ ತನ್ಮಾತ್ರೆಗಳನೆ ದ್ರವ್ಯಪದಾರ್ಥಂಗಳೆನಿಸಿ
ಆ ದ್ರವ್ಯಪದಾರ್ಥಂಗಳನು ಆಯಾಯಾ ಮುಖದ ಲಿಂಗಂಗಳಲ್ಲಿ
ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ
ಅಂಗಸ್ಥಲಂಗಳಡಗಿ ತ್ರಿವಿಧಲಿಂಗಸ್ಥಲಂಗಳುಳಿದು
ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ
ಗುರುವಿನಲ್ಲಿ ಶುದ್ಧ ಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ
ಜಂಗಮದಲ್ಲಿ ಪ್ರಸಿದ್ಧಪ್ರಸಾದ
ಇಂತೀ ತ್ರಿವಿಧಪ್ರಸಾದ ಏಕಾರ್ಥವಾಗಿ
ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣನು
ಜ್ಞಾನಿ ಅಲ್ಲ, ಅಜ್ಞಾನಿ ಮುನ್ನವೇ ಅಲ್ಲ
ಶೂನ್ಯನಲ್ಲ, ನಿಶ್ಶೂನ್ಯನಲ್ಲ
ದ್ವೈತಿಯಲ್ಲ, ಅದ್ವೈತಿಯಲ್ಲ
ಇಂತೀ ಉಭಯಾತ್ಮಕ ತಾನೆಯಾಗಿ
ಇದು ಕಾರಣ-
ಅದರ ಆಗು-ಹೋಗು ಸಕೀಲಸಂಬಂಧವ
ಚೆನ್ನಮಲ್ಲಿಕಾರ್ಜುನ ನಿಮ್ಮ ಶರಣರೇಬಲ್ಲರು

೨೩೬.
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ
ಏಕೆ?
ಆತನ ಧನಕ್ಕೆ ತಂದೆಯಾದನಲ್ಲದೆ
ಆತನ ಮನಕ್ಕೆ ತಂದೆಯಾದನೆ?
ಏಕೆ?
ಆತನ ಮನವನರಿಯನಾಗಿ
ಆತನ ಧನಕ್ಕೆ ತಂದೆಯಾದನು
ತಮ್ಮಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು
ನಿಮ್ಮ ನಿಜಭಕ್ತರಲ್ಲಯ್ಯ ಚೆನ್ನಮಲ್ಲಿಕಾರ್ಜುನ

೨೩೭.
ಅರ್ಥ ಸಂನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೆಯೂ ಕೊಳ್ಳದಿರಬೇಕು
ರುಚಿ ಸನ್ಯಾಸಿಯಾದಡೇನಯ್ಯಾ
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು
ಸ್ತ್ರೀ-ಸನ್ಯಾಸಿಯಾದಡೇನಯ್ಯಾ
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ ತಪ್ಪಿಲ್ಲದಿರಬೇಕು
ದಿಗಂಬರಿಯಾದಡೇನಯ್ಯಾ
ಮನ ಬತ್ತಲೆಯಿರಬೇಕು
ಇಂತೀ ಚತುರ್ವಿಧ ಹೊಲಬನರಿಯದೆ
ವೃಥಾ ಕೆಟ್ಟರು ಕಾಣಾ ಚೆನ್ನಮಲ್ಲಿಕಾರ್ಜುನಾ

೨೩೮.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತಚ್ಛಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದೊಡೆ
ಮುಕ್ತಿರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಳಶದ ಅಭಿಷೇಕವ ಮಾಡಿಸಲು
ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಗಣಂಗಳ ಮಧ್ಯದಲ್ಲಿ
ಮಹಾಲಿಂಗವನು ಕರತಳಾಮಳಕವಾಗಿ
ಶಿಷ್ಯನ ಕರಸ್ಥಲಕ್ಕೆ ಇತ್ತು ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ
ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂತು ಮುಂದ ತೋರಿಸಿ ಹಿಂದೆ ಬಿಡಿಸಿದ
ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

೨೩೯.
ಧನದ ಮೇಲೆ ಬಂದವರೆಲ್ಲ ಅನುಸಾರಿಗಳಲ್ಲದೆ
ಅನುವ ಮಾಡಬಂದವರಲ್ಲ
ಮನದ ಮೇಲೆ ಬಂದು ನಿಂದು ಜರಿದು ನುಡಿದು
ಪಥವ ತೋರಬಲ್ಲಡಾತನೇ ಸಂಬಂಧಿ
ಹೀಂಗಲ್ಲದೆ, ಅವರಿಚ್ಛೆಯ ನುಡಿದು ತನ್ನುದರವ ಹೊರೆವನಕ
ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ

೨೪೦.
ಸೆಜ್ಜೆ ಉಪ್ಪರಿಸಿ, ಶಿವಲಿಂಗ ಕರಸ್ಥಲಕ್ಕೆ ಬರೆ,
ಪ್ರಜ್ವಲಿಸಿ ತೊಳಗಿ ಬೆಳಗುತ್ತಿಹ ಕಾಂತಿಯಲ್ಲಿ
ಜಜ್ಜರಿಸಿ ತನು-ಮನ, ದೃಷ್ಟಿನಟ್ಟು
ನಟ್ಟದೃಷ್ಟಿಯೊಳು ಒಜ್ಜರಿಸಿ ಹರಿವ
ಶಿವಸುಖರಸದೊಳೋಲಾಡುತೆಂದಿಪ್ಪೆನೊ
ನಿಮ್ಮ ಸಜ್ಜನಿಕೆ-ಸದ್ಭಕ್ತಿಯ ತಲೆಯೊತ್ತಿ ಕೂಡಿ ಆಡಿ ಲಜ್ಜೆಗೆಟ್ಟು
ನಿಮ್ಮನೆಂದಿಗೆ ನೆರೆವೆ ಚೆನ್ನಮಲ್ಲಿಕಾರ್ಜುನ

೨೪೧.
ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕಂಡೆನ್ನ
ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನೆದೆನ್ನ
ಕಂಗಳು ಶುದ್ಧವಾಯಿತ್ತು ಸಕಲಗಣಂಗಳ ನೋಡಿಯೆನ್ನ
ಶ್ರೋತ್ರ ಶುದ್ಧವಾಯಿತ್ತು
ಅವರ ಕೀರ್ತಿಯ ಕೇಳಿಯೆನ್ನ
ಘ್ರಾಣ ಶುದ್ಧವಾಯಿತ್ತು
ನಿಮ್ಮ ಪಾದಾರ್ಪಿತ ಪರಿಮಳವ ವಾಸಿಸಿಯೆನ್ನ
ಜಿಹ್ವೆ ಶುದ್ಧವಾಯಿತ್ತು ನಿಮ್ಮ ಶರಣರೊಕ್ಕುದ ಕೊಂಡೆನಾಗಿ
ಭಾವನೆಯೆನಗಿದು ಜೀವನ ಕೇಳಾ ಲಿಂಗ ತಂದೆ
ನೆಟ್ಟನೆ ನಿಮ್ಮ ಮನ ಮುಟ್ಟಿ ಪೂಜಿಸಿ
ಭವಗೆಟ್ಟೆ ನಾನು ಚೆನ್ನಮಲ್ಲಿಕಾರ್ಜುನ

೨೪೨.
ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ
ಛಲಮದವೆಂಬುದಿಲ್ಲ ಪ್ರತಿದೂರನಾಗಿ
ಧನಮದವೆಂಬುದಿಲ್ಲ ತ್ರಿಕರಣಶುದ್ಧನಾಗಿ
ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದೆನಾಗಿ
ಮತ್ತಾವ ಮದವಿಲ್ಲ ನೀನವಗವಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣ ಅಕಾಯಚರಿತ್ರನಾಗಿ

೨೪೩.
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ
ಶಿವನ ನೆನೆಯಿರೇ! ಶಿವನ ನೆನೆಯಿರೇ!
ಈ ಜನ್ಮ ಬಳಿಕಿಲ್ಲ
ಚೆನ್ನಮಲ್ಲಿಕಾರ್ಜುನದೇವರ ದೇವ
ಪಂಚಮಹಾಪಾತಕರೆಲ್ಲ ಮುಕ್ತಿವಡೆದರು

೨೪೪.
ಕರುವಿನ ರೂಹು ಅರಗಿಳಿಯನೋದಿಸುವಂತೆ
ಓದಿಸುವುದಕೆ ಜೀವವಿಲ್ಲ
ಕೇಳುವುದಕ್ಕೆ ಜ್ಞಾನವಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮನರಿಯದವನ ಭಕ್ತಿ
ಕರುವಿನ ರೂಹು ಅರಗಿಳಿಯ ನೋದಿಸುವಂತೆ

೨೪೫.
ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯ?
ಹೆರರನೊಲ್ಲದೆ ಬೇಟಕ್ಕೆ ಕಿತವೇಕಯ್ಯ?
ಚೆನ್ನಮಲ್ಲಿಕಾರ್ಜುನದೇವರ ದೇವನೊಂದಿಗೆ
ಬಿಡದ ನೇಹಕ್ಕೆ ಕಿತವೇಕೆ?

೨೪೬.
ಮುತ್ತೂ ನೀರಲಾಯಿತ್ತು
ವಾರಿಕಲ್ಲೂ ನೀರಲಾಯಿತ್ತು
ಉಪ್ಪೂ ನೀರಲಾಯಿತ್ತು
ಉಪ್ಪು ಕರಗಿತ್ತು, ವಾರಿಕಲ್ಲೂ ಕರಗಿತ್ತು
ಮತ್ತು ಕರಗಿದುದನಾರೂ ಕಂಡವರಿಲ್ಲ
ಈ ಸಂಸಾರಿಮಾನವರು ಲಿಂಗವ ಮುಟ್ಟಿ
ಭವಭಾರಿಗಳಾದರು
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

೨೪೭.
ಬೋಳೆಯನೆಂದು ನಂಬಬೇಡ
ಡಾಳಕನವನು, ಜಗದ ಬಿನ್ನಾಣಿ
ಬಾಣ-ಮಯೂರ-ಕಾಳಿದಾಸ-ಓಹಿಲನುದ್ಭಟ
ಮಲುಹಣನವರಿಗಿತ್ತ ಪರಿ ಬೇರೆ
ಮುಕ್ತಿ-ಭುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬನು
ಚೆನ್ನಮಲ್ಲಿಕಾರ್ಜುನನು

೨೪೮.
ಜಾತಿಶೈವ-ಅಜಾತಿಶೈವವೆಂದೆರಡು
ಪ್ರಕಾರವಾಗಿಹುದಯ್ಯ
ಜಾತಿಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯ
ಅಜಾತಿಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯ
ಜಾತಿಶೈವರೆಂಬವರು ಸರ್ವಭೋಗಂಗಳ ಬಯಸಿ ಮಾಡುವರಾಗಿ
ಯದ್ದ್ವಾರೇ ಮತ್ತ ಮಾತಂಗಾಃ ವಾಯುವೇಗಾಸ್ತುರಂಗಮಾಃ
ಪೂರ್ಣೇಂದುವದನಾ ನಾರ್ಯಃ ಶಿವಪೂಜಾವಿಧೇ ಫಲಂ
ಎಂದುದಾಗಿ-ಇದು ಜಾತಿಶೈವರಿಗೆ ಕೊಟ್ಟ ಭೋಗಂಗಳಯ್ಯ
ಅಜಾತಿಶೈವರು ಗುರುಲಿಂಗಕ್ಕೆ ತನುಮನಧನವ ನಿವೇದಿಸಿ
ಸರ್ವಸೂತಕರಹಿತವಾಗಿಹರಯ್ಯ
ಅಹಂ ಮಾಹೇಶ್ವರಪ್ರಾಣೋ ಮಾಹೇಶ್ವರೋ ಮಮ ಪ್ರಾಣಃ
ತಥೈವೈಕ್ಯಂ ತು ನಿಷ್ಕ್ರಿಯಂ ಅಚ್ಚಲಿಂಗೈಕ್ಯಮೇವ ಚ
ಇದು ಕಾರಣ ಸರ್ವೇಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿ ಕಾಯವೆಂಬೈಕ್ಯಪದವನು
ಅಜಾತಿಶೈವರಿಗೆ ಕೊಡುವನಯ್ಯ

೨೪೯.
ಸತ್ತ ಹೆಣ ಕೂಗಿದುದುಂಟು
ಬೈಚಿಟ್ಟ ಬಯಕೆ ಕರೆದುದುಂಟು
ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು
ಇದು ನಿಶ್ಚಯಿಸಿ ನೋಡಿ ಚೆನ್ನಮಲ್ಲಿಕಾರ್ಜುನದೇವನಲ್ಲಿ

೨೫೦.
ಮರೆದೊರಗಿ ಕನಸ ಕಂಡೇಳುವಲ್ಲಿ
ಸತ್ತ ಹೆಣ ಎದ್ದಿತ್ತು
ತನ್ನ ಋಣನಿಧಾನ ಎದ್ದು ಕರೆಯಿತ್ತು
ಹೆಪ್ಪಿಟ್ಟ ಹಾಲು ಘಟ್ಟಿ ತುಪ್ಪವಾಗಿ ಸಿಹಿಯಾಯಿತ್ತು
ಇದಕ್ಕೆ ತಪ್ಪ ಸಾಧಿಸಲೇಕೆ?
ಚೆನ್ನಮಲ್ಲಿಕಾರ್ಜುನದೇವನ ಅಣ್ಣಗಳಿರಾ

೨೫೧.
ಎನಗೇಕಯ್ಯ? ಸಾವ ಪ್ರಪಂಚಿನ ಪುತ್ಥಳಿ
ಮಾಯಿಕದ ಮಲಭಾಂಡ ಆತುರದ ಭವನಿಳಯ
ಜಲಕುಂಭದ ಒಡೆಯಲ್ಲಿ ಒಸರುವ ನೆಲೆಮನೆ ಎನಗೇಕಯ್ಯ?
ಬೆರಳು ತಾಳ ಹಣ್ಣ ಹಿಸಿದಡೆ ಮೆಲಲುಂಟೆ
ಎನ್ನ ತಪ್ಪನೊಪ್ಪಗುಳ್ಳಾ ಚೆನ್ನಮಲ್ಲಿಕಾರ್ಜುನದೇವ

೨೫೨.
ಊಡಿದಡುಣ್ಣದು, ನೀಡಿದಡರಿಯದು
ಕಾಣದು ಬೇಡದು, ಒಲಿಯದು ನೋಡಾ
ಊಡಿದರುಂಡು ನೀಡೀದಡೊಲಿದು
ಬೇಡಿದ ವರವ ಕೊಡುವ ಜಂಗಮಲಿಂಗದ ಪಾದವ
ಹಿಡಿದು ಬದುಕಿದೆ ಕಾಣಾ ಚೆನ್ನಮಲ್ಲಿಕಾರ್ಜುನ

೨೫೩.
ಕಾಯ ಪ್ರಸಾದವೆನ್ನ ಮನ ಪ್ರಸಾದವೆನ್ನ
ಪ್ರಾಣ ಪ್ರಸಾದವೆನ್ನ ಭಾವ ಪ್ರಸಾದವೆನ್ನ
ಸೈಧಾನ ಪ್ರಸಾದವೆನ್ನ ಸಮಭೋಗ ಪ್ರಸಾದವೆನ್ನ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಪ್ರಸಾದವ ಹಾಸಿ ಹೊದಿಸಿಕೊಂಡಿಪ್ಪೆ

೨೫೪.
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ
ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ
ವಿಧಿಯ ಮೀರುವ ಅಮರರಿಲ್ಲ
ಕ್ಷುಧೆ-ವ್ಯಸನ-ವಿಧಿಗಂಜಿ ನಾ ನಿಮ್ಮ ಮರೆವೊಕ್ಕು
ಚೆನ್ನಮಲ್ಲಿಕಾರ್ಜುನ ಬದುಕಿದೆ

೨೫೫.
ಅರಿದೆನೆಂದೆಡೆ ಅರಿಯಬಾರದು ನೋಡಾ
ಘನಕ್ಕೆ ಘನ ತಾನೆ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು

೨೫೬.
ಎನ್ನಂತೆ ಪುಣ್ಯಂಗೆಯ್ದವರುಂಟೆ?
ಎನ್ನಂತೆ ಭಾಗ್ಯಂಗೆಯ್ದವರುಂಟೆ?
ಕಿನ್ನರನಂತಪ್ಪ ಸೋದರನೆನಗೆ
ಏಳೇಳು ಜನ್ಮದಲ್ಲಿ ಶಿವಭಕ್ತರೇ ಬಂಧುಗಳೆನಗೆ
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ

೨೫೭.
ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯ
ಅಯ್ಯಾ ನಿಮ್ಮ ಶರಣರು ಇದ್ದ ಪುರವೇ ಕೈಲಾಸಪುರವಯ್ಯ
ಅಯ್ಯಾ ನಿಮ್ಮ ಶರಣರು ನಿಂದುದೇ ನಿಜನಿವಾಸವಯ್ಯಾ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ
ಆನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು

೨೫೮.
ಗುರುವೆ ತೆತ್ತಿಗನಾದ
ಲಿಂಗವೆ ಮದವಳಿಗನಾದ
ನಾನು ಮದವಳಿಗೆಯಾದೆನು
ಈ ಭುವನವೆಲ್ಲರಿಯಲು
ಅಸಂಖ್ಯಾತರೆನಗೆ ತಾಯಿತಂದೆಗಳು
ಕೊಟ್ಟರು ಪ್ರಭುವಿನ ಮನೆಗೆ
ಸಾದೃಶ್ಯವಪ್ಪ ವರನ ನೋಡಿ
ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನಾದ ಬಳಿಕ
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ

೨೫೯.
ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ಬಯಲಾಯಿತ್ತು
ಪ್ರುಭುವೆ ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನ್ನ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗೆ ಮತ್ತಾವುದಿಲ್ಲವಯ್ಯ ಪ್ರಭುವೆ

೨೬೦.
ಅಂಗಸಂಗದಲ್ಲಿ ಲಿಂಗಸಂಗಿಯಾದೆ
ಲಿಂಗಸಂಗದಲ್ಲಿ ಅಂಗಸಂಗಿಯಾದೆ
ಉಭಯಸಂಗವನರಿಯದೆ ಪರಿಣಾಮಿಯಾದೆನು
ನುಡಿಯ ಗಡಣವ ಮರೆದು ತೆರಹಿಲ್ಲದಿದ್ದರೇನು
ಎನ್ನ ದೇಹ ಚೆನ್ನಮಲ್ಲಿಕಾರ್ಜುನನ ಬೆರೆಸಿದ ಬಳಿಕ
ಇನ್ನು ನಾನು ಏನೆಂದೂ ಅರಿಯೆನಯ್ಯ

೨೬೧.
ಅಂಗದೊಳಗೆ ಅಂಗವಾಗಿ ಅಂಗಲಿಂಗೈಕ್ಯವ ಮಾಡಿದೆ
ಮನದೊಳಗೆ ಮನವಾಗಿ ಮನ ಲಿಂಗೈಕ್ಯವ ಮಾಡಿದೆ
ಭಾವದೊಳಗೆ ಭಾವವಾಗಿ ಭಾವಲಿಂಗೈಕ್ಯವ ಮಾಡಿದೆ
ಅರಿವಿನೊಳಗೆ ಅರಿವಾಗಿ ಜ್ಞಾನಲಿಂಗೈಕ್ಯವ ಮಾಡಿದೆ
ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ
ನಿವೃತ್ತಿಲಿಂಗೈಕ್ಯವ ಮಾಡಿದೆ
ನಾನೆಂಬುದ ನಿಲಿಸಿ ನೀನೆಂಬುದ ಕೆಡಿಸಿ
ಉಭಯಲಿಂಗೈಕ್ಯವ ಮಾಡಿದೆ
ಚೆನ್ನಮಲ್ಲಿಕಾರ್ಜುನನೊಳಗೆ ನಾನಳಿದೆನಾಗಿ
ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು [=ಉಳಿಯಿತ್ತು?]
ಕಾಣಾ ಸಂಗನಬಸವಣ್ಣ

೨೬೨.
ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಈ ಮೂವರೂ ಒಂದೊಂದ ಕೊಟ್ಟರೆನಗೆ-
ಮೂರು ಭಾವವಾಯಿತ್ತು
ಈ ಮೂರನು ನಿನ್ನಲ್ಲಿ ಸಮರ್ಪಿಸಿದ ಬಳಿಕ
ಎನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ
ನಿನ್ನ ಕರುಣದ ಶಿಶು ನಾನು ಕಾಣಾ ಸಂಗನಬಸವಣ್ಣ

೨೬೩.
ಲಿಂಗ ಸುಖಸಂಗದಲ್ಲಿ ಮನ ವೇದ್ಯವಾಯಿತ್ತು
ಇನ್ನೆಲ್ಲಿಯದಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯದಯ್ಯ ನಿಮ್ಮಲ್ಲಿ ಕೂಡುವುದು?
ಪರಮಸುಖಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ

೨೬೪.
ಮೂಲದ್ವಾರದ ಬೇರ ಮೆಟ್ಟಿ ಭೂಮಂಡಲವನೇರಿದೆ
ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ
ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ
ಕೈವಿಡಿದು ತೆಗೆದುಕೊಳ್ಳಾ ಚೆನ್ನಮಲ್ಲಿಕಾರ್ಜುನ

೨೬೫.
ಬಯಲು ಲಿಂಗವೆಂಬೆನೆ? ಬಗಿದು ನಡೆದಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ? ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ! ತರಿದಲ್ಲಿ ಹೋಯಿತ್ತು
ಲಿಂಗ-ಜಂಗಮದ ಪಾದವೆ ಗತಿಯೆಂದು ನಂಬಿದ ಸಂಗನ ಬಸವಣ್ಣನ
ಮಾತು ಕೇಳದೆ ಕೆಟ್ಟೆನಯ್ಯ, ಚೆನ್ನಮಲ್ಲಿಕಾರ್ಜುನ

೨೬೬.
ನೋಡಿಹೆನೆಂದಡೆ ದೃಷ್ಟಿ ಮರೆಯಾಯಿತ್ತು
ಕೂಡಿಹೆನೆಂದೊಡೆ ಭಾವ ಮರೆಯಾಯಿತ್ತು
ಏನೆಂಬೆನೆಂತೆಂಬೆನಯ್ಯ?
ಅರಿದಿ[ದ=?]ಹೆನೆಂದೊಡೆ ಮರಹು ಮರೆಯಾಯಿತ್ತು
ನಿನ್ನ ಮಾಯೆಯನತಿಗಳೆವೊಡೆ ಎನ್ನಳವೇ
ಕಾಯಯ್ಯ ಚೆನ್ನಮಲ್ಲಿಕಾರ್ಜುನ

೨೬೭.
ಭಾವ ಬೀಸರವಾಯಿತ್ತು
ಮನ ಮೃತ್ಯುವನಪ್ಪಿತ್ತು, ಆನೇವೆನಯ್ಯ?
ಅಳಿತನದ ಮನ ತಲೆಕೆಳಗಾಯಿತ್ತು, ಆನೇವೆನಯ್ಯ?
ಬಿಚ್ಚಿ ಬೇರಾಗದ ಭಾವವಾಗಿ ಬೆರೆದೊಪ್ಪಚ್ಚಿ
ನಿನ್ನ ನಿತ್ಯಸುಖದೊಳಗಾನೆಂದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ

೨೬೮.
ಹಗಲೆನ್ನೆ, ಇರುಳೆನ್ನೆ!
ಉದಯವೆನ್ನೆ, ಅಸ್ತಮಾನವೆನ್ನೆ! ಹಿಂದೆನ್ನೆ, ಮುಂದೆನ್ನೆ!
ನೀನಲ್ಲದೆ ಪರತೊಂದಹುದೆನ್ನೆ! ಮನ ಘನವಾದುದಿಲ್ಲಯ್ಯ!
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯ!
ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ
ಆನೆನ್ನ [=ಆಂ ನಿನ್ನ?]ನೆಂತು ಕಾಂಬೆನು ಹೇಳಾ
ಚೆನ್ನಮಲ್ಲಿಕಾರ್ಜುನ

೨೬೯.
ಕಾಯದ ಕಾರ್ಪಣ್ಯವರತಿತ್ತು
ಕರಣಂಗಳ ಕಳವಳವಳಿದಿತ್ತು
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು
ಇನ್ನೇವೆನಿನ್ನೇವೆನಯ್ಯ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು!
ಇನ್ನೇವೆನಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನ

೨೭೦.
ಅಯ್ಯ ಕತ್ತಲೆಯ ಕಳೆದುಳಿದ
ಸತ್ಯ ಶರಣರ ಪರಿಯನೇನೆಂಬೆನಯ್ಯ!
ಘನವನೊಳಕೊಂಡ ಮನದ ಮಹಾನುಭಾವಿಗಳ
ಬಳಿವಿಡಿದು ಬದುಕುವೆನಯ್ಯ
ಅಯ್ಯ, ನಿನ್ನಲ್ಲಿ ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ
ದಿನವ ಕಳೆಯಿಸಯ್ಯ, ಚೆನ್ನಮಲ್ಲಿಕಾರ್ಜುನ

೨೭೧.
ತನು ಶುದ್ಧ, ಮನ ಶುದ್ಧ,
ಭಾವಶುದ್ಧವಾದವರನೆನಗೊಮ್ಮೆ ತೋರಾ!
ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ,
ನಿತ್ಯಶುದ್ಧರಾದವರನೆನಗೊಮ್ಮೆ ತೋರಾ!
ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ
ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ

೨೭೨.
ನಡೆ ಶುಚಿ, ನುಡಿ ಶುಚಿ, ತನು ಶುಚಿ,
ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು
ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ
ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ

೨೭೩.
ಪಡೆವುದರಿದು ನರಜನ್ಮವ,
ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ,
ಪಡೆವುದರಿದು ಸತ್ಯಶರಣರನುಭಾವವ!
ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ
ನಲಿನಲಿದಾಡು ಕಂಡೆಯಾ ಎಲೆ ಮನವೇ!

೨೭೪.
ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ!
ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ!
ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ!
ಎಡರುವ ಹರಳೆಲ್ಲ ಚಿಂತಾಮಣಿ!
ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ
ನೋಡುತ ಬಂದು, ಕದಳಿಯ ಬನವ ಕಂಡೆ ನಾನು

೨೭೫.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ

೨೭೬.
ಲಿಂಗಾಂಗಸಂಗ ಸಮರದ ಸುಖದಲ್ಲಿ
ಮನ ವೇದ್ಯವಾಯಿತು
ನಿಮ್ಮ ಶರಣರ ಅನುಭಾವಸಂಗದಿಂದ
ಎನ್ನ ತನು-ಮನ-ಪ್ರಾಣಪದಾರ್ಥವ
ಗುರು-ಲಿಂಗ-ಜಂಗಮಕಿತ್ತು
ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಿಯಾದೆನು
ಆ ಮಹಪ್ರಸಾದದ ರೂಪ-ರುಚಿ-ತೃಪ್ತಿಯ
ಇಷ್ಟ-ಪ್ರಾಣ-ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ
ಮಹಾಘನಪ್ರಸಾದಿಯಾದೆನು
ಇಂತೀ ಸರ್ವಾಚಾರಸಂಪತ್ತು
ಎನ್ನ ತನು-ಮನವೇದ್ಯವಾಯಿತು
ಇನ್ನೆಲ್ಲಿಯಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯಯ್ಯ ನಿಮಗೆ ಕೂಡುವುದು?
ಪರಮಸುಖದ ಪರಿಣಾಮ ಮನಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ
ಚೆನ್ನಮಲ್ಲಿಕಾರ್ಜುನ ಪ್ರಭುವೆ

೨೭೭.
ಹೋದೆನೂರಿಗೆ ಇದ್ದೆ ನಾನಿಲ್ಲಿ
ಹೋದರೆ ಮರಳಿ ಇತ್ತ ಬಾರೆನವ್ವ
ಐವರು ಭಾವದಿರು, ಐವರು ನಗೆವೆಣ್ಣು
ಐವರು ಕೂಡಿ ಎನ್ನ ಕಾಡುವರು
ಬೈವರು, ಹೊಯ್ವರು, ಮಿಗೆ ಕೆಡೆನುಡಿವರು
ಅವರೈವರ ಕಾಟಕ್ಕೆ ನಾನಿನ್ನಾರೆ ಕಂಡವ್ವಾ
ಅತ್ತೆ ಮಾವನು ಮೈದುನ ನಗೆವೆಣ್ಣು
ಚಿತ್ತವನೊರೆದು ನೋಡುವ ಗಂಡ
ಕತ್ತಲೆಯಾದರೆ ಕರೆದನ್ನವ ನೀಡಳವ್ವ
ಅತ್ತಿಗೆ ಹತ್ತೆಂಟು ನುಡಿವಳಮ್ಮಯ್ಯ ತಾಯೆ
ಉಪಮಾತೀತರು ರುದ್ರಗಣಂಗಳು
ಅವರೆನ್ನ ಬಂಧುಬಳಗಂಗಳು ಸಯಸಿ (?)
ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದರೆ
ಮರಳಿ ಬಾರೆನಮ್ಮ ತಾಯೆ

೨೭೮.
ಲಿಂಗವೆನ್ನೆ ಲಿಂಗೈಕ್ಯವೆನ್ನೆ!
ಸಂಗವೆನ್ನೆ ನಿಸ್ಸಂಗವೆನ್ನೆ!
ಆಯಿತ್ತೆನ್ನೆ ಆಗದೆನ್ನೆ!
ನಾನೆನ್ನೆ ನೀನೆನ್ನೆ!
ಚೆನ್ನಮಲ್ಲಿಕಾರ್ಜುನಲಿಂಗದಲ್ಲಿ
ಘನಲಿಂಗೈಕ್ಯವಾದ ಬಳಿಕ ಏನೂ ಎನ್ನೆ!

೨೭೯.
ಕಾಯ ಮುಟ್ಟುವೊಡೆ ಕಾಣಬಾರದ ಘನ
ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆನಯ್ಯ?
ಕ್ರೀಗಳು ಮುಟ್ಟಲರಿಯವು
ನಿಮ್ಮನೆಂತು ಪೂಜಿಸುವೆನಯ್ಯ?
ನಾದಬಿಂದುಗಳು ಮುಟ್ಟಲರಿಯವು
ನಿಮ್ಮನೆಂತು ಪಾಡುವೆನಯ್ಯ?
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ನೋಡಿ ನೋಡಿ ಸೈವೆರಗಾಗುತಿಪ್ಪೆನಯ್ಯ

೨೮೦.
ಕ್ರೀಡೆ ತುಂಬಿಯ ಹಂಬಲದಿಂದ ತುಂಬಿಯಾಗಿ
ತನ್ನ ಬಿಡಲುಂಟೇ ಅಯ್ಯ?
ಆನು ನಿಮ್ಮ ನೆನೆದು, ಎನ್ನ ಕರ ತುಂಬಿ,
ಎನ್ನ ಮನ ತುಂಬಿ, ಎನ್ನ ಭಾವ ತುಂಬಿ
ಮತ್ತಿಲ್ಲದೆ ನಿನ್ನ ಕೂಟದ ಸವಿಗಲೆಯನೆಂತು ಕಾಣುವೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

೨೮೧.
ಕಲ್ಲಹೊತ್ತು ಕಡಲೊಳಗೆ ಮುಳುಗಿದೊಡೆ
ಎಡರಿಂಗೆ ಕಡೆಯುಂಟೇ ಅವ್ವ?
ಉಂಡು ಹಸಿವಾಯಿತ್ತೆಂದೊಡೆ ಭಂಗವೆಂಬೆ
ಕಂಡ ಕಂಡ ಠಾವಿನಲ್ಲಿ ಮನ ಬೆಂದೊಡೆ
ಗಂಡ ಮಲ್ಲಿಕಾರ್ಜುನಯ್ಯನೆಂತೊಲಿವೆನಯ್ಯ

೨೮೨.
ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು
ಲಿಂಗಕ್ಕಾಗಿ ಮಾಡಿಯೂ ಮಾಡದಂತಿಪ್ಪೆ ನೋಡಾ!
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ
ಹತ್ತರೊಳಗೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವ?

೨೮೩.
ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವ
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ
ಇದುಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ
ಈ ಸಾವ ಕೆಡುವ ಗಂಡರನೊಯ್ದು [ಒಲೆಯೊಳಗಿಕ್ಕು ತಾಯೆ]

೨೮೪.
ಅಯ್ಯ, ಪರಾತ್ಪರ ಸತ್ಯಸದಾಚಾರ ಗುರುಲಿಂಗ-
ಜಂಗಮದ ಶ್ರೀಚರಣವನ್ನು
ಹಿಂದೆ ಹೇಳದ ಅಚ್ಚಪ್ರಸಾದಿಯೋಪಾದಿಯಲ್ಲಿ
ನಿರ್ವಂಚಕತ್ವದಿಂದ
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ
ಒಪ್ಪೊತ್ತು ಅಷ್ಟವಿಧಾರ್ಚನೆಯ ಷೋಡಶೋಪಚಾರದಿಂದ
ಪಾದಾರ್ಚನೆಯ ಮಾಡಿ
ಪಾದೋದಕ ಪ್ರಸಾದವನ್ನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ
ಇಷ್ಟ ಮಹಾಲಿಂಗದೇವನ ತ್ರಿವಿಧ ಸ್ಥಾನದಲ್ಲಿ
ಬಸವಣ್ಣ-ಚೆನ್ನಬಸವಣ್ಣ-ಅಲ್ಲಮ[+ಹಾ?]ಪ್ರಭು
ಎಂಬ ತ್ರಿವಿಧನಾಮಸ್ವರೂಪವಾದ
ಷೋಡಶಾಕ್ಷರಂಗಳೇ ಷೋಡಶವರ್ಣವಾಗಿ
ನೆಲಸಿರ್ಪರು ನೋಡಾ!
ಇಂತು ಷೋಡಶಕಲಾಸ್ವರೂಪವಾದ ಚಿದ್ರನ ಮಹಾಲಿಂಗದೇವನ
ನಿರಂಜನ ಜಂಗಮದೋಪಾದಿಯಲ್ಲಿ
ಸುಗುಣ-ನಿರ್ಗುಣ ಪೂಜೆಗಳ ಮಾಡಿ
ಜಂಗಮಚರಣ ಸೋಂಕಿನಿಂ ಬಂದ
ಗುರುಪಾದೋದಕವನಾದರೂ ಸರಿಯೆ
ಒಂದು ಭಾಜನದಲ್ಲಿ ಸೂಕ್ಷ್ಮವಾಗಿ ರಚಿಸಿ
ಆ ಉದಕದೊಳಗೆ ಹಸ್ತೋದಕ ಮಂತ್ರೋದಕವ ಮಾಡಿ
ಆಮೇಲೆ ಅನಾದಿಪ್ರಣಮವ ಪ್ರಸಾದ ಪ್ರಣಮದೊಳಗೆ
ಅಖಂಡ ಮಹಾಜ್ಯೋತಿಪ್ರಣಮವ ಲಿಖಿತವ ಮಾಡಿ
ಶ್ರದ್ಧಾದಿಯಾದ ಪೂರ್ಣಭಕ್ತಿಯಿಂದ
ಮಹಾಚಿದ್ರನತೀರ್ಥವೆಂದು ಭಾವಿಸಿ
ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ
ಆನಿಮಿಷ ದೃಷ್ಟಿಯಿಂದ ನಿರೀಕ್ಷಿಸಿ
ಮೂರು ವೇಳೆ ಪ್ರದಕ್ಷಿಣೆಯ ಮಾಡಿ
ಆ ಚಿದ್ರನತೀರ್ಥವನ್ನು
ದ್ವಾದಶದಳಕಮಲದಲ್ಲಿ ನೆಲೆಸಿರುವ ಇಷ್ಟಮಹಾಲಿಂಗಜಂಗಮಕ್ಕೆ
ಅಷ್ಟವಿಧ ಮಂತ್ರ ಸಕೀಲಂಗಳಿಂದ
ಆಚಾರಾದಿ ಶೂನ್ಯಾಂತವಾದ ಅಷ್ಟವಿಧಲಿಂಗಧ್ಯಾನದಿಂದ
ಅಷ್ಟವಿಧ ಬಂಧಂಗಳಂ ಸಮರ್ಪಿಸಿದಲ್ಲಿಗೆ
ಅಷ್ಟವಿಧೋದಕವಾಗುವುದಯ್ಯ
ಆ ಇಷ್ಟ ಮಹಾಲಿಂಗ ಜಂಗಮವೇ
ಅಷ್ಟಾದಶ ಸ್ಮರಣೆಯಿಂದ ಮುಗಿದಲ್ಲಿಗೆ
ನವಮೋದಕವಾಗುವುದಯ್ಯ
ಉಳಿದುದಕವು ತ್ರಿವಿಧೋದಕವೆನಿಸುವುದಯ್ಯ
ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪವಾದ
ತೀರ್ಥವ ಮುಗಿದಮೇಲೆ
ತಟ್ಟೆ-ಬಟ್ಟಲಲ್ಲಿ ಎಡೆಮಾಡಬೇಕಾದರೆ
ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿದ್ದರೆ
ತಾವು ಸಲಿಸಿದ ಪಾದೋದಕಪ್ರಸಾದವ ಕೊಡುವುದಯ್ಯ
ಸಹಜಲಿಂಗಭಕ್ತರಾದರೆ ಮುಖಮಜ್ಜನವ ಮಾಡಿಸಿ
ತಾವು ಧರಿಸುವ ವಿಭೂತಿಧಾರಣವ ಮಾಡಿಸಿ
ಶಿವಶಿವಾ ಹರಹರಾ ಬಸವಲಿಂಗ ಎಂದು ಬೋಧಿಸಿ
ಎಡೆಮಾಡಿಸಿಕೊಂಬುದಯ್ಯ
ಆಮೇಲೆ-ತಾನು ಸ್ಥೂಲ[=ಸ್ವಸ್ಥಲ?]ವಾದೊಡೆ ಸಂಬಂಧವಿಟ್ಟು
ಪರಸ್ಥಲವಾದೊಡೆ ಚಿದ್ರನ ಇಷ್ಟಮಹಾಲಿಂಗ-ಜಂಗಮನ
ಕರಸ್ಥಲದಲ್ಲಿ ಮೂರ್ತವ ಮಾಡಿಸಿಕೊಂಡು
ದಕ್ಷಿಣಹಸ್ತದಲ್ಲಿ ಗುರು-ಲಿಂಗ-ಜಂಗಮಸೂತ್ರವಿಡಿದು
ಬಂದ ಕ್ರಿಯಾಭಸಿತವ ಲೇಪಿಸಿ
ಮೂಲಪ್ರಮಾಣವ ಪ್ರಸಾದಪ್ರಣವದೊಳಗೆ
ಗೋಳಕಪ್ರಣವ-ಅಖಂಡಗೋಳಕಪ್ರಣವ-
ಜ್ಯೋತಿಪ್ರಣವ ಧ್ಯಾನದಿಂದ
ದ್ವಾದಶಮಣಿಯ ಧ್ಯಾನಿಸಿ
ಪ್ರದಕ್ಷಿಣವ ಮಾಡಿ
ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ
ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ
ಪದಾರ್ಥದ ಪೂರ್ವಾಶ್ರಯವ ಕಳೆದು
ಶುದ್ಧಪ್ರಸಾದವೆಂದು ಭಾವಿಸಿ
ಇಷ್ಟಮಹಾಲಿಂಗ-ಜಂಗಮಕ್ಕೆ

ಅಷ್ಟಾದಶಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿ
ಎರಡು ವೇಳೆ ರೂಪವ ತೋರಿ
ಸುರುಚಿ ಪ್ರಾಣಲಿಂಗ ಮಂತ್ರಜಿಹ್ವೆಯಲ್ಲಿಟ್ಟು
ಆರನೆಯ ವೇಳೆ ಭೋಜನವ
ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ
ಷಡ್ವಿಧಲಿಂಗಲೋಲುಪ್ತಿಯಿಂದ ಆಚರಿಸಿದಾತನೇ
ಗುರುಭಕ್ತನಾದ ನಿಚ್ಚಪ್ರಸಾದಿ ಎಂಬೆ
ಚೆನ್ನಮಲ್ಲಿಕಾರ್ಜುನ

೨೮೫.
ಒಲ್ಲೆ ಗಂಡನ ಕೂಟ ಒಗೆತನವ
ಅಕ್ಕಟ ಗಂಡನ ಮನೆಯ ಬಿರಿಸಯ್ಯಯ್ಯೋ! ||ಪಲ್ಲವ||
ಒಡಕು ಗಂಗಳದಲ್ಲಿ ನೀರಂಬಲಿಯ ನೀಡಿ
ಹೊಡೆದಳು ನಮ್ಮತ್ತೆ ಮೊರದಲ್ಲಿ
ಕಡುದುಃಖದಿಂದ ನಾ ಒಲೆಯ ಮುಂದೆ ಕುಳಿತಿರೆ
ಕೊಡಿತನದಿ ಬಂದು ಒದ್ದಳಯ್ಯಯ್ಯೋ! ||೧||
ನೆತ್ತಿಗೆಣ್ಣೆಯಿಲ್ಲದೆ ತಲೆ ಬತ್ತಿಗಟ್ಟಿತು
ವೃತ್ತಜವ್ವನ ಬಾಡಿಹೋದವಲ್ಲ!
ಅತ್ತೆಯಾಸೆಯಿಲ್ಲ ಮಾವನ ಲೇಸಿಲ್ಲ
ಚಿತ್ತವಲ್ಲಭನಲ್ಲಿ ಗಣವಿಲ್ಲವಯ್ಯಯ್ಯೋ! ||೨||
ಹೇಳಿ ಕಳುಹುವೆ ನಾನವ್ವೆಗಳೂರಿಗೆ
ಕೇಳಯ್ಯ ಶ್ರೀಶೈಲ ಮಲ್ಲಿಕಾರ್ಜುನ
ಭಾಳಪಾಪಿಗಳಲ್ಲಿ ಕೊಟ್ಟರಯ್ಯಯ್ಯೋ! ||೩||

೨೮೬.
ಆಪತ್ತಿಗೊಳಗಾದೆನಮ್ಮಯ್ಯ, ನಾ
ನಾಪತ್ತಿಗೊಳಗಾದೆ ||ಪಲ್ಲವ||
ಪಡುವಣ ದೇಶದಿ ಹುಟ್ಟಿದೆನಮ್ಮ
ಬಡಗಣ ದೇಶದಿ ಬೆಳೆದೆ
ಆಗರದ ನಾಡಿಗೆ ಇತ್ತರೆನ್ನನು
ದೂರದ ನೀರ ನಾ ಹೊರಲಾರೆನಮ್ಮ ||೧||
ಕೂಳಿಲ್ಲ ಹೊಟ್ತೆಗೆ, ತಲೆ ಬತ್ತಿಗಟ್ಟಿತು
ಬಲ್ಮೊಲೆಗಳು ಬತ್ತಿ ಬಡವಾದೆ
ಒಲ್ಲದ ಗಂಡನ ಒಲಿಸಿಹೆನೆಂದಡೆ
ಬಲ್ಲವರೊಂದು ಮದ್ದ ಹೇಳಿರಮ್ಮ ||೨||
ಆರೂ ಬಾರದ ತವರೂರ ದಾರಿಯಲಿ
ಬಾರದ ಭವದಲಿ ಬಂದೆನು
ಊರ ಕಡೆಗೆ ನೋಡಿ ಕಣ್ಣೆಲ್ಲ ಕೆಟ್ಟವು
ನೀರ ಹೊಳೆಗೆ ಹೋಗಿ ಅತ್ತೆನಮ್ಮ ||೩||
ಅತ್ತೆಯ ಲೇಸುಂಟೆ? ಮಾವನ ಲೇಸುಂಟೆ?
ಗಂಡನ ಲೇಸುಂಟೆಂಬುದನರಿಯೆ
ಆಸತ್ತು ಬೇಸತ್ತು ಒಲೆಯ ಮುಂದೆ ಕುಳಿತರೆ
ಪಾಪಿ ಗಂಡ ಕಾಲೊಳೊದ್ದನಮ್ಮ ||೪||
ಉನ್ನತ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನಿನ್ನ ನಂಬಿದ ಭಕ್ತೆ ನಾನೆಯಲ್ಲಾ!
ಮುನ್ನಿನ ಶರಣರ ಸಲಹಿದಂದದಿ ಬೇಗ
ಎನ್ನ ಸಲಹೊ ದೇವರ ದೇವ ||೫||

೨೮೭.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||

೨೮೮.
ಕರಕರೆ ಕರಕನೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||

೨೮೯.
ಎಲ್ಲ ಎಲ್ಲವನರಿದು ಫಲವೇನು
ಮತ್ತೆ ಎಲ್ಲ ಎಲ್ಲವನರಿದು ಫಲವೇನು?
ತನ್ನ ತಾನರಿಯದನ್ನಕ್ಕ?
ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇಳಲುಂಟ?
ನಿಮ್ಮರಿವು ತಲೆದೋರಿದ ಕಾರಣ
ನನ್ನ ನಾನರಿದೆ ಚೆನ್ನಮಲ್ಲಿಕಾರ್ಜುನ

೨೯೦.
ಅಯ್ಯ, ನಿಮ್ಮ ಮುಟ್ಟಿ ಮುಟ್ಟದೆನ್ನ ಮನ ನೊಡಾ!
ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ
ಎರಡೆಂಬುದ ಮರೆದು ಬರಡಾಗದೆನ್ನ ಮನ
ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನ

೨೯೧.
ಹುಟ್ಟು-ಹೊರೆಯ ಕಟ್ಟಳೆಯ ಕಳೆದನವ್ವ
ಹೊನ್ನು-ಮಣ್ಣಿನ ಮಾಯೆಯ ಮಾಣಿಸಿದನವ್ವ
ಎನ್ನ ತನುವಿನ ಲಜ್ಜೆಯನಿಳುಹಿ
ಎನ್ನ ಮನದ ಕತ್ತಲೆಯ ಕಳೆದ
ಚೆನ್ನಮಲ್ಲಿಕಾರ್ಜುನಯ್ಯನ
ಒಳಗಾದವಳನೇನೆಂದು ನುಡಿಯಿಸುವಿರವ್ವ

೨೯೨.
ಕಾಯದ ಕಳವಳವ ಕೆಡಿಸಿ
ಮನದ ಮಾಯೆಯ ಮಾಣಿಸಿ
ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯ
ಶಿವಶಿವಾ ಎನ್ನ ಬಂಧನವ ಬಿಡಿಸಿ
ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯ
ಇರುಳೋಸರಿಸದ ಜಕ್ಕವಕ್ಕಿಯಂತೆ ನಾನಿಂದು
ನಿಮ್ಮ ಶ್ರೀಪಾದವನಿಂಬುಗೊಂಡು
ಸುಖದೊಳಗೋಲಾಡುವೆನಯ್ಯ ಚೆನ್ನಮಲ್ಲಿಕಾರ್ಜುನ

೨೯೩.
ಅಯ್ಯ, ನೀನೆನ್ನ ಮೊರೆಯನಾಲಿಸಿದೊಡಾಲಿಸು
ಆಲಿಸದಿರ್ದೊಡೆ ಮಾಣು
ಅಯ್ಯ, ನೀನೆನ್ನ ದುಃಖವ ನೋಡಿದೊಡೆ ನೋಡು
ನೋಡದಿರ್ದೊಡೆ ಮಾಣು
ಎನಗಿದು ವಿಧಿಯೆ?!
ನೀನೊಲ್ಲದೊಡೆ ನಾನೊಲಿಸುವ ಪರಿಯೆಂತಯ್ಯ?
ಮಾನವಳಿಸಿ ಮಾರುವೋಗಿ ಮರೆವೊಕ್ಕೊಡೆ
ಕೊಂಬ ಪರಿಯೆಂತಯ್ಯ ಚೆನ್ನಮಲ್ಲಿಕಾರ್ಜುನ

೨೯೪.
ಮುಡಿ ಬಿಟ್ಟು ಮೊಗ ಬಾಡಿ ತನು ಕರಗಿದವಳ
ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ?
ಎನ್ನನೇಕೆ ಕಾಡುವಿರಿ ಎಲೆ ತಂದೆಗಳಿರಾ?
ಬಲುಹಳಿದು, ಭವಗೆಟ್ಟು ಛಲವಳಿದು
ಭಕ್ತೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ

೨೯೫.
ಬಟ್ಟಿಹ ಮೊಲೆಯ, ಭರದ ಜವ್ವನವ
ಚೆಲುವ ಕಂಡು ಬಂದಿರಣ್ಣಾ
ಅಣ್ಣಾ, ನಾನು ಹೆಂಗೂಸಲ್ಲ
ಅಣ್ಣ, ನಾನು ಸೂಳೆಯಲ್ಲ
ಅಣ್ಣಾ, ಮತ್ತೆ ನನ್ನ ಕಂಡು ಕಂಡು
ಆರೆಂದು ಬಂದಿರಣ್ಣ?
ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿದ ಪುರುಷನು
ನಮಗಾಗದ ಮೋರೆ ನೋಡಣ್ಣ

೨೯೬.
ಎಲೆ ಅಣ್ಣಾ, ಎಲೆ ಅಣ್ಣಾ, ನೀವು ಮರುಳಲ್ಲ
ಅಣ್ಣಾ, ಎನ್ನ ನಿನ್ನಳವೆ?
ಹದಿನಾಲ್ಕು ಲೋಕವ ನುಂಗಿದ
ಕಾಮನ ಬಾಣದ ಗುಣ ಎನ್ನನಿನ್ನಳವೆ?
ವಾರುವ ಮುಗ್ಗಿದೊಡೆ [ಮಿಣಿ ಹರಿಯ] ಹೊಯ್ವರೆ?
ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು
ನಿನ್ನ ನೀ ಸಂಹರಿಸಿ ಕೈದುವ ಕೊಳ್ಳಿರಣ್ಣ
ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣ

೨೯೭.
ಒಬ್ಬಂಗೆ ಇಹವುಂಟು, ಒಬ್ಬಂಗೆ ಪರವುಂಟು
ಒಬ್ಬಂಗೆ ಇಹಪರವೆರಡೂ ಇಲ್ಲ
ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು

೨೯೮. ಆಕಾರವಲ್ಲದ ನಿರಾಕಾರಲಿಂಗವ ಕೈಯಲ್ಲಿ ಹಿಡಿದು
ಕೊರಳಲ್ಲಿ ಕಟ್ಟಿದೆವೆಂಬರು ನರಕಜೀವಿಗಳು
ಹರಿಬ್ರಹ್ಮರು, ವೇದಶಾಸ್ತ್ರಂಗಳು ಅರಸಿ ಕಾಣದ ಲಿಂಗ
ಭಕ್ತಿಗೆ ಫಲಪದಂಗಳಲ್ಲದೆ ಲಿಂಗವಿಲ್ಲ
ಕರ್ಮಕ್ಕೆ ನರಕ[ನಾಕ?]ವಲ್ಲದೆ ಲಿಂಗವಿಲ್ಲ
ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ
ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ
ಇದುಕಾರಣ; ಅದ್ವೈತದಿಂದ ತನ್ನ ತಾನರಿದು ತಾನಾದರೆ
ಚೆನ್ನಮಲ್ಲಿಕಾರ್ಜುನಲಿಂಗ ತಾನೆ ಬೇರಿಲ್ಲ

೨೯೯.
ಕಂಗಳ ಕಳೆದು, ಕರುಳುಗಳ ಕಿತ್ತು
ಕಾಮದ ಮೂಗ ಕೊಯ್ದು
ಭಂಗದ ಬಟ್ಟೆಯ ಭವ ಗೆಲಿಯದಳಿಗಂಗವೆಲ್ಲಿಯದು ಹೇಳಾ!
ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದರೇನುಂಟು
ಅಂಗವೆ ಲಿಂಗವಹ ಪರಿಯೆನಗೆ ಹೇಳಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೦.
ಮೊಲೆ-ಮುಡಿಯಿದ್ದರೇನು
ಮೂಗಿಲ್ಲದವಳಿಂಗೆ?
ತಲೆಯ ಮೇಲೆ ಸೆರಗೇತಕ್ಕೆ
ಸಹಜಸಂಕಲ್ಪವಿಲ್ಲದವಳಿಂಗೆ?
ಜಲದೊಳಗೆ ಹುಟ್ಟಿಗುಳೆ[ಗುಳ್ಳೆ?]
ಜಾತಿಸ್ಮರತ್ವವರಿದಿತ್ತು
ಹಲವರ ಹಾದಿಯೊಳು
ಹರಿಸುರರು ನಿಮ್ಮ ನೆಲೆಯಂ ತೋರಿದೆ [ತೋರರೇ?]
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

   

No comments:

Post a Comment