Thursday, September 2, 2010

Dattatreya Ramachandra Bendre (ದತ್ತಾತ್ರೇಯ ರಾಮಚಂದ್ರ ಬೇಂದ್ರೆ) kavangalu



ಪ್ರಾರ್ಥನೆ
(ಗಂಗಾವತರಣ - ಕವನ ಸಂಗ್ರಹ)

ಕೂಡಿ ಓದಿ, ಕೂಡಾದಿ, ಕೂಡಿ
ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು ಕೂಡುಂಡು ಕುಡಿದು
ದುಡಿಯೋಣ ಕೂಡಿ ಕೂಡಿ

ಕೂಡಿ ನಡೆದು, ಒಡಗೂಡಿ ಪಡೆದು
ನುಡಿ ಹೇಳಿ ಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣ
ದೇವರೊಲು ಕೂಡಿ ಕೂಡಿ ಕೂಡಿ.



ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
ವಾರದಾಗ ಮೂರುಸರತಿ ಬಂದು ಹೋದಂವಾ || ಪಲ್ಲವಿ ||

ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ
ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ
ಇನ್ನೂ ಯಾಕ ಬರಲಿಲ್ಲ ..................

ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇದಾಂವಾ
ಬಂಗಾರ-ಹುಡೀಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಇನ್ನೂ ಯಾಕ ಬರಲಿಲ್ಲ ...............

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹೀಡೀಲೆ ರೊಕ್ಆ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈಮಾಡಿದರ ಹಿಡs; ಬಿಡಾಂವಾ
ಇನ್ನೂ ಯಾಕ ಬರಲಿಲ್ಲ ..............

ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗುಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ ಬರಲಿಲ್ಲ ..............

ಹುಟ್ಟಾಯಾಂವಾ ನಗಿಕ್ಯಾದಿಗೀ ಮೂಡಸಿಕೊಂದಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯ ಮಡಿಚಿಕೊಂದಾಂವಾ
ಜಲ್ಮಕ ಜಲ್ಮಕ ಗೆಣ್ಯಾ ಆಗಿ ಬರತೇನೆಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
ಇನ್ನೂ ಯಾಕ ಬರಲಿಲ್ಲ.............

ಸೆಟ್ಟರ ಹುಡುಗ ಸೆಟಗೊಂಢೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕುತೈತ್ರೆ ಬಿಟ್ಟ ಎಲ್ಲ ಹ್ಯಾಂವಾ
ಎಲ್ಲೀ! ಮಲ್ಲೀ! ಪಾರೀ! ತಾರೀ! ನೋಡೀರೇನವ್ವಾ
ನಿಂಗೀ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ
ಇನ್ನೂ ಯಾಕ ಬರಲಿಲ್ಲ ..............




ಕನಸಿನೊಳಗೊಂದು ಕಣಸು
(ತಾಯಿ-ಮಕ್ಕಳ ಸಂವಾದ)
(ಗರಿ - ಕವನ ಸಂಗ್ರಹ)

"ಯಾರು ನಿಂದವರಲ್ಲಿ ತಾಯಿ" ಎಂದೆ
""ಯಾರು ಕೇಳುವರೆನಗೆ, ಯಾಕೆ ತಂದೆ?"

"ಬೇಸರದ ದನಿಯೇಕೆ ಹೆಸರ ಹೇಳಲ್ಲ"
"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"

"ನೀನಾರ ಮನೆಯಳೊ ಮುತ್ತೈದೆ ಹೇಳು"
"ನಾನಾರ ಮನೆಯವಳೊ ಬಯಲನ್ನೆ ಕೇಳು"

ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?"
ಗುಪ್ತರಾದರೊ ಏನೊ ಇಷ್ಟರಲ್ಲೇ"

"ಇರುವರೇ ಇದ್ದರೇ ಮಕ್ಕಳೆಂಬವರು?"
"ಇರುವರೆಂದರು ಕೂಡ ಯಾರು ನಂಬುವರು?"

"ಮನೆಯಿಲ್ಲವೇ ಇರಲು ಪರದೇಶಿಯೇನು?"
"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"

"ನಿನ್ನ ಮಾತಿನಲಿಹುದು ಒಡಪಿನಂದ"
"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"

"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"
"ಸಾಜವಾದರು ಪಕ್ಷವಿದಿ ವ್ದ್ಯವಹುದು!"

"ಯಾವುದಾದರು ನಾಡದೇವಿಯೇ ನೀನು?"
"ಭಾವುಕರ ಕಂಗಳಿಗೆ ದೇವಿಯೇ ನಾನು"

"ಈಗ ಬಂದಿಹುದೇಕೆ ಏನು ಬೆಸನ?"
"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"

"ಹಾದಿ ಯಾವುದು ಹೇಳು, ಯಾವ ಯೋಗ?"
"ಆದಿ ಅಂತವು ಇಲ್ಲದಂಥ ತ್ಯಾಗ"

"ಬೇಡ ಬಂದಿಹೆಯೇನು ಏನಾದರೊಂದು?"
"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"

"ಅಹುದು ಕೊಡುವೆನು ಎಂದು ನಾನೆನ್ನಬಹುದೇ?"
ಬಹುದು-ಗಿಹುದಿನ ಶಂಕಿ ವೀರನಹುದೇ?"

"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"
"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"

"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ"
ಬಲ್ಲವರು ದೈವವನು ಪರಿಕಿಸುವರೊಮ್ಮೆ!"

"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"
"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"

ಮನವು ನಡುಗಿತು ತನುವು ನವಿರಿಗೊಳಗಾಯ್ತು
ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು

ಹಕ್ಕಿ ಹಾರುತಿದೆ ನೋಡಿದಿರಾ?


ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ -ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದೊಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕಿಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲ ಅಂಚ
ಆಚಿಗೆ ಚಾಚಿದೆ ತನ್ನಯ ಕುಂಚ
ಬ್ರಹ್ಮಾಂಡಲಗಳ ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ!
ಹಕ್ಕಿ ಹಾರುತಿದೆ ನೋಡಿದಿರಾ?

ಗಂಗಾವತರಣ - ಬಾರೊ ಸಾಧನಕೇರಿಗೆ


ಬಾರೊ ಸಾಧನಕೇರಿಗೆ
(ಗಂಗಾವತರಣ - ಕವನ ಸಂಗ್ರಹ)

ಬಾರೊ ಸಾಧನಕೇರಿಗೆ
ಮರಳಿ ನಿನ್ನೀ ಊರಿಗೆ ||ಪಲ್ಲವಿ ||

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ? || ಬಾರೊ.......

ಮಲೆಯ ಮೊಗವೇ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಗೂ ಹೂ ಬೆರಳಿದೆ
ನೆಲಕೆ ಹರೆಯವು ಮರಳಿದೆ
ಭೂಮಿತಾಯ್ ಒಡಮುರಿದು ಎದ್ದಳೊ
ಶ್ರಾವಣದ ಸಿರಿ ಬರಲಿದೆ || ಬಾರೊ........

ಮೋಡಗಳ ನೆರಳಾಟವು
ಅಡವಿ ಹೂಗಳ ಕೂಟವು
ಕೋಟಿ ಜೆನ್ನೊಣಕೂಟವು
ಯಕ್ಷಿ ಮಾಡಿದ ಮಾಟವು
ನೋಡು ಬಾ ಗುಂಪಾಗಿ ಪಾತರ-
ಗಿತ್ತಿ ಕುಣಿಯುವ ತೋಟವು || ಬಾರೊ.......

ಮರವು ಮುಗಿಲಿಗೆ ನೀಡಿದೆ.
ಗಿಡದ ಹೊದರೊಳು ಹಾಡಿದೆ
ಗಾಳಿ ಎಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
ತರದ ನೋಟವ ನೋಡಿದೆ? || ಬಾರೊ.....

ಗಂಗಾವತರಣ - ಗಮಗಮಾ ಗಮಾಡಿಸತಾವ ಮಲ್ಲಿಗಿ




ಗಮಗಮಾ ಗಮಾಡಿಸತಾವ ಮಲ್ಲಿಗಿ| ನೀವು ಹೊರಟಿದ್ದೀಗ ಎಲ್ಲಿಗೆ?
ಗಮಗಮಾ........... || ಪಲ್ಲವಿ||

ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀವು ಹೊರಟಿದ್ದೀಗ ಎಲ್ಲೆಗೆ?

ಚಿಕ್ಕಿ ತೋರಸ್ತಾನ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನಸೋತು ಆಯಿತು ಮರುಳ||
ನೀವು ಹೊರಟಿದ್ದೀಗ ಎಲ್ಲೆಗೆ?

ಗಾಳಿತಬ್ಬತಾವ ಹೂಗಂಪು
ಚಂದ್ರನ ತೆಕ್ಕಿಗಿದೆ ತಂಪು
ನಿಮ ಕಂಡರ ಕವದಾವ ಜೊಂಪು||
ನೀವು ಹೊರಟಿದ್ದೀಗ ಎಲ್ಲಿಗೆ?

ನೆರಳಲ್ಲಾಡತಾವ ಮರದ ಬುಡಕs
ಕೆರಿ ತೆರಿ ನೂಗತಾವ ದಡsಕ
ಹೀಂಗೆ ಬಿಟ್ಟು ಇಲ್ಲಿ ನನ್ನ ನಡsಕ||
ನೀವು ಹೊರಟಿದ್ದೀಗ ಎಲ್ಲಿಗೆ?

ನಮ್ಮ ನಿಮ್ಮ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ|| ನೀವು ಹೊರಟಿದ್ದೀಗ ಎಲ್ಲಿಗೆ?

ನಾವು ಬಂದೆವದಿಲ್ಲಿದಿಲ್ಲಿಗೆ
ಬಾಯಿ ಬಿಟ್ಟವಲ್ಲ ಮಲ್ಲಿಗೆ
ನೀರೊಡೆಡಿತಲ್ಲ ಕಲ್ಲಿಗೆ
ನೀವು ಹೊರಟಿದ್ದೀಗ ಎಲ್ಲಿಗೆ?||

ಬಂತ್ಯಾಕ ನಿಮಗೆ ಇಂದ ಮುನಿಸು
ಬೀಳಲಿಲ್ಲ ನಮಗೆ ಇದರ ಕನಸು
ರಾಯ ತಿಳಿಯಲಿಲ್ಲ ನಿಮ್ಮ ಮನಸು
ನೀವು ಹೊರಟಿದ್ದೀಗ ಎಲ್ಲಿಗೆ?||

ಹಾಡುಪಾಡು - ಶ್ರಾವಣಾ ಬಂತು ಕಾಡಿಗೆ


ಶ್ರಾವಣಾ ಬಂತು ಕಾಡಿಗೆ
(ಹಾಡುಪಾಡು - ಕವನ ಸಂಕಲನ)

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು || ಪಲ್ಲವಿ ||

ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ || ಅನುಪಲ್ಲವಿ ||

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನು ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೆಹಗಲು|

ಶ್ರಾವಣಾ ಬಂತು ಹೊಳಿಗಳಿಗೆ| ಅದೆ ಶುಭಗಳಿಗೆ|
ಹೊಳಿಗೆ ಮತ್ತ ಮಳಿಗೆ|
ಆಗ್ಯೇದ ಲಗ್ನ| ಅದರಾಗ ಭೂಮಿ ಮಗ್ನ||

ಶ್ರಾವಣಾ ಬಂತು ಊರಿಗೆ| ಕೆರಿ ಕೇರಿಗೆ|
ಹೊಡೆದ ಝೂರಿಗೆ|
ಜೋಕಾಲಿ ಏರಿ| ಅಡರ್ಯಾವ ಮರಕ ಹಾರಿ|

ಶ್ರಾವಣಾ ಬಂತು ಮನಿಮನಿಗೆ| ಕೂಡಿ ದನಿದನಿಗೆ|
ಮನದ ನನಿಕೊನಿಕೊನಿಗೆ|
ಒಡೆದಾವ ಹಾಡೂ| ರಸ ಉಕ್ಕತಾವ ನೋಡು||
ಶ್ರಾವಣಾ ಬಂತು.

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಹಸಿರ್ಯ್ಟ್ಟ ಬಸುರಿಯ ಹಾಂಗ|
ನೆಲಾ ಹೊಲಾ ಹ್ಯಾಂಗ|
ಅರಿಸಿನಾ ಒಡೆಧಾಂಗ|
ಹೊಮ್ಮತಾವ| ಬಂಗಾರ ಚಿಮ್ಮತಾವ||

ಗುಡ್ಡ ದುಡ್ಡ ಸ್ಥಾವರಲಿಂಗ|
ಅವಕ ಅಭ್ಯಂಗ|
ಎರಿತಾವನ್ನೊ ಹಾಂಗ|
ಕೂಡ್ಯಾವ ಮೋಡ| ಸುತ್ತೆಲ್ಲ ನೋಡ ನೋಡ||

ನಾಡೆಲ್ಲ ಏರಿಯ ವಾರಿ||
ಹರಿತಾವ ಝರಿ|
ಹಾಲಿನ ತೊರಿ|
ಈಗ ಯಾಕ| ನೆಲಕೆಲ್ಲ ಕುಡಿಸಲಾಕ||
ಶ್ರಾವಣಾ ಬಂತು.

ಜಗದ್ಗುರು ಹುಟ್ಟಿದ ಮಾಸ|
ಕಟ್ಟಿ ನೂರು ವೇಷ|
ಕೊಟ್ಟ ಸಂತೋಷ|
ಕುಣಿತದ ತಾನsದ ದಣಿತದ|

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು||

ಗರಿ - ಯುಗಾದಿ


ಯುಗಾದಿ
(ಗರಿ - ಕವನ ಸಂಗ್ರಹ)

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿ ಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸು
ಜೀವ ಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಳು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

 ಅನಂತ ಪ್ರಣಯ


ಅನಂತ ಪ್ರಣಯ
(ನಾದಲೀಲೆ - ಕವನ ಸಂಗ್ರಹ)

ಉತ್ತರದ್ರುವದಿಂ ದಕ್ಷಿಣದ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭುವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ದ್ಃಅರೆಯ ಮಸೆಯಿಸಿತು.

ಅಕ್ಷಿನಮೀಲನ ಮಾಡದೆ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿ


ನಾದಲೀಲೆ - ನೀ ಹೀಂಗ ನೋಡಬ್ಯಾಡ ನನ್ನ
 ನೀ ಹೀಂಗ ನೋಡಬ್ಯಾಡ ನನ್ನ
(ನಾದಲೀಲೆ - ಕವನ ಸಂಗ್ರಹ)

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ || ಪಲ್ಲವಿ||

ಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕನಕಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ,

ಧಾರ್‍ಈಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ
ನಾದಲೀಲೆ - ದೀಪ
ದೀಪ
(ನಾದಲೀಲೆ - ಕವನ ಸಂಗ್ರಹ)

ಬಂತಿದೊ ಸೃಂಗಾರ ಮಾಸ
ಕಂತು ನಕ್ಕ ಚಂದ್ರಹಾಸ
ಎಂತು ತುಂಬಿತಾsಕಾಶ
ಕಂಡವರನು ಹರಸಲು.

ಕಿರಿಬೆರಳಲಿ ಬೆಳ್ಳಿ ಹರಳು
ಕರಿ ಕುರುಳೊಳೊ ಚಿಕ್ಕೆ ಅರಳು
ತೆರದಳಿದೊ ತರಳೆ ಇವಳು
ತನ್ನರಸನನರುಸಲು.

ಹಂಗೆ ಯಮುನೆ ಕೂಡಿ ಹರಿದು
ಸಂಗಮ ಜಲ ಬಿಳಿದು ಕರಿದು
ತಿಂಗಳ ನಗೆ ಮೇರೆವರಿದು
ಬೇರೆ ಮಿರುಗು ನೀರಿಗು.

ಪಂಥದಿಂದ ಮನೆಯ ತೊರೆದು
ಪಾಂಥ ನೆನೆದನತ್ತು ಕರೆದು;
ಇಂಥ ಸಮಯ ಬೇರೆ ಬರದು
ದಂಪತಿಗಳಿಗಾರಿಗು!

ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ಸಾನುರಾಗದಿಂದ ಇಂದು
ದೀಪ ತೇಲಿ ಬಿಟ್ಟೆವೇ?
ದೀಪ ತೇಲಿ ಬಿಟ್ಟೆವು.


ಕುರುಡು ಕಾಂಚಾಣ
(ನಾದಲೀಲೆ - ಕವನ ಸಂಗ್ರಹ)

ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.



ರಾಗರತಿ


ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
-ಆಗ- ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಹಾಳಿಗೆ ಮೇಲಕೆದ್ದಿತ್ತs

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿ ಕಣ್ಣಿನಾ ಬಯಸೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.

ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತಮತ ಬೆಡಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮರ ಮರತಿತ್ತ.

ಹೊಸ ದೀಪಗಳಿಗೆ ಹೊರಟಾನಾ ಬನ್ನಿ
ಅಂದದೋ ಅಂದದಾ…

ಬಂಗಾರ ನೀರ ಕಡಲಾಚೆಗೀಚೆ ಇದೆ ನೀಲ ನೀಲ ತೀರ
ಮಿಂಚು ಬಳಗ ತೆರೆ ತೆರೆಗಳಾಗಿ ಹರಿಯುವುದು ಪುಟ್ಟ ಪೂರ
ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮ ಊರು ತೀರ
ಅದರೊಳಗೆ ನಾವು ನಮ್ಮೊಳಗೇ ತಾವು ಅದು ಇಲ್ಲವಣ್ಣ ದೂರ

ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ
ಹರಿತದ ಭಾವ ಬೆರಿತದ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ ನಿಮ್ಮ ಆತ್ಮಗಳಿಗೆ
ಅಂಬಿಗನು ಬಂದನಂಬಿಗನು ಬಂದ ಬಂದತಾ ದಿವ್ಯ ಘಳಿಗೆ

ಇದು ಉಪ್ಪು ನೀರ ಕಡಲಲ್ಲೋ ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೋ ಕಂಡವರಿಗಷ್ಟೇ ತಿಳಿದದಾ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ಣರಳಿದಾಗ ಕಂಹೊರಳಿದಾಗ ಹೊಳೆಯುವುದು ಇದರ ಕಲೆಯು

ಬಂದವರ ಬಳಿಗೆ ಬಂದದಾ ಮತ್ತು ನಿಂದವರಾ ನೆರೆಗೂ ಬಂದದೋ ಬಂದದಾ
ನವ ಮನುವು ಬಂದ ಹೊಸ ದೀಪಗಳಿಗೆ ಹೊರಟಾನಾ ಬನ್ನಿ ಅಂದದೋ ಅಂದದಾ
ಅಂದದೋ ಅಂದದಾ, ಅಂದದೋ ಅಂದದಾ
ಹೊಸ ದೀಪಗಳಿಗೆ ಹೊರಟಾನಾ ಬನ್ನಿ ಅಂದದೋ ಅಂದದಾ
ಹೊಸ ದೀಪಗಳಿಗೆ ಹೊರಟಾನಾ ಬನ್ನಿ ಅಂದದೋ ಅಂದದಾ ಅಂದದೋ ಅಂದದಾ

ಒಂದೇ ಬಾರಿ ನನ್ನ ನೋಡಿ
ಮಂದ ನಗಿ ಹಾಂಗ ಬೀರಿ |
ಮುಂದ ಮುಂದ ಮುಂದ ಹೋದ,
ಹಿಂದ ನೋಡದ ಗೆಳತಿ ಹಿಂದ ನೋಡದ ||

ಗಾಳಿ ಹೆಚ್ಚಿ ಹಿಡದ ಸುಗಂಧ
ಅತ್ತ ಅತ್ತ ಹೋಗುವಂದ |
ಹೋತ ಮನಸು ಅವನ ಹಿಂದ,
ಹಿಂದ ನೋಡದ ಗೆಳತಿ ಹಿಂದ ನೋಡದ ||

ನಂದ ನನಗ ಎಚ್ಚರಿಲ್ಲ
ಮಂದಿ ಗೊಡವಿ ಏನ ನನಗ |
ಒಂದಿ ಅಳತಿ ನಡೆದದ ಚಿತ್ತ
ಹಿಂದ ನೋಡದ ಗೆಳತಿ ಹಿಂದ ನೋಡದ ||

ಸೂಜಿ ಹಿಂದ ದಾರದ್ಹಾಂಗ,
ಕೊಳ್ಳದೊಳಗ ಜಾರಿದ್ಹಾಂಗ |
ಹೋತ ಹಿಂದ ಬಾರದ್ಹಾಂಗ
ಹಿಂದ ನೋಡದ ಗೆಳತಿ ಹಿಂದ ನೋಡದ || ಒಂದೇ ||


ಸಾಹಿತ್ಯ : ವರಕವಿ ಡಾ.ದ.ರಾ.ಬೇಂದ್ರೆ

ಆಆ..ಆಆ.. ಆಆ..ಆಆ..
ಓಂ..ಓಂ..ಓಂ..

ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ
ದೇವ ದೇವರನು ತಣಿಸಿ ಬಾ
ಡಿಕ್ದಿಗಂತದಲಿ ಘಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ನಿನಗೆ ಪೊಡಮಡುವೆ ನಿನ್ನ ನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲೆದೆ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ
ನೀರಿರರದ ಮೀನ ಕರೆಕರೆವ ಬಾ
ಕರುಕಂಡ ಕರುಳೆ ಮನವುಂಡ ಮರುಳೆ
ಉದ್ದoಡ ಅರುಳೆ ಸುಳಿಸುಳಿದೆ ಬಾ
ಶಿವಶುಭ್ರ ಕರುಣೆ ಅತಿಗಿoಚದರುಣೆ
ವಾತ್ಸಲ್ಯವರುಣೆ ಇಳಿ ಇಳಿದು ಬಾ
ಸುರಸ್ವಪ್ನವಿದ್ದ ಪ್ರತಿಬಿಂಬವಿದ್ದ
ಉದ್ದುದ್ದ ಶುದ್ದ ನೀರೇ..ನೀರೇ..
ಎಚ್ಚೆತ್ಟು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೆ
ಸಿರಿಪಾರಿಜಾತ ವರಪಾರಿಜಾತ
ತಾರಾಕುಸುಮದಿಂದೇ
ಬೃoದಾರವoದೆ ಮಂದಾರಗಂದೆ
ನೀನೇ ತಾಯಿ ತಂದೇ
ರಸಪೂರ್ಣಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದಕನ್ಯೆ....ಕನ್ಯೆ
ಇಳಿದು ಬಾ ತಾಯಿ ಇಳಿದು ಬಾ

ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುoಬಿ ಬಂದಂತೆ
ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುoಬಿ ಬಂದಂತೆ

ದುಂ ದುಂ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ ದುಡುಕಿ ಬಾ
ಹರಣ ಹೊಸತಾಗೇ ಹೊಳೆದು ಬಾ
ಬಾಳು ಬೆಳಕಾಗಿ ಬೆಳೆದು ಬಾ
ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅoಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

ನಾಕುತಂತಿ - ಆವು ಈವಿನ ನಾವು ನೀವಿಗೆ


ಆವು ಈವಿನ ನಾವು ನೀವಿಗೆ
ಆನು ತಾನಾದ ತನನನ
ನಾವು ನೀನಿನ ಈನೀನಾನಿಗೆ
ಬೇನೆ ಏನೋ? ಜಾಣೆ ನಾ
ಚಾರು ತಂತ್ರಿಯ ಚರಣ ಚರಣದ
ಘನಘನಿತ ಚತುರಸ್ವನಾ
ಹತವೊ ಹಿತವೊ ಆ ಅನಾಹತಾ
ಮಿತಿ ಮಿತಿಗೆ ಇತಿ ನನನನಾ
ಬೆನ್ನಿನಾನಿಕೆ ಜನನ ಜಾನಿಕೆ
ಮನನವೇ ಸಹಿತಸ್ತನಾ.

ಗೋವಿನ ಕೊಡುಗೆಯ ಹಡಗದ ಹುಡುಗಿ
ಬೆಡಗಿಲೆ ಬಂದಳು ನಡುನಡುಗಿ;
ಸಲಿಗೆಯ ಸುಲಿಗೆಯು ಬಯಕೆಯ ಒಲುಮೆ
ಬಯಲಿನ ನೆಯ್ಗೆಯ ಸಿರಿಯುಡುಗಿ;
ನಾಡಿಯ ನಡಿಗೆಯ ನಲುವಿನ ನಾಲಿಗೆ
ನೆನೆದಿರೆ ಸೋಲುವ ಸೊಲ್ಲಿನಲಿ;
ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ ಸನಿಹ ಹನಿ;
ಬೆಚ್ಚಿದ ವೆಚ್ಚವು ಬಸುರಿನ ಮೊಳಕೆ
ಬಚ್ಚಿದ್ದಾವುದೊ ನಾ ತಿಳಿಯೆ
ಭೂತದ ಭಾವ ಉದ್ಬವ ಜಾವ
ಮೊಲೆ ಊಡಿಸುವಳು ಪ್ರತಿಭೆ ನವ.

ಚಿತ್ತೀಮಳಿ, ತತ್ತಿ ಹಾಕತ್ತಿತ್ತು ಸ್ವಾತಿಮುತ್ತೀನೊಳಗ
ಸತ್ತಿಯೋ ಮಗನ ಅಂತ ಕೂಗಿದರು
ಸಾವೀ ಮಗಳು, ಭಾವಿ ಮಗಳು ಕೂಡಿ
ಈ ಜಗ ಅಪ್ಪಾ ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ ಶ್ರೀ ಗುರುದತ್ತ ಅಂದ

'ನಾನು' 'ನೀನು' 'ಆನು' 'ತಾನು'
ನಾಕು ನಾಕೇ ತಂತಿ.
ಸೊಲ್ಲಿಸಿದರು ನಿಲ್ಲಿಸಿದರು
ಓಂ ದಂತಿ!
ಗಣನಾಯಕ ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು
ಧಾತು ಮಾತು ಕೂಡಿ.

ಅಂತರಂಗದ ಮೃದಂಗ - ದ.ರಾ.ಬೇಂದ್ರೆ
ಅಂತರಂಗದ ಮೃದಂಗ ಅಂತು ತೋಮ್-ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಣ್-ಝಣಣಣಾಣ
ನೆನಹು ತಂತಿ ಮೀಟುತಿತ್ತು ತಮ್-ತನನತಾನ

ಹಲವು ಜನುಮದಿಂದ ಬಂದ ಯಾವುದೋನೋ ಧ್ಯಾನ
ಏಕ ನಾದದಂದನೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ

ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೇ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ

ಕತ್ತಲಲ್ಲೇ ಬೆಳಕು ಮಿಂಚಿ ಪಡೆದಿತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ
» 926 reads
ಕಣ್ಣು ಹಾಹೆಯ ಛಿದ್ರದಾಚೆ ಬೆಳಕಿನ ಗವಿಯು!
ಬೆಳ್ಳಿ ಪರದೆಯ ಮೇಲೆ ರೂಪದ ವಿರಾಟ್ ಭೂಮ!
ನೆನಹು, ಕನಸಿನ ಕಣಿವೆಯಲ್ಲಿಯ ಜನಸ್ತೋಮ?
ತೇಜಸ್ಸಿನುದರದಲಿ: ಇದ ಕಂಡನಾ ಕವಿಯು.

ಹಾಲಿಲ್ಲ, ಬಟ್ಟಲಿಲ್ಲದ ಗುಟುಕೆ ಸವಿಸವಿಯು
ನಿರ್ವಿಷಯ ಸೃಷ್ಟಿಯಲಿ ಭೋಗ ಆತ್ಮಕ್ರ್‍ಈಡೆ
ವಾಸನಾ ಸಂಜನಿತ ಸಂಸ್ಕಾರ ಅವಲೀಡೆ
ಭಾಗೀರಥೀಯು ಆಗಿ ಇಳಿದಂಥ ಜಾಹ್ನವಿಯು.

ಇದು ವಿಚಾರದ ಹಳ್ಳವನ್ನು ಒಳಹೊಕ್ಕಿಲ್ಲ;
ಅಂತರಿಕ್ಷದ ಪಕ್ಷಿ ಈಕ್ಷಿಸುತ್ತಿದೆ ಕ್ಷಿತಿಜ
ಬರಿಯ ನೆರಳಾಟ ಮುರುಳಾಟ ಗಾಳಿಗೆ ಸಹಜ;
ಭಾವಭಾವದ ಜಾಲ ಬಲೆಯಲ್ಲಿ ಸಿಕ್ಕಿಲ್ಲ.

ಜೀವನದ ರಂಗದಲೆ ಭರತನಾಟಯುಗವು
ಓಹೋ! ಆಹ! ಊಹೆ! ನವ್ಯ ಈಹಾ ಮೃಗವು.

-ವರಕವಿ ಡಾ|| ದ ರಾ ಬೇಂದ್ರೆ.
ಭಾವ: ಕವನ ಸೃಷ್ಟಿಕ್ರಿಯೆಯ ವರ್ಣನೆ, ಇದು ಭಗೀರಥನ ತಪಸ್ಸಿನಿಂದ ಭಾಗೀರಥಿಯಾಗಿ ಭೊಲೋಕಕ್ಕೆ ಅವತರಿಸಿದ ಜಾಹ್ನವಿ-ಗಂಗೆಯಂತೆ ಮತ್ತು ಬಲೆಯಲ್ಲಿ ಸಿಗದಿರುವ ಪಕ್ಷಿಯಂತೆ ಇರುತ್ತದೆ. ಕವಿಯ ಕಲ್ಪಕತೆಯ ಅದ್ಭುತ ಕ್ರ್‍ಇಯೆ ನಡೆಯುತ್ತದೆ.



ಮುಗಿಲ ಮಾರಿಗೆ ರಾಗರತಿಯಾ....
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಆ ಆ ಆ ಆ
ಓ ಓ ಓ
ಆ ಆ ಆ ಆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಸತು ಹೊಸತು ತರುತಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆನೆಯು
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆನೆಯು
ಅಖಿಲ ಜೀವ ಜಾತಕೆ
ಆಆಆ ಓಓಓ ಆಆಆ...
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೋ..

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಸತು ಹೊಸತು ತರುತಿದೆ

ಆ ಆ ಆ ಆ ಆ...
ಓ ಓ ಓ ಓ....
ಆ ಆ ಆ ಆ..
ರಚನೆ: ಅಂಬಿಕಾತನಯದತ್ತ

ನಾನು ಸರಸಿ ನೀನು ಅರಸ
ಆಳಿ ನೋಡ ಬಾ
ನಾನು ನೀರೆ ನೀನು ನಲ್ಲ
ಬಾಳಿ ನೋಡ ಬಾ

ನಾನು ಹಣ್ಣು ನೀನು ಗಿಣಿಯು
ಕುದುಕಿ ನೋಡ ಬಾ
ನಾನು ಗೆಳತಿ ನೀನು ಗೆಳೆಯ
ಬದುಕ ಮಾಡ ಬಾ

ನಾನು ನೋಟ ನೀನು ಕಣ್ಣು
ಬೆಳಕ ನೀಡ ಬಾ
ನಾನು ಮಾಯೆ ನೀನು ಈಶ
ಮೋಡಿಯಾಡ ಬಾ

ಗಾಳಿ ನಾನು ಬಾನು ನೀನು
ಮೂಡಿ ನೋಡ ಬಾ
ಗೀತ ನಾನು ಪ್ರೀತ ನೀನು
ಕಟ್ಟಿ ಹಾಡ ಬಾ

ಏಳು ಚಿನ್ನ ಬೆಳಗಾಯ್ತು ಅಣ್ಣ - ಅಂಬಿಕಾತನಯದತ್
ರಚನೆ: ಅಂಬಿಕಾತನಯದತ್ತ

ಏಳು ಚಿನ್ನ ಬೆಳಗಾಯ್ತು ಅಣ್ಣ
ಮೂಡಲವು ತೆರೆಯಿತಣ್ಣ
ನಕ್ಷತ್ರ ಜಾರಿ ತಮವೆಲ್ಲ ಸೋರಿ
ಮಿಗಿಲಹುದು ಬಾನ ಬಣ್ಣ
ಜೇನ್ನೊಣದ ಎದೆಗೆ ಹೂಬಾಣ ಹೂಡಿ
ಜುಮ್ಮೆಂದು ಬಿಟ್ಟ ಬಾಣ
ಗುಡಿ ಗೋಪುರಕ್ಕು ಬಲೆ ಬೀಸಿ ಬಂದ
ಅಗೋ ಬೆಳಕು ಬೇಟೆಗಾರ

ನಿಶೆಯಿಳಿದ ಉಷೆಯ ಎಳನಗೆಯ ಬಗೆಗೆ
ಸೋತಿರಲು ಜಗವು ಸವಿಗೆ
ಕಣ್ಣಿದಿರು ಒಂದು ಕಟ್ಟಿತ್ತು ಕನಸು
ಕೂಗೊಂದು ಬಂತು ಕಿವಿಗೆ
ಮಕ್ಕಳಿರ ಕೇಳಿ ರಸಕುಡಿಯಲೇಳಿ
ಹುಸಿನಿದ್ದೆಗೆತ್ತಿ ಸಾಕು
ಈ ತುಂಬಿ ಬಾಳು ತುಂಬಿರುವ ತನಕ
ತುಂತುಂಬಿ ಕುಣಿಯಬೇಕು

ಯಾವಾಗ ಕೋಳಿ ಕೂಗಿಹುದು ಏಳಿ
ತಡವೇಕೆ ಪಾನ ಕೇಳಿ
ಮೊದಲಾಗಲೀಗ ಅಂಗಡಿಯ ಕದವ
ಈ ಕ್ಷಣಕೆ ತೆರೆಯ ಹೇಳಿ
ಜೀವನದ ನದಿಗೆ ಸೆಳೆವಿಹುದು
ಮರಣ ಬಂದೀತು ಕ್ಷಣವು ಉರುಳಿ
ಹೋದವರು ತಿರುಗಿ ಬಂದಾರೆ
ಅವರು ಬರಲಿಕ್ಕು ಇಲ್ಲ ಮರಳಿ

ಬಾಂಧವರಲುಂಟು ಮರ ಚಿಗುರಲುಂಟು
ಬರಲುಂಟೆ ಸುಗ್ಗಿ ಮತ್ತೆ
ಮುಳುಗಿರಲಿ ಮುಪ್ಪು ಚಿಂತನದಿ ತಾನು
ಹರಯಕ್ಕೆ ಬೇರೆ ಹೊತ್ತೆ

ರಚನೆ: ಅಂಬಿಕಾತನಯದತ್ತ
ಕವನ ಸಂಕಲನ: ಶ್ರಾವಣ

ಬಂಗಾರ ನೀರ

ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದದೋ ಅಂದದ||


ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ
ಮಿಂಚು ಬಳಗ ತೆರೆ ತೆರೆಗಳಾಗಿ ಅಲೆಯುವುದು ಪುಟ್ಟ ಪೂರ
ಅದು ನಮ ಊರು, ಇದು ನಿಮ್ಮ ಊರು ತಮ್ ತಮ್ಮ ಊರು ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ


ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ
ಹರಿತದ ಭಾವ ಬೆರಿತದ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ ನಿಮ್ಮ ಆತ್ಮಗಳಿಗೆ
ಅಂಬಿಗನು ಬಂದ ನಂಬಿಗನು ಬಂದ ಬಂದ ತಾ ದಿವ್ಯಗಳಿಗೆ.


ಇದು ಉಪ್ಪು ನೀರ ಕಡಲಲ್ಲೊ, ನಮ್ಮ ಒಡಲಲ್ಲು ಇದರ ನೆಲೆಯು.
ಕಂಡವರಿಗಲ್ಲೊ, ಕಂಡವರಿಗಸ್ಟೆ ತಿಳಿದದ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ ಅರಳಿದಾಗ, ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು


ಬಂದವರ ಬಳಿಗೆ ಬಂದದ, ಮತ್ತು ನಿಂದವರ ನೆರೆಗು
ಬಂದದೋ ಬಂದದಾ|
ನವ ಮನು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದದೋ ಅಂದದಾ|

ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದದೋ ಅಂದದ||

- ಅಂಬಿಕಾತನಯದತ್ತ

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ

ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ
ಒಂದೇ ಜಗವು ಮನವು ಕನ್ನಡಿಗರು ಎಂದೆ
ಕುಲವೊಂದೇ ಛಲವೊಂದೇ ನೀತಿಯ ನೆಲೆಯೊಂದೇ
ಹೀಗೆನ್ನದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೆ
ಕನ್ನಡವೆಂದು ಒಪ್ಪದು ಕರ್ನಾಟಕ ನಿಂದೆ

ಕನ್ನಡ ಮಾತೇ ಮಾತೆಯು ಕರ್ನಾಟಕ ಒಂದೇ
ಅದು ದೈವತ ಅದು ಜೀವಿತ ಒಪ್ಪಿಹೆವದು ಎಂದೆ
ನಮ್ಮದು ನಿಮ್ಮದು ಅವರದು ಈ ಆಸ್ತಿ ಪಾಸ್ತಿ
ನಾಡಿನ ತಾಯಿಗೆ ಸೇರಿದೆ ಬೇರೆಯ ಮನೆ ನಾಸ್ತಿ
ಕನ್ನಡ ಕಾಯಕದಲ್ಲಿಲ್ಲವು ಕಮ್ಮೀ ಜಾಸ್ತಿ
ಇದನೊಪ್ಪದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೇ
ಕರ್ನಾಟಕ ಹಿತ ಹಿಡಿತವು ಕನ್ನಡ ಕುಲದಿಂದೆ

ಕನ್ನಡವು ಭಾರತವು ಜಗವೆಲ್ಲವು ಒಂದೇ
ತುಂಬಿದೆ ಕನ್ನಡ ಕುಲವನ್ನು ಒಪ್ಪುವ ಕುಲದಿಂದೇ
ಇಂತರಿಯದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೇ
ಉಚ್ಚರಿಸಿರಿ ಮಾತೆಗೆ ಜಯ ಜಯ ಜಯವೆಂದೇ

ವಾಸನಿ

ಎಷ್ಟು ಮರಾ ಅಷ್ಟು ತರಾ
ಬೀಜದಾಗ ಅಡಗಿದ್ದು ಬಯಲಿಗೆ ಬಂದ ಬರ್ತದ
ಅದೆ ಅದೆ ಅದೆ ಅಂದ್ರೂ
ಬೇರೆ ಇದ್ದೆ ಇರ್ತದ

ಹೂವಿನೊಳಗ ಇರೊ ವಾಸನಿ
ನೋವಿನೊಳಗೂ ಒಮ್ಮೊಮ್ಮೆ ತೋರತದ
ಹಿಡಿತಕ್ಕ ಸಿಗದ ಹಾರತದ
ಯಾವುದೊ ಬಯಲಾಗ

ಬೆನ್ನ ಹತ್ತಿ ಹಾರಬೇಕೊ
ಹೆಜ್ಜಿ ಸುಳುವು ಹತ್ತೋದಿಲ್ಲ
ಉಸಿಲಿನ ಸುಯಿಲಾಗ
ನೆನೆಸಿಕೊಂಡರ ಆರತದ
ಯಾವುದೊ ಹೋರ ಸೇರತದ
ದೀಪದ ಕುಡಿಹಾಂಗ

ಉಜ್ಜೆ ಉಜ್ಜತೇವಿ ಮಬ್ಬಿನ ಮಕ್ಕು
ಇದ್ದ ಇರತದ ಕತ್ತಲಿ ಕೆಚ್ಚು
ಕಿಚ್ಚು ಆಗತದ ನೂರು ನುಚ್ಚು
ತೆಯ್ದೆ ತೆಯ್ದ್ ಹಾಂಗ
ಹಾಂಗ ಬಳಿ, ಹೀಂಗ ಎಳಿ
ಹ್ಯಾಂಗ ಹ್ಯಾಂಗೊ ಬಣ್ಣದ ಸುಳಿ
ಫಕ್ಕನ ಮೂಡತದ ಯಾವುದೊ ಮುಖ
ಬೆಂಕಿ ಸಿಡಿದಾಂಗ

ಎಲ್ಲೆಲ್ಲೊ ಬಟಾಬಯಲು
ನಮಗ ನಾವ ಇರೋದಿಲ್ಲ
ಇದ್ದದ್ದಿರತದ ಅಂತರಾಳಿ
ಗಾಳಿ ಒಳಗ ಹಾರತಿರೊ
ಜೇಡನ ಬಲಿಹಾಂಗ
ಯಾವುದನ್ನ ಯಾವುದು ಹಿಡಿತದೊ/
ವ್ಯವಹಾರ ಹ್ಯಾಂಗ ನಡೀತದೊ
ನೂಲಿಗೆ ನೂಲು ಕೂಡತದ
ಭಾವದಾಗ ಭಾವ ಮೂಡತದ

ಗುದ್ದಲಿ ಮೊನೀ ಸೆಲೀ ಚಿಮ್ಮಿ
ಚಕ್ ಅಂತ ಚಿತ್ರಿಸ್ತದ
ಮರತು ಹೊದ ಕನಸಿನ ಮ್ಯಾಲಿನ
ಸಿಪ್ಪಿ ಸುಲಿಧಾಂಗ

ಬೇರಬಿಟ್ಟು ಬ್ಯಾರೆ ಇರತದ ಏನು
ಕನ್ನಡಿ ಅಂಬೋದು ಬೇಕ ಯಾಕ
ಕಣ್ಣಿಗಿದ್ದವಗ
ನೀರ ಬ್ಯಾರೆ ನೆರಳ ಬ್ಯಾರೆ
ಪದರ ಬಿಟ್ಟು ಸದರಿಲ್ಲ
ನಿಧಿ-ವಿಧಿ ಬ್ಯಾರೆ ಅಲ್ಲ
ತಣ್ಣಗಿದ್ದಾವಗ

ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತ
ಏನೊಂದು ನಗಿ ಇತ್ತ, ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತ
ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತ

ಕಣ್ಣಾನ ಬೆಳಕೇನ ಮರ್ಯಾಗಿನ ತುಳುಕೇನ
ತುಟಿಯಾಗಿನ ಝುಳುಕೇನ
ಉಡುಗಿಯ ಮಾತೇನ ನಡಗಿಯ ತಟೇನ
ಹುಡುಗು ಹುಡುಗಾಟೇನ

ಕಂಡನ್ಕಾಣಲಿಲ್ಲ ಅಂಧಂಗನ್ನಲಿಲ್ಲ
ಬಂಧಂಗ ಬರಲಿಲ್ಲಾ
ಚಂದಾನ ಒಂದೊಂದು ಅಂದೀನಿ ಬೇರೊಂದ
ಅರಿವನ ಇರಲಿಲ್ಲ

ಬಡತನದ ಬಲಿಯಾಗ ಕರುಳಿನ ಕೊಲಿಯಾಗ
ಬಾಳ್ವಿಯ ಒಲಿಮ್ಯಾಗ
ಸುಟ್ಟು ಹಪ್ಪಳಧಾಂಗ ಸೊರಗಿದಿ ಸೊಪ್-ಹಾಂಗ
ಬಂತಂತ ಮುಪ್ಪು ಭಾಗ್ಯ

ಕಣಕಣ್ಣ ನೆನಸೇನ ಮನಸಿಲೇ ಬಣಿಸೇನ
ಕಂಡೀತೆಂತೆಣಿಸೇನ
ಬಿಸಿಲುಗುದುರಿ ಏರಿ ನಿನ ನಗೆಯ ಸವ್ವಾರಿ
ಹೊರಟಿತ್ತು ಕನಸೇನ ?

ಮುಂಗಾರಿ ಕಣಸನ್ನಿ ಹಾಂಗ ನಿನ ನಗಿ ಚೆನ್ನಿ
ಮುಂಚ್ಯೊಮ್ಮೆ ಮಿಂಚಿತ್ತ
ನಿನ ಮಾರಿ ನಿಟ್ಟಿಗೆ ಹಚ್ಚಿ ದಿಟ್ಟಿದಿಟ್ಟಿಗೆ
ನೋಡ್ತೇನಿ ನಾನಿತ್ತ

ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತ
ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತ
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತ

ಕವಿ : ದ.ರಾ.ಬೇಂದ್ರೆ (ಅಂಬಿಕಾತನಯದತ್ತ)

ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ

ಏನು ಏನು? ಜೇನು ಜೇನು? ಎನೆ ಗುನ್ ಗುನ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುನತೆ ತಾಲಾ ಭಾಲಾ
ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಲಾ

ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮುಳುಗುವೊಲು ಸ್ವತಂತ್ರಾ

ಎಲ್ಲೆಲ್ಲೂ ಸೃಷ್ಟಿದೇವಿಗಿತ್ತ ದೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ಡಾಂಗುಡಿಗಳ ಬಿಡುತಲಿತ್ತು ಅರಳುತಿತ್ತು ಪ್ರೇಮಾ

ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ
ನೀರ ಹೀರಿ ಹಾರುತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ

ಗಾಳಿಯೊಡನೆ ತಿಳ್ಳಿಯಾಡುತಾಡುತದರ ಓಟಾ
ದಿಕ್ತತಿಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕಿಯೊಡನೆ ಬೆಳೆಸುತಿತ್ತು ಕೂಟಾ

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
'ಬಂತೆಲ್ಲಿಗೆ?' ಕೇಳುತಿದ್ದನೀಯನಂತ ಕಾಳಾ

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ

ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ

ಅತ್ರೇಯ ದತ್ತ

ನೆನೆಸಿದವರ ಮನಸಿನ್ಯಾಗ
ಕನವರಿಕಿಯ ಕನಸಿನ್ಯಾಗ
ಮೂರರಾಚೀ ಜನಿಸಿದಾಗ
'ದತ್ತ' ಅನತ ಬಂದಾ.

ತಿರುಗೊ ಕಾಲಾ ತಿರುಗಬೇಕು
ಹರಗೊ ಹೃದಯ ಹರಗಬೇಕು
'ಅಲಖ್ ನಿರಂಜನ' ಕರಗಬೇಕು
ಅತ್ರಿಯ ಕಂದಾ.

ಯುಗ ಯುಗದಾಗ ಪಾಕಮಾಡಿ
ಹೂವಿನ ಪಕಳಿ ನಾಕ ಮಾಡಿ
ಹೂತದ್ದನ್ನ ಹಾಡಸ್ತಾನ
ಅಂದತ್ತಂದಾ.

ದಾನ ಇಲ್ಲಗ ದತ್ತ ಇಲ್ಲ
ಧ್ಯಾನ ಇಲ್ಲದ ಗತ್ತ ಇಲ್ಲ
ನಿನ್ನ ಬಿಟ್ ಮತ್ತ ಇಲ್ಲ
ಬಾ ಹೊಕ್ಕಳದಿಂದಾ, ಹೀಂಗ
ಬಂದದ್ದೆ ಚೆಂದಾ

ಯಾರಿಗೂ ಹೇಳೋಣು ಬ್ಯಾಡ

ಯಾರಿಗೂ||

ಹಾರಗುದರೀ ಬೆನ್ನ ಏರಿ

ಸ್ವಾರರಾಗಿ ಕೂತು ಹಾಂಗ

ದೂರ ದೂರಾ ಹೋಗೋಣಂತ | ಯಾರಿಗೂ

ಹಣ್ಣು ಹೂವು ತುಂಬಿದಂತ

ನಿನ್ನ ತೋಟ ಸೇರಿ ಒಂದ

ತಿನ್ನೋಣಂತ ಅದರ ಹೆಸರು | ಯಾರಿಗೂ

ಕುಣಿಯೋಣಂತ ಕೂಡಿ ಕೂಡಿ

ಮಣಿಯೋಣಂತ ಜಿಗಿದು ಹಾರಿ

ದಣಿಯದನ ಆಡೋಣಂತ | ಯಾರಿಗೂ

ಹಾವಿನಾ ಮರಿಯಾಗಿ ಅಲ್ಲಿ

ನಾವುನೂ ಹೆಡಿಯಾಡಿಸೋಣು

ಹೂವೆ ಹೂವು ಹಸಿರೆ ಹಸಿರು | ಯಾರಿಗೂ

ನಿದ್ದೆ ಮಾಡಿ ಮೈಯ ಬಿತ್ತು

ಮುದ್ದು ಮಾತದ ಕನಸಿನೂರಿಗೆ

ಸದ್ದು ಮಾಡದೆ ಸಾಗೋಣಂತ | ಯಾರಿಗೂ

ಬೆಳುದಿಂಗಳ ನೋಡs
ಬೆಳುಗಿಂಗಳ ನೋಡು || ಪಲ್ಲವಿ ||

ದನಕರದ ಕಾಲಿನ ಧೂಳಿ
ಸಂಜೆಯ ಹೂಳಿ
ಮುಗಿಲ ಮುಟ್ಟsದ
ಮುಗಿಲ ಮುತ್ಯದ
ಗೋಧೂಳಿ ಲಗ್ನಕ ಇತ್ತ
ಕೈಯ ಹಿಡಿದಿತ್ತ
ಕೈಯ ಹಿಡಿದಿತ್ತs
ಚಂದ್ರಿಕೀ ಚಂದ್ರಮರ ಜೋsಡs
ಬೆಳುದಿಂಗಳ ನೋಡs

ಕಲಿ ಕಪ್ಪು ಎಲ್ಲಿನೂ ಇಲ್ಲ
ಒಂದೆ ಸಮನೆಲ್ಲ
ಎಲ್ಲನೂ ನುಣುಪs
ಎಲ್ಲನೂ ನುಣುಪು
ಇದು ಹಾಲುಗಡಲಿನs ಸೀಮಿ
ಚಂದ್ರಮನೆ ಸ್ವಾಮಿ
ಚಂದ್ರಮನೆ ಸ್ವಾsಮಿs
ಏನೆಂಥ ಹಂತರದ ಈsಡs
ಬೆಳುದಿಂಗಳ ನೋಡs

ರೋಹಿಣಿಯು ಎದೆಯ ಕೆಂಪೆಳ್ಳು
ಗೆಳತಿ ಅವನವಳು
ನಲಿತಾಳ ಮುಂದs
ನಲಿತಾಳ ಮುಂದ
ಹಾಕ್ಯಾರ ಚಿಕ್ಕಿಗೆಳತ್ಯಾರ
ಕ್ರ್‍ತ್ತಿಕೀ ಹಾರ
ಕೃತ್ತಿಕೀ ಹಾsರs
ಕಳಿಲಾಕ ಇದ್ದ ಬಿದ್ದ ಕೇsಡs
ಬೆಳುದಿಂಗಳ ನೋಡs

ನೆರೆದವರು ಹರುಹಿದರು ಊದಿ
ಮಂತ್ರಿಸಿದ ಬೂದಿ
ಮೆಚ್ಚು ಮಾಟಕ್ಕs
ಮೆಚ್ಚು ಮಾಟಕ್ಕ
ನೆಲದವರು ನಿದ್ದಿಯs ಪಾಲು
ಮೂರು ಮುಕ್ಕಾಲು
ಮೂರು ಮುಕ್ಕಾsಲುs
ಅರಹುಚ್ಚು ಎಚ್ಚತ್ತರು ಕೂsಡs
ಬೆಳುದಿಂಗಳ ನೋಡs

ಮದುಮಗಳ ಕಣ್ಣಿನs ಬಗೀ
ಚಂದಿರನ ನಗಿ
ಸುತ್ತ ಹರಿದsದs
ಸುತ್ತ ಹರಿದsದ
ಕಂಡವರ ಬಾಳು ಮರಿಸ್ಯsದ
ತಣ್ಣಕಿರಿಸ್ಯsದ
ತಣ್ಣಕಿರಿಸ್ಯsದs
ಇದು ಮಾಯಕಾರರ ಬೀsಡs
ಬೆಳುದಿಂಗಳ ನೋಡs

ಸೂಸಿರುವ ನಗಿಯ ಬಗಿಹೀರಿ
ಮದಾ ತಲಿಗೇರಿ-
ಧಾಂಗ ತಿಂಹಕ್ಕಿs
ಹಾಂಗ ಟಿಂಹಕ್ಕಿ
ಚೀರ್‍ತsದ ದಿಡ ಬಿಟ್ಟೋಡಿ
ಗಿಡಕ ಸುತ್ತಾಡಿ
ಗಿಡಕ ಸುತ್ತಾsಡಿs
ಬೆಪ್ಪಾಗೆದ ಕಾಡೂಮೇsಡs
ಬೆಳುದಿಂಗಳ ನೋಡs

ಮರಮರದ ಗೊನೀಗೆ ಕೂತು
ಹಾರಿ ಮೈ ಸೋತು
ತೆಪ್ಪಗs ಗಾsಳಿs
ತೆಪ್ಪಗs ಗಾಳಿ
ತೂಕಡಸತsದ ತಾನೀಗ
ಜಂಪು ಬಂಧಾಂಗ
ಜಂಪು ಬಂಧಾsಂಗs
ಇದು ಅದರ ತುಪ್ಪಳದ ಗೂsಡs
ಬೆಳುದಿಂಗಳ ನೋಡs

ಹೂತsದ ಸೊಗಂಧೀ ಜಾಲಿ
ಗಮ ಗಮಾ ಬೇಲಿ
ತುಳುಕತದ ಗಂಧs
ತುಳುಕತದ ಗಂಧ
ಶ್ಯಾವಂತಿ ಹೂವಿನ ಕಂಪು
ಇಡಿಗಿಸಿತು ತಂಪು
ಇಡಿಗಿಸಿತು ತಂಪುs
ಇದು ಸಾಕು ಬೇರೆ ಏನು ಬ್ಯಾsಡs
ಬೆಳುದಿಂಗಳ ನೋಡs

ದಣಿಸಿದಾ ಹಗಲು ಹಿಂಗ್ಯsದ
ಕತ್ತಲಿಂಗ್ಯsದ
ಬೇರೆ ಈ ಕಾsಲs
ಬೇರೆ ಈ ಕಾಲ
ನಡು ನಿದ್ದಿಯೊಳಗ ಇದ್ದಾಂಗ
ಕನಸು ಬಿದ್ದಾಂಗ
ಕನಸು ಬಿದ್ದಾಂಗs
ತೆರೆದದ ತಣವಿಕೀ ನಾsಡ
ಬೆಳುದಿಂಗಳ ನೋಡs

ಜಗ ಧವಳ ಗಂಗ್ಯಾಗ ಮುಳುಗಿ
ಮೈ ಮನಾ ಬೆಳಗಿ
ಸಮಾಧಿಯು ಹತ್ತಿs
ಸಮಾಧಿಯು ಹತ್ತಿ
ಮೋಡನೂ ಬೆಳ್ಳಗಾಗ್ಯಾವ
ತೆನೀ ಮಾಗ್ಯಾವ
ತೆನೀ ಮಾಗ್ಯಾsವs
ಹಾಲುಣಿಸು ಎಲ್ಲಕೂ ಪಾsಡs
ಬೆಳುದಿಂಗಳ ನೋಡs

ಅರೆ ಮರವು ಮಾಡುವೀ ಬಂಧ
ಯಾವುದೀ ಛಂಧ
ಯಾವುದೀ ಧಾsಟಿs
ಯಾವುದೀ ಧಾಟಿ?
ಸವಿರಾಗ ಬೆರೆಸಿದs ಉಸಿರು.
ಇದಕ ಯಾ ಹೆಸರು
ಇದಕ ಯಾ ಹೆಸsರುs?
ಅಂಬಿಕಾತನಯನ ಹಾsಡs
ಬೆಳುದಿಂಗಳ ನೋಡs

ರಿ - ಬೆಳಗು


ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ್-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾತೊಯ್ದಾ

ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು

ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂದವು-ಅಮೃತsದ ಬಿಂದು
ಯಾರಿರಿಸಿದವರು ಮುಗಿಲsಮೇಲಿಂ-
ದಿಲ್ಲಿಗೇ ತಂದು
ಈಗ -ಇಲ್ಲಿಗೇ ತಂದು

ತಂಗಾಳೀಯ ಕೈಯೊಳಗಿರಿಸೀ
ಎಸಳೀನಾ ಚವರೀ
ಹೂವಿನ-ಎಸಳೀನಾ ಚವರಿ
ಹಾರಿಸಿ ಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಲಾ ಹಾಡು
ಹೊರಟಿತು-ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣ
ಕಣ್ಣಿದೆ-ಕಾಣsದೋ ಬಣ್ಣ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣ
ಇದು ಬರಿ-ಬೆಳಗಲ್ಲೋ ಅಣ್ಣಾ


ತುಳುಕ್ಯಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರುತಾವ ಹುಡುಕಿ||
ನೀ ಹೊರಟಿದ್ದೀಗ ಎಲ್ಲಿಗಿ?


ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
ಚಂದ್ರಮ ಕನ್ನಡೀ ಹರಳ
ಮನಸೋತು ಆಯಿತು ಮರುಳ||
ನೀ ಹೊರಟಿದ್ದೀಗ ಎಲ್ಲಿಗಿ?


ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ ಕಂಡರ ಕವದಾವ ಜೊಂಪ||
ನೀ ಹೊರಟಿದ್ದೀಗ ಎಲ್ಲಿಗಿ?


ನೆರಳಲ್ಲಡತಾವ ಮರದ ಬುಡಕ
ಕೆರಿ ತೆರಿ ನೂಗತಾವ ದಡಕ
ಹೀಂಗ ಬಿಟ್ಟು ಇಲ್ಲಿ ನನ್ನ ನಡಕ||
ನೀ ಹೊರಟಿದ್ದೀಗ ಎಲ್ಲಿಗಿ?


ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ||
ನೀ ಹೊರಟಿದ್ದೀಗ ಎಲ್ಲಿಗಿ?


ನಾವು ಬಂದೆವಲ್ಲಿದಿಲ್ಲಿಗಿ
ಬಾಯಿಬಿಟ್ಟವಲ್ಲ ಮಲ್ಲಿಗಿ
ನೀರೊಡೆದಿತಲ್ಲ ಕಲ್ಲಿಗಿ||
ನೀ ಹೊರಟಿದ್ದೀಗ ಎಲ್ಲಿಗಿ?


ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು||
ನೀ ಹೊರಟಿದ್ದೀಗ ಎಲ್ಲಿಗಿ?

ಬದುಕು ಮಾಯೆಯ ಮಾಟ


ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು!


ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ!
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.


ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ.

ಹಿಂದ ನೋಡದ ಗೆಳತಿ

ಒಂದೆ ಬಾರಿ ನನ್ನ ನೋಡಿ
ಮಂದ ನಗೀ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ||
ಹಿಂದ ನೋಡದ ಗೆಳತಿ
ಹಿಂದ ನೋಡದ


ಗಾಳಿ ಹೆಜ್ಜಿ ಹಿಡಿದ ಸುಗಂಧ
ಅತ್ತ ಅತ್ತ ಹೋಗುವಂದ
ಹೋತ ಮನಸು, ಅವನ ಹಿಂದ||
ಹಿಂದ ನೋಡದ ಗೆಳತಿ
ಹಿಂದ ನೋಡದ


ನಂದ ನನಗ ಎಚ್ಚರಿಲ್ಲ
ಮಂದಿ ಗೊಡವಿ ಏನ ನನಗ?
ಒಂದೆ ಅಳತಿ ನಡದದ ಚಿತ್ತ||
ಹಿಂದ ನೋಡದ ಗೆಳತಿ
ಹಿಂದ ನೋಡದ


ಸೂಜಿಹಿಂದ ಧರದಂಗ
ಕೊಳದೊಳಗೆ ಜಾರಿಧಾಂಗ
ಹೋತ ಹಿಂದೆ ಬಾರಧಾಂಗ||
ಹಿಂದ ನೋಡದ ಗೆಳತಿ
ಹಿಂದ ನೋಡದ

-ಅಂಬಿಕಾತನಯದತ್ತ





ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ

ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದ, ದೇವನು ಜಗವೆಲ್ಲ ತೊಯ್ದ

ಎಲೆಗಳ ಮೆಲೆ, ಹೂಗಳ ಒಳಗೆ
ಅಮೃತದಾ ಬಿಂದು, ಕಂಡವು ಅಮೃತದಾ ಬಿಂದು

ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು

ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು
ಹೊರಟಿತು, ಹಕ್ಕಿಗಳಾ ಹಾಡು

ಗಂಧರ್ವರ ಸೀಮೆಯಾಯಿತು, ಕಾಡಿನಾ ನಾಡು
ಕ್ಷಣದೊಳು, ಕಾಡಿನಾ ನಾಡು


ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು ||ಪ ||

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು

No comments:

Post a Comment