Monday, September 20, 2010
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬)
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಬಿ. ಎಂ. ಶ್ರೀಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ ೧೮೮೪ರಲ್ಲಿ ಜನಿಸಿದರು. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ ಇವರ ಮುದ್ದಿನ ಮಗನಾಗಿ ಬಿ. ಎಂ. ಶ್ರೀಯವರು ಬೆಳೆದರು. ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲಿ ಮುಗಿಸಿದರು. ಬಿ. ಎ. ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ಎಂ. ಎ. ಹಾಗೂ ಎಲ್. ಎಲ್. ಬಿ. ಪದವಿಯನ್ನು ಮದರಾಸಿನಲ್ಲಿ ೧೯೦೫ರಲ್ಲಿ ಮುಗಿಸಿದರು. ಆಗ ಅವರಿಗೆ ೨೫ ವರ್ಷ, ಆಗಲೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ೨೫ ವರ್ಷ ಸೇವೆ ಸಲ್ಲಿಸಿ ೧೯೩೦ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾದರು. ಅನಂತರ ಅವರು ೧೯೪೨ರ ವರೆಗೆ ಈ ಕಾಲೇಜಿನ ಏಳಿಗೆಗಾಗಿ ದುಡಿದು ೧೯೪೪ರಲ್ಲಿ ಧಾರವಾಡದ ಕೆ. ಇ. ಬೋರ್ಡ್‌ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ ಆರ್ಟ್ ಕಾಲೇಜಿಗೆ ಪ್ರಾಂಶುಪಾಲಕರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿ ೧೯೪೬ರಲ್ಲಿ ಅವರು ಧಾರವಾಡದಲ್ಲಿಯೇ ನಿಧನರಾದರು. ಬಿ. ಎಂ. ಶ್ರೀಕಂಠಯ್ಯನವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ ಮಾಸ್ತಿ, ಕುವೆಂಪು, ಎಸ್. ವಿ. ರಂಗಣ್ಣ, ತೀ. ನಂ. ಶ್ರೀಕಂಠಯ್ಯ, ಜಿ. ಪಿ. ರಾಜರತ್ನಂ, ಡಿ. ಎಲ್. ನರಸಿಂಹಚಾರ್ ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು. ಅವರು ಕನ್ನಡದಲ್ಲಿ ಗದಾಯುದ್ಧ, ಅಶ್ವತ್ಥಾಮನ್ ಮತ್ತು ಪಾರಸಿಕರು ಎಂಬ ನಾಟಕಗಳನ್ನು, ಹೊಂಗನಸು, ಇಂಗ್ಲಿಷ್ ಗೀತೆಗಳು ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಅವರು ನ್ಯೂಮನ್ ಬರೆದ Lead Kindly Light ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ `ಕರುಣಾಳು ಬಾ ಬೆಳಕೆ' ಎಂಬ ಕವನ ತುಂಬಾ ಜನಪ್ರಿಯವಾಯಿತು.
ಬಿ. ಎಂ. ಶ್ರೀಯವರಿಗೆ ೧೯೩೮ರಲ್ಲಿ ಅವರ ಅವಿಸ್ಮರಣೀಯ ಕೆಲಸಕ್ಕಾಗಿ ಮೈಸೂರಿನ ಮಹಾರಾಜರು `ರಾಜ ಸೇವಾಸಕ್ತ' ಎಂಬ ಬಿರುದನ್ನು ನೀಡಿ ಗೌರವಿಸಿದರು. ೧೯೨೮ರಲ್ಲಿ ಗುಲಬರ್ಗಾದಲ್ಲಿ ನಡೆದ ೧೪ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು. ಹೀಗೆ ತಮ್ಮ ಜೀವಿತ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು `ಕನ್ನಡದ ಕಣ್ವ' ಎಂದು ಕರೆಯಲಾಗುತ್ತದೆ.
ಹೆಚ್ಚಿನ ಓದು : ಕನ್ನಡ ಸಾಹಿತ್ಯಕ್ಕೆ ಬಿ.ಎಂ.ಶ್ರೀಯವರ ಕೊಡುಗೆ ದೊಡ್ಡದು'ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಲ್ಲಿ 'ಬಿ.ಎಂ.ಶ್ರೀ ' ಅಧ್ಯಾಯವನ್ನು ಓದಿ
ಕರುಣಾಳು ಬಾ ಬೆಳಕೆ
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು
ಹೇಳಿ ನನ್ನಡಿಯಿಡಿಸು ಬಲುದೂರ ನೂಟವನು
ಕೀಳಿನೋಡನೆಯೆ ಸಾಕು ನಿನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸು ಎನುತ
ನನ್ನ ದಾರಿಯ ನಾನೇ ನೋಡಿ ಹಿಡಿದೆನು ಇನ್ನು
ಕೈ ಹಿಡಿದು ನಡೆಸು ನೀನು
ಮಿರುಗು ಬಣ್ಣಕೆ ಬೆರೆತು ಭಯಮರೆತು ಕೊಬ್ಬಿದೆನು
ಮೆರೆದಾಯ್ತು ನೆನೆಯದಿರು ಹಿಂದಿನದೆಲ್ಲ
ಇಷ್ಟುದಿನ ಸಲಹಿರುವೆ ಮೂರ್ಖನನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೋಳೆಗಳ ಹಾದು
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೋಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ
ರಚನೆ :ಬಿ.ಎಂ.ಶ್ರೀ
ಗೋವಿನ ಹಾಡು - ಧರಣಿ ಮಂಡಲ ಮಧ್ಯದೊಳಗೆ
ಜನಪದ ಗೀತೆ - ಗೋವಿನ ಹಾಡು
ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು ಪರಿಯನಾನೆಂತು ಪೇಳ್ವೆನು
ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು
ಮದನತಿಲಕವ ಹಣೆಯೊಳಿಟ್ಟು ಚದುರಶಿಕೆಯನು ಹಾಕಿದ
ಎಳೆಯ ಮಾವಿನ ಮರದ ಕೆಳಗೆ ಕೊಳನನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ನೀನು ಬಾರೆ
ಕಾಮಧೇನು ನೀನು ಬಾರೆಂದು ಪ್ರೇಮದಿಂದಲಿ ಕರೆದನು
ಪುಣ್ಯಕೋಟಿಯೆ ನೀನು ಬಾರೆ ಪುಣ್ಯವಾಹಿನಿ ನೀನು ಬಾರೆ
ಪೂರ್ಣಗುಣಸಂಪನ್ನೆ ಬಾರೆಂದು ನಾಣ್ಯದಿಂ ಗೊಲ್ಲ ಕರೆದನು
ಗೊಲ್ಲ ಕರೆದಾ ಧ್ವನಿಯು ಕೇಳಿ ಎಲ್ಲ ಪಶುಗಳು ಬಂದುವಾಗ
ಚೆಲ್ಲಿಸೂಸಿ ಪಾಲಕರೆಯಲು ಅಲ್ಲಿ ತುಂಬಿತು ಬಿಂದಿಗೆ
ಒಡನೆದೊಡ್ಡಿಯ ಬಿಡುತ ಪಶುಗಳು ನಡೆದವಾಗಾರಣ್ಯಕ್ಕಾಗಿ
ಕಡಲು ಮೇಘವು ತೆರಳುವಂದದಿ ನಡೆದವಾಗಾರಣ್ಯಕೆ
ಅಟ್ಟಬೆಟ್ಟದ ಕಿಬ್ಬಿಯೊಳಗೆ ಇಟ್ಟಡೆಯಬೆಟ್ಟಾದ ನಡುವೆ
ದಟ್ಟೈಸಿದಾ ಸಸಿಗಳೆಡೆಯೊಳು ಮುಟ್ಟಿ ಮೇದವು ಹುಲ್ಲನು
ಹಬ್ಬಿದಾ ಮಲೆಮದ್ಯದೊಳಗೆ ಅರ್ಭುತಾನೆಂತೆಂಬ ವ್ಯಾಘ್ರನು
ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು
ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು
ತುಡುಕಿ ಎರೆದವ ರಭಸದಿಂದೊಗ್ಗೊಡೆದವಾಗಾ ಗೋವ್ಗಳು
ಅದರ ರಭಸಕೆ ನಿಲ್ಲನರಿಯದ ಕದುಬಿಕಮರಿಯ ಬಿದ್ದು ಪಶುಗಳು
ಪದರಿತಳ್ಳಣಗೊಂಡ ಪಶುಗಳು ಚೆದರಿ ಓಡಿಹೋದವು
ಕನ್ನೆಮಗನಾ ಪಡೆದುಕೊಂಡು ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಎಂಬ ಪಶುವು ಚೆನ್ನಾಗಿ ತಾ ಬರುತಿದೆ
ಇಂದು ಎನಗಾಹಾರ ಸಂದಿತು ಎನುತಲಾಗ ದುಷ್ಟವ್ಯಾಘ್ರನು
ಬಂದು ಬಳಸಿ ಅಡ್ಡಕಟ್ಟಿಕೊಂಡಿತಾಗ ಪಶುವನು
ಖೂಳ ಹುಲಿಯಾ ಅಡ್ಡಕಟ್ಟಿ ಬೀಳಹೊಯ್ವೆನು ನಿನ್ನನೆನುತಲಿ
ಸೀಳಿಬಿಸುಡುವೆ ಬೇಗನೆನುತಾ ಪ್ರಳಯವಾಗಿಯೆ ಕೋಪಿಸೆ
ಒಂದು ಬಿನ್ನಹ ಹುಲಿಯರಾಯನೆ ಕಂದನೈದನೆ ಮನೆಯಒಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು ಬಂದು ನಾನಿಲ್ಲಿ ನಿಲ್ಲುವೆ
ಹಸಿದವೇಳೆಗೆ ಸಿಕ್ಕಿದೊಡವೆಯ ವಶವಮಾಡಿಕೊಳ್ಳದೀಗ
ನುಸುಳಿಹೋದರೆ ನೀನು ಬರುವೆಯ ಹಸನಾಯಿತೀಗೆಂದಿತು
ಮೂರುಮೂರ್ತಿಗಳಾಣೆ ಬರುವೆನು ಸೂರ್ಯಚಂದಮನಾಣೆ ಬರುವೆನು
ಧಾರುಣಿದೇವಿಯಾಣೆ ಬರುವೆನು ಎಂದು ಭಾಷೆಯ ಮಾಡಿತು
ಬರುವೆಂದು ಭಾಷೆಮಾಡಿ ತಪ್ಪೆನೆಂದಾ ಪುಣ್ಯಕೋಟಿಯು
ಒಪ್ಪಿಸಲೊಡೊಂಬುಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು
ಅಲ್ಲಿಂದ ಕಳುಹೀಸಿಕೊಂಡು ನಿಲ್ಲದೆ ದೊಡ್ಡೀಗೆ ಬಂದು
ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು
ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು
ದುಷ್ಟವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೇ
ಕೊಂದೆನೆಂಬ ದುಷ್ಟವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿಪೋಗುವೆ ನೆಂದು ಬಂದೆನು ದೊಡ್ಡಿಗೆ
ಅಮ್ಮನೀನು ಸಾಯಲೇಕೆ ಸುಮ್ಮನಿರು ನೀ ಎಲ್ಲಾರ ಹಾಗೆ
ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾವನಡಗೀ ನಿಂದಿತು
ಕೊಟ್ಟಭಾಷೆಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ
ಸತ್ಯವೇ ನಮ್ಮತಾಯಿತಂದೆ ಸತ್ಯವೇ ನಮ್ಮ ಸಕಲ ಬಳಗೆ
ಸತ್ಯವಾಕ್ಯಕೆ ತಪ್ಪಿದಾರೆ ಅಚ್ಚುತ ಹರಿ ಮೆಚ್ಚನು
ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ ಆರು ನನ್ನಗೆ ಹಿತವರು
ಅಮ್ಮಗಳಿರಾ ಅಕ್ಕಗಳಿರಾ ಎನ್ನತಾಯೊಡಹುಟ್ಟುಗಳಿರಾ
ನಿಮ್ಮ ಕಂದಾನೆಂದು ಕಾಣಿರಿ ತಬ್ಬಲಿಯ ಮಗನೈದನೇ
ಮುಂದೆ ಬಂದರೆ ಹಾಯದೀರಿ ಹಿಂದೆ ಬಂದರೆ ಒದೆಯದೀರಿ
ನಿಮ್ಮಕಂದನೆಂದು ಕಂಡಿರಿ ತಬ್ಬಲಿಯ ಕಂದೈದನೆ
ತಬ್ಬಲಿಯುನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗೆವೆನು
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ
ಕಂದನೀಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು
ಚೆಂದದಿಂದ ಪುಣ್ಯನದಿಯೊಳು ಮಿಂದು ಸ್ನಾನವ ಮಾಡಿತು
ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲಪೊಕ್ಕು ನಿಂತು
ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು
ಖಂಡವಿದೆಕೋ ರಕ್ತವಿದೆಕೋ ಗುಂಡಿಗೆಯ ಕೊಬ್ಬೂಗಳಿದೆ ಕೋ
ಉಂಡು ಸಂತಸಗೊಂಡು ನೀ ಭೂಮಂಡಲದೊಳು ಬಾಳಯ್ಯನೆ
ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು
ಕನ್ನೆಯಿವಳನು ಕೊಂದುತಿಂದರೆ ಎನ್ನ ನರಹರಿ ಮೆಚ್ಚನು
ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು
ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು
ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ
ನೂಕಿ ನೀನು ಸಾಯಲೇಕೆ ಬೇಕೆಂದೂ ನಾ ಬಂದೆನು
ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರಸುರಿಯುತ
ಅನ್ಯಕಾರಿಯು ತಾನುಎನುತಲಿ ತನ್ನ ಮನದೊಳು ಧ್ಯಾನಿಸಿ
ಮೂರುಮೂರ್ತಿಗೆ ಕೈಯ್ಯಮುಗಿದು ಸೇರಿ ಎಂಟು ದಿಕ್ಕನೋಡಿ
ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು.
THE WORD AND HUMBLENESS OF HUMAN BEING IA ALWAYS SOUL TOUCHING-NEELANJANA
Subscribe to:
Post Comments (Atom)
No comments:
Post a Comment