ಅಪಾರ ಪ್ರತಿಭೆಯ ಅಂಬಿಕಾತನಯದತ್ತ (೧೮೯೬) ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಸ್ತಿ ತಂದುಕೊಟ್ಟ ಮೇರು ಕವಿ. ಸುಮಾರು ೨೦೦೦ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿರುವ ಈ ಧೀಮಂತ ಯುಗದ ಕವಿ, ಜಗದ ಕವಿ, ವಿಶ್ವದ ಅಗ್ರಮಾನ್ಯ ಕವಿಗಳಲ್ಲಿ ಒಬ್ಬರಾಗುವ ಎಲ್ಲ ಅರ್ಹತೆ ಪಡೆದುಕೊಂಡಿದ್ದಾರೆ ಎಂಬುದು ಅವರನ್ನು ಪದೇಪದೆ, ಮತ್ತೆ ಮತ್ತೆ, ಒಂದು ಗೀಳಾಗಿ ಮಾಡಿಕೊಂಡು ಓದುವ “ಕಾವ್ಯ ಪರಿಣತ ಮತಿ”ಗಳ ಮನವರಿಕೆ. ಕೃಷ್ಣಾಕುಮಾರಿ, ಗರಿ, ಮೂರ್ತಿ, ಕಾಮಕಸ್ತೂರಿ, ಸಖೀಗೀತ, ನಾದಲೀಲೆ, ಉಯ್ಯಾಲೆ, ಮೇಘದೂತ (ಕಾಳಿದಾಸನ ಸಂಸ್ಕೃತ ಮೂಲಕೃತಿಯ ಅನುವಾದ), ಹಾಡು-ಪಾಡು ಮತ್ತು ಗಂಗಾವತರಣ ಅವರ ಮುಖ್ಯ ಕವನ ಸಂಗ್ರಹಗಳು. ಕವಿವರ್ಯರು ಅರುವತ್ತು ವರ್ಷ ಪೂರೈಸಿದಾಗ ಕೊನೆಯ ಐದು ಸಂಕಲನಗಳಾದ ಸೂರ್ಯಪಾನ, ಹೃದಯಸಮುದ್ರ, ಮುಕ್ತಕಂಠ, ಚೈತ್ಯಾಲಯ ಜೀವಲಹರಿಗಳನ್ನು ಒಟ್ಟಿಗೆ ತಂದು ಅರಳು ಮರಳು ಎಂಬ ಕೃತಿಯನ್ನು ಹೊರತರಲಾಯಿತು.
ಇಡೀ ವಿಶ್ವವನ್ನು ಒಂದು ತತ್ತ್ವ ಎಂದು ಪರಿಗಣಿಸಿ, ಸೃಷ್ಟಿಯನ್ನೇ ಒಂದು ದೃಷ್ಟಿ ಎಂದು ಪರಿಭಾವಿಸಿ ಅವರ ನೂರಾರು ಕವಿತೆಗಳು ರಚಿತವಾಗಿದೆ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಪ್ರಕೃತಿಯನ್ನು ಮನುಷ್ಯ ಅರ್ಥಮಾಡಿಕೊಳ್ಳುವ ರೀತಿಯನ್ನೇ ಬದಲಿಸಿದವರು, ಈ ಮುಖ್ಯ ಆಶಯವನ್ನು ಅವರ ಎಲ್ಲ ಕವಿತೆಗಳಲ್ಲೂ ಕಾಣಬಹುದು ಎನ್ನುವ ಗ್ರಹಿಕೆಯೂ ಇದೆ. ಆರಂಭ ಕಾಲದ “ಪ್ರಳಯ ಸೃಷ್ಟಿ” ಯ ಕೆಲ ಸಾಲುಗಳು ಮೇಲಿನ ಹೇಳಿಕೆಗಳನ್ನು ಸ್ವಲ್ಪ ತಿಳಿಗೊಳಿಸಬಹುದೇ ಎಂದು ನೋಡೋಣ: ವಿಶ್ವ ಅಥವಾ ಸೃಷ್ಟಿಯ ಉಗಮ ಯಾವುದೋ ಒಂದು ಗಳಿಗೆಯಲ್ಲಿ ಘಟಿಸಿದ ವಿದ್ಯಮಾನ; ಈ “ಹುಟ್ಟಿ”ಗೊಂದು “ಸಾವೂ” ಇದೆ, ಅದೂ ಕೂಡ ಕಾಲದ ಯಾವುದೋ ಒಂದು ಬಿಂದುವಿನಲ್ಲಿ ಘಟಿಸುವ ವಿದ್ಯಮಾನ ಎನ್ನುವ ಸರ್ವಮಾನ್ಯ ಗ್ರಹಿಕೆ ಇದೆ. ಅzನ್ನು ಪ್ರಳಯ ಎಂದೂ ಕರೆಯುತ್ತೇವೆ. ಆದರೆ ಬೇಂದ್ರೆಯವರ ಕಾಣ್ಕೆ ಏನೆಂದರೆ, “ಪ್ರತಿಕ್ಷಣವೂ ಪ್ರಳಯವಿದೆ, ಅದನ್ನು ಬೆಂಬತ್ತಿ ಸೃಷ್ಟಿಯಾಗುತ್ತಿದೆ. ಈ ದಿ “ಪ್ರಳಯ”ವಾಗದೇ ನಾಳೆ ಎಂಬುದು “ಸೃಷ್ಟಿ”ಯಾಗುವುದಿಲ್ಲ. “ಹೊಗೆಮೋಡ ಹಿಂಜಿ ಕಣ್ಮರೆಯಾಗುವಂತೆ ನೆನೆ/ಸಿದ ರೂಪ ಹುಡಿಯಾಗುತಿದೆ- ಮಬ್ಬು ಕವಿದು ಬರು/ತಿದೆ ಸ್ವಪ್ನಲೋಕದೊಳು ಆಕಾರಪ್ರಳಯವಿರು/ವಂತೆ” ಎನ್ನುತ್ತಾರೆ ಅವರು. ಸ್ವಪ್ನದಲ್ಲಿ ಏನೋ ಆಕಾರ…ಮರುಗಳಿಗೆಯೇ ಅದು ಪ್ರಳಯವಾಗುತ್ತಿರುತ್ತದೆ…ಹಾಗಿದ್ದೂ ಸ್ವಪ್ನ ಮುಂದುವರಿಯುತ್ತಿರುತ್ತದೆ…ಅದೂ ಮತ್ತೆ ಪ್ರಳಯವಾಗುತ್ತಿರುತ್ತದೆ. ಬೆಳಗಾಗೆದ್ದು ಸ್ವಪ್ನವನ್ನು ನೆನೆಸಿಕೊಂಡಾಗ ಅದು ಮತ್ತೆ ರೂಪು ಪಡೆಯುತ್ತದೆ…ಅದೂ ಮತ್ತೆ ಪ್ರಳಯವಾಗುತ್ತದೆ. “ತುಂಬಿದ ನಿರಾಕಾರ ತಮ ಚಿತ್ತಘನ/ನಿಬಿಡ ವನ ಹೊತ್ತುಗೊತ್ತಿಲ್ಲ ಮಿಸುಗುಡದೆ ಮನ/ತನ್ನ ನುಂಗಿದೆ ತಾನು ಯಾವ ಲೋಕವೊ ಇದು/ಸೃಷ್ಟಿಯಿಲ್ಲದ ದೃಷ್ಟಿ ಚಿತ್ರ ನಿಶ್ಚಿತ್ರ ಇರು/ವೆನೋ ನಾನು, ಇಹುದೇನು? ಬರಿಬಯಲ ನಿರ್ವಚನ” ಅಂದರೆ “ಕ್ಷಣದ ಲಯದೊಂದಿಗೆ ಕ್ಷಣದ ಉದಯ. ನಾನು ಕಂಡ ರೂಪ ಲಯವಾಗಿ ಮತ್ತೊಂದು ಕಾಣುತ್ತಿದ್ದೇನೆಯೇ ವಿನಃ ಅಖಂಡವಾದ ಕಾಣುವಿಕೆ ಇಲ್ಲಿ ಇಲ್ಲ.” ಕ್ಲಿಷ್ಟ ತತ್ತ್ವಶಾಸ್ತ್ರೀಯ ಸೂತ್ರಗಳನ್ನು ಹೀಗೆ ಕವಿತೆಯಾಗಿ ಮಾರ್ಪಡಿಸಲು ಅವರಿಗೆ ವ್ಯಾಪಕ ಓದಿನ/ಪಾಂಡಿತ್ಯದ ಹಿನ್ನೆಲೆ ಇತ್ತು.
ಮಾತೃಶಕ್ತಿ-ಮಾತೃ ಪರಂಪರೆಯ ಉಪಾಸಕರಾಗಿ ಕೂಡ ಕವಿ ಬೇಂದ್ರೆ ಸಾಮಾನ್ಯರ ಸಾಮಾನ್ಯ ಗ್ರಹಿಕೆಗಳನ್ನು ಪಲ್ಲಟಗೊಳಿಸುತ್ತಾರೆ. ಅವರ ತಾಯಿಯ ಹೆಸರು ಅಂಬವ್ವ…ತಮ್ಮನ್ನು ತಾವು “ಅಂಬೆಯ ಪುತ್ರ” ಎಂದು ಕರೆದುಕೊಂಡರು. ಈ ಅಂಬೆ ಒಂದು ಅಲೌಕಿಕ ಶಕ್ತಿ, ಸೃಷ್ಟಿಯ ವಿರಾಟ್ಸ್ವರೂಪವೂ ಹೌದು. ಭಾರತೀಯ ಸಂಸ್ಕೃತಿಯ ಮೂಲದಲ್ಲಿರುವುದು ಪ್ರಜ್ಞೆ ಮತ್ತು ಪರಿಸರದ ತಾದಾತ್ಮ್ಯ. ಆತ್ಮವೂ ಪರಮಾತ್ಮದ ಅಂಶವೆನ್ನುವ ತಾತ್ತ್ವಿಕತೆಯನ್ನು ಪ್ರತಿಪಾದಿಸುವ ನಾವು ಪ್ರಜ್ಞೆ, ಅಲೌಕಿಕ ಸತ್ಯ (ಪರಮಾತ್ಮ)ವೊಂದರಲ್ಲಿ ಲೀನವಾಗುವುದೇ ಸಾರ್ಥಕತೆಯ ಕೊನೆಯ ಮಜಲೆಂದು(ಮೋಕ್ಷ) ನಂಬುತ್ತೇವೆ. ಹಾಗೆಯೇ ಮಾತೃಶಕ್ತಿಯ ತಾತ್ತ್ವಿಕತೆ, ಹೊಕ್ಕುಳಬಳ್ಳಿ ತುಂಡರಿಸಿ ವ್ಯಕ್ತಿಯ ಪ್ರಜ್ಞೆ ಬೇರೆಯಾದ ಮೇಲೆ ಕೂಡ ತಾಯಿಯ ಶಕ್ತಿಯೊಂದಿಗೆ ಒಂದಾಗುವ ಪ್ರವೃತ್ತಿಯೇ ಮುಖ್ಯವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ಇದನ್ನು ಶುದ್ಧ ದೇಸಿಗನ್ನಡದಲ್ಲಿ “ಎದ್ದಾಗ ಏನು ಇನ್ನು/ ನಿದ್ಯಾಗ ಕೂಡ ನಿನ್ನ/ ಮಿಡುಕಾಡಿ ಬಗೆಯ ಬಾಯಿ/ ಹುಡಕಾಡತಾವ ತಾಯಿ” ಎಂದು ಸೆರೆಹಿಡಿಯುತ್ತಾರೆ, ಅವರು! ಅಷ್ಟೇ ಅಲ್ಲ ಕಾವ್ಯಸೃಷ್ಟಿಯೂ ತಾಯಿಯ ಹುಡುಕಾಟವೇ. ಅದು ದೊರೆತಾಗ, ಇನ್ನೊಂದು ಬಗೆಯ “ಸೃಷ್ಟಿ”ಯಾದ ಕಾವ್ಯ ಹುಟ್ಟುತ್ತದೆ. ಲೋಕದ “ಪಾಡನ್ನು” ಹಾಡಾಗಿ ಕಟ್ಟಹೊರಡುವ ಕವಿಯ ಭಾವಜೀವನವೂ ತಾಯಿಯಿಂದಲೇ ಹದಗೊಂಡಿದ್ದು. “ಅಕ್ಕ-ತಂಗಿ-ತಾಯಿ-ಹಡೆದ ತಾಯಿ-ಕನ್ನಿ-ಗೆಳತಿ-ಮಡದಿ-ಸಾಕುದಾಯಿ-ದಾಯಿ-ಜೋಡೆ-ಸೂಳೆ-ಮತ್ತೆ ಮಾಯಿ-ವಿಧಿಮಾಯಿ” ಎಲ್ಲರೂ ಕವಿಯ ಭಾವಶಕ್ತಿ ಬೆಳವಣಿಗೆಗೆ ನಿಮಿತ್ತರಾಗುತ್ತಾರೆ.
೧೯೩೨ರಲ್ಲಿ ರಚಿತವಾದ ಅವರ ಉಜ್ವಲ ಸೃಷ್ಟಿ “ಸಖೀಗೀತ”ದ ಕುರಿತು ಈ ಆಯಕಟ್ಟಿನಲ್ಲಿ ಪ್ರಸ್ತಾಪಿಸುವುದು ಅತ್ಯಂತ ಯುಕ್ತ. ಭಾರತೀಯ ಸಂದರ್ಭದಲ್ಲಿ ಮದುವೆಯ ಮೂಲಕ ತನಗೆ ದತ್ತವಾಗಿ ಬಂದ ಹೆಣ್ಣನ್ನು, ಗಂಡು, ಇಡೀ ಜೀವನ ಪೂರ್ತಿ ಸಖಿಯಾಗಿಸುವ ಪ್ರಕ್ರಿಯೆಯಲ್ಲಿ ತೊಡಗುವುದೇ ಸಖೀಗೀತದ ವಸ್ತು. “ಸಾಕ್ಷಿಯಾಗುತ ಪುರುಷ ಈಕ್ಷಿಸಬಹುದೆಮ್ಮ/ ಅಕ್ಷಿನಿಮೀಲನದೆದೆಮರಳು/ ಪ್ರಿಯಳ ಸಮಾಗಮ ನಿಮಗೊಂದು ನೋಟವು/ ನಮಗದು ಸಮರಸ ಸಂಗಮವು/ ನಿಮಗೇನು ರಮ್ಯತೆ ರಸಿಕಗೆ ಕರೆಯುವ/ ನೂರು ಹಾದಿಯಲ್ಲೊಂದು ಅದು ಹಾದಿಯು/ ನಮಗೆ ಜೀವನದಾಟ-ಪಾಟದ ನೋಟದ/ ಬೇಟದ ಕೂಟದ ಸುಸಮಾಧಿಯು” ಎಂದು ಇನ್ಡೈರೆಕ್ಟಾಗಿ ಗಂಡನ್ನು ಚುಚ್ಚುವ, ತನ್ನ ಬಗ್ಗೆ ಬಹಳ ಸ್ಪಷ್ಟವಾಗಿರುವ ಹೆಣ್ಣೂ ಇಲ್ಲಿರುವುದರಿಂದ ದಾಂಪತ್ಯದ ಸಮತೂಕ ಸ್ಥಿತಿಯನ್ನು ಅದು ಬಿಂಬಿಸುತ್ತಿದೆ ಎನ್ನಬಹುದು. ಪಾಶ್ಚಾತ್ಯರ “ಲವ್” ಅಂದರೆ ವಿವಾಹ ಪೂರ್ವ ಪ್ರೇಮ, ಮದುವೆಗೆ ಮುನ್ನ ಒಟ್ಟಾಗಿ ಒಂದಷ್ಟು ಕಾಲ ಜೀವಿಸಿ ಎಲ್ಲ ತರದ ಹೊಂದಾಣಿಕೆಯಿದೆಯೇ ಎಂದು ಪರೀಕ್ಷಿಸಿಕೊಳ್ಳುವ “ಲಿವ್ ಇನ್ ರಿಲೇಷನ್ಷಿಪ್” ಆಗಿ (ಪಾಶ್ಚಾತ್ಯ-ಪೌರ್ವಾತ್ಯ ರಾಷ್ಟ್ರಗಳೆರಡರಲ್ಲೂ) ಮುಂದುವರಿದಿರುವ ಈ ಯುಗಕ್ಕೆ ಒಂದು ವೈರುಧ್ಯವಾಗಿ ನಿಲ್ಲುವ “ಸಖೀಗೀತ”ದ ಒಲವು-ದಾಂಪತ್ಯ ಕುರಿತ ಒಟ್ಟು ತಾತ್ತ್ವಿಕತೆ ಎಂದರೆ “ಗಂಡು-ಹೆಣ್ಣು ಮದುವೆಯಾದ ತಕ್ಷಣ ಗಂಡ-ಹೆಂಡತಿಯಾಗಬಹುದು, ಆದರೆ ಪ್ರೇಮಿಗಳಾಗುವುದಿಲ್ಲ…ಹಾಗಾಗಿ ವಿವಾಹ ಬಂಧನದಲ್ಲಿ ಒಂದಾದ ಈ ಗಂಡು-ಹೆಣ್ಣು ನಿರಂತರವಾಗಿ ಒಲವನ್ನು ಸಾಧಿಸಬೇಕು…ಇಬ್ಬರೂ ಕೂಡಿ ಸಾಧಿಸಬೇಕು. ಹಾಗೂ ಪ್ರೇಮವೆಂಬದು ಸಿದ್ಧ ಸ್ಥಿತಿಯಲ್ಲವಾದ್ದರಿಂದ ನಿರಂತರವಾಗಿ ಅದನ್ನು ಸಾಧಿಸುತ್ತಲೇ ಇರಬೇಕು. (ಈಗಿನ ಆಪ್ತಸಲಹಾಕಾರರ ಮಾತಲ್ಲಿ “ಮೇಕಿಂಗ್ ಎ ರಿಲೇಷನ್ಷಿಪ್ ವರ್ಕ್!) ಇದುವೇ ಅರ್ಥಪೂರ್ಣವಾದ ಜೀವನಕ್ರಮ.”
ಬೇಂದ್ರೆಯವರ ಜನಪ್ರಿಯಗೊಂಡ ಕೆಲ ಗೀತೆಗಳನ್ನಷ್ಟೇ ಬಲ್ಲವರಿಗೆ ಈ ಎಲ್ಲ ಸಂಕೀರ್ಣತೆ, ಸಂಪೂರ್ಣ ಹೊಸ ಲೋಕವಾಗಿ, ತಲೆ ತಿರುಗಿಸುವಷ್ಟು ಜಟಿಲವಾಗಿ ತೋರಬಹುದು. ಅವುಗಳನ್ನೆಲ್ಲ ಹೃದ್ಗತ ಮಾಡಿಕೊಳ್ಳುವುದು ದೂರದ ಮಾತೇ ಆದರೂ ಇಂಥ ಸಂಕೀರ್ಣತೆ ಅಲ್ಲಿದೆ ಎಂಬ ಪ್ರಾಥಮಿಕ ಮಾಹಿತಿ ತಿಳಿದಿರುವುದು ಎಲ್ಲ ಕಾವ್ಯಾಸಕ್ತರಿಗೆ ಕಡ್ಡಾಯ. ಉದ್ಗ್ರಂಥಗಳೇ ಅವರ ಒಟ್ಟು ಕಾವ್ಯದ ಬಗ್ಗೆ ಬರೆಯಲ್ಪಟ್ಟಿವೆ. ಹಂತ ಹಂತವಾಗಿ ಅವನ್ನು ಅಭ್ಯಸಿಸುವ ಮೂಲಕ ಈ ಮಹಾನ್ ಪ್ರತಿಭೆಯನ್ನು ಕಿಂಚಿತ್ ಆದರೂ ತಿಳಿಯುವ ಪ್ರಾಮಾಣಿಕ ಪ್ರಯತ್ನ ಮಾಡುವುದು ಅಪೇಕ್ಷಣೀಯ. ಇನ್ನೊಂದು ಕೊನೆಯಲ್ಲಿ ಅವರು, ಜನಸಾಮಾನ್ಯರ ಜೀವನವನ್ನೇ, ಅವರ ದುಃಖ-ದುಮ್ಮಾನ, ನೋವು-ನಲಿವುಗಳನ್ನೇ ಕಾವ್ಯವಾಗಿಸಿದರು; ಕನ್ನಡ ಜನಜೀವನದ ಭಾವನೆಗಳನ್ನು ಸಮರ್ಥವಾಗಿ ಪದ್ಯಕ್ಕಿಳಿಸಿದರು ಎನ್ನುವ ಗ್ರಹಿಕೆ ಇದೆ. ಸುಪ್ರಸಿದ್ಧ ಕುರುಡು ಕಾಂಚಾಣ, ಕುಣಿಯೋಣು ಬಾರಾ, ಹುಬ್ಬಳಿಯಾಂವಾ ನೆನೆಸಿಕೊಂಡರೆ ಈ ಮಾತು ಹೆಚ್ಚು ಸ್ಪಷ್ಟವಾಗಬದು. ದಿನನಿತ್ಯದ ಬದುಕಿನೊಳಗೆ ಹುದುಗಿರುವ ಸಾವು, ಹತ್ತಿರದ ಸಂಬಂಧದಲ್ಲಿ ಹಟಾತ್ತಾಗಿ ಬಂದೆರಗುವ ಸಾವು, ಸಾವಿನ ಸಂದರ್ಭದ ವಿಲಕ್ಷಣ ಆಚರಣೆಗಳು (ಒಂದು ಸಂಸ್ಕೃತಿಯ ಜನ ಲಕ್ಷ್ಮೀ ಪೂಜೆಯಲ್ಲಿ ತೊಡಗಿರುವಾಗ ಬಾಣಂತಿ/ಎಳೆ ಕೂಸಿನ ಎಲುಬುಗಳನ್ನು ಹಿಡಿದು ಕುಣಿಯುವ ಪ್ರಸ್ತಾಪಕುರುಡು ಕಾಂಚಾಣದಲ್ಲಿ ಬರುತ್ತದೆ) ಎಲ್ಲವನ್ನೂ ಹೇಗೆ ಅವರ ಪದ್ಯಗಳು ಒಳಗೊಂಡಿವೆ ಎನ್ನುವುದು ಗಮನಿಸಬೇಕು. ಇಷ್ಟೇ ಅಲ್ಲ, ತಮ್ಮ ಸುತ್ತಲಿನ ಭೌತಿಕ ಪರಿಸರವನ್ನೂ ಚಿತ್ರಕ ಶಕ್ತಿಯ ಬೇಂದ್ರೆ ಕಾವ್ಯ ಗೆರೆ ಕೊರೆದಂತೆ (ಮುಂದಿನ ಜನಾಂಗಕ್ಕೆ) ಹಿಡಿದಿಟ್ಟಿದೆ. ಅವರ ಅಷ್ಟೇನೂ ಜನಪ್ರಿಯವಲ್ಲದ “ಅಂದು ತುಂಬಿತ್ತು ಹಾಲಗೇರಿ” ಪದ್ಯವನ್ನು ವಿಮರ್ಶಕರು ಇದಕ್ಕೆ ಉದಾಹರಣೆಯಾಗಿ ನೀಡುತ್ತಾರೆ. ಬೇಂದ್ರಯವರು ಚಿಕ್ಕಂದಿನಲ್ಲಿ ನೋಡಿದ್ದ ಧಾರವಾಡದ ತುಂಬಿದ ಕೆರೆ, ಅಲ್ಲಿಯ ದೇವರು, ಗುಡಿಗಳ ನಕಾಶೆಯನ್ನು ಅವರು ಬಿಡಿಸಿಡುತ್ತಾರೆ. ಕೊನೆಯಲ್ಲಿ ಈಗ ಹಾಲಗೇರಿಯಲ್ಲಿ ಕೆರೆಯಿಲ್ಲ, ಮಾರುಕಟ್ಟೆಗಳಿವೆ; ಒಂದು ಕಾಲಘಟ್ಟದ ಪರಿಸರ-ಚರಿತ್ರೆ ಮತ್ತೆ ಮತ್ತೆ ಬೇರೆ ಬೇರೆ ಆಕಾರಗಳಲ್ಲಿ ಮೈದಳೆಯುತ್ತಿರುತ್ತವೆ ಎಂಬ ಕಾಣ್ಕೆಯೂ ಬರುತ್ತದೆ. ಎಲ್ಲಕ್ಕಿಂತ ಮುಖ್ಯವೆಂದರೆ ಪದ್ಯದಲ್ಲಿ ಬರುವ ಗುಪ್ತಗಾಮಿ ನದಿಯೊಂದರ ಅಂದಿನ ವಿವರ: ಅದು ಸೋಮೇಶ್ವರ ಗುಡಿಯಿಂದ ಉಗಮವಾಗಿ, ಯಾರ ಕಣ್ಣಿಗೂ ಕಾಣದೆ, ನದಿಯ ಅಬ್ಬರವಿಲ್ಲದೆ ಗಂಗಾವಳಿಯಾಗಿ, ಅರಬ್ಬಿ ಕಡಲಿನ ತುದಿಯವರೆಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಎಂಬ ಜನರ ನಂಬಿಕೆಯನ್ನು ಪದ್ಯ ದಾಖಲಿಸುತ್ತದೆ. ಚಾರಿತ್ರಿಕ ಸತ್ಯಗಳು ಕಾವ್ಯರೂಪದಲ್ಲಿ ಹುದುಗಿರುವ ಈ ಬಗೆಗಳು ಸಾಂಸ್ಕೃತಿಕ ಅಧ್ಯಯನಕ್ಕೆ ಎಷ್ಟೊಂದು ಮುಖ್ಯ ಎಂದು ಬೇರೆ ಹೇಳಬೇಕಾಗಿಲ್ಲ.
ಪರಿಸರ, ಕವಿ ಬೇಂದ್ರೆಯನ್ನು ಹೇಗೆ ರೂಪಿಸಿತು ಎಂದು ಹೇಳುವ ವಿವರಗಳೂ ಕುತೂಹಲಕರ. (ಇದು ಕವಿ ರವೀಂದ್ರನಾಥ ಠಾಕೂರರ ವಿಷಯದಲ್ಲೂ ನಿಜವಾಗಿತ್ತು ಎಂದು ಓದಿದ್ದು ನೆನಪಾಗುತ್ತಿದೆ.) “ಸಾಧನಕೇರಿ” ಕವಿತೆಯಲ್ಲಿ ಅಲ್ಲಿಯ ಗಾಳಿಯ ಹಾರಾಟ, ಏರಾಟ, ಎಲೆಗಳು ಬೀಳುವ ಆಟ…ನೋಡಿ ಲಯವನ್ನು ಕಂಡುಕೊಂಡೆ, ಧಾರವಾಡದ ಹೆಣ್ಣುಮಕ್ಕಳ ಮಾತಿನಿಂದಲೇ ಕವಿತೆಯ ಪರಿಕರಗಳನ್ನು ತಯಾರಿಸಿಕೊಂಡೆ…ಮುಂತಾದ ಅಂಗೀಕಾರಗಳಿವೆ. ಈ ಬಿಂದುವಿನಲ್ಲಿ ಪ್ರಸ್ತಾಪಿಸಬೇಕಾದ ಮುಖ್ಯ ಸಂಗತಿಯೆಂದರೆ, ಬೇಂದ್ರೆಯವರ ಕಾವ್ಯದ ಮೂಲ ಜಾನಪದೀಯ ಎಂಬ ಬೀಸುಗ್ರಹಿಕೆ. ಸಮುದಾಯದ ಆಚರಣೆ, ನಂಬಿಕೆ, ಗ್ರಹಿಕೆ, ಭಯ ಇತ್ಯಾದಿಗಳನ್ನು ಅದರದೇ ನುಡಿಗಟ್ಟಿನಲ್ಲಿ ಹಿಡಿದಿಡುತ್ತಲೇ ಈ ಭಾವಗಳ ಹಿಂದಿರುವ ಸೂಕ್ಷ್ಮಗಳನ್ನು ಜೋಡಿಸಿ, ಕವಿತೆಯ ಆಕೃತಿಯೊಂದಿಗೆ ಬೆಸೆಯುವುದು ಮಾತ್ರ ಬರಿದೇ “ಬೇಂದ್ರೆ ಮಾಂತ್ರಿಕತೆ”. ಜಾನಪದವನ್ನೂ ಒಳಗೊಂಡಂತೆ, ತತ್ತ್ವಶಾಸ್ತ್ರ, ಸಾಂಖ್ಯ, ಶಿಷ್ಟ ಸಂಪ್ರದಾಯದ ಚಿಂತನೆ ಎಲ್ಲವೂ ಈ ದಿಕ್ಕಿನಲ್ಲಿ ಮುಪ್ಪುರಿಗೊಂಡು ಕೆಲಸ ಮಾಡಿರಬಹುದಾದ್ದರಿಂದ ಬೇಂದ್ರೆ ಕಾವ್ಯಕ್ಕೆ “ಜಾನಪದೀಯ” ಎಂಬ ಹಣೆಪಟ್ಟಿ ಹಚ್ಚುವುದು ಸಲ್ಲ. ಕಾವ್ಯ ಪರಿಕರಗಳಲ್ಲಿ “ಶ್ಲೇಷೆ” (pun)ಯನ್ನು ಅವರು ವಿಪುಲವಾಗಿ ಬಳಸಿದರು (ಶೇಕ್ಸ್ಪಿಯರ್ನಷ್ಟು ವಿಪುಲವಾಗಿ ಎಂದು ತೌಲನಿಕವಾಗಿ ಹೇಳಿದರೆ ಒಂದು ಅಂದಾಜು ಸಿಕ್ಕೀತು), ಒಂದು ಪದವನ್ನು ಹಲವು ಅರ್ಥಸಾಧ್ಯತೆಗಳು ಹೊಮ್ಮುವಂತೆ, ಅನೇಕ ಕಲ್ಪನೆಗಳು ವಿಸ್ತರಿಸುವಂತೆ ದುಡಿಸಿಕೊಳ್ಳುವುದೇ ಶ್ಲೇಷೆ. ತಮ್ಮ ಕಾವ್ಯಸೃಷ್ಟಿ ಕುರಿತು “ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ/ ಅಂಬಿಕಾನತಯನಿವನು!” ಎನ್ನುವಾಗ ಬಳಕೆಯಾಗಿರುವ “ಕನ್ನಡಿಸು” ಪದ, ವಿಶ್ವದೊಳನುಡಿಯನ್ನು ಕನ್ನಡವಾಗಿಸುವುದು ಮತ್ತು ಕನ್ನಡಿಯಂತೆ ಪ್ರತಿಫಲಿಸುವುದು ಎರಡೂ ಅರ್ಥಗಳನ್ನು ನೀಡುತ್ತಿರುವುದು ಒಂದು ಉದಾಹರಣೆ.”ಬೇಂದ್ರೆಯವರಲ್ಲಿ ಯಾವ ಪದವೂ ಕೂಡ ಒಂದೇ ಒಂದು ಕಲ್ಪನೆಯನ್ನು ಕೊಡುವುದಿಲ್ಲ; ಅದು, ಅವರು ಕೇವಲ ಪದಗಳ ಜತೆಯಲ್ಲಿ ಆಟವಾಡುವ ಕ್ರಮವಲ್ಲ. ಬದಲಾಗಿ ಕನ್ನಡ ಭಾಷೆಯ ಅತಿ ಸೂಕ್ಷ್ಮ ಸಾಧ್ಯತೆಗಳನ್ನು ಆವಿಷ್ಕರಿಸುವ ಕವಿ ಕಲ್ಪನೆ…ಕನ್ನಡ ಭಾಷಾಸಂಪತ್ತಿನ ಮಿತಿ ಬಹಳ ಇರುವ ಇತರರಿಗೆ ಅದು ಬರೀ ಚಮತ್ಕಾರವಾಗಿ ಕಾಣುತ್ತದೆ” ಎಂದು ವಿಮರ್ಶಕ ಕಿ.ರಂ. ನಾಗರಾಜ ಈ “ಶ್ಲೇಷಾತ್ಮಕ” ಭಾಷೆ ಬಳಕೆ ಕುರಿತು ಅಭಿಪ್ರಾಯಪಟ್ಟಿದ್ದಾರೆ. “ಚತುರೋಕ್ತಿ ಮತ್ತು ಇತರ ಕವನಗಳು” ಎಂಬ ಕೊನೆಯ ಸಂಕಲನದಲ್ಲಿ ಶ್ಲೇಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ ಎಂದೂ ಅವರು ಸೂಚಿಸಿದ್ದಾರೆ. ಅವುಗಳ ಅಮೂರ್ತತೆ, ಅರ್ಥ ಸಂದಿಗ್ಧಗಳನ್ನು ಕಂಡುಕೊಳ್ಳುವುದು ಒಂದು ಮಿದುಳಿನ ಕಸರತ್ತೇ ಸರಿ.
ಮನುಷ್ಯನ ಪಂಚೇಂದ್ರಿಯಗಳ ಸೂಕ್ಷ್ಮ ಗ್ರಹಿಕೆ-ಮುಖ್ಯವಾಗಿ ಕಣ್ಣು, ಕಿವಿಗಳದ್ದು- ಇದಕ್ಕೆ ಜತೆ ಕೊಡುವ ಚಿಹ್ನೆ, ಶಬ್ದ, ನಾನಾ ಶಾಬ್ದಿಕ ರೂಪ, ರಚನಾ ವಿನ್ಯಾಸ, ಧ್ವನಿಗಳ ಪ್ಯಾಕೇಜ್ನೊಂದಿಗೆ ಬರುವ ಭಾಷೆಯನ್ನು ಅಸದೃಶವಾಗಿ ದುಡಿಸಿಕೊಂಡಿರುವುದೂ ಬೇಂದ್ರೆಯವರ ಹೆಗ್ಗಳಿಕೆ. ಕಾವ್ಯದ ಸ್ವರೂಪಕ್ಕೆ ಹೊಂದುವ “ಶ್ರವಣ” ಸಂವೇದನೆಯ ಮೇಲೆ ಅವರಿಗಿದ್ದ ಒಲವು ಭರ್ರನೇ ಬೀಸುವ ಗಾಳಿ, ಕಡಲಿನ ಭೋರ್ಗರೆತ, ನದಿಯ ನಿನಾದ, ಅಪ್ಪಳಿಸುವ ಮಿಂಚು, ಗುಡುಗು, ಕಟ್ಟಿದ ಮೋಡ ಗಳಲ್ಲಿ ಸಾಕ್ಷಾತ್ಕಾರಗೊಳ್ಳುವುದು “ಶ್ರಾವಣ” ಕವಿತೆಯಲ್ಲಿ ನಮ್ಮನ್ನು ತಾಕುತ್ತದೆ. ಅತಿ ಜನಪ್ರಿಯ “ಮೂಡಲ ಮನೆಯಾ…” ಕವಿತೆಯಲ್ಲಿ ಬೆಳಗಿನ ಇರುವಿಕೆಯನ್ನೇ ಕವಿ ಒಂದು ಶಬ್ದಶರೀರವಾಗಿ ನಿರ್ಮಾಣ ಮಾಡಿದ್ದಾರೆ (ಗಿಡಗಂಟೆಗಳಾ ಕೊರಳೊಳಗಿಂದ ಹಕ್ಕಿಗಳಾ ಹಾಡು…ಸಾಲನ್ನು ನೆನಪಿಸಿಕೊಳ್ಳಿ!) ಇನ್ನು ದಾಂಪತ್ಯ, ಕುಟುಂಬ, ಗಂಡು-ಹೆಣ್ಣಿನ ಸಖ್ಯಕ್ಕೆ ಸಂಬಂಧಪಟ್ಟ ಅವರ ಉತ್ಕಟ ಸಾಂಸಾರಿಕ ರಚನೆಗಳಲ್ಲಿ ನಿದ್ರೆ-ಎಚ್ಚರಗಳ ನಡುವಣ ಸುಷುಪ್ತಿ ಸ್ಥಿತಿಯನ್ನು ಭಾವೋದ್ದೀಪಕವಾಗಿ ಸೆರೆ ಹಿಡಿಯುವ ಅನೇಕ “ಯೌಗಿಕ” ಶಬ್ದಗಳು ಬಳಕೆಯಾಗಿರುವುದನ್ನೂ ವಿಮರ್ಶಕರು ಗುರುತಿಸುತ್ತಾರೆ: ಯೋಗ ಸಹಜಸಖಿ, ಕಮಲಮುಖಿ, ಜೀವಸಖಿ, ಏಳು, ಕೀಲ, ಭೋಗ, ಸುಪ್ತ, ನಾಡಿ…ಮುಂತಾದವು. ಗಂಡು-ಹೆಣ್ಣಿನ ಸಂಯೋಗದ ಭಾವವಿವರಗಳಾಗಿ, ಅದರಲ್ಲಿನ ನೋವು-ನಲಿವು, ಉತ್ಕಟತೆ, ಆತ್ಮೀಯತೆಯನ್ನು ಸಾದರಪಡಿಸುತ್ತಾ ಇವು ಕ್ರಮೇಣ ಒಂದು ಗಾಢ ಲೈಂಗಿಕ ಪ್ರತಿಮೆಯಾಗಿ ಮೈತಳೆಯುವುದು ಅಭ್ಯಸಿಸಬೇಕಾದ ಸಂಗತಿ. “ಈ ತೋಳಿನಲಿ ಹೋಳು ಮೈಯಿರಲು/ ಬೀಸಿತಿಂದ್ರಜಾಲ” ಎಂಬ ಪರಮ ಸ್ಥಿತಿಯ ಶಾಬ್ದಿಕ ರೂಪ ಅಲ್ಲಿ ದೊರಕುತ್ತದೆ. “ಕಲ್ಪವೃಕ್ಷ ವೃಂದಾವನಂಗಳಲಿ ಹೇಗೊ ಹೊಕ್ಕು ಬಂದೆ” ಎನ್ನುವಾಗ ಅಲ್ಲಿರುವ ಅನುಪಮ ರೂಪಕ ಸೃಷ್ಟಿಯೂ ಕಣ್ಸೆಳೆಯುತ್ತದೆ.
ಈ ಎಲ್ಲ ಕಾವ್ಯಪರಿಕರಗಳ ಒಟ್ಟು ಪರಿಣಾಮವೆಂದರೆ, ಒಂದು ವಿಲಕ್ಷಣ ಉನ್ಮತ್ತ ಸ್ವರೂಪ ಬೇಂದ್ರೆ ಕವಿತೆಗಳಿಗೆ ಪ್ರಾಪ್ತವಾಗುವುದು…ಇದು ಓದುಗರನ್ನು/ಕೇಳುಗರನ್ನು ಕ್ಷಣಕ್ಷಣಕ್ಕೂ ಹೊಸ ಹೊಸ ರೀತಿಯಲ್ಲಿ ಸಿದ್ಧಪಡಿಸುತ್ತ, ಅನಿರೀಕ್ಷಿತ ನೋಟಗಳತ್ತ ಸೆಳೆಯುವ ಉನ್ಮತ್ತ ಸ್ವರೂಪ ಎಂದಿದ್ದಾರೆ, ವಿಮರ್ಶಕರು. ಕನ್ನಡ ಭಾಷೆಯ ಅತ್ಯಂತ ಸೂಕ್ಷ್ಮವಾದ ನೆಲೆಯಲ್ಲಿ ನಿಂತು, ಛಂದಸ್ಸಂಗೀತ, ವಸ್ತು ವೈವಿಧ್ಯ ಮತ್ತು ಬದುಕಿನ ಅಗಾಧ ವಿವರಗಳನ್ನು ಇಷ್ಟೊಂದು ಸೃಷ್ಟಿಶೀಲವಾಗಿ ಅಭಿವ್ಯಕ್ತಗೊಳಿಸಿರುವುದು ಈ ಶತಮಾನದ ಮಹೋನ್ನತ ಕಾವ್ಯಕುತೂಹಲಗಳಲ್ಲಿ ಒಂದು ಎಂಬುದು ಅವರ ಒಕ್ಕೊರಲ ಘೋಷಣೆ. ನಮ್ಮನ್ನು ಗಾಢವಾಗಿ, ಆಪ್ತವಾಗಿ ಸೇರಿಕೊಳ್ಳುವ ಇಂಥ “ಉನ್ಮತ್ತ ಕವಿ”ಯ ರಚನಾ ವೈಶಿಷ್ಟ್ರಗಳನ್ನು ಸಮರ್ಪಕವಾಗಿ ವಿವರಿಸಿಕೊಳ್ಳುವುದಿರಲಿ, ಇನ್ನೂ ಮುನ್ನೋಟದ ಪ್ರಾಥಮಿಕ ನೆಲೆಯಲ್ಲೇ ನಿಂತಿದ್ದೇವೆ ಎನ್ನುವುದು ಅವರ ನಮ್ರ ಅನಿಸಿಕೆ.
No comments:
Post a Comment