Friday, September 24, 2010



ಅಕ್ಕನ ವಚನಗಳು - 1 ರಿಂದ 100 ರವರೆಗೆ

೧.
ಅಘಟಿತ-ಘಟಿತನ ಒಲವಿನ ಶಿಶು
ಕಟ್ಟಿದೆನು ಜಗಕ್ಕೆ ಬಿರುದನು
ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ
ಇಕ್ಕಿದೆನು ಕಾಲಲ್ಲಿ ತೊಡರನು
ಗುರುಕೃಪೆಯೆಂಬ ತಿಗುರನಿಕ್ಕಿ
ಮಹಾಶರಣೆಂಬ ತಿಲಕವನಿಕ್ಕಿ
ಶಿವಶರಣೆಂಬ ಅಲಗ ಕೊಂಡು
ನಿನ್ನ ಕೊಲುವೆ ಗೆಲುವೆ!
ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!!
ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ-
ಕೆಡದ ಶಿವಶರಣೆಂಬ ಅಲಗನೆ ಕೊಂಡು
ನಿನ್ನ ಕೊಲುವೆ ಗೆಲುವೆ ನಾನು!
ಬ್ರಹ್ಮಪಾಶವೆಂಬ ಕಳನನೆ ಸವರಿ
ವಿಷ್ಣುಮಾಯೆಯೆಂಬ ಎಡಗೋಲ ನೂಕಿ
ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.

೨.
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜಿದಂತೆ
ಭಾವದ ಮರೆಯ ಬ್ರಹ್ಮನಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು!

೩.
ಈಳೆ-ನಿಂಬೆ-ಮಾವು-ಮಾದಲಕ್ಕೆ
ಹುಳಿನೀರೆರೆದವರಾರಯ್ಯ?
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ?
ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!

೪.
ತನ್ನ ವಿನೋದಕ್ಕೆ ತಾನೇ ಸೃಜಿಸಿದ ಜಗತ್ತ!
ತನ್ನ ವಿನೋದಕ್ಕೆ ತಾನೇ ಸುತ್ತಿದನದಕ್ಕೆ ಸಕಲ ಪ್ರಪಂಚ!!
ತನ್ನ ವಿನೋದಕ್ಕೆ ತಾನೇ ತಿರಿಗಿಸಿದನನಂತ ಭವದುಃಖಂಗಳಲ್ಲಿ
ಇಂತೆನ್ನ ಚೆನ್ನಮಲ್ಲಿಕಾರ್ಜುನದೇವನೆಂಬ ಪರಶಿವನು
ತನ್ನ ಜಗದ್ವಿಲಾಸ ಸಾಕಾದ ಮತ್ತೆ
ತಾನೇ ಪರಿವನಾ ಮಾಯಾಪಾಶವನು!

೫.
ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ?
ಶಿವಂಗೆ ತಪ್ಪಿದ ಕಾಮನುರಿದುದನರಿಯಾ?
ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ?
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದೆಡೆ
ಭವಘೋರನರಕವೆಂದರಿಯಾ ಮರುಳೇ.

೬.
ಕಾಮ ಬಲ್ಲಿದನೆಂದರೆ
ಉರುಹಿ ಭಸ್ಮವ ಮಾಡಿದ!
ಕಾಲ ಬಲ್ಲಿದನೆಂದರೆ ಕೆಡಹಿ ತುಳಿದ!
ಬ್ರಹ್ಮ ಬಲ್ಲಿದನೆಂದರೆ
ಶಿರವ ಚಿವುಟಿಯಾಡಿದ!
ಎಲೆ ಅವ್ವ, ನೀನು ಕೇಳಾ ತಾಯೆ,
ವಿಷ್ಣು ಬಲ್ಲಿದನೆಂದರೆ
ಮುರಿದು ಕಂಕಾಳವ ಪಿಡಿದ!
ತ್ರಿಪುರದ ಕೋಟೆ ಬಲ್ಲಿತ್ತೆಂದರೆ
ನೊಸಲ ಕಣ್ಣಿಂದುರುಹಿದನವ್ವ!
ಇದು ಕಾರಣ
ಚೆನ್ನಮಲ್ಲಿಕಾರ್ಜುನ ಗಂಡನೆನಗೆ!
ಜನನಮರಣಕ್ಕೊಳಗಾಗದವನ
ಬಲುಹನೇನ ಬಣ್ಣಿಪೆನವ್ವ!?

೭.
ಅಯ್ಯ, ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ
ಅಯ್ಯ, ದಶದಿಕ್ಕುಇತ್ತಿತ್ತ, ದಶಭುಜಗಳತ್ತತ್ತ
ಚೆನ್ನಮಲ್ಲಿಕಾರ್ಜುನಯ್ಯ,
ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ!

೮.
ದೇವ, ಎನ್ನ ಹೃದಯಕಮಲದೊಳಗೆ ಪ್ರಜ್ವಳಿಪ್ಪ ಬೆಳಗೆ
ದೇವ, ಎನ್ನ ಮನದ ಮೊನೆಯೊಳೊಪ್ಪುತಿರ್ಪ ಬೆಳಗಿನೊಳಗೆ
ಗುರುವೆ ಬಾರ, ಪರವೆ ಬಾರ, ವರವೆ ಬಾರ, ದೇವದೇವ
ಹರನೆ ಬಾರ, ಸುಕೃತಸಾರ ಸರ್ಪಹಾರ ಬಾರ ದೇವ
ವೀರಭದ್ರ, ರುದ್ರ, ದುರಿತದೂರ, ವಿಶ್ವರೂಪ ಬಾರ
ಮಾರಮಥನ, ಪುಣ್ಯಕಥನ, ಸಹಜಮಿಥುನರೂಪ ಬಾರ
ತರಗಿರಿಯ ಪಿರಿಯ ಸಿರಿಯ ಸತ್ಯಶರಣ ಭರಣ ಬಾರ
ಬಾರ ಫಲವೆ, ಫಲದ ರಸವೆ, ರಸದ ಸವಿಯ ಸುಖವೆ ಬಾರ
ಬಾರ ಗುರುವೆ, ಬಾರ ಪರವೆ, ಬಾರ ವರವೆ ಮಲ್ಲಿನಾಥ
ಬಾರ ಧನವೆ, ಬಾರ ಸುಕೃತಸಾರ ಬಾರ ಮಲ್ಲಿನಾಥ
ಬರ ಸಿದ್ಧ, ಭವವಿರುದ್ಧ ಸುಪ್ರಸಿದ್ಧ ಮಲ್ಲಿನಾಥ
ಬಾರ ಮುಡುಹು ಮುಂದಲೆಗಳ ಕುರುಳನೀವೆ ಮಲ್ಲಿನಾಥ ಬಾರ

೯.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.

೧೦.
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯ?
ನೀನು ಬಹಿರಂಗವ್ಯವಹಾರದೂರಸ್ಥನು!
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯ?
ನೀನು ವಾಙ್ಮನಕ್ಕತೀತನು
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯ?
ನೀನು ನಾದಾತೀತನು
ಭಾವಜ್ಞಾನದಿಂದೊಲಿಸುವೆನೆ ಅಯ್ಯ?
ನೀನು ಮತಿಗತೀತನು
ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೇ ಅಯ್ಯ?
ನೀನು ಸರ್ವಾಂಗಪರಿಪೂರ್ಣನು
ಅಯ್ಯ ನಿನ್ನ ಒಲಿಸಲೆನ್ನಳವಲ್ಲ
ನೀ ಒಲಿವುದೆ ಸುಖವಯ್ಯ ಚೆನ್ನಮಲ್ಲಿಕಾರ್ಜುನಯ್ಯ!

೧೧.
ನೀರಕ್ಷೀರದಂತೆ ನೀನಿಪ್ಪೆಯಾಗಿ
ಆವುದು ಮುಂದು, ಆವುದು ಹಿಂದು ಎಂದರಿಯೆನು
ಆವುದು ಕರ್ತೃ, ಆವುದು ಭೃತ್ಯನೆಂದರಿಯೆನು
ಆವುದು ಘನ, ಆವುದು ಕಿರಿದೆಂದರಿಯೆನು
ಚೆನ್ನಮಲ್ಲಿಕಾರ್ಜುನಯ್ಯ, ನಿನ್ನನೊಲಿದು ಕೊಂಡಾಡಿದರೆ
ಇರುಹೆ ರುದ್ರನಾಗದೆ ಹೇಳಯ್ಯ

೧೨.
ಎನ್ನ ಕಾಯ ಮಣ್ಣು, ಜೀವ ಬಯಲು
ಆವುದ ಹಿಡಿವೆನಯ್ಯ ದೇವ?
ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯ?
ಎನ್ನ ಮಾಯವನು ಮಾಣಿಸಯ್ಯ ಚೆನ್ನಮಲ್ಲಿಕಾರ್ಜುನಯ್ಯ

೧೩.
ಆವಾಗಳೂ ನನ್ನ ಮನ ಉದರಕ್ಕೆ ಹರಿವುದು
ಕಾಣಲಾರೆನಯ್ಯ ನಿಮ್ಮುವನು
ಭೇದಿಸಲಾರೆನಯ್ಯ ನಿಮ್ಮ ಮಾಯೆಯನು
ಮಾಯದ ಸಂಸಾರದಲ್ಲಿ ಸಿಲುಕಿದೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಹೊದ್ದುವಂತೆ ಮಾಡಾ ನಿಮ್ಮ ಧರ್ಮ

೧೪.
ಕಲ್ಲ ಹೊಕ್ಕರೆ ಕಲ್ಲ ಬಿರಿಸಿದೆ
ಗಿರಿಯ ಹೊಕ್ಕರೆ ಗಿರಿಯ ಬಿರಿಸಿದೆ
ಭಾಪು ಸಂಸಾರವೇ, ಬೆನ್ನಿಂದ ಬೆನ್ನ ಹತ್ತಿ ಬಂದೆ
ಚೆನ್ನಮಲ್ಲಿಕಾರ್ಜುನಯ್ಯ, ಇನ್ನೇವೆನಿನ್ನೇವೆ!?

೧೫.
ಸಂಸಾರವೆಂಬ ಹಗೆಯಯ್ಯ, ತಂದೆ,
ಎನ್ನ ವಂಶವಂಶ ತಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯ
ಎನ್ನುವನರಸಿಯರಸಿ ಹಿಡಿದು ಕೊಲ್ಲುತ್ತಿದೆಯಯ್ಯ
ನಿಮ್ಮ ಮರೆವೊಕ್ಕೆ ಕಾಯಯ್ಯ
ಎನ್ನ ಬಿನ್ನಪವನವಧಾರು, ಚೆನ್ನಮಲ್ಲಿಕಾರ್ಜುನಯ್ಯ

೧೬.
ಬೆಂದ ಸಂಸಾರ ಬೆಂಬಿಡದೆ ಕಾಡುತ್ತಿರುವುದಯ್ಯ
ಏವೆನಯ್ಯ ಏವೆನಯ್ಯ?
ಅಂದಂದಿನ ದಂದುಗಕ್ಕೆ ಏವೆನಯ್ಯ ಏವೆನಯ್ಯ?
ಬೆಂದೊಡಲ ಹೊರೆವುದಕ್ಕೆ ನಾನಾರೆ
ಚೆನ್ನಮಲ್ಲಿಕಾರ್ಜುನ, ಕೊಲ್ಲು ಕಾಯಿ ನಿಮ್ಮ ಧರ್ಮ!

೧೭.
ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ
ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ

೧೮.
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ-
ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ ಭವಗಳನುಂಡೆನುಂಡೆ ಸುಖಾಸುಖಂಗಳ
ಹಿಂದಣ ಜನ್ಮಂಗಳು ತಾನೇನಾದರಾಗಲಿ
ಇಂದು ನೀ ಕರುಣಿಸು ಚೆನ್ನಮಲ್ಲಿಕಾರ್ಜುನ

೧೯.
ಪುಣ್ಯಪಾಪಂಗಳನರಿಯದ ಮೊದಲು
ಭವ ಭವಂಗಳಲಿ ಬಂದೆನಯ್ಯ
ನಂಬಿ ಬಂದು ಶರಣುಹೊಕ್ಕೆನಯ್ಯ
ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯ
ನಿಮ್ಮ ಧರ್ಮ, ನಿಮ್ಮ ಧರ್ಮ!!
ನಿಮ್ಮನೊಂದನೇ ಬೇಡುವೆನು
ಎನ್ನ ಬಂಧನವ ಬಿಡುವಂತೆ ಮಾಡಯ್ಯ ಶ್ರೀ ಚೆನ್ನಮಲ್ಲಿಕಾರ್ಜುನ

೨೦.
ಕೋಲ ತುದಿಯ ಕೋಡಗದಂತೆ
ನೇಣ ತುದಿಯ ಬೊಂಬೆಯಂತೆ
ಆಡಿದೆನಯ್ಯ ನೀನಾಡಿಸಿದಂತೆ
ನಾ ನುಡಿದೆನಯ್ಯ ನೀ ನುಡಿಸಿದಂತೆ
ನಾನಿದ್ದೇನಯ್ಯ ನೀನಿರಿಸಿದಂತೆ
ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ

೨೧.
ಅಲ್ಲೆಂದೊಡೆ ಉಂಟೆಂಬುದೀ ಮಾಯೇ,
ಒಲ್ಲೆನೆಂದೆಡೆ ಬಿಡದೀ ಮಾಯೇ, ಎನಗಿದು ವಿಧಿಯೇ?
ಚೆನ್ನಮಲ್ಲಿಕಾರ್ಜುನಯ್ಯ, ಒಪ್ಪಿ ಮರೆವೊಕ್ಕೊಡೆ ಮತ್ತುಂಟೆ
ಕಾಯಯ್ಯ ಶಿವಧೋ!

೨೨.
ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು
ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು, ಆನೊಂದರಿಯೆನಯ್ಯ
ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ,
ಪ್ರಾಣ ನಿನಗರ್ಪಿತವಾಯಿತ್ತು,
ನೀನಲ್ಲದೆ ಪೆರತೊಂದ ನೆನೆದರೆ ಆಣೆ
ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ

೨೩.
ಹಿಂದಣ ಹಳ್ಳ, ಮುಂದಣ ತೊರೆ,
ಸಲ್ಲುವ ಪರಿಯೆಂತು ಹೇಳಾ! ಹಿಂದಣ ಕೆರೆ, ಮುಂದಣ ಬಲೆ
ಹದುಳವಿನ್ನೆಲ್ಲಿಯದು ಹೇಳಾ
ನೀನಿಕ್ಕಿದ ಮಾಯೆ ಕೊಲುತಿಪ್ಪುದು
ಕಾಯಯ್ಯ ಕಾಯಯ್ಯ ಚೆನ್ನಮಲ್ಲಿಕಾರ್ಜುನ

೨೪.
ಭವಭವದಲಿ ತೊಳಲಿ ಬಳಲಿತ್ತೆನ್ನ ಮನ
ಆನೇವೆನಯ್ಯ,
ಹಸಿದುಂಡೊಡೆ, ಉಂಡು ಹಸಿವಾಯಿತ್ತು
ಇಂದು ನೀನೊಲಿದೆಯಾಗಿ
ಎನಗೆ ಅಮೃತದ ಆಪ್ಯಾಯನವಾಯಿತ್ತು
ಇದು ಕಾರಣ ನೀನಿಕ್ಕಿದ ಮಾಯೆಯನಿನ್ನು ಮೆಟ್ಟಿದೆನಾದೊಡೆ
ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ

೨೫.
ಹರಿಯ ನುಂಗಿತ್ತು ಮಾಯೆ! ಅಜನ ನುಂಗಿತ್ತು ಮಾಯೆ!
ಇಂದ್ರನ ನುಂಗಿತ್ತು ಮಾಯೆ! ಚಂದ್ರನ ನುಂಗಿತ್ತು ಮಾಯೆ!
ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ!
ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ!
ಈರೇಳು ಭುವನವನಾರಡಿಗೊಂಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನಯ್ಯ,
ಎನ್ನ ಮಾಯೆಯ ಮಾಣಿಸಾ ಕರುಣಿ

೨೬.
ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ!
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಬಾರದು

೨೭.
ಬಿಟ್ಟೆನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ!
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ, ನಿಮ್ಮಾಣೆ

೨೮.
ಬಿಟ್ಟಿರ್ಪನೆಂದೊಡಂ ಬಿಡದು ನಿನ್ನಯ ಮಾಯೆ!
ಒಟ್ಟಯಿಸಿ ಬಂದೊಡೊಡವಂದಪ್ಪುದೀ ಮಾಯೆ!
ಬಿಡದು ನಿನ್ನಯ ಮಾಯೆ ಒಟ್ಟಯಿಸಿ ನಿಂದೊಡಂ
ಒಡವಂದರೊಡಬಪ್ಪುದೀ ಮಾಯೆ ಸಂಗಡಂ
ಜೋಗಿಗಂ ಜೋಗಿಣಿಯದಾಯ್ತು ನಿನ್ನಯ ಮಾಯೆ!
ರಾಗದಿಂ ಸವಣಂಗೆ ಕಂತಿಯಾಯ್ತೀ ಮಾಯೆ!
ಭಗವಂಗೆ ಮಾಸಕಬ್ಬೆಯ ಚೋಹವಾಯ್ತಯ್ಯ
ಬಗೆವರಾರವರಿಗವರಂದವಾಯಿತ್ತಯ್ಯ!
ಗಿರಿಯನೇರಿದೊಡಿರದೆ ಗಿರಿಯನೇರಿತು ಮಾಯೆ!
ಪರಿದಡವಿಯಂ ಪೊಕ್ಕೊಡೊಡನೆ ಪೊಕ್ಕುದು ಮಾಯೆ!
ಬೆನ್ನ ಕೈಯಂ ಬಿಡದು ಭಾಪು ಸಂಸಾರವೆ
ಎನ್ನಂ ನಂಬಿಸಿತು ಮಝಪೂತು ಸಂಸಾರವೆ
ಕರುಣಕರ ನಿನ್ನ ಮಾಯೆಗಂಜುವೆನಯ್ಯ
ಪರಮೇಶ್ವರ ಮಲ್ಲಿನಾಥ ಕರುಣಿಪುದಯ್ಯ
ಇನ್ನೇವೆನಿನ್ನೇವೆನಯ್ಯೋ ಮಹಾದೇವ
ಪನ್ನಗಾಭರಣ ಕರುಣಿಸುವುದೆಲೆ ಮಹದೇವ

೨೯.
ಎನ್ನ ಮಾಯದ ಮದವ ಮುರಿಯಯ್ಯ
ಎನ್ನ ಕಾಯದ ಕಳವಳವ ಕೆಡಿಸಯ್ಯ
ಎನ್ನ ಜೀವದ ಜಂಜಡವ ಬಿಡಿಸಯ್ಯ
ಎನ್ನ ದೇವ ಮಲ್ಲಿಕಾರ್ಜುನಯ್ಯ,
ಎನ್ನ ಸುತ್ತಿದ ಮಾಯಾಪ್ರಪಂಚವ ಬಿಡಿಸಾ ನಿಮ್ಮ ಧರ್ಮ!

೩೦.
ವರಚಕ್ರಿ ಬೆಸಗೆಯ್ವೊಡೆ ಅಲಗಿನ ಹಂಗೇಕೆ?
ಪರುಷ ಕೈಯಲುಳ್ಳೊಡೆ ಸಿರಿಯ ಹಂಗೇಕೆ?
ಮಾಣಿಕ್ಯದ ಬೆಳಗುಳ್ಳೊಡೆ ಜ್ಯೋತಿಯ ಹಂಗೇಕೆ?
ಕಾಮಧೇನು ಕರೆವೆಡೆ ಕರುವಿನ ಹಂಗೇಕೆ?
ಎನ್ನ ದೇವ ಶ್ರೀಶೈಲ ಚೆನ್ನಮಲ್ಲಿಕರ್ಜುನನುಳ್ಳೊಡೆ
ಮರಳಿ ಸಂಸಾರದ ಹಂಗೇಕೆ?

೩೧.
ಊರ ಸೀರೆಗೆ ಅಗಸ ತಡಬಡಗೊಂಬಂತೆ
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು ನೆನೆನೆನೆದು
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

೩೨.
ದೇವ ಎನಗೆ ಭವಿಯ ಸಂಗವೆಂದು ಮಾಣ್ಪುದೆನ್ನ ತಂದೆ
ದೇವ ಬೆರಕೆಯಿಲ್ಲದಚ್ಚಬಕುತಿ ಸುಖವದೆಂದು ತಂದೆ
ಪೂಜೆಯೊಳಗೆ ಮೆಚ್ಚ ಬೆಚ್ಚ ಮನವನೆಂತು ತೆಗೆವೆನಯ್ಯ
ಪೂಜೆಯೊಳಗೆ ನೆಟ್ಟ ದಿಟ್ಟಿಗಳನದೆಂತು ಕೀಳ್ವೆನಯ್ಯ
[ಚೆನ್ನಮಲ್ಲಿಕಾರ್ಜುನ]

೩೩.
ದೇವ ಶಿವಲಾಂಛನವನೇರಿಸಿಕೊಂಡು
ಮನೆಗೆ ಬಂದವರಂ ಕಡೆಗಣಿಸೆ
ಎಂತು ನೋಡುತಿರ್ಪೆನ್?
ಆವರ್ಗೆ ಸತ್ಕಾರವಂ
ಮಾಡಲಿಲ್ಲದಿರ್ದೊಡೆ
ಎನ್ನನೀ ಧರೆಯ ಮೇಲಿರಿಸುವ ಕಾರಣವೇನಭವ?
ನಿನ್ನವಳೆಂದೆನ್ನ ಮುದ್ದುತನವ ಸಲಿಸುವೊಡಿರಿಸುವುದು
ಇಲ್ಲಾ ಕೈಲಸಕ್ಕೆ ಕೊಂಡೊಯ್ವುದು [ಚೆನ್ನಮಲ್ಲಿಕಾರ್ಜುನ]

೩೪.
ಅಶನದಾಶಯಂ, ತೃಷೆಯ ತೃಷ್ಣೆಯಂ,
ಬೆಸನದ ಬೇಗೆಯಂ, ವಿಷಯದ ವಿಹ್ವಳತೆಯಂ,
ತಾಪತ್ರಯದ ಕಲ್ಪನೆಗಳಂ ಗೆಲಿದೆ
ಇನ್ನೇನಿನ್ನೇನೆನ್ನಿಚ್ಛೆಯಾದುದು
ಚೆನ್ನಮಲ್ಲಿಕಾರ್ಜುನ ನಿನಗಂಜೆನಂಜೆ

೩೫.
ಶಿವನೇ, ಉಳಿವ ಕರೆವ ನೇಹವುಂಟೆ?
ಸಂಸಾರಕ್ಕಂ ನಿಮ್ಮಲ್ಲಿ ಗೆಡೆಯಾಡುವ ಭಕ್ತಿಯುಂಟೇ?
ಏನಯ್ಯ ಶಿವನೇ,
ಏನೆಂದು ಪೇಳ್ವೆ ಲಜ್ಜೆಯ ಮಾತ, [ಚೆನ್ನಮಲ್ಲಿಕಾರ್ಜುನ]

೩೬.
ಒಳಗೆ ಶೋಧಿಸಿ, ಹೊರಗೆ ಶುದ್ಧವಿಸಿ,
ಒಳ-ಹೊರಗೆಂಬ ಉಭಯಶಂಕೆಯ ಕಳೆದು,
ಸ್ಫಟಿಕದ ಶಲಾಕೆಯಂತೆ ತಳವೆಳಗುಮಾಡಿ,
ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ,
ಶಿಷ್ಯನ ಸರ್ವಪ್ರಪಂಚ ನಿವೃತ್ತಿಯಂ ಮಾಡಿ, ನಿಜೋಪದೇಶವನಿತ್ತು
ಆ ಶಿಷ್ಯನ ನಿಜದಾದಿಯನೈದಿಸುವನೀಗ ದೀಕ್ಷಾಗುರು!
ಆ ಸಹಜಗುರುವೀಗ ಜಗದಾರಾಧ್ಯನು
ಅವನ ಪಾದಕ್ಕೆ ನಮೋ ನಮೋ ಎಂಬೆ ಕಾಣಾ ಚೆನ್ನಮಲ್ಲಿಕಾರ್ಜುನ

೩೭.
ಗುರುವೆಂಬ ತೆತ್ತಿಗನೆನಗೆ
ಲಿಂಗವೆಂಬಲಗನು ಮನುನಿಷ್ಠೆಯೆಂಬ ಕೈಯಲ್ಲಿ ಕೊಡಲು
ಕಾದುವೆನು, ಗೆಲುವೆನು ಕಾಮನೆಂಬುವನ!
ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು
ಅಲಗು ಎನ್ನೊಳಗೆ ನಟ್ಟು ಆನಳಿದ ಕಾರಣ
ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ

೩೮.
ಗುರುವಿನ ಕರುಣದಿಂದ ಲಿಂಗ-ಜಂಗಮನ ಕಂಡೆ
ಗುರುವಿನ ಕರುಣದಿಂದ ಪಾದೋದಕ-ಪ್ರಸಾದವ ಕಂಡೆ
ಗುರುವಿನ ಕರುಣದಿಂದ ಸಜ್ಜನಸದ್ಭಕ್ತರ ಗೋಷ್ಠಿಯ ಕಂಡೆ
ಚೆನ್ನಮಲ್ಲಿಕಾರ್ಜುನಯ್ಯ,
ನಾ ಹುಟ್ಟಲೊಡನೆ ವಿಭೂತಿಯ ಪಟ್ಟವ ಕಟ್ಟಿ
ಸದ್ಗುರುಸ್ವಾಮಿ ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು

೩೯.
ಗುರುವಿನ ಕರುಣದಿಂದ ಲಿಂಗ-ಜಂಗಮನ ಕಂಡ್
ಗುರುವಿನ ಕರುಣದಿಂದ ಪಾದೋದಕ-ಪ್ರಸಾದವ ಕಂಡೆ
ಗುರುವಿನ ಕರುಣದಿಂದ ಸಜ್ಜನಸದ್ಭಕ್ತರ ಗೋಷ್ಠಿಯ ಕಂಡೆ
ಚೆನ್ನಮಲ್ಲಿಕಾರ್ಜುನಯ್ಯ, ನಾ ಹುಟ್ಟಲೊಡನೆ
ವಿಭೂತಿಯ ಪಟ್ಟವ ಕಟ್ಟಿ ಸದ್ಗುರುಸ್ವಾಮಿ
ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು

೪೦.
ಅರಸಿ ಮರೆವೊಕ್ಕೊಡೆ ಕಾವ ಗುರುವೇ,
ಜಯ ಜಯ ಗುರುವೇ
ಆರೂ ಅರಿಯದ ಬಯಲೊಳಗೆ ಬಯಲಾಗಿ
ನಿಂದ ನಿಲವ ಹಿಡಿದೆನ್ನ ಕರದಲ್ಲಿ ತೋರಿದ ಗುರುವೇ
ಚೆನ್ನಮಲ್ಲಿಕಾರ್ಜುನ ಗುರುವೇ, ಜಯ ಜಯ ಗುರುವೇ.

೪೧.
ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು
ಎನ್ನ ಮಸ್ತಕದ ಮೇಲೆ ಇರಿಸಿದಾಗಳೇ
ಎನ್ನ ಭವಂ ನಾಸ್ತಿಯಾಯಿತ್ತು! ಎನ್ನ ತನ್ನಂತೆ ಮಾಡಿದ!
ಎನಗೆ-ತನಗೆ ತೆರಹಿಲ್ಲದಂತೆ ಮಾಡಿ ತೋರಿದನು ನೋಡಾ!
ತನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಮನಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಮನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಭಾವಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಭಾವಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಜ್ಞಾನಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಜ್ಞಾನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಸರ್ವಾಂಗದೊಳಹೊರಗೆ ತೆರಹಿಲ್ಲದಳವಡಿಸಿದ
ನಮ್ಮ ಗುರುಲಿಂಗದೇವ ಚೆನ್ನಮಲ್ಲಿಕಾರ್ಜುನ

೪೨.
ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು
ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು
ಜಯ ಜಯ ಗುರು ನಮೋ
ಪರಮ ಗುರುವೆ ನಮೋ ನಮೋ
ಚೆನ್ನಮಲ್ಲಿಕಾರ್ಜುನನ ತಂದೆನಗೆ ತೋರಿ ಕೊಟ್ಟ
ಗುರುವೆ ನಮೋ ನಮೋ

೪೩.
ನರ-ಜನ್ಮವ ತೊಡೆದು
ಹರ-ಜನ್ಮವ ಮಾಡಿದ ಗುರುವೆ
ಭವಬಂಧನವ ಬಿಡಿಸಿ
ಪರಮಸುಖವ ತೋರಿದ ಗುರುವೆ
ಭವಿ ಎಂಬುದ ತೊಡೆದು
ಭಕ್ತೆ ಎಂದೆನಿಸಿದ ಗುರುವೆ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ
ಕೊಟ್ಟ ಗುರುವೆ ನಮೋ ನಮೋ

೪೪.
ಸಂಸಾರಸಾಗರದೊಳಗೆ ಬಿದ್ದೆ ನೋಡಾ ನಾನು
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು
ಅಂಗ ವಿಕಾರದ ಸಂಗವ ನಿಲಿಸಿ
ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು
ಹಿಂದಣ ಜನ್ಮವ ತೊಡೆದು
ಮುಂದಣ ಪಥವ ತೋರಿದನೆನ್ನ ತಂದೆ
ಚೆನ್ನಮಲ್ಲಿಕಾರ್ಜುನನ ನಿಜವನರುಹಿದನೆನ್ನ ಗುರು

೪೫.
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ
ಬರಲುಗೊಂಡ ಸಸಿಗೆ ಮಳೆಸುರಿದಂತಾಯ್ತು ನೋಡಾ!
ಇಂದೆನಗೆ ಇಹದ ಸುಖ, ಪರದ ಗತಿ ನಡೆದು ಬಂದಂತಾಯಿತ್ತು
ನೋಡಾ ಚೆನ್ನಮಲ್ಲಿಕಾರ್ಜುನಯ್ಯ ಗುರುಪಾದವ ಕಂಡು
ಧನ್ಯಳಾದೆನು ನೋಡಾ

೪೬.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ!
ಎನಗುಳ್ಳುದೊಂದು ಮನ,
ಆ ಮನ ನಿಮ್ಮಲ್ಲಿ ಒಡೆವೆರೆದ ಬಳಿಕ
ಎನಗೆ ಭಯವುಂಟೆ ಚೆನ್ನಮಲ್ಲಿಕಾರ್ಜುನಯ್ಯ!?

೪೭.
ಅಂಗವ ಲಿಂಗಮುಖಕ್ಕೆ ಅರ್ಪಿಸಿ
ಅಂಗ ಅನಂಗವಾಯಿತ್ತು
ಮನವ ಅರಿವಿಂಗರ್ಪಿಸಿ ಮನ ಲಯವಾಯಿತ್ತು
ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು
ಅಂಗ-ಮನ-ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು
ಎನ್ನ ಅಕಾಯದ ಸುಖವ ಲಿಂಗ ಭೋಗಿಸುವನಾಗಿ
ಶರಣಸತಿ-ಲಿಂಗಪತಿಯಾದೆನು!
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗಂಡನ ಒಳಹೊಕ್ಕು ಬೆರೆಸಿದೆನು!

೪೮.
ಹರನೇ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಿಸಿದ್ದೆ ನೋಡಾ!
ಹದೆಯ ಮೇಲಣ ಮಾತ ಬೆಸಗೊಳಲಟ್ಟಿದರೆ
ಶಶಿಧರನ ಹತ್ತಿರಕ್ಕೆ ಕಳುಹಿದರೆಮ್ಮವರು
ಭಸ್ಮವನೇ ಪೂಸಿ ಕಂಕಣವನೆ ಕಟ್ಟಿದರು
ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು!

೪೯.
ಜಲದ ಮಂಟಪದ ಮೇಲೆ
ಉರಿಯ ಚಪ್ಪರವನಿಕ್ಕಿ,
ಆಲಿಕಲ್ಲ ಹಸೆಯ ಹಾಸಿ, ಬಾಸಿಗವ ಕಟ್ಟಿ
ಕಾಲಿಲ್ಲದ ಹೆಂಡತಿಗೆ
ತಲೆಯಿಲ್ಲದ ಗಂಡ ಬಂದು ಮುಟ್ಟಿದನು ನೋಡಾ!
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ
ಚೆನ್ನಮಲ್ಲಿಕಾರ್ಜುನಯ್ಯನಿಗೆ!

೫೦.
ಎನ್ನ ನಾನರಿಯದಂದು ಮುನ್ನ ನೀನೆಲ್ಲಿರ್ದೆ? ಹೇಳಯ್ಯ!
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆಯಯ್ಯ
ಎನ್ನೊಳಗಿರ್ದು ಮೈದೋರದ ಭೇದವ
ನಿಮ್ಮಲ್ಲಿ ಕಂಡೆನು ಕಾಣಾ ಚೆನ್ನಮಲ್ಲಿಕಾರ್ಜುನ

೫೧.
ಅಂಗ ಲಿಂಗವ ವೇಧಿಸಿ
ಅಂಗ ಲಿಂಗದೊಳಗಾಯಿತ್ತು
ಮನ ಲಿಂಗವ ವೇಧಿಸಿ
ಮನ ಲಿಂಗದೊಳಗಾಯಿತ್ತು
ಭಾವ ಲಿಂಗವ ವೇಧಿಸಿ
ಭಾವ ಲಿಂಗದೊಳಗಾಯಿತ್ತು
ಚೆನ್ನಮಲ್ಲಿಕಾರ್ಜುನ, ನಿಮ್ಮ ಒಲುಮೆಯ ಸಂಗದಲ್ಲಿರ್ದು
ಸ್ವಯಂಲಿಂಗಿಯಾದೆನು

೫೨.
ನಿನ್ನರಿಕೆಯ ನರಕವೇ ಮೋಕ್ಷ ನೋಡಯ್ಯ
ನಿನ್ನರಿಯದ ಮುಕ್ತಿಯೇ ನರಕ ಕಂಡಯ್ಯ
ನೀನೊಲ್ಲದ ಸುಖವೇ ದುಃಖ ಕಂಡಯ್ಯ
ನೀನೊಲಿದ ದುಃಖವೇ ಪರಮಸುಖ ಕಂಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನೀ ಕಟ್ಟಿ ಕೆಡಹಿದ ಬಂಧನವೇ ನಿರ್ಬಂಧನವೆಂದಿಪ್ಪೆನು

೫೩.
ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ?
ಸೂರ್ಯಕಾಂತದಗ್ನಿಯನಾರು ಭೇದಿಸಬಲ್ಲರು?
ಅಪಾರಮಹಿಮ ಚೆನ್ನಮಲ್ಲಿಕಾರ್ಜುನನೆನ್ನೊಳಡಗಿಪ್ಪ ಪರಿಯ
ಬೇರಿಲ್ಲದೆ ಕಂಡು ಕಣ್ತೆರೆದೆನು

೫೪.
ಘನವ ಕಂಡೆ, ಅನುವ ಕಂಡೆ
ಆಯತ-ಸ್ವಾಯತ-ಸನ್ನಿಹಿತ ಸುಖವ ಕಂಡೆ
ಅರಿವನರಿದು ಮರಹ ಮರೆದೆ
ಕುರುಹಿನ ಮೋಹದ ಮರವೆಯನೀಡಾಡಿದೆ
ಚೆನ್ನಮಲ್ಲಿಕಾರ್ಜುನ, ನಿಮ್ಮನರಿದು ಸೀಮೆಗೆಟ್ಟೆನು

೫೫.
ಕ್ರೀಗಳು ಮುಟ್ಟಲರಿಯವು ನಿಮ್ಮನೆಂತು ಪೂಜಿಸುವೆ?
ನಾದ-ಬಿಂದುಗಳು ಮುಟ್ಟಲರಿಯವು ನಿಮ್ಮನೆಂತು ಹಾಡುವೆ?
ಕಾಯ ಮುಟ್ಟುವೊಡೆ ಕಾಣಬಾರದ ಘನವು
ನಿಮ್ಮನೆಂತು ಕರಸ್ಥಲದಲಿ ಧರಿಸುವೆ?
ಚೆನ್ನಮಲ್ಲಿಕಾರ್ಜುನಯ್ಯ, ನಾನೇನೆಂದರಿಯದೆ
ನಿಮ್ಮ ನೋಡಿ ನೋಡಿ ಸೈವೆರೆಗಾಗುತಿರ್ದೆನು

೫೬.
ಸಜ್ಜನವಾಗಿ ಮಜ್ಜನಕ್ಕೆರೆವೆ
ಶಾಂತಳಾಗಿ ಪೂಜೆಯ ಮಾಡುವೆ
ಸಮರತಿಯಿಂದ ನಿಮ್ಮ ಕೂಡುವೆ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮನಲಗದ ಪೂಜೆ ಅನುವಾಯಿತ್ತೆನಗೆ

೫೭.
ಎಲ್ಲ ಎಲ್ಲವನರಿದು ಫಲವೇನಯ್ಯ?
ತನ್ನ ತಾನರಿಯಬೇಕಲ್ಲದೆ?
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನ, ನೀ ಅರಿವಾಗಿ ಮುಂದೋರಿದ ಕಾರಣ
ನಿಮ್ಮಿಂದ ನಿಮ್ಮನರಿದೆನಯ್ಯ ಪ್ರಭುವೆ

೫೮.
ಚಂದನವ ಕಡಿದು ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆದೆಡೆ ಬೆಂದು ಕಳಂಕ ಹಿಡಿದಿತ್ತೆ?
ಸಂದು ಸಂದನು ಕಡಿದು ಕಬ್ಬನು ತಂದು ಗಾಣದಲಿಕ್ಕಿ ಅರೆದೊಡೆ
ಬೆಂದು ಪಾಕಗೂಳ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತ್ತೆ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು
ನಿಮಗೆ ಹಾನಿ
ಎನ್ನ ತಂದೆ ಮಲ್ಲಿಕಾರ್ಜುನದೇವಯ್ಯ,
ಕೊಂದೊಡೆ ಶರಣೆಂಬುದ ಮಾಣೆ

೫೯.
ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆನು
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು
ಆವು ನೀಡಿದವು ತಮ್ಮ ಲಿಂಗಕ್ಕೆಂದು
ಆನು ಬೇಡಿ ಭವಿಯಾದೆನು
ಆವು ನೀಡಿ ಭಕ್ತರಾದರು
ಇನ್ನು ಬೇಡಿದೆನಾದರೆ, ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮಾಣೆ

೬೦.
ಗಿರಿಯೊಳು ವನದೊಳು ಗಿಡಗಿಡದತ್ತ
ದೇವ ಎನ್ನ ದೇವ ಬಾರಯ್ಯ ತೋರಯ್ಯ ನಿಮ್ಮ ಕರುಣವನೆಂದು
ನಾನು ಅರಸುತ್ತ ಅಳಲುತ್ತ ಕಾಣದೇ ಸುಯಿದು ಬಂದು
ಕಂಡೆ ಶರಣರ ಸಂಗದಿಂದ
ಅರಸಿ ಹಿಡಿದೇನೆಂದು ನೀನಡಗುವ ಠಾವ ಹೇಳಾ
ಚೆನ್ನಮಲ್ಲಿಕಾರ್ಜುನ

೬೧.
ಪೃಥ್ವಿಯ ಗೆಲಿದ ಏಲೇಶ್ವರನ ನಾನು ಕಂಡೆ
ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ನಾನು ಕಂಡೆ
ಸತ್ವ-ರಜ-ತಮ-ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ
ಅಂತರಂಗ-ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ನಾನು ಕಂಡೆ
ಇವರೆಲ್ಲರ ಮಧ್ಯಸ್ಥಾನ ಪ್ರಾಣಲಿಂಗವೆಂದು
ಸುಜ್ಞಾನದಲ್ಲಿ ತೋರಿದ ಆ ಬಸವಣ್ಣನ ಪ್ರಸಾದದಿಂದ
ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯ

೬೨.
ಅಪಾರ ಗಂಭೀರದ ಅಂಬುಧಿಯಲ್ಲಿ
ತಾರಾಪಥವ ನೋಡಿ ನಡೆಯೆ
ಭೈತ್ರದಿಂದ ದ್ವೀಪಾಂತರಕ್ಕೆ ಸಕಲಪದಾರ್ಥನವೆಯ್ದಿಸುವುದು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಸಮೀಪ
ತುರ್ಯಸಂಭಾಷಣೆಯನರಿದಡೆ ಮುನ್ನಿನಲ್ಲಿಗೆಯ್ದಿಸುವುದು

೬೩.
ಕ್ರೀಯೊಳ್ಳುಡೊಂತೊಂದಾಸೆ
ಸದ್ಭಕ್ತರ ನುಡಿಗಡಣ ಉಳ್ಳೊಡಂತೊಂದಾಸೆ
ಶ್ರೀಗಿರಿಯನೇರಿ ನಿಮ್ಮ ಬೆರೆಸಿದರೆ ಎನ್ನಾಸೆಗೆ ಕಡೆಯೇ ಅಯ್ಯ?
ಆವಾಸೆಯೂ ಇಲ್ಲದೆ ನಿಮ್ಮ ನಂಬಿ ಬಂದು ಕೆಟ್ಟೆನಯ್ಯ

೬೪.
ಆರೂ ಇಲ್ಲದವಳೆಂದು
ಅಳಿಗೊಳಲು ಬೇಡ ಕಂಡಯ್ಯ
ಏನ ಮಾಡಿದೆಡೆಯೂ ನಾನಂಜುವಳಲ್ಲ!
ತರಗೆಲೆಯ ಮೆಲಿದು ನಾನಿಹೆನು
ಸುರಗಿಯ ಮೇಲೆರಗಿ ನಾನಿಹೆನು
ಚೆನ್ನಮಲ್ಲಿಕಾರ್ಜುನಯ್ಯ
ಕರ ಕಡೆ ನೋಡಿದಡೆ
ಒಡಲನೂ ಪ್ರಾಣವನೂ ನಿಮಗೊಪ್ಪಿಸಿ ಶುದ್ಧಳಿಹೆನು

೬೫.
ಕಿಡಿಕಿಡಿ ಕೆದರಿದಡೆ
ಎನಗೆ ಹಸಿವು ತೃಷೆ ಅಡಗಿತ್ತೆಂಬೆನು
ಮುಗಿಲು ಹರಿದು ಬಿದ್ದಡೆ

ಎನಗೆ ಮಜ್ಜನಕ್ಕೆರೆದರೆಂಬೆನು
ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು
ಚೆನ್ನಮಲ್ಲಿಕಾರ್ಜುನಯ್ಯ, ಶಿರ ಹರಿದು ಬಿದ್ದಡೆ ಪ್ರಾಣ
ನಿಮಗರ್ಪಿತವೆಂಬೆನು

೬೬.
ನಚ್ಚುಗೆ ಮನ ನಿಮ್ಮಲ್ಲಿ ಮೆಚ್ಚುಗೆ ಮನ ನಿಮ್ಮಲ್ಲಿ
ಸಲುಗೆ ಮನ ನಿಮ್ಮಲ್ಲಿ ಸೋಲುಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ ಬಳಲುಗೆ ಮನ ನಿಮ್ಮಲ್ಲಿ
ಕರಗುಗೆ ಮನ ನಿಮ್ಮಲ್ಲಿ ಕೊರಗುಗೆ ಮನ ನಿಮ್ಮಲ್ಲಿ
ಎನ್ನ ಪಂಚೇದ್ರಿಯಗಳು ಕಬ್ಬುನ ಉಂಡ ನೀರಿನಂತೆ
ನಿಮ್ಮಲ್ಲಿ ಬೆರೆಸುಗೆ ಚೆನ್ನಮಲ್ಲಿಕಾರ್ಜುನಯ್ಯ

೬೭.
ಒಡಲಿಲ್ಲದ, ನುಡಿಯಿಲ್ಲದ, ಕಡೆಯಿಲ್ಲದ
ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯ
ಭಾಷೆ ಪೈಸರವಿಲ್ಲ ಓಸರಿಸೆನನ್ಯಕ್ಕೆ
ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ
ಆರಳಿದು ಮೂರಾಗಿ, ಮೂರಳಿದು ಎರಡಾಗಿ,
ಎರಡಳಿದು ಒಂದಾಗಿ ನಿಂದೆನಯ್ಯ
ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ
ಪ್ರಭುವಿನಿಂದ ಕೃತಕೃತ್ಯಳಾದೆನು ನಾನು
ಮರೆಯಲಾಗದು ನಾನು ನಿಮ್ಮ ಶಿಶುವೆಂದು
ಚೆನ್ನಮಲ್ಲಿಕಾರ್ಜುನನ ಬೆರೆಸೆಂದು
ಎನ್ನ ಹರಸುತ್ತಿಹುದು

೬೮.
ಹೊಳೆವ ಕೆಂಜೆಡೆಗಳ ಮಣಿಮುಕುಟದ
ಒಪ್ಪುವ ಸುಲಿಪಲ್ಗಳ ನಗೆಮೊಗದ
ಕಂಗಳ ಕಾಂತಿಯಿಂ ಈರೇಳು ಭುವನಮಂ ಬೆಳಗುವ
ದಿವ್ಯ ಸ್ವರೂಪನಂ ಕಂಡೆ ನಾನು
ಕಂಡೆನ್ನ ಕಂಗಳ ಬರ ಹಿಂಗಿತ್ತೆಂದೆನಗೆ
ಗಂಡ ಗಂಡರನ್ನೆಲ್ಲ ಹೆಂಡಹೆಂಡಿರಾಗಿ ಆಳುವ
ಗುರುವನ ಕಂಡೆ ನಾನು !
ಜಗದಾದಿ ಶಕ್ತಿಯೊಳು ಬೆರೆಸಿ ಒಡನಾಡುವ
ಪರಮ ಗುರು ಚೆನ್ನಮಲ್ಲಿಕಾರ್ಜುನನ ನಿಲುವ ಕಂಡು ಬದುಕಿದೆನು

೬೯.
ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವ
ಏರಿಲ್ಲದ ಘಾಯದಲಿ ನೊಂದೆನವ್ವ
ಸುಖವಿಲ್ಲದ ಧಾವತಿಗೊಂಡೆನವ್ವ
ಚೆನ್ನಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲಿ ಬಂದೆನವ್ವ

೭೦.
ಬೆರಸುವಡೆ ಬೇಗ ತೋರ! ಹೊರಹಾಕದಿರಯ್ಯ!
ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು, ಎನ್ನ ಹೊರಹಾಕದಿರಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ನಂಬಿ
ಬೆಂಬಳಿ ಬಂದೆನು ಇಂಬುಗೊಳ್ಳಯ್ಯ ಬೇಗದಲಿ

೭೧.
ಬಲ್ಲಿದ ಹಗೆಹ ತೆಗೆವನ್ನಬರ
ಬಡವರ ಹರಣ ಹಾರಿ ಹೋದ ತೆರನಂತಾಯಿತ್ತು
ನೀ ಕಾಡಿ ಕಾಡಿ ನೋಡವನ್ನಬರ
ಎನಗಿದು ವಿಧಿಯೇ ಹೇಳಾ ತಂದೆ !
ತೂರುವಾರುವನ್ನಬರ ಒಮ್ಮೆ ಗಾಳಿಗೆ
ಹಾರಿ ಹೋದ ತೆರನಂತಾಯಿತ್ತು
ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯ
ಚೆನ್ನಮಲ್ಲಿಕಾರ್ಜುನ ?

೭೨.
ಒಮ್ಮೆ ಕಾಮನ ಕಾಲಹಿಡಿವೆ,
ಮತ್ತೂಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ
ಸುಡಲೀ ವಿರಹವ ! ನಾನಾರಿಗೆ ಧೃತಿಗೆಡುವೆ
ಚೆನ್ನಮಲ್ಲಿಕಾರ್ಜುನದೇವನೆನ್ನನೊಲ್ಲದ ಕಾರಣ
ಎಲ್ಲರಿಗೆ ಹಂಗಿತಿಯಾದೆನವ್ವ !

೭೩.
ಚಿಲಿಮಿಲಿ ಎಂದೋದುವ ಗಿಳಿಗಳಿರಾ!
ನೀವು ಕಾಣಿರೆ? ನೀವು ಕಾಣಿರೆ?
ಸರವೆತ್ತಿ ಪಾಡುವ ಕೋಗಿಲೆಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಎರಗಿ ಬಂದಾಡುವ ತುಂಬಿಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಕೊಳನ ತಡಿಯಾಡುವ ಹಂಸಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಗಿರಿಗಹ್ವರದೊಳಗಾಡುವ ನವಿಲುಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂಬುದ ಬಲ್ಲೆಡೆ
ನೀವು ಹೇಳಿರೇ !

೭೪.
ಅಳಿಸಂಕುಳವೆ, ಮಾಮರವೇ, ಬೆಳದಿಂಗಳೇ,
ಕೋಗಿಲೆಯೇ, ನಿಮ್ಮನ್ನೆಲ್ಲರನೂ ಒಂದು ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡಡೆ
ಕರೆದು ತೋರಿರೆ

೭೫.
ವನವೆಲ್ಲ ನೀವೆ
ವನದೊಳಗಣ ದೇವತರುವೆಲ್ಲ ನೀವೆ
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ
ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ
ಎನಗೇಕೆ ಮುಖದೋರೆ?

೭೬.
ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಭ,
ಪವಳದ ಚಪ್ಪರವಿಕ್ಕಿ, ಮುತ್ತು ಮಾಣಿಕದ ಮೇಲುಕಟ್ಟು ಕಟ್ಟಿ,
ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು
ಕಂಕಣ ಕೈಧಾರೆ, ಸ್ಥಿರಸೇಸೆಯನಿಕ್ಕಿ
ಚೆನ್ನಮಲ್ಲಿಕಾರ್ಜುನನೆಂಬ ಗಂಡಗೆನ್ನ ಮದುವೆಯ ಮಾಡಿದರು

೭೭.
ಗಗನದ ಗುಂಪ ಚಂದ್ರನು ಬಲ್ಲುದಲ್ಲದೇ
ಮೇಲಿದ್ದಾಡುವ ಹದ್ದು ಬಲ್ಲುದೇ ಅಯ್ಯ !
ನದಿಯ ಗುಂಪ ತಾವರೆ ಬಲ್ಲುದಲ್ಲದೇ
ತಡಿಯಲ್ಲಿದ್ದ ಹೊನ್ನಾವರಿಕೆ ಬಲ್ಲುದೇ ಅಯ್ಯ !
ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೇ
ಕಡೆಯಲ್ಲಿದ್ದಾಡುವ ನೊರಜು ಬಲ್ಲುದೇ ಅಯ್ಯ !
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರ ನಿಲುವ ನೀವೇ ಬಲ್ಲಿರಲ್ಲದೇ
ಈ ಕೋಣನ ಮೈಯ ಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯ

೭೮.
ಮಂಗಳವೇ ಮಜ್ಜನವೆನಗೆ
ವಿಭೂತಿಯೇ ಒಳಗುಂದದರಿಸಿನವೆನಗೆ
ದಿಗಂಬರವೇ ದಿವ್ಯಾಂಬರವೆನಗೆ
ಶಿವನಾದರೇಣುವೇ ಅನುಲೇಪನವೆನಗೆ
ರುದ್ರಾಕ್ಷಿಯೇ ಮೈದೊಡುಗೆಯೆನಗೆ
ಶರಣರ ಪಾದಂಗಳೇ ತೊಂಡಿಲ ಬಾಸಿಗವೆನಗೆ
ಚೆನ್ನಮಲ್ಲಿಕಾರ್ಜುನಯ್ಯನೇ ಗಂಡನೆನಗೆ
ಆನು ಚೆನ್ನಮಲ್ಲಿಕಾರ್ಜುನಂಗೆ ಮದುವಳಿಗೆ
ಎನಗೆ ಬೇರೆ ಶೃಂಗಾರವೇಕೆ ಹೇಳಿರವ್ವ

೭೯.
ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆನು
ಇರುಳು ನಾಲ್ಕು ಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು
ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿದೆನು
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಒಲುಮೆನಟ್ಟು
ಹಸಿವು-ತೃಷೆ-ನಿದ್ರೆಯ ಮರೆವೆನು

೮೦.
ಆಲಿಸೆನ್ನ ಬಿನ್ನಪವ
ಲಾಲಿಸೆನ್ನ ಬಿನ್ನಪವ
ಪಾಲಿಸೆನ್ನ ಬಿನ್ನಪವ
ಏಕೆನ್ನ ಮೊರೆಯ ಕೇಳೆ
ನೋಡೆಯನೆನ್ನ ದುಃಖವ
ಚೆನ್ನಮಲ್ಲಿಕಾರ್ಜುನಯ್ಯ

೮೧.
ಅಯ್ಯ ದೂರದಲಿರ್ದೆಹೆಯೆಂದು
ಬಾಯಾರಿ ಬಳಲುತ್ತಿದ್ದೆನಯ್ಯ ನಾನು
ಅಯ್ಯ ಸಾರೆ ಬಂದು ನೀನೆನ್ನ ಕರಸ್ಥಲದಲಿ ಮೂರ್ತಿಗೊಂಡರೆ
ಇನ್ನಾರತಿಯೆಲ್ಲ ನಿನ್ನಲ್ಲಿ ಲಿಂಗಯ್ಯ
ಆಲಿ ನಿಮ್ಮಲ್ಲಿ ನೆಟ್ಟವು ನೋಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿ ನೋಡಿ
ಕಂಗಳೇ ಪ್ರಾಣವಾಗಿದ್ದೆನಯ್ಯ

೮೨.
ನಾನು ನಿನಗೊಲಿದೆ, ನೀನು ಎನಗೊಲಿದೆ
ನೀನೆನ್ನನಗಲದಿಪ್ಪೆ, ನಾನಿನ್ನಗಲದಿಪ್ಪೆನಯ್ಯಾ
ನಿನಗೆ ಎನಗೆ ಬೇರೊಂದು ಠಾವುಂಟೆ
ನೀನು ಕರುಣಿಯೆಂಬುದು ಬಲ್ಲೆನು
ನೀನಿರಿಸಿದ ಗತಿಯೊಳಗಿಪ್ಪವಳಾನು
ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನ

೮೩.
ಅಯ್ಯ ನೀ ಕೇಳಿದರೆ ಕೇಳು, ಕೇಳದಿದ್ದರೆ ಮಾಣು
ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀನೊಲಿದರೆ ಒಲಿ, ಒಲಿಯದಿದ್ದರೆ ಮಾಣು
ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀ ಮೆಚ್ಚಿದರೆ ಮೆಚ್ಚು, ಮೆಚ್ಚದಿದ್ದರೆ ಮಾಣು
ನಾ ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀ ನೋಡಿದರೆ ನೋಡು, ನೋಡದಿದ್ದರೆ ಮಾಣು
ನಾ ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ ನಾ ನಿಮ್ಮ ಪೂಜಿಸಿ
ಹರುಷದಲೋಲಾಡುವೆನಯ್ಯ

೮೪.
ಕಾಣುತ್ತ ಕಾಣುತ್ತ
ಕಂಗಳ ಮುಚ್ಚಿದೆ ನೋಡವ್ವ
ಕೇಳುತ್ತ ಕೇಳುತ್ತ
ಮೈಮರೆದೊರಗಿದೆ ನೋಡವ್ವ
ಹಾಸಿದ ಹಾಸಿಗೆ ಹಂಗಿಲ್ಲದೇ ಹೋಯಿತ್ತು ಕೇಳವ್ವ
ಚೆನ್ನಮಲ್ಲಿಕಾರ್ಜುನ ದೇವರ ದೇವನಂ
ಕೂಡುವ ಕೂಟವ ನಾನೇನಂದರಿಯದೇ
ಮರೆದೆ ಕಾಣವ್ವ

೮೫.
ಬಾರದ ಭವಂಗಳಲ್ಲಿ ಬಂದೆನಯ್ಯ
ಕಡೆಯಿಲ್ಲ ತಾಪಂಗಳಲ್ಲಿ ನೊಂದು
ನಿಮ್ಮ ಕರುಣೆಗೆ ಬಳಿಸಂದೆನಯ್ಯ
ಇದು ಕಾರಣ ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ
ತನುವನುವಾಗಿ ಮನ ಮಾರುಹೋಗಿ
ಮತ್ತಿಲ್ಲದ ತವಕದ ಸ್ನೇಹಕ್ಕೆ
ತೆರಹಿನ್ನೆಂತು ಹೇಳಾ ತಂದೆ?

೮೬.
ಹೊಳೆವ ಕೆಂಜೆಡೆಗಳ ಮೇಲೆ ಎಳೆವೆಳುದಿಂಗಳು
ಫಣಿಮಣಿ ಕರ್ಣಕುಂಡಲದವ ನೋಡವ್ವ !
ರುಂಡ ಮಾಲೆಯ ಕೊರಳವನ ಕಂಡೊಡೆ ಒಮ್ಮೆ ಬರಹೇಳವ್ವ
ಗೋವಿಂದನ ನಯನ ಉಂಗುಟದ ಮೇಲಿಪ್ಪುದು
ಚೆನ್ನಮಲ್ಲಿಕಾರ್ಜುನ ದೇವಂಗಿದು ಕುರುಹವ್ವ

೮೭.
ಅಕ್ಕ ಕೇಳವ್ವ ಅಕ್ಕಯ್ಯ ನಾನೊಂದ ಕನಸ ಕಂಡೆ
ಅಕ್ಕಿ ಅಡಿಕೆ ಓಲೆ ತೆಂಗಿನಕಾಯ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ
ಮಿಕ್ಕಿ ಮೀರಿ ಹೋವನ ಬೆಂಬತ್ತಿ ಕೈವಿಡಿದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ತೆರೆದೆನು

೮೮.
ಎನ್ನ ಮನವ ಮಾರುಗೊಂಡನವ್ವ
ಎನ್ನ ತನುವ ಸೂರೆಗೊಂಡೆನವ್ವ
ಎನ್ನ ಸುಖವನೊಪ್ಪುಗೊಂಡನವ್ವ
ಎನ್ನಿರುವನಿಂಬುಗೊಂಡನವ್ವ
ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು

೮೯.
ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ
ಇರುಳಿನ ಕೂಟಕ್ಕೆ ಇಂಬರಿದು ಹತ್ತಿದೆ
ಕನಸಿನಲ್ಲಿ ಮನಸಂಗವಾಗಿ
ಮನಸಿನಲ್ಲಿ ಮೈಮೆರೆದು ಸಂಗವಾಗಿರ್ದೆ
ಚೆನ್ನಮಲ್ಲಿಕಾರ್ಜುನನನೊಪ್ಪಚ್ಚಿ ಕೂಡಿ ಕಣ್ತೆರೆದೆನವ್ವ

೯೦.
ಅಕ್ಕ ಕೇಳಕ್ಕ,
ಆನೊಂದು ಕನಸ ಕಂಡೆ!
ಚಿಕ್ಕಚಿಕ್ಕ ಜಡೆಯ ಸುಲಿಪಲ್ಲ ಗೊರವನು
ಬಂದೆನ್ನ ನೆರೆದ ನೋಡವ್ವ
ಆತನನಪ್ಪಿಕೊಂಡು ತಳವೆಳಗಾದೆನೆಲಗೇ!
ಚೆನ್ನಮಲ್ಲಿಕಾರ್ಜುನನ ಕೂಡಿ
ಕಣ್ತೆರೆದು ತೆಳವೆಳಗಾದೆನೆಲಗೇ!

೯೧.
ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?
ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?
ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ
ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ

೯೨.
ರತ್ನದ ಸಂಕೋಲೆಯಾದರೆ ತೊಡರಲ್ಲವೆ?
ಮುತ್ತಿನ ಬಲೆಯಾದರೆ ಬಂಧನವಲ್ಲವೆ?
ಚಿನ್ನದ ಕತ್ತಿಯಲ್ಲಿ ತಲೆಯ ಹೊಯ್ದರೆ ಸಾಯದಿಪ್ಪರೆ?
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದರೆ
ಜನನಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನ?

೯೩.
ಎರದ ಮುಳ್ಳಿನಂತೆ ಪರಗಂಡರೆನಗವ್ವ
ಸೋಂಕಲಮ್ಮೆ ಸುಳಿಯಲಮ್ಮೆ ನಂಬಿ ನೆಚ್ಚಿ ಮಾತಾಡಲಮ್ಮೆನವ್ವ
ಚೆನ್ನಮಲ್ಲಿಕಾರ್ಜುನನಲ್ಲದುಳಿದ ಗಂಡರ ಉರದಲ್ಲಿ ಮುಳ್ಳುಂಟೆಂದು
ನಾನಪ್ಪಲಮ್ಮೆನವ್ವ

೯೪.
ಗುರುವಿನಿಂದ ಲಿಂಗವ ಕಂಡೆ, ಜಂಗಮವ ಕಂಡೆ
ಗುರುವಿನಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ
ಗುರುವಿನಿಂದ ನನ್ನ ನಾ ಕಂಡೆ, ಚೆನ್ನಮಲ್ಲಿಕಾರ್ಜುನ

೯೫.
ತರಳಿಯ ಹುಳು ತನ್ನ ಸ್ನೇಹಕ್ಕೆ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸಾವಂತೆ-
ಎನಗೂ ಮನೆಯೇ? ಎನಗೂ ಧನವೇ?
ಎನ್ನ ಮನೆಮಠ ಕನಸ ಕಂಡುಕಣ್ತೆರೆದಂತಾಯಿತ್ತು
ಎನ್ನ ಮನದ ಸಂಸಾರವ ಮಾಣಿಸಾ ಚೆನ್ನಮಲ್ಲಿಕಾರ್ಜುನ

೯೬.
ತನುವನುವಾಯಿತ್ತು, ಮನವನುವಾಯಿತ್ತು
ಪ್ರಾಣವನುವಾಯಿತ್ತು ಮುನಿದು ಬಾರದ ಪರಿಯಿನ್ನೆಂತು ಹೇಳಾ!
ಎನ್ನ ಪ್ರಾಣದಲ್ಲಿ ಸಂದು, ಎನ್ನ ಮನಕ್ಕೆ ಮನವಾಗಿ
ನಿಂದ ಎನ್ನ ದೇವ ಚೆನ್ನಮಲ್ಲಿಕಾರ್ಜುನನ
ಕಾಣದೊಡೆ ಆನೆಂತು ಬದುಕುವೆನವ್ವ?

೯೭.
ಹಿಡಿವೆನೆಂದೊಡೆ ಹಿಡಿಗೆ ಬಾರನವ್ವ,
ತಡೆವೆನೆಂದೊಡೆ ಮೀರಿ ಹೋದನವ್ವ,
ಒಪ್ಪಚ್ಚಿ ಅಗಲಿದೊಡೆ ಕಳವಳಗೊಂಡೆ,
ಚೆನ್ನಮಲ್ಲಿಕಾರ್ಜುನನ ಕಾಣದೆ
ಆನಾರೆಂದರಿಯೆ ಕೇಳಾ ತಾಯೆ

೯೮.
ಮನ ಬೀಸರವಾದೊಡೆ ಪ್ರಾಣ ಪಲ್ಲಟವಹುದವ್ವ,
ತನುಕರಣಂಗಳು ಮೀಸಲಾಗಿ
ಮನ ಸಮರಸವಾಯಿತ್ತು ನೋಡಾ!
ಅನ್ಯವನರಿಯೆ, ಭಿನ್ನವನರಿಯೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ
ಬಳಿಯವಳಾನು ಕೇಳಾ ತಾಯೇ

೯೯.
ಕಾಮಿಸಿ ಕಲ್ಪಿಸಿ ಕಂದಿ ಕುಂದಿದೆನವ್ವ
ಮೋಹಿಸಿ ಮುದ್ದಿಸಿ ಮರುಳಾದೆನವ್ವ
ತೆರೆಯದೆ ತೊರೆಯದೆ ನಲಿದು ನಂಬಿದೆ ನಾನು,
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆನ್ನನೊಲ್ಲದೊಡೆ ಆನೇವೇನವ್ವ

೧೦೦.
ಕಳಿವರಿದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳುದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವ
ತಿಳುಹೌ ಬುದ್ಧಿಯ, ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ

   

No comments:

Post a Comment