Sunday, September 26, 2010

ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ ಸೋರುತಿಹದು ಮನಿಯ ಮಾಳಿಗಿ......ಶರೀಫರು

ಸೋರುತಿಹುದು ಮನೆಯ ಮಾಳಿಗಿ.
ಸೋರುತಿಹುದು ಮನೆಯ ಮಾಳಿಗಿ
ಅಜ್ನಾನದಿಂದ

ಸೋರುತಿಹುದು ಮನೆಯ ಮಾಳಿಗಿ.



ಸೋರುತಿಹುದು ಮನೆಯ ಮಾಳಿಗಿ

ದಾರು ಗಟ್ಟಿ ಮಾಳ್ಪರಿಲ್ಲ

ಕಾಳ ಕತ್ತಲೆಯೊಳಗೆ ನಾನು

ಮೇಲಕೇರಿ ಹೋಗಲಾರೆ.



ಮುರುಕು ತೊಲೆಯು ಹುಳುಕು ಜಂತಿ

ಕೊರೆದು ಸರಿದು ಕೀಲ ಸಡಲಿ

ಹರುಕು ಚಪ್ಪರ ಜೇರುಗಿಂಡಿ

ಮೇಲಕೇರಿ ಹೋಗಲಾರೆ.



ಕರಕಿ ಹುಲ್ಲು ಕಸವು ಹತ್ತಿ

ಹರಿದು ಸಾಲು ಇರಬಿ ಮುತ್ತಿ

ಜಲದ ಭರದಿ ಸರಿಯೆ ಮಣ್ಣು

ಒಳಗೆ ಹೊರಗೆ ಏಕವಾಗಿ.



ಕಾಂತೆ ಕೇಳೆ ಕರುಣದಿಂದ

ಬಂತು ಕಾಣೆ ಹುಬ್ಬು ಮಳೆಯು

ಎಂತೊ ಶಿಶುನಾಳಧೀಶನ ತಾನು

ನಿಂತು ಪೊರೆವನು ಎಂದು ನಂಬಿದೆ.


ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಸಾಧಕರು, ತಾವು ಈ ದರ್ಶನಕ್ಕೆ ಅರ್ಹರೊ ಎಂದು ತಮ್ಮನ್ನೆ ಪರೀಕ್ಷಿಸಿಕೊಳ್ಳುವದು ಸಹಜ. ಕನ್ನಡ ನಾಡಿನಲ್ಲಿ ಬಾಳಿದ, ಇಲ್ಲಿಯ ನಾಡಿಗರ ಮನಸ್ಸನ್ನು ಬೆಳಗಿದ ಇಬ್ಬರು ಅನುಭಾವಿಗಳಾದ ಬಸವಣ್ಣ ಹಾಗೂ ಶರೀಫರು ಇಂತಹ ಭಾವನೆಗಳನ್ನು ತಮ್ಮ ವಚನ ಹಾಗೂ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ.

ಇವರಲ್ಲಿ ಮೊದಲಿಗರಾದ ಬಸವಣ್ಣನವರ ವಚನವನ್ನೇ ಗಮನಿಸಿರಿ:

“ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ
ಕೂಡಲಸಂಗಮ ದೇವಾ!”

ಬಸವಣ್ಣನವರು ತಮ್ಮ ತನು ಹಾಗೂ ಮನವನ್ನು ಮನೆಗೆ ಹೋಲಿಸಿ, ಈ ಮನೆಯಲ್ಲಿ ಕೇವಲ ಕಸ ಕಡ್ಡಿ ತುಂಬಿಕೊಂಡಿದೆ; ಈ ಮನೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಒಡೆಯನು ಇಲ್ಲವಲ್ಲ ಎಂದು ವಿಷಾದಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸುವ ಒಡೆಯ ಅಂದರೆ ತಿಳಿವನ್ನು ಪಡೆದ ಆತ್ಮ ಅಥವಾ ಪರಮಾತ್ಮ.

ಇದರಂತೆಯೆ, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಳಿದ ಶರೀಫರು ಸಹ ಮನೆಯನ್ನು ಮನಸ್ಸಿಗೆ ಅಥವಾ Selfಗೆ ಹೋಲಿಸಿ ಹಾಡಿದ್ದಾರೆ. ಶರೀಫರ ಹಾಡು ಹೀಗಿದೆ:

ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ
ಸೋರುತಿಹದು ಮನಿಯ ಮಾಳಿಗಿ ||ಪಲ್ಲ||

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||೧||

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||೨||

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||೩||

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||೪||

ಶರೀಫರು ಜೀವಿಸಿದ್ದ ಬೆಳವಲ ನಾಡಿನಲ್ಲಿ ಮಳೆ ಕಡಿಮೆ. ಆದುದರಿಂದ ಮನೆಯ ಮೇಲ್ಭಾಗವು (roof) ಮಣ್ಣಿನದಾಗಿರುತ್ತಿತ್ತು. ಇದಕ್ಕೆ ಮೇಲ್ಮುದ್ದಿಯ ಮನೆ ಎಂದು ಹೇಳುತ್ತಾರೆ. ಈ ಮೇಲ್ಮುದ್ದಿಗೆ ಆಧಾರ ಎಂದು ಕೆಳಭಾಗದಲ್ಲಿ ಕಟ್ಟಿಗೆಯ ತೊಲೆ ಹಾಗೂ ಜಂತಿಗಳನ್ನು ಬಳಸಿರುತ್ತಾರೆ.
ಮಣ್ಣಿನ ಮೇಲ್ಮುದ್ದಿಯಾಗಿರುವದರಿಂದ, ಇಲ್ಲಿ ಹುಲ್ಲು ಬೆಳೆಯುವದು ಸ್ವಾಭಾವಿಕ. ತೇವಾಂಶದಿಂದಾಗಿ ತೊಲೆ ಹಾಗೂ ಜಂತಿಗಳು ಕೆಡುವದೂ ಸಹ ಸ್ವಾಭಾವಿಕ. ಇದರಿಂದಾಗಿ ಮನೆಯ ಮಾಳಿಗೆ ಸೋರಲು ಪ್ರಾರಂಭವಾಗುತ್ತದೆ.
ಈ ಮೇಲ್ಮುದ್ದಿಯನ್ನು ಮಳೆಗಾಲಕ್ಕಿಂತ ಮೊದಲೇ ದುರಸ್ತು ಮಾಡಬೇಕಾಗುತ್ತದೆ.

ಈ ಹಾಡಿನಲ್ಲಿ ಶರೀಫರು ತಮ್ಮ self ಅಥವಾ ಮನಸ್ಸನ್ನು ಒಂದು ಮನೆಗೆ ಹೋಲಿಸಿ ಹಾಡಿದ್ದಾರೆ. ಈ ಮನೆಯ ಮಾಳಿಗೆ ಗಟ್ಟಿಯಾಗಿ ಉಳಿದಿಲ್ಲ, ಅದೀಗ ಸೋರುತ್ತಿದೆ. ಸೋರುವಿಕೆಗೆ ಅಜ್ಞಾನವೇ ಕಾರಣವೆಂದು ಶರೀಫರು ಮೊದಲಿನಲ್ಲಿಯೇ ಸಾರಿ ಬಿಡುತ್ತಾರೆ. ಈ ಅಜ್ಞಾನದ ಸ್ವರೂಪವೇನು? ಆತ್ಮಜ್ಞಾನವಿಲ್ಲದಿರುವದೇ ಅಜ್ಞಾನ! ಸೋರುವಿಕೆ ಎಂದರೇನು? ಮನೆಯನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲದಂತೆ, ಹೊರಗಿನ ಕಸಕಡ್ಡಿ, ಹುಳಹುಪ್ಪಡಿ ಇವೆಲ್ಲ ಮನೆಯ ಒಳಗೆ ಪ್ರವೇಶ ಪಡೆಯುವದು ಅಂದರೆ ವಿಕಾರಗಳು ಮನಸ್ಸನ್ನು ಪ್ರವೇಸಿಸುವದು.

ಹಾಗಾದರೆ, ಈ ಮಾಳಿಗೆಯನ್ನು ಸರಿಪಡಿಸಲು ಶರೀಫರಿಗೆ ಇರುವ ತೊಂದರೆ ಏನು? ಈ ಹಾಡಿನ ಮೊದಲನೆಯ ನುಡಿಯಲ್ಲಿ ಶರೀಫರು ತಮ್ಮ ಅಸಹಾಯಕತೆಯನ್ನು ವಿವರಿಸಿದ್ದಾರೆ:

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||

ಸೋರುತ್ತಿರುವ ಮನೆಯ ಮಾಳಿಗೆಯ ದಾರು(=ಮರ=timber)ಅನ್ನು ಗಟ್ಟಿ ಮಾಡುವವರು ಯಾರೂ ಇಲ್ಲ. ಮನೆಯನ್ನು ಕಾಳಕತ್ತಲೆಯು ಆವರಿಸಿರುವದರಿಂದ, ಮೆಟ್ಟಲು ಹತ್ತಿ, ಮಾಳಿಗೆಯನ್ನು ಏರಲು ಶರೀಫರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಇವರು ಮೇಲೆ ಏರುವದು ಹೇಗೆ? ಮೇಲ್ಮುದ್ದಿಯ ತೊಲೆ ಹಾಗೂ ಜಂತಿಗಳನ್ನು ಸರಿಪಡಿಸುವದು ಹೇಗೆ?

ಎರಡನೆಯ ನುಡಿಯಲ್ಲಿ ಶರೀಫರು ಈ ಮಾಳಿಗೆಯು ಎಷ್ಟರಮಟ್ಟಿಗೆ ನಾದುರಸ್ತ ಆಗಿದೆ ಎನ್ನುವದನ್ನು ವರ್ಣಿಸಿದ್ದಾರೆ:

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||

ಈ ಮನೆಯ ಮಾಳಿಗೆಯ ತೊಲೆ ಮುರಿದಿದೆ; ಜಂತಿಗೆ ಹುಳುಕು ಹತ್ತಿದೆ; ಹುಳ ಕೊರೆದದ್ದರಿಂದ ಜಂತಿ ಹಾಗೂ ತೊಲೆಗಳನ್ನು ಜೋಡಿಸುವ ಕೀಲಗಳು ಸಡಿಲುಗೊಂಡಿವೆ.ಅವುಗಳ ಮೇಲೆ ಹೊದಿಸಿದ ಚಪ್ಪರ ಹರಿದಿದೆ. ಬೆಳಕು ಬರಲೆಂದು ನಿರ್ಮಿಸಲಾದ ಜೀರುಗಿಂಡಿಯು (=ಸಣ್ಣ ಬೆಳಕಿಂಡಿಯು) ಹಾಳಾಗಿ ಹೋಗಿದೆ. ಅರ್ಥಾತ್ ಮಾಳಿಗೆ ಪೂರ್ಣವಾಗಿ ನಾದುರಸ್ತ ಆಗಿದೆ.
ಮಾಳಿಗೆಯ ಸಂಕೇತದ ಮೂಲಕ ಶರೀಫರು ತಮ್ಮ ಮನಸ್ಸೂ ಸಹ ಈ ಮಾಳಿಗೆಯಂತೆ ನಾದುರಸ್ತ ಆಗಿದೆ. ತಮ್ಮ ಮನಸ್ಸಿಗೆ ಬೆಳಕನ್ನು ಕೊಡುವ ಬೆಳಕಿಂಡಿ ಹಾಳಾಗಿ ಹೋಗಿದ್ದರಿಂದ ಒಳಗೆಲ್ಲ ಕತ್ತಲೆ ಕವಿದಿದೆ ಎಂದು ಹೇಳುತ್ತಿದ್ದಾರೆ. ಆದರೇನು, ಶರೀಫರಿಗೆ ದುರಸ್ತಿಗಾಗಿ ಮೇಲಕ್ಕೆ ಹತ್ತುವದೇ ಅಸಾಧ್ಯವಾಗಿದೆ.
ಈ ರೀತಿಯಾಗಿ ಮಾಳಿಗೆಯು ನಾದುರಸ್ತ ಆಗಿದ್ದರ ಪರಿಣಾಮವೇನು ಎನ್ನುವದನ್ನು ಶರೀಫರು ಮೂರನೆಯ ನುಡಿಯಲ್ಲಿ ಹೀಗೆ ವರ್ಣಿಸಿದ್ದಾರೆ:

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||

ಮೇಲ್ಮುದ್ದಿಯು ಕೆಟ್ಟು ಹೋಗಿ, ತೇವಾಂಶ ಜಾಸ್ತಿಯಾಗಿದ್ದರಿಂದ ಅಲ್ಲಿ ಕರಕಿ ಹುಲ್ಲು ಬೆಳೆದು ಬಿಟ್ಟಿದೆ. ಕರಕಿಯು ಬಹಳ ಗಟ್ಟಿಯಾದ ಹುಲ್ಲಿನ ಜಾತಿ. ಎಷ್ಟು ಕಿತ್ತಿ ಒಗೆದರೂ ನಿರ್ಮೂಲವಾಗುವದಿಲ್ಲ. ಅದೇ ರೀತಿಯಾಗಿ, ಶರೀಫರ ಮನಸ್ಸಿನಲ್ಲಿಯೂ ಸಹ ವಿಷಯಗಳೆಂಬ ವಿಕಾರಗಳು ಕರಕಿ ಹುಲ್ಲಿನಂತೆ ಗಟ್ಟಿಯಾಗಿ ಬೆಳೆದು ನಿಂತಿವೆ. (‘ಕಸವು ಹತ್ತಿ’ ಎನ್ನುವದನ್ನು ‘ಗಟ್ಟಿಯಾಗಿ’ ಅಥವಾ ‘ಕಸಕಡ್ಡಿ ಬೆಳೆದು’ ಎನ್ನುವ ಎರಡೂ ಅರ್ಥಗಳಲ್ಲಿ ತಿಳಿಯಬಹುದು.) ಇಂತಹ ವಿಕಾರಗಳು ಇದ್ದಲ್ಲಿ ಈ ಭವದ ದುರಿತಗಳು ಅಂದರೆ ಸಂಸಾರದ ಕೇಡುಗಳು, ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಳ್ಳುತ್ತವೆ. ಕಸವನ್ನು ತೆಗೆದು ಹಾಕದ ಹೊರತು, ಇರುವೆಗಳು ಹೋಗುವದಿಲ್ಲ. ಇರುವೆಗಳು ಮುತ್ತಿದ್ದರಿಂದ ಮೇಲ್ಮುದ್ದಿಯ ಮಣ್ಣೆಲ್ಲ ಏಕರೂಪವಾಗಿ ಬಿಟ್ಟಿದೆ. ಅದೇ ರೀತಿಯಾಗಿ, ಸಂಸಾರದ ಕೇಡುಗಳಿಂದ ಶರೀಫರ ಮನೋದ್ರವ್ಯವೆಲ್ಲ ಏಕರೂಪವಾಗಿ ವಿಕಾರಗೊಂಡಿದೆ.

ಆದರೆ, ಶರಿಫರು ಎದೆಗುಂದಿಲ್ಲ. ಅವರಿಗೆ ಗುರುಕರುಣೆಯು ಲಭಿಸುವ ಧೈರ್ಯವಿದೆ. ತಮ್ಮ ಗೆಳೆತಿಗೆ ಶರೀಫರು ಈ ಭರವಸೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||

ಶರೀಫರು ಯಾರಿಗೆ ‘ಕಾಂತೆ’ ಎಂದು ಹೇಳುತ್ತಿದ್ದಾರೆ? ಅವರ ಅನೇಕ ಕವನಗಳು ಈ ಕಾಂತೆಗೆ ಸಂಬೋಧಿತವಾಗಿವೆ. ಕಾಂತೆ ಎಂದರೆ ಆಪ್ತ ಗೆಳತಿ ಎಂದು ತಿಳಿಯಬಹುದು. ತಮ್ಮ ಮನದ ಮಾತುಗಳನ್ನು ಯಾರಿಗೆ ಹೇಳಬಹುದೊ ಅಂತಹ confidante ಈ ಕಾಂತೆ. ತಮ್ಮ ಅಂತರಾತ್ಮಕ್ಕೇ ಶರೀಫರು ಕಾಂತೆ ಎಂದು ಕರೆಯುತ್ತಿದ್ದಾರೆ ಎನ್ನಬಹುದು.
ಹುಬ್ಬಿ ಮಳೆಯು ಶ್ರಾವಣ ಮಾಸದಲ್ಲಿ ಬರುತ್ತದೆ. ಶ್ರಾವಣ ಮಾಸವೆಂದರೆ ಮಳೆ ಧೋಧೋ ಎಂದು ಸುರಿಯುವ ಕಾಲ. ಗುರುಕಾರುಣ್ಯವೂ ಸಹ ಶರೀಫರಿಗೆ ಪೂರ್ಣವಾಗಿ ಒಲಿದು ಬರಲಿದೆ ಎನ್ನುವದರ ಸೂಚನೆಯನ್ನು ಶರೀಫರು ಇಲ್ಲಿ ನೀಡುತ್ತಿದ್ದಾರೆ. ಅದರ ಪೂರ್ವಸೂಚನೆಯಾಗಿ ಶಿಶುವಿನಾಳ ಗ್ರಾಮಕ್ಕೆ ಮೋಡಗಳು ಒಲಿದು ಬಂದಿವೆ ಎಂದು ಶರೀಫರು ಹೇಳುತ್ತಿದ್ದಾರೆ.

No comments:

Post a Comment