Tuesday, February 24, 2015

ನೆನಪಾಗುತ್ತಲೇ ಇರುವ ಮಹಾಚೇತನ ತೇಜಸ್ವಿ.........




ಸಾಹಿತಿಗಳು ಅಂದಾಕ್ಷಣ ಬೆಂಗಳೂರು- ಮೈಸೂರಿನ ಕಡೆಗೆ, ಧಾರವಾಡದ ದಿಕ್ಕಿಗೆ ಅಥವಾ ಬೆಳಗಾವಿ- ಮಂಗಳೂರಿನ ಕಡೆಗೆ ನೋಡುವುದು ಹಲವರ ರೂಢಿ. ನಮ್ಮ ಸಾಹಿತಿಗಳೆಲ್ಲ ಹೆಚ್ಚಾಗಿ ನಗರಗಳಲ್ಲೇ ವಾಸವಿರುವುದೇ ಇದಕ್ಕೆ ಕಾರಣ. ಆದರೆ ತೇಜಸ್ವಿ ಜಪ್ಪಯ್ಯ ಅಂದರೂ ಮೂಡಿಗೆರೆ ಬಿಟ್ಟು ಆಚೆಗೆ ಬರಲೇ ಇಲ್ಲ. ಆದರೆ, ನಾಡಿನ ಅದ್ಯಾವ ಊರಿಗೇ ಹೋದರೂ ಅವರನ್ನು ನೋಡಲು ಜಾತ್ರೆಗೆ ಬರುವಂತೆ ಜನ ಬರುತ್ತಿದ್ದರು. ಅವರ ಮಾತುಗಳನ್ನು ಆಸೆಯಿಂದ, ಆಸಕ್ತಿಯಿಂದ ಕೇಳುತ್ತಿದ್ದರು. ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ತೇಜಸ್ವಿಯವರಾದರೋ- ವರ್ಷಕ್ಕೆ ಒಂದೆರಡು ಬಾರಿ ಬೆಂಗಳೂರಿಗೆ ಬಂದರೆ; ಇಲ್ಲಿಂದ ಯಾವಾಗ ವಾಪಸ್ ಹೋಗುತ್ತೇನೋ ಎಂದು ಚಡಪಡಿಸುತ್ತಿದ್ದರು. ಗಿಜಿಗಿಜಿ ಟ್ರಾಫಿಕ್ ಮಧ್ಯೆ ಸಿಕ್ಕಿಬಿದ್ದರಂತೂ – ‘ಏನಯ್ಯಾ ಇದು ನರಕಾ? ನಂಗೆ ಒಂದು ದಿನಕ್ಕೇ ಸುಸ್ತಾಗಿ ಹೋಯ್ತು. ನೀವು ಇಡೀ ವರ್ಷ ಹ್ಯಾಗಯ್ಯಾ ಬದುಕ್ತೀರಿ ಇಲ್ಲಿ? ಒಂದಂತೂ ಗ್ಯಾರಂಟಿ ತಿಳ್ಕೊಳ್ಳಿ. ಏನಂದ್ರೆ- ಬೆಂಗ್ಳೂರಲ್ಲಿ ಟ್ರಾಫಿಕ್ನ ಮಧ್ಯೆ ಹತ್ತು ವರ್ಷ ಕಳೆದವನಿಗೆ ನರಕದಲ್ಲಿ ಬದುಕಿದ ಅನುಭವ ಆಗಿರುತ್ತೆ. ಹಾಗಾಗಿ ಸತ್ತ ಮೇಲೆ ಅವರಿಗೆ ನರಕದಲ್ಲಿ ಶಿಕ್ಷೇನೇ ಇರಲ್ಲ. ಒಂದೇ ಒಂದು ಕಾರಣಕ್ಕೆ ಪುಣ್ಯವಂತರು ನೀವುಎಂದು ನಗೆಯಾಡುತ್ತಿದ್ದರು.
ಸ್ವಾರಸ್ಯವೆಂದರೆ, ಸುದೀರ್ಘ ಚರ್ಚೆಯಲ್ಲಿ, ವಾಗ್ವಾದದಲ್ಲಿ ತೇಜಸ್ವಿಯವರಿಗೆ ಆಸಕ್ತಿ ಇರಲಿಲ್ಲ. ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ, ಹತ್ತು ಜನ ಒಪ್ಪುವಂತೆ ಅದನ್ನು ಮಾಡಿ ಮುಗಿಸುತ್ತಿದ್ದರು ನಿಜ. ಆದರೆ, ಅದರಲ್ಲಿ ಏನಾದರೂ ತಪ್ಪು ತೋರಿಸಿ- ‘ಏನ್ಸಾರ್ ಇದೂಎಂದರೆ ಅವರು ಖಡಕ್ಕಾಗಿ ಉತ್ತರಿಸುತ್ತಿರಲಿಲ್ಲ
ನನ್ನ ಪಾಲಿಗೆ ಇದೇ ಶಾಶ್ವತ ಎಂದು ತೇಜಸ್ವಿ ಯಾವತ್ತೂ, ಯಾವುದಕ್ಕೂ ಗಟ್ಟಿಯಾಗಿ ಅಂಟಿಕೊಂಡವರೇ ಅಲ್ಲ. ನಾಡಿನ ಜನರೆಲ್ಲ ಅವರ ಯಾವುದೋ ಕಾದಂಬರಿ ಕುರಿತು ಚರ್ಚೆಯಲ್ಲಿ ತೊಡಗಿದ್ದಾಗ, ಮಹರಾಯರು ಕ್ಯಾಮರಾ ನೇತು ಹಾಕಿಕೊಂಡು ಫೋಟೊ ತೆಗೆಯುವಲ್ಲಿ ಬ್ಯುಸಿಯಾಗಿರುತ್ತಿದ್ದರು. ‘ಅಬ್ಬಾ, ತೇಜಸ್ವಿ ತೆಗೆದಿರುವ ಹಕ್ಕಿ ಪಕ್ಷಿಗಳ ಫೋಟೊ ಎಷ್ಟೊಂದು ಚೆಂದವಿದೆಯಲ್ಲ?’ ಎಂದು ಎಲ್ಲರೂ ಬೆರಗಾಗುತ್ತಿದ್ದ ವೇಳೆಯಲ್ಲಿ ಅವರು ಪೇಂಟಿಂಗ್ಗೆ ಕೈ ಹಾಕಿರುತ್ತಿದ್ದರು. ‘ತೇಜಸ್ವಿಯವರು ಪೇಂಟಿಂಗ್ ಮಾಡ್ತಾ ಇರೋದು ಕಂಪ್ಯೂಟರ್ನಲ್ಲಂತೆ ಕಣ್ರೀಎಂದು ಅವರಿವರು ಅನುಮಾನದಿಂದ ಪಿಸುಗುಡುತ್ತಿದ್ದ ಸಂದರ್ಭದಲ್ಲಿಯೇ, ಅಂಥ ಮಾತುಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮೂಡಿಗೆರೆಯ ತಮ್ಮ ಮನೆಯೆದುರಿನ ಕೆರೆಯಲ್ಲಿ ಅವರು ಮೀನು ಹಿಡಿಯುತ್ತಾ ಕೂತುಬಿಟ್ಟಿರುತ್ತಿದ್ದರು.
ಇದನ್ನು ಕಂಡ ಯಾರಾದರೂ ಗಾಬರಿಯಿಂದ- ‘ಏನ್ಸಾರ್ ಇದೂ?’ ಎಂದು ಪ್ರಶ್ನಿಸಿದರೆ- ‘ರೀ, ನೀವು ಅಂದುಕೊಂಡಂತೆ ಅಥವಾ ನೀವು ಬಯಸಿದಂತೆ ಬದುಕಲಿಕ್ಕೆ ನನ್ನಿಂದ ಸಾಧ್ಯವಿಲ್ಲ. ನನಗೇನು ಇಷ್ಟಾನೋ ಅದನ್ನು ನಾನು ಮಾಡ್ತೀನಿ. ಪುಸ್ತಕ ಬರೀಬೇಕು ಅನ್ಸಿದ್ರೆ ಪುಸ್ತಕ ಬರೀತೀನಿ. ಫೋಟೊ ತೆಗೀಬೇಕು ಅನ್ಸಿದ್ರೆ ಫೋಟೊ ತೆಗೀತೀನಿ. ಚಿತ್ರ ಬರೀಬೇಕು ಅನ್ಸಿದ್ರೆ ಹಾಗೇ ಮಾಡ್ತೀನಿ. ನೀವು ಯಾರ್ರೀ ಕೇಳೋಕೆ ಎಂದು ರೇಗುತ್ತಿದ್ದರು. ಸ್ವಲ್ಪ ಚೆನ್ನಾಗಿ ಪರಿಚಯವಿದ್ದವರನ್ನುಬಡ್ಡೀಮಕ್ಳಎಂದು ಬಯ್ದೇ ಮಾತಾಡಿಸುತ್ತಿದ್ದರು. ದಿಢೀರನೆ ಅವರ ಮನೆಗೆ ಹೋದರೆಶನಿಗಳಾ, ಈಗ ಬಂದ್ರಾ? ಬನ್ನಿ ಕಾಫಿ ಕುಡಿಯೋಣಎನ್ನುತ್ತಾ ಮಾತಿಗೆ ಕೂರುತ್ತಿದ್ದರು. ಜಾಸ್ತಿ ಸಲುಗೆಯವರಾದರೆ- ‘ಥೂ ಹಲ್ಕಾಎಂದೇ ಮಾತು ಶುರು ಮಾಡುತ್ತಿದ್ದರು! ಮತ್ತು ಐದೇ ನಿಮಿಷದ ಮಾತುಕತೆಯಲ್ಲೇ ರಕ್ತ ಸಂಬಂಧಿಗಿಂತ ಹೆಚ್ಚಿನ ಆತ್ಮೀಯರಾಗುತ್ತಿದ್ದರು.
ಸ್ವಾರಸ್ಯವೆಂದರೆ, ತೇಜಸ್ವಿಯವರಿಂದ ಹಾಗೆಲ್ಲ ಬೈಸಿಕೊಂಡಿದ್ದಕ್ಕೆ ಯಾರೂ ಬೇಸರ ಪಡುತ್ತಿರಲಿಲ್ಲ. ಬದಲಿಗೆ- ‘ಅವರು ಹೇಗೆಲ್ಲಾ ಬಯ್ದರುಎಂಬುದನ್ನು ಗೆಳೆಯರ ಮುಂದೆ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದರು:
***
ಕುವೆಂಪು ಅವರ ಸುಪುತ್ರನಾದರೂ ನಾನು ಅಸಾಧಾರಣ ಬುದ್ಧಿವಂತನಂತೂ ಖಂಡಿತ ಅಲ್ಲ. ಅದರಲ್ಲೂ ಪಿಯೂಸಿ, ಡಿಗ್ರಿಯಲ್ಲಿದ್ದಾಗ ನಾನೂ ಕೂಡ ಡುಮ್ಕಿ ಹೊಡೆದವನೇಎಂದು ಸಂಕೋಚವಿಲ್ಲದೆ ಬರೆದುಕೊಂಡವರು ತೇಜಸ್ವಿ. ಅವರ ಸೂಪರ್ಬ್ ಎನ್ನಿಸುವಂಥ ಇಂಗ್ಲಿಷ್ ಭಾವಾನುವಾದದ ಬಗ್ಗೆ ಎಲ್ಲರೂ ಮೆಚ್ಚುಗೆಯಿಂದ ಮಾತಾಡುತ್ತಿದ್ದಾಗಲೇ, ‘ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದಅಣ್ಣನ ನೆನಪುನಲ್ಲಿ ಹೀಗೆ ಬರೆದಿದ್ದರು ತೇಜಸ್ವಿ: ‘ನಾನೂ ಅನೇಕ ಸಾರಿ ಫೇಲಾಗಿದ್ದೇ ಇಂಗ್ಲಿಷಿನಲ್ಲಿ. ಏನನ್ನು ಬೇಕಾದರೂ ಕಲಿಯಬಲ್ಲ ಸಾಮರ್ಥ್ಯವಿರುವ ನನಗೆ ಮೊದಲಿನಿಂದಲೂ ಗಣಿತ ಮತ್ತು ಇಂಗ್ಲಿಷ್ ಕೊಟ್ಟಿರುವ ತೊಂದರೆ ಅಷ್ಟಿಷ್ಟಲ್ಲ. ನನಗೆ ಈಗಲೂ ಇಂಗ್ಲಿಷಿನಲ್ಲಿ ಓದುವುದು, ಮಾತಾಡುವುದು ಎಲ್ಲ ಸುಲಭ ಸಾಧ್ಯವಿದ್ದರೂ, ಅದೊಂದು ಕನ್ನಡದ ವಿಸ್ತರಣೆಯಂತಾಗ ಮಾತ್ರ ಸಾಧ್ಯವೇ ಹೊರತು ಇಂಗ್ಲಿಷ್ ಭಾಷೆ ಎಂದು ಪ್ರತ್ಯೇಕವಾಗಿ ಪರಿಗಣಿಸಿದ ಕೂಡಲೇ ಸಾಧ್ಯವಾಗುವುದೇ ಇಲ್ಲ. ಮೊನ್ನೆ ಎಲ್ಲೋ ಭಾಷಣ ಮಾಡಬೇಕೆಂದು ಎದ್ದಾಗಇಂಗ್ಲಿಷಿನಲ್ಲಿ ಮಾತನಾಡಿಎಂದರು, ನನ್ನ ಬಾಯಿಂದ ಮಾತೇ ಹೊರಡಲಿಲ್ಲ
ಇಂಗ್ಲಿಷಿನಲ್ಲಿ ಬರೆಯುವುದೆಂದರೆ ನನಗೆ ತಲೆನೋವು. ಬಹುಶಃ ಸ್ಪೆಲ್ಲಿಂಗ್ ಇರುವ ಯಾವ ಭಾಷೆಯನ್ನೂ ನಾನು ಕಲಿಯಲಾರೆನೆಂದು ಅನಿಸುತ್ತದೆ. ಅದರಲ್ಲೂ ಇಂಗ್ಲಿಷ್ ಹುಚ್ಚರ ಭಾಷೆಯೆಂದು ನನ್ನ ಅಭಿಮತ. ಮೊದಲೇ ಸ್ಪೆಲ್ಲಿಂಗ್ ಜ್ಞಾಪಕ ಇಟ್ಟುಕೊಳ್ಳುವುದು ತಲೆ ನೋವು. ಅದರ ಜತೆಗೆ ಸ್ಪೆಲ್ಲಿಂಗೇ ಒಂದು ತರ, ಅದನ್ನು ಉಚ್ಚರಿಸುವುದು ಇನ್ನೊಂದು ತರ ಆದರೆ ನಾನು ಕಲಿಯುವುದಾದರೂ ಹೇಗೆ? ನಾನು ಮಿಡಲ್ಸ್ಕೂಲ್, ಹೈಸ್ಕೂಲ್ ಓದುತ್ತಿದ್ದಾಗ ಅಣ್ಣ (ಕುವೆಂಪು) ನನಗೆ ಇಂಗ್ಲಿಷ್ ಬರೆಯುವುದನ್ನು ಹೇಳಿಕೊಡಲು ತುಂಬಾ ಪ್ರಯತ್ನಪಟ್ಟರು. ಸ್ಪೆಲ್ಲಿಂಗ್ ಉಪಯೋಗಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಒಂದು ನಿರ್ದಿಷ್ಟ ಸಾರ್ವತ್ರಿಕ ಸೂತ್ರವೇ ಇಲ್ಲದಾಗ ಅವರು ತಾನೆ ಹೇಗೆ ಹೇಳಿಕೊಟ್ಟಾರು? ಇಂಗ್ಲಿಷಿನಲ್ಲಿ ಓದುವ ಮಾತಾಡುವುದೆಲ್ಲ ಬಂದರೂ ಸ್ಪೆಲ್ಲಿಂಗಿನ ಪ್ರಾರಬ್ಧದ ದೆಸೆಯಿಂದಾಗಿ ನಾನು ಇಂಗ್ಲಿಷಿನಲ್ಲಿ ಯಾವತ್ತೂ ಒಂದೇ ಸಾರಿಗೆ ಪಾಸಾಗಲಿಲ್ಲ…’
ಹೀಗೆ- ‘ಸಹಜ ಸೋಜಿಗದ ಅಪ್ಪಟ ಮನುಷ್ಯರಾಗಿದ್ದ ತೇಜಸ್ವಿಯವರಿಗೆ ಯಾರು ಬೇಕಾದರೂ ಕಾಗದ ಬರೆಯಬಹುದಿತ್ತು. ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ- ಹ್ಯಾಂಡ್ ಪೋಸ್ಟ್, ಮೂಡಿಗೆರೆ, ಚಿಕ್ಕಮಗಳೂರುಎಂದು ವಿಳಾಸ ಬರೆದು ಕಾಗದ ಹಾಕಿದರೆ- ನಂತರದ ವಾರದೊಳಗೆ, ಅದ್ಯಾರೇ ಅಪರಿಚಿತರಾಗಿದ್ದರೂ ಸರಿ; ತೇಜಸ್ವಿ ಉತ್ತರ ಬರೆಯುತ್ತಿದ್ದರು. ಕಾಗದದ ಮೇಲ್ಭಾಗದಲ್ಲಿ ಗೆಳೆಯರಾದ/ಆತ್ಮೀಯರಾದ ಎಂದೇ ಆರಂಭಿಸುತ್ತಿದ್ದರು. ಮೂಲಕ ಒಂದೇ ಪತ್ರದ ನೆಪದಲ್ಲಿ ಜನ್ಮಾಂತರದ ಬಂಧುವಾಗಿ ಬಿಡುತ್ತಿದ್ದರು. ಹೀಗೆ ಕಾಗದ ಬರೆದು ತೇಜಸ್ವಿಯವರಿಗೆ ಯಾವ ಪ್ರಶ್ನೆಯನ್ನಾದರೂ ಕೇಳಬಹುದಿತ್ತು. ಉತ್ತರ ಪಡೆಯಬಹುದಿತ್ತು.
ತೇಜಸ್ವಿಯವರ ಬಗೆಗೆ ಅಪಾರ ಅಭಿಮಾನ ಹೊಂದಿರುವ ಪರಿಸರ ಚಳವಳಿ ಹಿನ್ನೆಲೆಯ ಜಿ. ಕೃಷ್ಣಪ್ರಸಾದ್ ಈಗ್ಗೆ ೨೦ ವರ್ಷದ ಹಿಂದೆ ಅವರಿಗೆ ಪತ್ರ ಬರೆದು- ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಬೆಳವಣಿಗೆಯ ಬಗ್ಗೆ ಏನನ್ನುತ್ತೀರಿ? ಇಂಗ್ಲಿಷಿನಿಂದ ಅನುವಾದಿಸುವ ಸಂದರ್ಭ ಬಂದಾಗ- ಸೂಕ್ತ ಪಾರಿಭಾಷಿಕ ಪದಗಳು ಸಿಗದಿದ್ದರೆ ಏನು ಮಾಡಬೇಕು? ಕಿರಿಯರಿಗೆ ನಿಮ್ಮ ಸಲಹೆ ಏನು? ನೀವು ವಿಜ್ಞಾನದ ಲೇಖಕರೆ?’ ಎಂದು ಕೇಳಿದ್ದರು.
ಅದಕ್ಕೆ ತೇಜಸ್ವಿಯವರ ಉತ್ತರ ಹೀಗಿತ್ತು: ‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಬೆಳವಣಿಗೆ ಖಂಡಿತ ಸಮಾಧಾನಕರವಾಗಿಲ್ಲ. ಪಾರಿಭಾಷಿಕ ಪದಗಳು ಕನ್ನಡದಲ್ಲಿ ಹೆಚ್ಚಿಗೆ ಇಲ್ಲ. ಕನ್ನಡದ ಜಾಯಮಾನಕ್ಕೆ ಒಗ್ಗುವಂಥ ಪದಗಳಿದ್ದರೆ ಕನ್ನಡ ಪದ ಬಳಸಬಹುದು. ಇಲ್ಲದಿದ್ದರೆ ಇಂಗ್ಲಿಷಿನವನ್ನೇ ಕನ್ನಡದಲ್ಲಿ ಉಪಯೋಗಿಸಿ, ಭಾಷೆ ಬೆಳೆಯುವುದೇ ಹೀಗೆ. ಅನೇಕ ಪಾರಿಭಾಷಿಕ ಪದಗಳು ಇಂಗ್ಲಿಷನವೂ ಅಲ್ಲ. ಅವರೂ ಬೇರೆ ಬೇರೆ ಭಾಷೆಯ ಪದಗಳನ್ನೇ ತಮ್ಮವನ್ನಾಗಿಸಿಕೊಂಡಿದ್ದಾರೆ. ಕಿರಿಯ ಬರಹಗಾರರಿಗೆ ನಾನು ಹೇಳುವುದೇನೂ ಇಲ್ಲ. ನಾನು ಮೂಲತಃ ವಿಜ್ಞಾನದ ವಿದ್ಯಾರ್ಥಿಯಲ್ಲ. ನನಗೆ ಕೆಲವು ವಿಷಯ ತುಂಬಾ ಇಷ್ಟವಾದ್ದರಿಂದ ವಿಜ್ಞಾನದ ಲೇಖಕನಾಗಿದ್ದೇನೆ, ಅಷ್ಟೆ…’
ಇನ್ನೊಂದು ಸಂದರ್ಭದಲ್ಲಿ ತೇಜಸ್ವಿಯವರ ಅಪರೂಪದ ಫೋಟೊಗ್ರಫಿ ಕಂಡು ಬೆರಗಾದ ಶಿಡ್ಲಘಟ್ಟದ ಡಿ.ಜಿ. ಮಲ್ಲಿಕಾರ್ಜುನ ಒಂದು ಮೆಚ್ಚುಗೆಯ ಪತ್ರ ಬರೆದರೆ- ಅದಕ್ಕೆ ಉತ್ತರಿಸಿದ ತೇಜಸ್ವಿ- ‘ತಮ್ಮ ಅಭಿನಂದನೆಗಳಿಗೆ ನನ್ನ ಕೃತಜ್ಞತೆಗಳು. ಪ್ರಶಸ್ತಿಗಳಿಗಿಂತ ತಮ್ಮಂಥವರ ಮೆಚ್ಚುಗೆ ಮಾತುಗಳು ಸಾವಿರ ಪಾಲು ಬೆಲೆ ಬಾಳುವಂಥವೆಂದು ನನ್ನ ಅನಿಸಿಕೆಎಂದು ಬರೆದಿದ್ದರು!
***
ನೆನಪಿಸಿಕೊಂಡಷ್ಟೂ ನೆನಪಾಗುತ್ತಲೇ ಇರುವ ಮಹಾಚೇತನ ತೇಜಸ್ವಿ. ಅವರ ಕಾಲದಲ್ಲಿ ನಾವಿದ್ದೆವಲ್ಲ ಎಂದುಕೊಂಡಾಗ ಖುಷಿಯಾಗುತ್ತದೆ, ಹೆಮ್ಮೆಯಾಗುತ್ತದೆ. ಅವರು ಜತೆಗಿಲ್ಲ ಅನಿಸಿದಾಗ ಮಾತ್ರ- ಮನೆಯ ಹಿರಿಯನೊಬ್ಬ ಒಂದು ಮಾತೂ ಹೇಳದೆ ಹೋಗಿಬಿಟ್ಟಾಗ ಆಗುತ್ತದಲ್ಲ- ಅಂಥ ಸಂಕಟವಾಗುತ್ತದೆ ಮತ್ತು ಸಂಕಟ ಜತೆಗೇ ಇರುತ್ತದೆ- ನಾವಿರುವ ತನಕ!

ಸಿಂಪಿ ಲಿಂಗಣ್ಣ (ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು)



ಸಿಂಪಿ ಲಿಂಗಣ್ಣ

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ ೧೯೦೫ರ ಫೆಬ್ರವರಿ ೧೧ರಂದು. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. ೧೯೨೨ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. ೧೯೨೫ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ೧೯೬೦ರಲ್ಲಿ ನಿವೃತ್ತರಾದರು.
ಇವರ ತಾಯಿ ಮತ್ತು ಅತ್ತಿಗೆಯವರು ಹೇಳುತ್ತಿದ್ದ ತ್ರಿಪದಿಗಳನ್ನು ಬಾಲ್ಯದಿಂದಲೇ ಕೇಳುತ್ತಾ ಲಿಂಗಣ್ಣನವರಲ್ಲಿ ಜನಪದ ಸಾಹಿತ್ಯದತ್ತ ಒಲವು ಬೆಳೆಯ ತೊಡಗಿತು. ನಂತರ ಇವರು ಸಂಗ್ರಹಿಸಿದ ಜನಪದ ಹಾಡುಗಳನ್ನುಗರತಿಯ ಹಾಡುಮತ್ತುಜೀವನ ಸಂಗೀತಎಂಬ ಸಂಕಲನಗಳಲ್ಲಿ ಪ್ರಕಟಿಸಿದರು. ನಂತರ ಹೊರತಂದ ಪುಸ್ತಕಉತ್ತರ ಕರ್ನಾಟಕದ ಜನಪದ ಕಥೆಗಳು’. ಶಾಸ್ತ್ರೀಯವಾಗಿ ಒಂಬತ್ತು ಭಾಗಗಳಾಗಿ ವಿಭಜಿಸಿ ಪ್ರಕಟಿಸಿದ ಕೃತಿಯು ಎಂ.. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು.
ಜಾನಪದ ವಿಮರ್ಶೆಯ ಕೃತಿಜನಾಂಗದ ಜೀವಾಳಪುಸ್ತಕವನ್ನೂ ಮಿಂಚಿನ ಬಳ್ಳಿ ಪ್ರಕಾಶನವು ೧೯೫೭ರಲ್ಲಿ ಪ್ರಕಟಿಸಿತು. ಇದರಲ್ಲಿ ಜನಪದ ಕಥೆಗಳು, ಗಾದೆಗಳು, ಒಗಟುಗಳು, ಬಯಲಾಟದ ಹಾಡುಗಳು, ವಾಕ್ ಸಂಪ್ರದಾಯಗಳು, ಪಡೆನುಡಿಗಳು- ಇವೆಲ್ಲದರ ರಸಭರಿತ ವಿಶ್ಲೇಷಣೆಯ ವಿಶಿಷ್ಟ ಕೃತಿ.
ಜಾನಪದ ಕ್ಷೇತ್ರದಷ್ಟೇ ಇವರಿಗೆ ಪ್ರಿಯವಾಗಿದ್ದ ಮತ್ತೊಂದು ಕ್ಷೇತ್ರವೆಂದರೆ ಕಾವ್ಯಪ್ರಕಾರ. ೧೯೩೬ರಲ್ಲಿಯೇ ರಾಮನರೇಶ್ತ್ರಿಪಾಠಿಯವರು ಹಿಂದಿಯಲ್ಲಿ ಬರೆದಮಿಲನಖಂಡ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ನಂತರ ಇವರು ಹೊರತಂದ ಕವನ ಸಂಕಲನಗಳೆಂದರೆ ಮುಗಿಲಜೇನು, ಪೂಜಾ, ಮಾತೃವಾಣಿ, ನಮಸ್ಕಾರ, ಶ್ರುತಾಶ್ರುತ, ಸಾಯ್ಕೊಲ್ಮುಂತಾದವುಗಳು.
ಜಾನಪದ, ಕಾವ್ಯದಷ್ಟೇ ಉತ್ಕೃಷ್ಟ ಕೃತಿಗಳನ್ನು ನೀಡಿದ ಮತ್ತೊಂದು ಕ್ಷೇತ್ರವೆಂದರೆ ಪ್ರಬಂಧಪ್ರಕಾರ. ಭಾರತದ ಇತಿಹಾಸ, ಸಂಸ್ಕೃತಿಯ ಚಿತ್ರಣ, ವೈಚಾರಿಕತೆ ಜೀವನದೃಷ್ಟಿ, ಇವುಗಳನ್ನೊಳಗೊಂಡಂತೆ ಪ್ರಕಟಿಸಿದ ಪ್ರಬಂಧ ಸಂಕಲನಗಳೆಂದರೆಸ್ವರ್ಗದೋಲೆಗಳು’. ‘ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ?’, ‘ಬಾಳಬಟ್ಟೆ’, ‘ತಲೆಮಾರಿನ ಹಿಂದೆ’, ‘ಬದುಕಿನ ನೆಲೆ’, ‘ನೂರುಗಡಿಗೆ ಒಂದು ಬಡಿಗೆಮುಂತಾದ ೧೫ ಪ್ರಬಂಧ ಕೃತಿಗಳು.
ಭಾರತೀಯ ಮಹಾಪುರುಷರು, ದೇಶಭಕ್ತಿಯ ಕಥೆಗಳು, ಕನ್ನಡಿಗರ ಕುಲಗುರು, ದತ್ತ ಸಾಹಿತ್ಯ, ಶ್ರೀ ಅರವಿಂದರು, ಮಧುರ ಚೆನ್ನರ ಜೀವನ ಹಾಗೂ ಕಾರ್ಯ, ಗಾಂಧಿ ಶತದಲ, ಹಳ್ಳಿಯ ಮಹಾತ್ಮ ಮುಂತಾದ ೧೮ ಜೀವನ ಚರಿತ್ರೆಯ ಕೃತಿಗಳು; ಜನಜೀವನ, ಭಕ್ತಿ ರಹಸ್ಯ, ಭಗವಾನ್ಬುದ್ಧದೇವ, ಮೊದಲನೇ ದೇಶದ್ರೋಹಿ, ಸಪ್ತಪದಿ ಮೊದಲಾದ ನಾಟಕಗಳು; ‘ಬೆಟ್ಟದ ಹೊಳೆ’-ಒಂದು ಕಾದಂಬರಿ; ಪವಿತ್ರ ಜೀವನ, ಸುಂದರ ಕಥೆಗಳು, ದೀಪವರ್ತಿ, ದೃಷ್ಟಾಂತ ಕಥೆಗಳು ಮೊದಲಾದ ನಾಲ್ಕು ಕಥಾ ಸಂಕಲನಗಳು; ವಿಶ್ವಾಮಿತ್ರನ ಸಾಹಸ, ಲೊಬೊಲೊಬೊ, ಕಿರುಗನ್ನಡಿ, ಅಂದ ಚೆಂದ, ನಾಮದೇವ, ಗುಡ್ಡಾಪುರದ ದಾನಮ್ಮ ಮೊದಲಾದ ೧೬ ಮಕ್ಕಳ ಸಾಹಿತ್ಯ ಕೃತಿಗಳು, ರಾಮತೀರ್ಥರ ಬಗ್ಗೆ ಕೃತಿಗಳು; ಶ್ರೀ ಅರವಿಂದರ ಬಗ್ಗೆ ಬರೆದ ೧೨ ಕೃತಿಗಳೂ ಸೇರಿ ಒಟ್ಟು ಒಂದು ನೂರಕ್ಕೂ ಹೆಚ್ಚು ಕೃತಿ ಪ್ರಕಟಿತ.
ಇವರ ಎಲ್ಲಾ ಸಾಹಿತ್ಯ ಕೃತಿಗಳ ಹಿಂದಿನ ಪ್ರೇರಕ ಶಕ್ತಿಗಳೆಂದರೆ ಹಲಸಂಗಿ ಮಧುರ ಚೆನ್ನ, ಕಾಪಸೆ ರೇವಪ್ಪ ಮತ್ತು ಧೂಲಾಸಾಹೇಬ ಮೊದಲಾದ ಸ್ನೇಹಿತರುಗಳು. ಸಿಂಪಿ ಲಿಂಗಣ್ಣನವರನ್ನು ಕುರಿತು ಡಾ.ಎಂ.ಎನ್‌. ವಾಲಿಯವರುಸಿಂಪಿ ಲಿಂಗಣ್ಣನವರ ಜೀವನ ಸಾಧನೆಕುರಿತ ಮಹಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ.
ಇವರಿಗೆ ಸಂದ ಪ್ರಶಸ್ತಿ, ಗೌರವಗಳೆಂದರೆ೧೯೪೪ರಲ್ಲಿ ರಬ ಕವಿಯಲ್ಲಿ ನಡೆದ ೨೮ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಯ ಅಧ್ಯಕ್ಷತೆ, (ಸಮ್ಮೇಳನದ ಅಧ್ಯಕ್ಷರುಎಸ್‌.ಎಸ್‌. ಬಸವನಾಳರು). ೧೯೬೯ರಲ್ಲಿ ನಡೆದ ಅಖಿಲ ಕರ್ನಾಟಕ ನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, ೧೯೭೨ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ಹೊರನಾಡ ಕನ್ನಡಿಗರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೭೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಇಳಕಲ್ಲಿನಲ್ಲಿ ಆಯೋಜಿಸಿದ್ದ ಆರನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, ೧೯೮೦ರಲ್ಲಿ ಜಮಖಂಡಿಯಲ್ಲಿ ನಡೆದ ವಿಜಾಪುರ ಜಿಲ್ಲಾ ಎರಡನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೮೯ರಲ್ಲಿ ಹೊಸಪೇಟೆಯಲ್ಲಿ ನಡೆದ ಕನ್ನಡ ಶಕ್ತಿ ಕೇಂದ್ರದ ಪ್ರಥಮ ವಾರ್ಷಿಕ ಸಭೆಯ ಅಧ್ಯಕ್ಷತೆ, ೧೯೯೨ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗಳಲ್ಲದೆ ೧೯೫೬ರಲ್ಲಿಸ್ವರ್ಗದೋಲೆಗಳುಕೃತಿಗೆ ಮುಂಬೈ ಸರಕಾರದ ಬಹುಮಾನ, ೧೯೫೯ರಲ್ಲಿಗರತಿಯ ಬಾಳುಕೃತಿಗೆ ಮೈಸೂರು ಸರಕಾರದ ಬಹುಮಾನ, ೧೯೬೦ರಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರಿಂದಆದರ್ಶ ಶಿಕ್ಷಕಪ್ರಶಸ್ತಿ, ೧೯೬೦ರಲ್ಲಿಜನಾಂಗದ ಜೀವಾಳಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಬಹುಮಾನ, ೧೯೬೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ವಿಶೇಷ ಪ್ರಶಸ್ತಿ ಮತ್ತು ಬಹುಮಾನ, ೧೯೭೭ರಲ್ಲಿನಾಟ್ಯಸಾಧನೆ’ (ಪ್ರಬಂಧ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ೧೯೮೦ರಲ್ಲಿ ಜಾನಪದ ಟ್ರಸ್ಟ್ನಿಂದ ಸನ್ಮಾನ, ಮತ್ತುನೂರು ಗಡಿಗೆ ಒಂದು ಬಡಿಗೆಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ೧೯೮೮ರಲ್ಲಿ ಕರ್ನಾಟಕ ಜಾನಪದ ಅಕಾಡಮಿಯಿಂದಜಾನಪದ ತಜ್ಞಪ್ರಶಸ್ತಿ, ೧೯೯೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ ಮತ್ತು ರಾಜ್ಯ ಸರಕಾರದ ಜಾನಪದ ಸೇವೆಗಾಗಿ ರಾಜ್ಯ ಪ್ರಶಸ್ತಿಗಳ ಜೊತೆಗೆ ೧೯೮೯ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ದೊರೆತವು.
ಹೀಗೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಸಿಂಪಿ ಲಿಂಗಣ್ಣನವರು ನಿಧನರಾದದ್ದು ೧೯೯೩ ಮೇ ರಂದು.
ಸಿಂಪಿ ಲಿಂಗಣ್ಣನವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕುಟುಂಬದ ಸದಸ್ಯರು ಪ್ರಾರಂಭಿಸಿರುವಜಾನಪದ ಅಧ್ಯಯನ ವೇದಿಕೆಯಿಂದ ಪ್ರತಿವರ್ಷ ನೀಡುತ್ತಿರುವಸಿಂಪಿ ಲಿಂಗಣ್ಣ ಪ್ರಶಸ್ತಿ