Tuesday, February 24, 2015

ಮಧುರಚೆನ್ನ(ಅನುಭಾವಿ - ಕನ್ನಡ ಸಾಹಿತ್ಯ ಲೋಕದ ವಯಸ್ಸಿಗೆ ಮೀರಿದ ಪ್ರತಿಭೆ,)



ಮಧುರಚೆನ್ನ: ಕಂಡರಿಯದ ಪ್ರಿಯತಮನನ್ನು ಹುಡುಕಿಕೊಂಡು ಹೋಗುವ ವಸ್ತುವಿಷಯದನನ್ನ ನಲ್ಲಬರಿದೇ ಕ್ಯಾಚೀ ಟೈಟಲ್ (ಪುರುಷ ಕವಿ ಬರೆದ!) ಅಲ್ಲ; ಕನ್ನಡ ಸಾಹಿತ್ಯ ಲೋಕದ ವಯಸ್ಸಿಗೆ ಮೀರಿದ ಪ್ರತಿಭೆ, “ಮಧುರ ಚೆನ್ನ ಅನುಭಾವಿ ಕವಿತೆ. ಜೀವಿತದ ಕೇವಲ ನಲವತ್ತೊಂಬತ್ತು ವರುಷಗಳಲ್ಲಿ ಆತ್ಮಶೋಧನೆ, ಸಾಮಾಜಿಕ ಜಾಗೃತಿ, ಸಾಂಸ್ಕೃತಿಕ ಚಟುವಟಿಕೆಗಳು (ಅವರು ಕಟ್ಟಿದ ಹಲಸಂಗಿ ಗೆಳೆಯರ ಗುಂಪು ಸಾಕಷ್ಟು ಪ್ರಸಿದ್ಧಿ ಗಳಿಸಿತು) ಉದ್ಯಮಶೀಲತೆಎಲ್ಲವನ್ನೂ ಮಾಡಿ ಮುಗಿಸಿದ ಗಲಗಲಿ ಚನ್ನಮಲ್ಲಪ್ಪ (ಜನನ: ೧೯೦೩) ತಮ್ಮ ಕ್ಯಾಚೀ ಕಾವ್ಯನಾಮದಿಂದಲೂ ಸೆಳೆಯುತ್ತಾರೆ. ಶರಣೆ ಅಕ್ಕ ಮಹಾದೇವಿಯಿಂದ ದೇವ / ದೈವ ಚೆನ್ನಮಲ್ಲಕಾರ್ಜುನನನ್ನುನಲ್ಲನನ್ನಾಗಿ ಮಾಡಿಕೊಳ್ಳುವ ಪರಿಕಲ್ಪನೆಯನ್ನು ಹದಿಮೂರರ ಹದಿ ವಯಸ್ಸಿನಲ್ಲಿಯೇ ಕಡ ಪಡೆದು (ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು / ನನ್ನ ನಲ್ಲನ ಕತೆಗೆ ಮರುಳುಗೊಂಡೆ / ಇನ್ನೇನು ಹೇಳುವೆನು ಇಂದಿಗಿಪ್ಪತ್ತಾರು / ಈಸೊಂದು ದಿನಕೊರಗಿ ಗೊತ್ತುಗಂಡೆ) ಮುಂದುವರಿಸುವ ಮಧುರ ಚೆನ್ನರ ನೀಳ್ಗವನದಲ್ಲಿ ದೇವಪ್ರಜ್ಞೆಯ ಹುಡುಕಾಟ, ನಲ್ಲನ ಶೋಧನೆ, ಪ್ರಕೃತಿಯಲ್ಲಿನ ಹುಡುಕಾಟ ಮೊದಲ ಮೂರು ಭಾಗಗಳಲ್ಲಿ ಕ್ರಮವಾಗಿ ಬೆಳೆದು ದಿವ್ಯಾನುಭವವಾಗಿ ನಾಲ್ಕನೆಯ ಭಾಗದಲ್ಲಿ ಸಾರ್ಥಕಗೊಳ್ಳುತ್ತದೆ. ಸಮೃದ್ಧ ಪ್ರತಿಮೆಗಳ, ಒಡಪುಗಳ ಭಂಡಾರದಂತಿರುವ ಹಾಗೂ ಇಂದ್ರಿಯಾತ್ಮಕವಾದ ಅನುಭಾವ ಕಾವ್ಯ ಪರಂಪರೆಗೆ ಸಲ್ಲುವ ರೀತಿಯಲ್ಲಿ ಅನ್ವೇಷಣೆಯನ್ನು ಪ್ರತಿಮೆಗಳ ಮೂಲಕ ಹಿಡಿದಿಡುವ ಕವಿ ಅದರ ಫಲವನ್ನು ಮಾತ್ರ ವಿಸ್ತರಿಸಿ, ಸರಳೀಕರಿಸಿ ಹೇಳುತ್ತಾರೆ ಎಂಬ ಅಭಿಪ್ರಾಯವಿದೆ: ಬುದ್ಧಿ ಭಾವದ ಸೀಮೆ ಇಲ್ಲಿಗಾಯಿತಯ್ಯ / ಮುಂದೆ ದೇವನ ದಿವ್ಯ ರಾಜ್ಯವಯ್ಯ / ಇದಷ್ಟು ಹೆಮ್ಮೆಯಲ್ಲ ಹೆಣ್ಣು ಹಣ್ಣಾಗುತ್ತಲೇ / ಕೈ ಮುಗಿದು ಶರಣು ಶರಣೆಂಬುದಯ್ಯ. ಪರಮ ಸ್ಥಿತಿಯನ್ನು, ಕಾಣ್ಕೆಯನ್ನು ಮಾತಾಗಿಸುವುದು ಕಷ್ಟ ಎಂಬ ಎಂದಿನ ಕಾರಣ ಇದರ ಹಿಂದೆ ಇದ್ದೇಇದೆ.
ಆದರೂ ಅನುಭಾವ ಕಾವ್ಯವನ್ನು ತೀರ ಪ್ರತಿಮಾರೂಢವಾಗಿಸದೆ, ಸುಳಿವು ಬಿಟ್ಟುಕೊಡದಷ್ಟು ಸೂಚ್ಯವಾಗಿಸದೆ ಹಾಗೆಯೇ ವಾಚ್ಯವೂ ಆಗಿಸದೆ, ಆತ್ಮಯಾತ್ರೆಯ ಸ್ವಗತವಾಗಿಸದೆ ಕೆಲ ಮೂಲಭೂತ ಹಾಗೂ ಕೆಲ ಸ್ವಂತ ಅನ್ವೇಷಣೆಯ ನಿಖರ ದ್ವಂದ್ವಗಳಲ್ಲಿ ನಿರ್ವಹಿಸುತ್ತಾರೆ ಎನ್ನುವುದು ವಿಮರ್ಶಕರು ಹೇಳುವ ಮಧುರಚೆನ್ನರ ಹೆಚ್ಚುಗಾರಿಕೆ. ಕತ್ತಲೆಬೆಳಕು, ನಿದ್ದೆಎಚ್ಚರ, ಮೊಲೆಹಾಲುಮನದ್ಹಾಲು ಅವುಗಳಲ್ಲಿ ಕೆಲವು. (ಇದೇ ವಸ್ತು ಕುರಿತಂತೆ ತಮ್ಮ ಸ್ವಂತ ದ್ವಂದ್ವಗಳನ್ನು ನಿರ್ಮಿಸಿ ಗಮನ ಸೆಳೆದ ಬೇಂದ್ರೆಯವರು ಮಧುರಚೆನ್ನರ ಕುರಿತು ಬಹಳ ಭರವಸೆ ಹೊಂದಿದ್ದರು; ಅವರ ಕಾವ್ಯ ವಿಕಾಸವನ್ನು ಆಸ್ಥೆಯಿಂದ ಗಮನಿಸುತ್ತಿದ್ದರು ಎಂಬ ವಿವರ ಇಲ್ಲಿ ಪ್ರಾಸಂಗಿಕವಾಗಿ ನೆನಪಾಗುತ್ತಿದೆ.) “ದೇಹದಲ್ಲಿ ಜೀವನಿರುವ ರೀತಿಯಲ್ಲಿ ಜಗದಲ್ಲಿ ದೇವನಿರಬಹುದುಎಂದು ಅವರ ಗ್ರಹಿಕೆ ಏಕ ಕಾಲದಲ್ಲಿ ಮೂರ್ತ ಮತ್ತು ಅಮೂರ್ತವಾಗಿ ಹೊಳೆಯುವುದು ಅವರ ಸೃಜನಶೀಲ ಪ್ರತಿಮಾನಿರ್ಮಾಣಕ್ಕೆ ಸಾಕ್ಷಿ.
ಮುಗ್ಧತೆಯನ್ನು ಕಳೆದುಕೊಳ್ಳುವ, ಅರಿವನ್ನು ಪಡೆಯುವ ಕೇಂದ್ರ ವಸ್ತುಗಳನ್ನೂ ಅವರು ನಿರ್ವಹಿಸಿದ್ದಾರೆ. ( ಬಿಂದುವಿನಲ್ಲಿ ತಕ್ಷಣ ನೆನಪಾಗುವುದು ವಿಲಿಯಂ ಬ್ಲೇಕ್ ಕವಿಯಸಾಂಗ್ಸ್ ಆಫ್ ಇನ್ನೊಸೆನ್ಸ್ಮತ್ತುಸಾಂಗ್ಸ್ ಆಫ್ ಎಕ್ಸ್ಪೀರಿಯೆನ್ಸ್”. ಆದರೆ ಇಬ್ಬರು ಪ್ರತಿಭಾವಂತರ ಲೋಕ ಅಥವಾ ಅನುಭಾವ ಲೋಕ ದೃಷ್ಟಿ ಎಷ್ಟು ಸಂವಾದಿಯಾಗಿದೆ ಎನ್ನುವುದು ಇನ್ನೂ ಅಧ್ಯಯನಕ್ಕೊಳಬೇಕಾದ ಆಸಕ್ತಿಕರ ವಿಷಯ) ಚಿರಪರಿಚಿತ ಧ್ರುವನ ಕತೆಯನ್ನೂ ಚೌಕಟ್ಟಿಗೆ ಒಗ್ಗಿಸಿ ಅವರು ಪದ್ಯ ಹೆಣೆದಿರುವ ಪರಿ ಕುತೂಹಲ ಕೆರಳಿಸುವಂಥದು: ಧ್ರುವ ಕಳೆದುಹೋಗುವುದು ಮುಗ್ಧತೆ ಕಳೆದುಹೋಗುವುದರ ಸಂಕೇತವಾಗಿ ಬಳಕೆಯಾದರೆ ನಿದ್ದೆ ಕಳೆದು ಎಚ್ಚರಾಗುವ ಸುನೀತಿಗೆ ಎಲ್ಲೆಲ್ಲೂ ಮಗನೇ ಕಾಣುವುದು ಅರಸುವಿಕೆಯ ನಂತರ ಅಸ್ಪಷ್ಟವಾಗುವ ಜಾಗೃತ ಸ್ಥಿತಿಯ ಸಂಕೇತವಾಗಿ ಬರುತ್ತದೆ. ಹತ್ತೂ ನಿಟ್ಟಿಗೆ / ಹೊತ್ತಿಸಿ ಉರಿಯನು / ನಿತ್ತೆನು ನಾ ಕಿತ್ತಡಿಯಾಗಿ / ಹತ್ತೂ ನಿಟ್ಟಿಗೆ / ಹೊತ್ತಿಸಿ ಉರಿಯನು / ಕುತ್ತೆನು ನಾ ಮಾಸತಿಯಾಗಿ ಎಂದು ಹೆಣ್ಣು ಉಗ್ರ ತಪೋನಿರತಳಾಗುವುದು ಆಕೆಯ ಗುರಿಯಾದ ಅನುಭಾವಿಕ ಸ್ಥಿತಿ ಸಾಕಷ್ಟು ಶಕ್ತಿಯುತ ಎನ್ನುವುದನ್ನು ಹಾಗೂ ಗಗನಪೃಥ್ವಿ ಒಂದಾಗುವ ಹೊತ್ತನ್ನು ಸಹಿಸಿಕೊಳ್ಳುವುದು ಸಾಕಷ್ಟು ಕಷ್ಟ ಎನ್ನುವುದನ್ನು ಬಿಂಬಿಸುತ್ತದೆ.
ಮಧುರಚೆನ್ನರ ಅನುಭಾವ ಶೋಧದ ಇನ್ನೊಂದು ಆಯಾಮವನ್ನು ಚಿತ್ರಿಸುವ ಕವನದೇವತಾ ಪೃಥ್ವಿ”. ಇಲ್ಲಿ ತಾಯಿ ಮಲಗಿದ್ದಾಳೆ. ಅವಳನ್ನು ಎಬ್ಬಿಸುತ್ತಿರುವ ಮಗನಿಗೆ ದೈಹಿಕ ಹಸಿವನ್ನು ನೀಗಿಸುವ ಮೊಲೆಹಾಲು ಬೇಕಿಲ್ಲ; ಮಾನಸಿಕ ಹಸಿವೆಯನ್ನು ನೀಗಿಸುವ ಮನದ್ಹಾಲು ಬೇಕಾಗಿದೆ. ಸ್ವಲ್ಪ ಸಮಯ ಪ್ರಯತ್ನಿಸಿದ ನಂತರ ತಾಯಿ ಮಲಗಿರುವುದು ನಿದ್ದೆಯಿಂದಲೋ ಅಥವಾ ಸಾವಿನಿಂದಲೋ ಎಂಬ ಭಯಸಂದಿಗ್ಧಗಳನ್ನೂ ಅವನು ಎದುರಿಸುತ್ತಾನೆ. ತಾಯಿ ಏಳುತ್ತಾಳೆ ಎಂಬ ಸಮಾಧಾನದಿಂದ ಮಾತ್ರ ಕೊನೆಯಾಗುವ ಕವಿತೆಯಲ್ಲಿ ಭಾರತ ಮಾತೆಯನ್ನು ಎಬ್ಬಿಸುವ ಆಶಯವೂ ಇದೆ ಎಂದು ವಿಮರ್ಶಕರು ಅರ್ಥೈಸುವುದು ಅಂಬಿಕಾತನಯದತ್ತರ ಕೆಲ ರಚನೆಗಳನ್ನು ನೆನಪಿಸಿದರೆ ಆಶ್ಚರ್ಯವಿಲ್ಲ.
ದೈವನಿರ್ವಾಣಗಳ ಅನುಭಾವಿ ಜಗತ್ತಿನಲ್ಲಿ ಕೆಡುಕಿನ ಜಿಜ್ಞಾಸೆಯನ್ನೂ ಅವರು ಮಾಡುತ್ತಾರೆ. ದೇವನ ಪ್ರೀತಿಯಿಂದ ಗಳಿಸಿಕೊಳ್ಳುವಎಚ್ಚರದಿಂದಲೇ ಕೆಡುಕನ್ನು ಜಯಿಸಲು ಸಾಧ್ಯ ಎಂಬ ನಿರ್ಣಯ ತಲುಪುತ್ತಾರೆ. ಒಳ ಹೊರಗ ನಮಗ ಹಿರಿಹಿಗ್ಗ ಆಗುವಸ್ಥಿತಿಯಲ್ಲಿ / ಮೂರ್ಹೆಜ್ಜೆ ದಾಟಿದರೆ ಮುಂದಲ್ಲೆ ಗುಡಿಸಲವ / ಅಲ್ಲಿ ಮುನಿಗೋಳ ಅರಸೋತಿಗೆ / ತಂಗಮ್ಮ / ಅವರಂಥ ಸುಖವ ಅರಸರಿಯ ಸಾಲುಗಳಲ್ಲಿ ಇಂತಹ ಕೋಟಿರೂಪಾಯಿಯ ಆತ್ಯಂತಿಕ ಸ್ಥಿತಿಯನ್ನೂ ಸೀಮಿತವಾಗಿಸಿಕೊಳ್ಳುವ ಸಂಯಮ, ಆತ್ಮಸಂತೃಪ್ತಿ ಕಾಣುತ್ತದೆ. ಹಾಗೆಕನ್ನಡಿಯೊಳಗೆಷ್ಟು ಕಂಡೀತು ಕನಕಾಚಲವು, ಕೊಡಕೆ ಹಿಡಿದೀತೆಷ್ಟು ಕಡಲ ನೀರುಎಂದು ಇಂತಹ ಅನ್ವೇಷಣೆಯನ್ನೂ ಸವಿನಯಪೂರ್ವಕವಾಗಿ ಮಾಡುವ ಅವರ ಇಂಗಿತ ಮಹೋನ್ನತವಾಗಿದೆ. ಕ್ರೈಸ್ತಧರ್ಮ ಭಾರತದ ಹಳ್ಳಿಗಳಲ್ಲಿ ತಳವೂರುತ್ತಿದ್ದ ಕಾಲದಲ್ಲಿ ಏಸು ಪ್ರಭುವಿನ ಸುತ್ತ ಸಹ ಅವರ ಕೆಲ ಕವಿತೆಗಳು ಕೇಂದ್ರೀಕೃತವಾಗಿವೆ ಮತ್ತು ಮೂಲಕ ಅನುಭಾವಿ ಕಾವ್ಯಕ್ಕೆ ಅಂಟಿಕೊಂಡಿರುವ ಮತಧರ್ಮಗಳ ಧೂಳನ್ನು ಕೊಡವಿಕೊಂಡು ಧರ್ಮ ನಿರಪೇಕ್ಷವಾಗಿವೆ ಎಂಬುದು ಹೊಸ ಕಾಲದ ಓದುಗರಿಗೆ ಅವರನ್ನು ಆಪ್ತರಾಗಿಸುವ ಒಂದು ಅಂಶ.

No comments:

Post a Comment